ಆದರ್ಶ ದಂಪತಿ ಅಲ್ಲ ಕಿಲಾಡಿ ದಂಪತಿ
ಆದರ್ಶ ದಂಪತಿ ಅಲ್ಲ ಕಿಲಾಡಿ ದಂಪತಿ
"ಏನ್ರೀ, ಬೆಳಗಿನ ಒಂಭತ್ತು ಗಂಟೆಯ ಸಮಯಕ್ಕೆ ಮನೆಗೆ ಬಂದ ಅತಿಥಿಗಳಿಗೆ ಟೀ ಮಾಡಲು ಹೇಳಿದಿರಿ. ಇದು ಟೀ ಕುಡಿಯುವ ಸಮಯವೇ? ನಿಮ್ಮ ಮಾತು ಮೀರ ಬಾರದು ಎಂದು ಟೀ ಮಾಡಿದೆ. ಅದರಲ್ಲಿ ಮತ್ತೆ ವಿಥ ಶುಗರ್ ವಿತೌಟ್ ಶುಗರ. ಅವರೆಲ್ಲರೂ ಹೊರಟು ಹೋದರು. ಈಗ ಸಮಯ 9.30. ಇನ್ನೂ ಅರ್ಧ ಗಂಟೆಯಲ್ಲಿ ನಾವು ಊಟ ಮುಗಿಸಿ ನೀನು ಬ್ಯಾಂಕ್ ಗೆ ನಾನು ಕೋರ್ಟ್ ಗೆ ಹೋಗಬೇಕು. ಒಂದೆರಡು ದಿನಸಿ ಸಾಮಾನುಗಳ ಅವಶ್ಯಕತೆ ಇದ್ದರೂ ಇರುವ ಸಾಮಗ್ರಿಗಳಲ್ಲಿಯೇ ಅಡುಗೆ ಮಾಡಿರುವೆ."
ಪತ್ನಿ ಅನಿತ ಪತಿ ಗಿರೀಶ್ ಜೊತೆಗೆ ಈ ರೀತಿ ಮಾತನಾಡಿದಳು.
"ಅನಿತ, ಬೆಳಗ್ಗೆ ಬಂದವರು ಊರಿನ ಪ್ರಮುಖರಾದ ಪುರಸಭೆ ಅಧ್ಯಕ್ಷರು, ನಿವೃತ್ತ ನ್ಯಾಯಾಧೀಶರು, ಮಾಜಿ ಶಾಸಕರು, ಒಬ್ಬರು ಡಾಕ್ಟರ್ ಹಾಗೂ ಕಾಲೇಜು ಪ್ರಾಂಶುಪಾಲರು ಅವರೆಲ್ಲರೂ ನಗರದ ಗೌರವಾನ್ವಿತ ವ್ಯಕ್ತಿಗಳು ಅಲ್ಲದೇ ನಗರಾಭಿವೃದ್ಧಿ ಸಮಿತಿಯ ಸದಸ್ಯರು."
"ಗಿರೀಶ್, ನಾನು ಇದೇ ಊರಿನಲ್ಲಿ ಹುಟ್ಟಿ ಬೆಳೆದವಳು. ಇವರೆಲ್ಲರ ಜಾತಕ ನನಗೆ ಗೊತ್ತು. ನಿವೃತ್ತ ನ್ಯಾಯಾಧೀಶರು ಒಬ್ಬರನ್ನು ಬಿಟ್ಟು ಉಳಿದವರು ಅಯೋಗ್ಯರು."
"ಹಾಗೆಲ್ಲ ಮಾತಾಡಬಾರದು. ನಮ್ಮ ಸಂಭಾಷಣೆ ಇಲ್ಲಿಗೆ ಮುಕ್ತಾಯ ಗೊಳಿಸಿ ಆಮೇಲೆ ಸಮಯ ಸಿಕ್ಕಾಗ ಇದನ್ನು ಮುಂದುವರೆಸೋಣ. ಹೊತ್ತಾಗಿದೆ ಬೇಗ ಊಟ ಮುಗಿಸಿ ರೆಡಿ ಆಗಬೇಕು."
ಅವಸರದಲ್ಲಿ ಇಬ್ಬರೂ ಊಟ ಮಾಡಿ ರೆಡಿ ಆಗಿ ದ್ವಿಚಕ್ರ ವಾಹನದ ಮೇಲೆ ಹೊರಟೇ ಬಿಟ್ಟರು. ಕಳೆದ ವರ್ಷ ಗಿರೀಶ್ ಅವರು ಸೂರ್ಯಾ ಬ್ಯಾಂಕ್ ಪವನಪೂರ ಶಾಖೆಯ ಮ್ಯಾನೇಜರ್ ಆಗಿ ವರ್ಗಾವಣೆ ಆಗಿತ್ತು. ಅನೀತ ಅದೇ ಊರಿನಲ್ಲಿ ಲಾಯರ್ ಆಗಿ ಒಂದು ವರ್ಷ. ಅವರಿಬ್ಬರ ಪ್ರೇಮ ವಿವಾಹ ಆಗಿರುವದು ಒಂದು ಸ್ವಾರಸ್ಯವಾದ ಸಂದರ್ಭ ಕಾರಣ. ಆಗಲೇ ದಾಂಪತ್ಯ ಜೀವನದ ಒಂದು ವರ್ಷ ಕಳೆದರೂ ಅವರಿಬ್ಬರು ಆಗಾಗ ಆ ಘಟನೆ ಸ್ಮರಿಸಿ ನಕ್ಕು ಕುಣಿದಾಡುವರು.
ಅಂತಹ ಸಂದರ್ಭವಾದಾದರೂ ಏನು?
ಎರಡು ವರ್ಷಗಳ ಹಿಂದೆ ಅವರಿಬ್ಬರು ಪರಸ್ಪರ ನೋಡಿದ್ದರೂ ಅಪರಿಚಿತರು. ಅನಿತನ ಎದುರು ಮನೆಯಲ್ಲಿ ಗಿರೀಶ್ ಬಾಡಿಗೆ ಮನೆಯಲ್ಲಿ ಇದ್ದರೂ ಇಬ್ಬರ ಪರಿಚಯ ಆಗುವ ಪ್ರಸಂಗ ಬರಲಿಲ್ಲ. ಇಬ್ಬರದೂ ಬೇರೆ ಬೇರೆ ಕೆಲಸ ಇರುವದರಿಂದ ಪರಸ್ಪರ ಭೇಟಿ ಆಗಲಿಲ್ಲ.
ಒಂದು ದಿವಸ ಗಿರೀಶ್ ಬ್ಯಾಂಕ್ ನ ಕೇಸ್ ಸಂಭಂಧ ಕೋರ್ಟ್ ಹಾಜರಾಗ ಬೇಕಾಯಿತು. ಆ ಸಮಯದಲ್ಲಿ ಬ್ಯಾಂಕ್ ಅಡ್ವೋಕೇಟ್ ಲಕ್ಷ್ಮಣ ರಾವ್ ಅವರ ಜೂನಿಯರ್ ಓರ್ವ ಯುವತಿ ಲಾಯರ್ ಇರುವದನ್ನು ಗಿರೀಶ್ ನೋಡಿದ. ಆಕೆ ಅನಿತ ಎಂದು ತನ್ನ ಪರಿಚಯ ಮಾಡಿಕೊಂಡಳು. ಎದುರು ಮನೆಯವರು ತಿಳಿದು ಎಂದು ಇಬ್ಬರಿಗೂ ಆಶ್ಚರ್ಯ. ಆಕೆ ತನ್ನ ಸೀನಿಯರ್ ಲಾಯರ್ ಜೊತೆಗೆ ಹೊರಗೆ ಬಂದು ಗಿರೀಶ್ ನಿಗೆ ಕೇಸ್ ಬಗ್ಗೆ ಬ್ರೀಫಿಂಗ್ ಮಾಡಿದಳು. ಬ್ಯಾಂಕ್ ನ ಒಂದು ಹಳೆ ಸಾಲ ಮರುಪಾವತಿ ಆಗದೇ ಉಳಿದ ಕೇಸ್ ಇದ್ದಿತು. ಅನೀತ ಹೇಳಿದ ಪಾಯಂಟ್ಸ ಮೇಲೆ ವಕೀಲರು ನ್ಯಾಯಾಧೀಶರ ಮುಂದೆ ವಾದ ಮಾಡಿದರು. ಗಿರೀಶ್ ನಿಗೆ ನ್ಯಾಯಾಧೀಶರ ಪ್ರಶ್ನೆಗಳಿಗೆ ಈಗಾಗಲೇ ಹೇಳಿದಂತೆ ಉತ್ತರ ಕೊಟ್ಟ. ಆ ಕೇಸ್ ಬ್ಯಾಂಕ್ ಪರವಾಗಿ ನಿರ್ಣಯ ಹೊರಬಂದಿತು. ಅದಕ್ಕೆ ಹಿರಿಯ ಲಾಯರ್ ಲಕ್ಷಣ ರಾವ್ ಇದರ ಶ್ರೇಯ ಅನಿತಾಗೆ ಮಾತ್ರ ಎಂದರು.
ಎಷ್ಟೋ ವರ್ಷಗಳಿಂದ ನೆನಗುದಿಗೆ ಬಿದ್ದ ಕೇಸ್ ಬ್ಯಾಂಕ್ ಪರವಾಗಿ ಆಗಿರುವದರಿಂದ ಗಿರೀಶ್ ಸಂತೋಷ ವ್ಯಕ್ತಪಡಿಸಿ "ಅನಿತ ಅವರೇ ಥ್ಯಾಂಕ್ಸ್" ಎಂದ.
ಬ್ಯಾಂಕ್ ಕೇಸುಗಳನ್ನು ಆಕೆ ನೋಡಿಕೊಳ್ಳುವದರಿಂದ ಅವರಿಬ್ಬರ ಸ್ನೇಹ ಮುಂದುವರೆದು ಪ್ರೀತಿ ಪ್ರೇಮ ಬೆಳೆಯಿತು. ಒಂದು ದಿವಸ ಸಾಯಂಕಾಲ ಇಬ್ಬರೂ ಪವನಪೂರ ನಗರದಲ್ಲಿ ಇರುವ ಏಕೈಕ ಚಿತ್ರ ಮಂದಿರ 'ನರ್ತಕಿ'ಯಲ್ಲಿ 'ದಿಲವಾಲೆ ದುಲ್ಹನಿಯಾ ಲೇಜಾಯಿಂಗೆ' ನೋಡಲು ಹೋದರು. ಅದರ ಒಂದು ರೊಮ್ಯಾಂಟಿಕ್ ದೃಶ್ಯ ನೋಡಿ ಪುಳಕಿತಳಾದ ಅನಿತ ಪಕ್ಕದಲ್ಲಿ ಕುಳಿತ ಗಿರೀಶ್ ನ ಕೈಯನ್ನು ಬಿಗಿಯಾಗಿ ಹಿಡಿದಳು. ಗಿರೀಶನಿಗೆ ರೋಮಾಂಚನ ಆಗಿ ಆಕೆ ಕೈ ಮೇಲೆ ತನ್ನ ಕೈ ಇಟ್ಟ. ಅದು ಅವರಿಬ್ಬರಲ್ಲಿ ಪ್ರೇಮ ಅಂಕುರಿಸುವದಕ್ಕೆ ಕಾರಣವಾಯಿತು.
ಇಬ್ಬರ ತಂದೆ ತಾಯಿ ವಿರೋಧ ಇದ್ದರೂ ಒಂದು ದಿವಸ ಮಾರುತಿ ಮಂದಿರದಲ್ಲಿ ಇಬ್ಬರೂ ದಂಪತಿ ಆದರು. ಅರ್ಚಕರು ಸಂಕ್ಷಿಪ್ತವಾಗಿ ಮಂತ್ರ ಓದಿದ ನಂತರ ಪ್ರೇಮಿಗಳು ಹಾರ ಬದಲಾಯಿಸಿ ಕೊಂಡರು. 'ಮಿಯಾ ಬೀಬಿ ರಾಜಿ ಹೈತೋ ಕ್ಯಾ ಕರೆಗಾ ಕಾಜಿ'. ಬೆರಳೆಣಿಕೆಯ ಜನರ ಸಮ್ಮುಖದಲ್ಲಿ ಮದುವೆ ಶಾಸ್ತ್ರ ಮುಗಿಸಿದರು. ಇಬ್ಬರ ಜಾತಿ ಬೇರೆ, ಆಚಾರ,ವಿಚಾರ, ಸಂಪ್ರದಾಯ ಬೇರೆ. ಅದಕ್ಕೆ ಅನ್ನುವರು ಪ್ರೇಮ ಕುರುಡು. ಸಮಯ ಸಿಕ್ಕಾಗ ಹಿಂದಿನ ಘಟನೆ ಸ್ಮರಿಸಿಕೂಂಡು ಜೋರಾಗಿ ನಗುವರು.
ಒಂದು ದಿವಸ ಸಾಯಂಕಾಲ ಮನೆಗೆ ಬರುವದಕ್ಕೆ ಗಿರೀಶ್ ನಿಗೆ ಏಳು ಗಂಟೆಗೆ ಆಯಿತು. ಅನಿತ ಆಗಲೇ ಮನೆ ಸೇರಿ ಬಹಳ ಸಮಯ ಆಗಿತ್ತು. ಬ್ಯಾಂಕ್ ನಲ್ಲಿ ಕೆಲಸದ ಒತ್ತಡದಿಂದ ಬರುವುದು ತಡವಾಯಿತು ಎಂದು ಪತ್ನಿ ಕೇಳುವ ಮೊದಲೇ ಹೇಳಿದ. ಶ್ರಮ ಆಗಿರುವದರಿಂದ ಟೀ ಕುಡಿದ ಮೇಲೆ ಗಿರೀಶ್ ಈ ಹಿಂದೆ ಬೆಳಗ್ಗೆ ಆದ ಅಪೂರ್ಣ ಸಂಭಾಷಣೆ ಮುಂದುವರೆಸಿದ.
"ಅನಿತ, ಅ0ದು ಬೆಳಗ್ಗೆ ಬಂದ ಗೌರವಾನ್ವಿತ ವ್ಯಕ್ತಿಗಳು ಪವನಪುರ ನಗರಾಭಿವೃದ್ಧಿ ಯೋಜನೆಯ ರೂಪರೇಷೆ ತಂದಿದ್ದರು. ಅದಕ್ಕೆ ಬೇಕಾಗುವ ಅಂದಾಜು ವೆಚ್ಚದ ವಿವರ ಇದ್ದಿತು. ಬ್ಯಾಂಕ್ ನಿಂದ ಸಾಲ ಸೌಲಭ್ಯದ ಬಗ್ಗೆ ಬ್ಯಾಂಕನಲ್ಲಿ ಚರ್ಚೆ ಮಾಡಲು ಸಮಯ ಕೇಳಲು ಬಂದಿದ್ದರು. ನೀನು ಕೋಪ ಮಾಡಿ ಕೊಂಡಿರುವದರಿಂದ ನನಗೆ ತುಂಬಾ ಬೇಜಾರಾಯಿತು."
"ಗಿರೀಶ್ ನಾನು ಪವನಪೂರದಲ್ಲಿ ಹುಟ್ಟಿ ಬೆಳೆದವಳು. ಅವರೆಲ್ಲರ ಬಗ್ಗೆ ಚೆನ್ನಾಗಿ ಗೊತ್ತಿದೆ."
" ಅನಿತ, ಅವರಲ್ಲಿ ಒಬ್ಬ ಲಾಯರ್, ಇನ್ನೊಬ್ಬ ಡಾಕ್ಟರ್, ಮತ್ತೊಬ್ಬ ನಿವೃತ್ತ ನ್ಯಾಯಾಧೀಶ. ನನ್ನ ಎದುರುಗಡೆ ಕುಳಿತಿದ್ದ ಧೃಢಕಾಯ ವ್ಯಕ್ತಿ ಪುರಸಭೆ ಅಧ್ಯಕ್ಷ."
"ಗಿರೀಶ್, ಅವರಲ್ಲಿ ನಿವೃತ್ತ ನ್ಯಾಯಾಧೀಶ ಬಿಟ್ಟು ಉಳಿದವರು ನಂಬಿಕೆಗೆ ಅನರ್ಹರು."
ಆ ಕ್ಷಣ ಗಿರೀಶ್ ಗೆ ಮಾತನಾಡಲು ಮುಂದುವರೆಸಲು ಆಗದೇ ಮೌನ ವಹಿಸಿದ. ಒಂದು ಕ್ಷಣ ಸುಮ್ಮನಾಗಿ ಮತ್ತೆ ಮುಂದುವರೆಸಿದ.
"ಅನಿತ, ಒಂದು ಮಾತು ನೆನಪಿನಲ್ಲಿ ಇಟ್ಟುಕೋ."
"ಅದೇನು ಹೇಳಿ?"
"ನಾವು ಯಾರ ಬಗ್ಗೆ ಮಾತನಾಡುವ ಮೊದಲು ಎಚ್ಚರದಿಂದ ಇರಬೇಕು."
"ಯಾಕೆ ನನ್ನ ಮಾತಿಗೆ ಸಿಟ್ಟು ಬಂದಿತೇ?"
"ನೀನು ವಾಚಾಳಿ ಎಂದು ಮದುವೆ ಮೊದಲು ನನಗೆ ತಿಳಿದಿರಲಿಲ್ಲ."
"ತಿಳಿದಿದ್ದರೆ ಮದುವೆ ಬೇಡ ಎನ್ನುತ್ತಿದ್ದಿರಾ? ಸ್ವಲ್ಪ ನಿಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮನ್ನು ಮದುವೆ ಆಗಲು ಬಂದ ಹುಡುಗಿಯರನ್ನು ಹೇಗೆ ರಿಜೆಕ್ಟ ಮಾಡಿದಿರಿ ಎನ್ನುವುದು ನನಗೆ ಗೊತ್ತಿದೆ. ಒಬ್ಬಳು ಕಪ್ಪು, ಇನ್ನೊ ಬ್ಬಳು ಮೆಳ್ಳಗಣ್ಣಿ, ಮುಗುದೂಬ್ಬಳು ಶೂರ್ಪನಖಿ ಎಂದಿರಿ. ನನ್ನಲ್ಲಿ ನಿಮಗೆ ಯಾವ ಆಕರ್ಷಣೆ ಕಾಣಿಸಿತು?"
"ಆ ಸಮಯದಲ್ಲಿ ನೀನು ನನಗೆ ವಿಶ್ವಸುಂದರಿ ಹಾಗೆ ಅನಿಸಿತು. ಆದರೆ ಈಗ ಅದು ವಿಪರ್ಯಾಸ."
"ಇರಲಿ. ನಾನು ರಿಜೆಕ್ಟ ಮಾಡಿದ ಕನ್ಯಾಮಣಿಗಳು ನಿನಗೆ ಏನು ಹೇಳಿದರು?"
"ಅವರಿಗೆಲ್ಲರಿಗೂ ಸಿಟ್ಟು ಬಂದಿತು. ಕಪ್ಪುಮೋತಿಯವಳು ನಿಮಗೆ ಅಸಡ್ಡೆ ಅಂದರೆ ಮೆಳ್ಳಗಣ್ಣಿನವಳು ನಿಮಗೆ ಅಷ್ಟಾವಕ್ರ ಅಂದಳು. ಇನ್ನೊಬ್ಬಳು ಏನು ಹೇಳಿದಳು ಅಂದರೆ ನೀವು ಇನ್ನೊಬ್ಬರಿಗೆ ಹೆಸರು ಇಡುವ ಮೊದಲು ನಿಮ್ಮ ಮುಖ ಕನ್ನಡಿಯಲ್ಲಿ ನೋಡಿ ಎಂದಳು."
"ಹೌದು! ಇದೆಲ್ಲ ಮಾಹಿತಿ ನಿನಗೆ ಯಾರು ಕೊಟ್ಟರು?"
"ನಾನು ಲಾಯರ್. ನಿಮ್ಮ ಕೈ ಹಿಡಿಯುವ ಮೊದಲು ಇದೆಲ್ಲ ತಿಳಿದುಕೊಂಡೆ."
"ಅನಿತ, ನೀನು ಘಾಟಿ ಕಣೇ."
"ಗಿರೀಶ್ ನಾನು ಘಾಟಿ ಆದರೆ ನೀನು ಚತುರ. ನಿನ್ನಲ್ಲಿ ನಾನು ಕಂಡದ್ದು ಏನು ಗೊತ್ತಾ?"
"ಏನೇ ಬೇಗ ಹೇಳು?"
"ನೀನು ನನಗೆ ಸರಿಯಾದ ಮ್ಯಾಚ್ ಇಲ್ಲದೆ ಇದ್ದರೂ ಪರವಾಗಿಲ್ಲ ಎಂದು ಅಂದುಕೊಂಡೆ. ಆ ಹಾಳು ಸಿನೇಮಾ ನನ್ನ ತಲೆ ಕೆಡಿಸಿತು. ಅದನ್ನು ಈಗ ಶಪಿಸಿದರೇ ಆಗುವದೇನು? ಆಗ ಬಾರದ್ದು ಆಗಿ ಹೋಯಿತು."
ಅವರ ಸಂಭಾಷಣೆಯ ಧಾಟಿ ಹಾಸ್ಯದ ಕಡೆಗೆ ತಿರುಗಿ ಬಿದ್ದು ಬಿದ್ದು ನಕ್ಕರು.
"ಗಿರೀಶ್, ನಾನು ವಾಚಾಳಿ ಅಷ್ಟೇ ಅಲ್ಲ, ಕಾಲು ಕೆದರಿ ಜಗಳ ತೆಗೆಯುವ ಜಗಳಗಂಟಿ. ಲಾಯರ್ ಅಂದರೆ ಹೀಗಿರಬೇಕು."
"ಅನೀತ, ಹಾಗಾದರೆ ನಿನ್ನ ಕೈ ಹಿಡಿದು ನಾನು ಮೋಸ ಹೋದೆ."
"ಹೌದು ಗಿರೀಶ್, ಅದರಲ್ಲಿ ಏನೂ ಸಂಶಯ ಇಲ್ಲ."
ಇಬ್ಬರೂ ನಗುತ್ತಾ ಇರುವಾಗ ಸಮಯ ರಾತ್ರಿ 9 ಗಂಟೆ ಆಗಿರುವುದರಿಂದ ಅಡುಗೆ ಸಿದ್ದತೆ ಮಾಡಲು ಅನಿತ ಕಿಚನ್ ಗೆ ಹೋದಳು.
"ಪತಿ ರಾಯರೇ, ಅರ್ಧ ಗಂಟೆ ನನಗೆ ಡಿಸ್ಟರ್ಬ ಮಾಡಬೇಡಿ. ಅಲ್ಲಿಯವರೆಗೆ ಟಿ ವಿ ನೋಡುತ್ತ ಅಥವಾ ಪೇಪರ್ ಓದುತ್ತ ಹಾಲ್ ನಲ್ಲಿ ತೆಪ್ಪಗೆ ಕುಳಿತು ಕೊಳ್ಳಿ."
ಅಡುಗೆ ರೆಡಿ ಆದಮೇಲೆ ಇಬ್ಬರೂ ಮೌನವಾಗಿ ಊಟ ಮುಗಿಸಿದರು. ನಂತರ ಹಾಸ್ಯದ ಮಾತು ಗಳನ್ನಾಡುತ್ತ ನಿದ್ರೆಗೆ ಜಾರಿದರು.
ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವದು ಈ ದಂಪತಿಗಳಿಗಾಗಿಯೇ ಮಾಡಿರುವುದು. ಗಿರೀಶ್, ವಿಜಯವಾಡ, ಅಂಧ್ರ ಪ್ರದೇಶ ದಿಂದ ಬಂದು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜನಲ್ಲಿ ವಿದ್ಯಾಭ್ಯಾಸ. ಬಿ. ಇ ಕಂಪ್ಯೂಟರ್ ಸೈನ್ಸ್ ನಲ್ಲಿ ಫರ್ಸ್ಟ್ ಕ್ಲಾಸ್ ನಲ್ಲಿ ಪಾಸಾದ. ಅವನ ಮಾತೃ ಭಾಷೆ ತೆಲಗು. ಕನ್ನಡ ಮಾತನಾಡುವದನ್ನು ಸ್ನೇಹಿತರ ಸಹಾಯದಿಂದ ಕಲಿತ. ಮುಂದೆ ಸೂರ್ಯಾ ಬ್ಯಾಂಕ್ ನಲ್ಲಿ ಡೈರೆಕ್ಟ್ ಆಫೀಸರ್ ಆದ. ನಂತರ ಸೂರ್ಯಾ ಬ್ಯಾಂಕ್ ಪವನಪುರ ಶಾಖೆ ಮ್ಯಾನೇಜರ್. ಎರಡು ವರ್ಷಗಳ ಹಿಂದೆ ಪವನಪೂರಗೆ ಬಂದ ಗಿರೀಶ್, ಒಂದು ರೂಮಿನ ಮನೆ ಬಾಡಿಗೆ ಅನಿತ ಎದುರು ಮನೆಯಲ್ಲಿ ಸಿಕ್ಕಿತು. ಅದೇ ವರ್ಷ ಅನಿತ ಲಾ ಮುಗಿಸಿ ಜೂನಿಯರ್ ಎಂದು ಲಕ್ಷ್ಮಣ ರಾವ್ ಲಾ ಆಫೀಸ್ ನಲ್ಲಿ ಸೇರಿದಳು. ಮದುವೆ ಆದಮೇಲೆ ಅನೀತ ಪತಿಗೆ ಕನ್ನಡ ಬರೆಯುವದನ್ನು ಹಾಗೂ ಓದುವದನ್ನು ಕಲಿಸುವದರಲ್ಲಿ ಯಶಸ್ವಿ ಆದಳು.
ಇವರ ಪ್ರೇಮ ಕಥೆ ಒಬ್ಬರಿಂದ ಇನ್ನೊಬ್ಬರಿಗೆ ಹೋಗಿ ಪವನಪುರ ನಗರದ ಹರಟೆ ಹೊಡೆಯುವ ಹೆಂಗಸರಿಗೆ ಕಾಲಹರಣಕ್ಕೆ ಹೊಸ ವಿಷಯ ಸಿಕ್ಕಿತು. 'ಶಂಖನಾದ' ಸ್ಥಳೀಯ ದಿನ ಪತ್ರಿಕೆಯ ಮುಖಪುಟದ ಬಾಕ್ಸ್ ನಲ್ಲಿ 'ಆದರ್ಶ ದಂಪತಿ ಅಲ್ಲ ಕಿಲಾಡಿ ದಂಪತಿ' ಎನ್ನುವ ಶೀರ್ಷಿಕೆಯಲ್ಲಿ ಪುಟ್ಟ ಲೇಖನ ಬರೆದು ಪ್ರಕಟಿಸಿದರು.
