ಸಖಿಯೊಂದಿಗೆ ವಾಯುವಿಹಾರ
ಸಖಿಯೊಂದಿಗೆ ವಾಯುವಿಹಾರ


ಓ ಸಖಿಯೇ,
ಆನಂದ ವಿಹಾರಕ್ಕೆ ಹೋಗೋಣ ಬಾ,
ನಿನ್ನ ಮನವ ಅರಿಯದ ಅಜ್ಞಾನಿ ನಾನು,
ಕತ್ತಲ ಅರಮನೆಗೆ ಪ್ರಜ್ವಲಿಸುವ ದೀಪವಾಗಿ ನೀನು,
ಹೃದಯದರಮನೆಯ ಅರಸಿ ಬಾ!
ನಿನ್ನ ಮನೆಯಂಗಳದಿಂದ ಹರಿದು ಬಾ
ನನ್ನ ಮನೆಯಂಗಳಕ್ಕೆ ನಲಿದು ಬಾ
ನನ್ನ ನೋಡಲು ಕುಣಿದು ಕುಪ್ಪಳಿಸಿ ಬಾ
ನನ್ನ ಕಂಡೊಡನೆ ನೀ ಕರಗ ಬಾ!
ಮುಂಜಾನೆ ಜೊತೆಯಾದರೆ,
ಇಬ್ಬನಿಯ ಮುತ್ತನ್ನು ನಿನ್ನ ಹಣೆಗೆ ತಿಲಕವಾಗಿಡುವೆ
ನನ್ನ ಸಿಹಿ ಮುತ್ತುಗಳಿಂದ ನಿನ್ನ ಮೊಗವನ್ನು ಸಿಂಗಾರಿಸುವೆ
ನಿನ್ನ ನೀಳ ಕೆಶರಾಶಿಯ ಮುಡಿಯನ್ನು ಮಲ್ಲಿಗೆಗೆ ಪರಿಚಯಿಸುವೆ
ಆ ನಗುವ ಮೊಗವನ್ನು ಆ ದಿವಾಕರನಿಗೆ ಒಲವಿನಿಂದ ವ್ಯಕ್ತಪಡಿಸುವೆ!
ಸಂಜೆಯಲ್ಲಿ ಹಿತವಾದರೆ,
ಅಸ್ತಮಿಸುವ ರವಿಯ ಕಂಡ ಪ್ರಕೃತಿಯ ಮಡಿಲನ್ನು ನಿನಗೆ ಪರಿಚಯಿಸುವೆ
ನೀನಿಲ್ಲದ ಕಾಲವ ಕುರಿತು ನಿನ್ನ ಮನಕ್ಕೆ ಘಾಸಿಪಡಿಸದೆ ತಿಳಿಸುವೆ
ನೀನಿರುವ ಕ್ಷಣಗಳನ್ನು ಕಳೆಯುತ್ತಾ ನನ್ನ ಒಲವನ್ನು ವ್ಯಕ್ತಪಡಿಸುವೆ.
ಚಂದಿರನ ಬೆಳದಿಂಗಳ ಸವಿಯುವ ರಸಿಕತೆಯ ಗುಟ್ಟನ್ನು ನಿನಗೆ ನಾ ಬಣ್ಣಿಸುವೆ!