ಋತುಮಾನ
ಋತುಮಾನ
ಋತುಮಾನಗಳಾ ಸಂಪುಟದಲಿ
ಬರೆಯುತಿಹಳು ಹೊಸ ಕಾವ್ಯ
ಆ ಪ್ರಕೃತಿ ಮಾತೆ ಧರೆಯ ಮೇಲೆ
ವಸಂತ ಋತುವಿನಲಿ ಹಸಿರು ಬಿತ್ತಿ
ಕೋಗಿಲೆ ಮಾವು ಮಲ್ಲಿಗೆಗಳ ಕಾವ್ಯ
ಗ್ರೀಷ್ಮ ಋತುವಿನಲಿ ತುಂತುರು
ಹನಿಗಳ ಹರಡುತಾ ಪ್ರೇಮ ಗೀತೆ
ವರ್ಷ ಋತುವಿನಲಿ ಜಡಿಮಳೆಯ
ಭೂಮ್ಯಾಕಾಶಗಳಾ ದಾಂಪತ್ಯ ಗೀತ
ಶರದೃತುವಿನಲಿ ಶುಭ್ರಾಕಾಶವ ಕಂಡು
ಬರೆಯುವಳು ಬೆಳದಿಂಗಳ ಆಲಾಪನ
ಹೇಮಂತನಾಗಮನದಲಿ ಮುದುರಿ
ಹಣ್ಣಾಗುವ ಎಲೆಗಳ ಹೇಮಂತಗಾನ
ಶಿಶಿರ ಋತುವಿನಲಿ ಮನನೊಂದು
ಬರೆಯುವುದು ಹಣ್ಣೆಲೆಗಳಾ ಚರಮಗೀತೆ
ಋತುಮಾನ ಸಂಪುಟದಲಿ ಬರೆಯುತಿಹಳು
ಸೃಷ್ಟಿ ಸ್ಥಿತಿ ಲಯ ಗಳಾ ಮಹಾಕಾವ್ಯ ಗಳನು
