ಮಾಯಾಲೋಕ
ಮಾಯಾಲೋಕ
ಇಹುದೊಂದು ಲೋಕ
ಕನಸುಗಳ ವಿಸ್ಮಯ ಲೋಕ
ನಿದಿರೆಯಲಿ ತೆರೆಯುವುದು
ಒಳಗೆ ಕರೆದೊಯ್ಯುವುದು
ವಾಸ್ತವದಲಿ ತೀರದ ಆಸೆಗಳ
ತಪ್ಪದೇ ಪೂರೈಸುವುದು
ಕಲ್ಪನೆಯ ಮಾಯಾಲೋಕಕೆ
ಎಲ್ಲರನೂ ಸೆಳೆಯುವುದು
ಕ್ಷಣಿಕ ಸುಖದ ಅನುಭವ ನೀಡಿ
ಸಂಭ್ರಮದಲ್ಲಿ ತೇಲಿಸುವುದು
ತಿರುಕನೊಬ್ಬ ಮಹಾರಾಜನಾಗಿ
ರಾಜನೊಬ್ಬ ಚಕ್ರವರ್ತಿಯಾಗಿ
ಬದುಕಿರುವವರು ಸತ್ತು ಹೋಗಿ
ಸತ್ತವರು ಬದುಕಿ ಎದ್ದು ಬಂದ
ಸುಂದರ ಸ್ವಪ್ನ ದುಃಸ್ವಪ್ನಗಳು
ಅಳಿಸಿ ನಗಿಸುವ ಅನುಭವಗಳ
ಸಂಭ್ರಮ ವಿಭ್ರಮಗಳ
ಮಾಯಾಜಾಲ ಸೃಷ್ಟಿಸುತ್ತಾ
ತನ್ನ ತೆಕ್ಕೆಗೆ ಸೆಳೆಯುವುದು
ಸುಂದರ ಸ್ವಪ್ನಗಳ ಕನವರಿಕೆ
ನೀಡುವುದು ಸುಖಾನುಭೂತಿ
ದುಃಸ್ವಪ್ನಗಳು ನೀಡುವವು
ದು:ಖಗಳಾ ಭಯಭೀತಿ
ನನಸಾಗುವವು ಹಲಕೆಲವು
ಕನಸಾಗಿಯೇ ಉಳಿಯುವವು
ಮತ್ತೆ ಕೆಲವು ಎಂದೆಂದಿಗೂ