ದಾರಿಹೋಕನ ಪದಗಳು
ದಾರಿಹೋಕನ ಪದಗಳು
ಬೆಲ್ಲದಂಥ ನುಡಿಗಳು ಮರುಳನ್ನು ಮಾಡುವುದು
ಮರುಳಾದ ಜನಗಳು ಬೀಳುವರು ಬದುಕಲ್ಲಿ
ನಿಜವನ್ನು ಹೇಳಿದರೆ ತಳ್ಳುವರು ಹಿಂದಕ್ಕೆ ಲೋಕದ
ಜನರ ತಿಳಿವುದು ಸುಲಭವೇ ? - ದಾರಿಹೋಕ
ಎಲ್ಲವನು ಬಲ್ಲವನು ಜಗದಲ್ಲಿ ಸಿಗುವನೆ
ಬಲ್ಲೆನೆಂದು ನಡೆದವ ಎಲ್ಲವನು ಗೆಲ್ಲುವನೆ
ಕೊನೆಯಿಲ್ಲ ಕಲಿಕೆಗೆ ಕೊನೆಯುಂಟು ಬದುಕಿಗೆ ಜಗದಿ
ಕಾಣದಾತನ ಕೈಚಳಕ ವಿಚಿತ್ರವೋ – ದಾರಿಹೋಕ
ತಿರುಗುವ ಭೂಮಿಯನು ನಿಲ್ಲಿಸಲು ಆಗುವುದೇ ?
ತಿರುಗದೆ ಇದ್ದರದು ಜೀವಿತವು ಸಾಗುವುದೆ ?
ಅಲೆದಾಟ ತಿರುಗಾಟ ಬದುಕಲ್ಲಿ ನಿಲ್ಲುವುದೆ? ಬಾಳೊಂದು
ರಂಗುಲ ರಾಟ ತಿಳಿಯೋ - ದಾರಿಹೋಕ
ಇರುವಾತ ಕೊಡಲಾರ ಕೊಡುವಾತ ಇರಲಾರ
ಕೊಟ್ಟವನು ಕೆಡನಯ್ಯ ಎನ್ನುವನು ಮತಿವಂತ
ಕೊಡುವ೦ಥ ಗುಣವಿರುವ ನೀಡುವ ಕೈಗಳೆದುರು
ನಿಲುವ ದೈವವು ಕಿರಿದೋ - ದಾರಿಹೋಕ
ಬದುಕೊಂದು ಗಣಿತವೋ ಸುಖವನ್ನು ಕೂಡಿಕಳೆ
ದುಃಖವನು ಜೀವನದಿ ಹಿತವನ್ನು ಗುಣಿಸುತ್ತಾ
ಒಳಿತನ್ನು ಭಾಗಿಸುತಾ ಕರ್ಮದಲಿ ಅಗಣಿತಕೆ ಸಾಗಿ
ಮಿನುಗುತಾರೆ ಆಗೆಲೋ - ದಾರಿಹೋಕ
