ಬೇಕಿತ್ತವಳು ನನಗೆ
ಬೇಕಿತ್ತವಳು ನನಗೆ
ಏನಂತ ಹೇಳಲಿ
ಬೇಕಿತ್ತವಳು ನನಗೆ..
ಮೊನ್ನೆಮೊನ್ನೆಯವರೆಗೂ
ನಾಚುತ್ತಲೇ ಇದ್ದ
ಮೌನವೇ ಸಿಂಗಾರದ
ಆ ಚೆಲುವಿನ ಕನ್ಯೆ
ಬೇಕಿತ್ತು ನನಗೆ |
ಸಪ್ತಪದಿಯಲ್ಲಿ
ಎನ್ನ ಹಿಂದೆ
ತಲೆತಗ್ಗಿಸಿಯೇ ನಡೆದಿದ್ದ
ಲಜ್ಜೆಯೇ ಗೆಜ್ಜೆಯಾಗಿದ್ದ
ಆ ನನ್ನ
ಕಾವ್ಯಕುಸುಮಾ
ಬೇಕಿತ್ತು ನನಗೆ |
ಅರಸುತ್ತಿದ್ದೇನವಳ
ಕಳೆದುಹೋಗಿರುವಳು
ಎಲ್ಲಿ?
ಹುಡುಕುತ್ತಿದ್ದೇನೆ
ಮತ್ತೆ ಮತ್ತೆ..
ಕಾಣದಾಗಿದ್ದಾಳಲ್ಲ..
ಲಜ್ಜೆಯಾಭರಣಗಳಿಲ್ಲದೆ
ತಲೆಪೆಟ್ಟಿಗೆ ತುಂಬಾ
ತುಂಬಿದ ದುಡ್ಡೊಂದಿಗೆ
ಕಾಣೆಯಾಗಿದ್ದಾಳೆ..
ಮೌನ ಮರೆತು ವಾಚಾಳಿಯಾದ
ಅವಳಲ್ಲಿ
ನನ್ನಾಕೆಯನ್ನು
ಹುಡುಕುತ್ತಿದ್ದೇನೆ |
ಮೊನ್ನೆಮೊನ್ನೆವರೆಗೂ
ನನ್ನ ನೋಡಿ
ನಾಚುತ್ತಲೇ ಇದ್ದವಳು..
ಬೇಕಿತ್ತು ನನಗೆ ||

