ಯೋಧನ ಜೇಬಿನಲ್ಲಿ ದೊರೆತ ಪತ್ರ!
ಯೋಧನ ಜೇಬಿನಲ್ಲಿ ದೊರೆತ ಪತ್ರ!
ಅಲ್ಲೊಂದು ಶಾಂತ ವಾತಾವರಣ. ವೀರಮರಣ ಹೊಂದಿದ ಮಗನ ಸಾಧನೆಗೆ ಗರ್ವಪಡಬೇಕೋ ಅಥವಾ ಮಗನ ಅಗಲಿಕೆಯ ಶೋಕ ಮಾಡಬೇಕೋ ಎಂದು ತಿಳಿಯದಾಗಿತ್ತು. ತಂದೆ - ತಾಯಿ ಗಟ್ಟಿಯಾಗಿ ನಿಂತಿದ್ದರು. ಆದರೆ ಮೇಜರ್ ಸಾರ್ಥಕನ ಪುಟ್ಟ ತಂಗಿ ಇದನ್ನು ಸಹಿಸದಾದಳು. ತ್ರಿವರ್ಣ ಧ್ವಜದಿಂದ ಸುತ್ತುವರೆದ ತನ್ನ ಅಣ್ಣನ್ನನ್ನು ಕಂಡು ಗರ್ವವಾದರೂ ಎರಡು ವರ್ಷಗಳ ಬಳಿಕ ಅಣ್ಣನನ್ನು ಈ ತರಹ ಕಾಣುವುದು ಆಕೆಗೆ ಅತೀವ ನೋವನ್ನು ಉಂಟು ಮಾಡಿತ್ತು. ಹೀಗಿರಲು ಸಾರ್ಥಕನ ಮಿತ್ರನೊಬ್ಬನು ತನ್ನ ಬಳಿಯಿದ್ದ ಪತ್ರವನ್ನು ತಂಗಿಗೆ ನೀಡಿದನು. ಅದನ್ನು ಓದಲು ತೆಗೆದರೆ ಅವಳದೇ ಪತ್ರ ಅಣ್ಣನ ಜೇಬಿನಿಂದ ದೊರೆತಿತ್ತು. " ಪ್ರೀತಿಯ ಅಣ್ಣ,
ಯಾವಾಗ ಬರುತ್ತಿರುವಿ? ನಿನ್ನ ಕಾಣದೆ ಸರಿಸುಮಾರು ಎರಡು ಸಂವತ್ಸರಗಳೆ ಕಳೆದು ಹೋಯಿತು. ಪ್ರತಿ ಬಾರಿ ಬರುವೆ ಎನ್ನುವೆ. ಬರುವ ಲಕ್ಷಣಗಳು ಕಾಣುವುದೇ ಇಲ್ಲ. ಈ ವರ್ಷ ರಕ್ಷಾ ಬಂಧನಕ್ಕೆ ಆದರೂ ಬಾರಣ್ಣ. ನೀನು ನನ್ನ ಹೆಮ್ಮೆ. ನನ್ನ ಹಾಗೆಯೇ ತಮ್ಮ ಅಣ್ಣನಿಗೆ ರಾಖಿ ಕಟ್ಟಲು ಕಾಯುವ ತಂಗಿಯಂದಿರನ್ನು, ಅವರ ಕುಟುಂಬವನ್ನು ಕಾಯುವವನು ನೀನು. ಇಂದು ನಿನ್ನ ತಂಗಿಯ ಮನ ಒಂದು ಬಾರಿ ನಿನ್ನನ್ನು ಕಾಣಬೇಕು ಎಂಬ ಬಯಕೆ ಇಟ್ಟಿದೆ. ಈ ಬಾರಿ ಇಲ್ಲ ಎನ್ನಬೇಡ. ನಿನ್ನ ಆಗಮನಕ್ಕಾಗಿ ಸದಾ ಕಾಯುತ್ತಿರುವೆ.
ಇಂತಿ ನಿನ್ನ ತಂಗಿ,
ಶ್ರುತಿ."
ಎಂದು ಬರೆದಿತ್ತು. ಅವನು ರಕ್ಷಾ ಬಂಧನದ ಸಮಯಕ್ಕೆ ಬಂದಿದ್ದ ಆದರೆ ಶವವಾಗಿ. ಶೃತಿ ತನ್ನ ಅಣ್ಣ ಶಾಂತವಾಗಿ ಮಲಗಿರುವುದನ್ನು ಕಂಡಳು. ಅವನ ವದನದಲ್ಲಿ ದೇಶಕ್ಕಾಗಿ ಹೋರಾಡಿ ಮಡಿದ ತೃಪ್ತಿ ಎದ್ದು ಕಾಣುತಿತ್ತು. ಶ್ರುತಿ ಹುಟ್ಟು ಅಂಗವಿಕಲೆ. ನಡೆಯಲು ಸಾಧ್ಯವಿಲ್ಲ. ಆದರೆ ತನ್ನ ಕುರ್ಚಿಯಲ್ಲೇ ಕುಳಿತುಕೊಂಡು ಅಣ್ಣನಿಗೆ ಸಲಾಂ ಹೊಡೆದು ' ಜೈ ಹಿಂದ್ ' ಎಂದು ಕೂಗಿದಳು. ಅಂದಿನಿಂದ ಇಂದಿನವರೆಗೂ ಅವಳು ಅಣ್ಣನ ನೆನಪಲ್ಲಿ ಅತ್ತಿಲ್ಲ. ಅಣ್ಣನ ನೆನಪಾದರೆ ಕೂಡಲೇ ಅವನ ಸಮಾಧಿಯ ಬಳಿ ಕುಳಿತುಕೊಂಡು ಬರುತ್ತಾಳೆ. ಹಾಗೆಯೇ ಅವನ ನೆನಪಿಗಾಗಿ ತಾನು ಶಿಕ್ಷಕಿಯಾಗಿದ್ದಾಳೆ. ಇದರಿಂದ ದೇಶ ಪ್ರೇಮ ಮಕ್ಕಳಲ್ಲಿ ಬೆಳೆಸಬೇಕು ಎಂಬ ಉದ್ದೇಶದಿಂದ.
