ಯಾರು ಹೊಣೆ...
ಯಾರು ಹೊಣೆ...
ಸಕ್ಕರೆ ತರಲು ರೇಶನ್ ಕಾರ್ಡ್ ಹಿಡಿದು ಮುಂಜಾನೆಯೇ ಊರಿನ ಸೊಸೈಟಿ ಮುಂದೆ ನಿಂತ ನಯನಾಳನ್ನು ಕಂಡು ಅಲ್ಲಿ ನಿಂತಿದ್ದ ಜನ ಅವಳ ಬಗ್ಗೆ ಗುಸು ಗುಸು ಎಂದು ಮಾತನಾಡಲು ಪ್ರಾರಂಭಿಸಿದರು.ಯಾವದನ್ನು ಕೇಳಿಸಿಕೊಳ್ಳದವಳ ಹಾಗೆ ಪ್ರತಿಕ್ರಿಯೆ ನೀಡದೆ ಮರದಂತೆ ನಿಂತಿದ್ದಳು."ಓ ಇವತ್ತು ನೀನು ಬರುತ್ತೀ ಅಂತ ಗೊತ್ತಿದ್ದರೆ ನಾನು ಬರುತ್ತಿರಲ್ಲಿಲ್ಲ ಮಾರಾಯ್ತಿ.ನಿನ್ನ ಕಂಡು ಇಡೀ ದಿನ ಕೆಲಸ ಮಾಡಲು ಹೊರಟರೆ ಏನಾದರು ಎಡವಟ್ಟು ಆಗುವುದು ಖಚಿತ" ಎಂದು ಹೇಳಿದ ಗೌರಕ್ಕನ ಮಾತು ನಯನಾಳ ಮನಸನ್ನು ಘಾಸಿ ಮಾಡಿತ್ತು.ಹೆಚ್ಚು ಹೊತ್ತು ನಿಂತರೆ ಮಾತಿನಲ್ಲೇ ಹುರಿದು ತಿನ್ನುತ್ತಾರೆ ಎಂಬ ನಿರ್ಧಾರಕ್ಕೆ ಬಂದು ಅಲ್ಲಿಂದ ಹೊರಟಳು.. ದುಃಖ ಉಮ್ಮಳಿಸಿ ಬರುತ್ತಿತ್ತು.ದಾರಿಯುದ್ದಕ್ಕೂ ತನ್ನ ಬದುಕನ್ನು ನೆನೆಯುತ್ತಾ ಮನೆ ಹೊಕ್ಕಿ ರೂಮ್ ಬಾಗಿಲು ಹಾಕಿಕೊಂಡು ಗೋಡೆ ಮೇಲೆ ಹಾಕಿದ್ದ ಅಪ್ಪ ಅಮ್ಮನ ಫೋಟೋ ಮುಂದೆ ಮಂಡಿ ಉರಿ ಕಣ್ಣೀರು ಹಾಕುತ್ತಾ "ನೋಡಿದ್ದೀರ ಅಪ್ಪ..ಊರ ಜನ ನನ್ನ ಬಗ್ಗೆ ಏನು ಮಾತನಾಡುತ್ತಿದ್ದಾರೆ ಅಂತ..ನಾನು ನತದೃಷ್ಟೆಯಂತೆ..ಹೇಳಿ ಬನ್ನಿ ಅಪ್ಪ ತ್ತುತ್ತು ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದ್ದ ಸಮಯದಲ್ಲಿ ಹುಟ್ಟಿದವಳು ನಾನು.. ನಾನು ಹುಟ್ಟಿದ ಮೇಲೆ ನಿಮ್ಮ ಅದೃಷ್ಟ ಬದಲಾಯಿತು ಎಂದು ನನ್ನ ಬಳಿ ಹೇಳುತ್ತಿದ್ದಿರಲ್ಲ ಆ ಸತ್ಯವನ್ನು ಇವರಿಗೆಲ್ಲಾ ತಿಳಿಸಿ ಅಪ್ಪ... ಮದುವೆ ಮಾಡಿ ಕಳುಹಿಸಿದರೆ ಮನೆಯ ಅದೃಷ್ಟಲಕ್ಷ್ಮಿ ಹೋದಂತೆ ಎಂದು ನನಗೆ 40 ಆದರೂ ಮದುವೆ ಮಾಡದೆ ಮನೆಯಲ್ಲಿಯೇ ಇಟ್ಟುಕೊಂಡಿರಲ್ಲ ಈ ಸತ್ಯವನ್ನು ಇವರಿಗೆಲ್ಲರಿಗೂ ತಿಳಿಸದೆ ಏಕೆ ನನ್ನ ಬಿಟ್ಟು ಹೋದಿರಿ??
ಊರಲ್ಲಿರುವವರು ನನ್ನ ನೋಡುತ್ತಿದ್ದ ದೃಷ್ಟಿಕೋನ ಬದಲಾಗಿದೆ ಎಂದು ನಿಮಗೆ ತಿಳಿಯುವ ಹೊತ್ತಿಗೆ ಸಮಯ ಮೀರಿತ್ತು. ಆದರೂ ಇನ್ನೂ ಕಾಲ ಮಿಂಚಿಲ್ಲ ಎಂಬಂತೆ ಒಬ್ಬ ಬ್ರೋಕರ್ ನನ್ನು ಕರೆಸಿ, ನನ್ನ ಫೋಟೋ ಜಾತಕ ಕೊಟ್ಟು ಕಳುಹಿಸಿದಿರಿ. ಆ ಬ್ರೋಕರ್ ತೋರಿಸಿದ ಸಂಬಂಧದ ಬಗ್ಗೆ ಪೂರ್ವಾಪರ ಯೋಚಿಸದೆ ನೀವು ಒಪ್ಪಿಗೆ ಸೂಚಿಸಿ ನನಗೆ ಮದುವೆ ಮಾಡಿಸಿ ಮನೆ ಅಳಿಯನನ್ನಾಗಿ ಅವನ್ನನ್ನು ಮನೆ ತುಂಬಿಸಿಕೊಂಡಿರಿ.. ಮದುವೆ ಏನೋ ಆಯಿತು. ಆದರೆ ನನ್ನ ಜೀವನ ನರಕವಾಯಿತು. ಮದುವೆಯಾದ ಮಹೇಶನಿಗೆ ಜೂಜಾಡುವ ಚಟವಿತ್ತು.ಅವನಿಗೊಂದು ಮದುವೆ ಮಾಡಿದರೆ ಸರಿ ಹೋಗಬಹುದು ಎಂಬ ಭರವಸೆಯಲ್ಲಿ ನನ್ನೊಂದಿಗೆ ಮದುವೆ ಮಾಡಿಸಿ ಜಾಗ ಬದಲಾದರೆ ಮನಸ್ಥಿತಿ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಅವನ ಮನೆಯವರು ಮನೆ ಅಳಿಯನಾಗಲು ಒಪ್ಪಿ ಮದುವೆ ಮಾಡಿಸಿದರು. ಆದರೆ ನಿರೀಕ್ಷಿಸಿದ್ದು ಸುಳ್ಳಾಗಿತ್ತು. ಅವನ ಜೂಜಿನ ಚಟ ಮಿತಿ ಮೀರಿತ್ತು.ಅದೆಷ್ಟೋ ರಾತ್ರಿಗಳು ಬರುತ್ತಾನೆ ಎಂದು ಕಾದು ಕಾದು ಮಲಗಿದ್ದೆ.ಆದರೆ ಮಹೇಶನಿಗೆ ಮನೆ ಮಠ ಯಾವುದೂ ಬೇಡವಾಗಿತ್ತು.ಮನೆಯವರ ಒತ್ತಾಯಕ್ಕೆ ಮದುವೆಯಾಗಿದ್ದ.ಬದಲಾಯಿಸುವ ಪ್ರಯತ್ನದಲ್ಲಿ ಸೋತಿದೆ.
ಮದುವೆ ಆಗಿ ವರ್ಷವಾಗಿರಲ್ಲಿಲ್ಲ.ಜೂಜಾಡಿ ಬರುವಾಗ ಕತ್ತಲಲ್ಲಿ ಕಾಣದೆ ಆಳವಾದ ಗುಂಡಿಗೆ ಬಿದ್ದು ತಲೆಗೆ ಬಲವಾದ ಪೆಟ್ಟಿ ಬಿದ್ದಿತ್ತೆಂದು ಆಸ್ಪತ್ರೆಗೆ ಕರೆದೊಯ್ದುರು.ಚಿಕಿತ್ಸೆ ಫಲಿಸದೆ ಜೀವ ಬಿಟ್ಟ.ಮಹೇಶನ ಸಾವಿನ ವಾರ್ತೆ ಅಮ್ಮನ ಕಿವಿಗೆ ಬೀಳುತ್ತಲೆ ಮಗಳ ಜೀವನ ನೆನೆದು ಹೃದಯಾಘಾತವಾಗಿ ಅಮ್ಮನೂ ಬಿಟ್ಟು ಹೊರಟಳು... ಅಮ್ಮನನ್ನು ಕಳೆದುಕೊಂಡ ಮೇಲೆ ನೀವು ಮಂಕಾದಿರಿ.ನಿಮ್ಮ ಆರೈಕೆಯಲ್ಲಿ ಎಲ್ಲವನ್ನು ಮರೆತು ಬದುಕುತ್ತಿದ್ದೆ.. ನನ್ನ ಜೀವನ ನಿಮ್ಮಿಂದ ಹಾಳಾಯ್ತು ಎಂಬ ಕೊರಗಿನಲ್ಲಿ ನೀವು ಚೇತರಿಸಿಕೊಳಲ್ಲಿಲ್ಲ.ಒಂದು ಮುಂಜಾನೆ ನೀವು ಚಿರ ನಿದ್ರೆಗೆ ಶರಣಾದಿರಿ..
ನೀವು ಮಾಡಿಟ್ಟ ಆಸ್ತಿ ಇದೆ...ಆದರೆ ನನ್ನ ಜೊತೆ ಜೀವಿಸಲು ಯಾರು ಇಲ್ಲ.. ಎಲ್ಲವನ್ನು ಮಾರಿ ಎಲ್ಲಾದರು ಹೋಗಿ ಜೀವನ ಮಾಡೋಣ ಎಂದುಕೊಂಡರೆ ಹೆಣ್ಣು ಮಕ್ಕಳಿಗೆ ಓದು ಬರಹವೇಕೆ ಎಂದು ಕಾಲೇಜಿಗೂ ಕಳಿಸದೇ ಮನೆಯಲ್ಲಿ ಇಟ್ಟುಕೊಂಡ ಅಮ್ಮ ಅಜ್ಜಿಯ ಮಾತಿಗೆ ನೀವು ಸಮ್ಮತಿಸಿದ್ದೀರಿ.. ಓದನ್ನು ಅರ್ಧದಲ್ಲಿ ನಿಲ್ಲಿಸಿದೆ..ಎಲ್ಲರೂ ನನ್ನನ್ನು ಒಂಟಿಯಾಗಿಸಿ ಹೋಗಿದ್ದೀರಿ..ಈ ಊರಿನವರ ಚುಚ್ಚು ಮಾತು ನನ್ನಿಂದ ಸಹಿಸಲಾಗುತ್ತಿಲ್ಲ...ಹಾಗೆಂದು ಸಾಯುವ ದೈರ್ಯವು ಇಲ್ಲ..ಮನೆಗೆ ಯಾರೇ ಬಂದರು ಕಥೆ ಕಟ್ಟುವ ಈ ಕೆಟ್ಟ ಮನಸ್ಥಿತಿಗಳ ಜೊತೆ ಬದುಕಲು ಇಷ್ಟವಿಲ್ಲ..
ನನ್ನೀ ಸ್ಥೀತಿಗೆ ಯಾರು ಹೊಣೆ ಅಪ್ಪ...ಓದಿಸಲು ಬಿಡದ ಅಮ್ಮ ಅಜ್ಜಿಯೋ? ನಿಮ್ಮ ಐಶ್ವರ್ಯ ಉಳಿಸಿಕೊಳ್ಳಲು ನನ್ನನ್ನು ಉಳಿಸಿಕೊಂಡ ನೀವಾ?ದುಡ್ಡಿನ ಆಸೆಗೆ ಮದುವೆ ಮಾಡಿಸಿದ ಬ್ರೋಕರ್??ಮದುವೆ ಇಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಮದುವೆಯಾದ ಮಹೇಶನಾ?? ಮಗ ಸರಿ ಹೋಗಬಹುದು ಎಂಬ ನಂಬಿಕೆಯಲ್ಲಿ ಅವನ ಬಗ್ಗೆ ಗೊತ್ತಿದ್ದರೂ ಮುಚ್ಚಿಟ್ಟು ಮದುವೆ ಮಾಡಿದ್ರಲ್ಲ ಅತ್ತೆ ಮತ್ತು ಮಾವ ಅವರಾ??ಯಾರು ಅಪ್ಪ ಹೇಳಿ ನಿಮ್ಮೆಲ್ಲರಿಂದ ನಾನು ಈ ಪರಿಸ್ಥಿತಿಗೆ ಬಂದಿರುವೆನಾ?ಅಥವಾ ಎಲ್ಲವನ್ನು ಮೌನವಾಗಿ ಸ್ವೀಕರಿಸಿದ ನನ್ನ ತಪ್ಪಾ...ನಾನೇ ಹೊಣೆಯಾ??"ಎಂದು ಒಂದೇ ಸಮನೆ ಪ್ರಶ್ನೆ ಕೇಳುತ್ತಾ ಅಳುತ್ತಿದ್ದವಳನ್ನು ಸಾಂತ್ವಾನಿಸಿ ಉತ್ತರಿಸಬೇಕಾದವರು ಫೊಟೋ ಸೇರಿ ಮೌನವಾಗಿದ್ದರು..
ನಯನಾಳ ಸ್ಥಿತಿಗೆ ಹೊಣೆ ಯಾರು?? ಅವಳ ಹಣೆಬರಹವೇ ಅವಳ ಸುತ್ತಮುತ್ತಲಿನವರೆ? ನೇರವಾಗಿ ಅವಳೇ ಕಾರಣವಾದಳೆ...
