STORYMIRROR

Ashritha Kiran ✍️ ಆಕೆ

Classics Inspirational Others

4  

Ashritha Kiran ✍️ ಆಕೆ

Classics Inspirational Others

ವೆಂಕಜ್ಜಿಯ ಬುದ್ಧಿವಂತಿಕೆ-4

ವೆಂಕಜ್ಜಿಯ ಬುದ್ಧಿವಂತಿಕೆ-4

3 mins
261

ರಜಾ ಮುಗೀತ ಬರ್ತಿದ್ದಂತೆ ಮೊಮ್ಮಕ್ಕಳನ್ನು ಕರೆದೊಯ್ಯಲು ಮಗ ಹಾಗೂ ಅಳಿಯಂದಿರು ಮನೆಗೆ ಬಂದು ಎರಡು ದಿನ ಇದ್ದು ವೆಂಕಜ್ಜಿಯ ಆತಿಥ್ಯವನ್ನು ಸ್ವೀಕರಿಸಿ ಹಿಂದಿರುಗಿದರು. ಮಕ್ಕಳೊಂದಿಗೆ ಅಲ್ಲಿ ಇಲ್ಲಿ ದೇವಸ್ಥಾನಗಳನ್ನೆಲ್ಲಾ ಸುತ್ತಿ ದಣಿದಿದ್ದ ವೆಂಕಜ್ಜಿಗೆ ಮಕ್ಕಳು ಹೊರಟ ನಂತರ ಮತ್ತೆ ಮನೆಯಲ್ಲಿ ಒಂಟಿಯಾದಳು. ನಿತ್ಯ ಮಲಗುವಾಗ ಕಥೆ ಹೇಳಿ ಎಂದು ಪೀಡಿಸುತ್ತಿದ್ದ ಮೊಮ್ಮಕ್ಕಳನ್ನು ನೆನೆದು ಮನಸ್ಸಿಗೆ ಬೇಸರವಾಯಿತು. ಮೊಮ್ಮಕ್ಕಳೊಂದಿಗೆ ಕಳೆದ ಕ್ಷಣವನ್ನು ನೆನಪಿಸಿಕೊಳ್ಳುತ್ತಿರುವಾಗ ಬಾಗಿಲು ಬಡಿದ ಶಬ್ದವಾಯಿತು.

"ಇದು ಯಾರು ಇಷ್ಟೊತ್ತಲ್ಲಿ ಬಂದಿದ್ದಾರಲ್ಲ"ಎನ್ನುತ್ತಾ ಬಾಗಿಲು ತೆಗೆದ ವೆಂಕಜ್ಜಿ ಎದುರಿನಲ್ಲಿ ನಿಂತ ವ್ಯಕ್ತಿಯನ್ನು ಗುರುತಿಸಲಾಗದೆ "ಯಾರು?ಯಾರು ಬೇಕಿತ್ತು..?"

"ನಾನು ಮನೋಹರ.. ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕಿತ್ತು.. ಒಳಗೆ ಬರಬಹುದಾ?

"ಯಾವ ಮನೋಹರ !"

"ನಾನು ಸುಭದ್ರಮ್ಮನ ಮಗ ಮನೋಹರ. ದುಬೈನಿಂದ ಈಗಷ್ಟೇ ಊರಿಗೆ ಬಂದೆ"ಎಂದು ತಲೆ ತಗ್ಗಿಸಿ ಮೌನವಾಗಿ ವೆಂಕಜ್ಜಿಯ ಪ್ರತಿಕ್ರಿಯೆಗೆ ಕಾದು ನಿಂತ.ಬಹುಶಹ ಅವನಿದ್ದ ಪರಿಸ್ಥಿತಿಯಲ್ಲಿ ವೆಂಕಜ್ಜಿ ಎರಡು ಏಟು ಹೊಡೆದಿದ್ದರೂ ಹೊಡಿಸಿಕೊಳ್ಳುತ್ತಿದ್ದವನಂತೆ ಕಾಣುತ್ತಿದ್ದ.

"ಓಹೋ ನೀನಾ ..ಬಾ ಬಾ ಅದೇನು ಈಗ ಬಂದೆ.ಈ ಊರಲ್ಲಿ ನಿನ್ನವರೆಂದು ಯಾರು ಇಲ್ಲವಲ್ಲ ಈಗ" ಎಂದು ಉರಿ ನೋಟ ಬೀರುತ್ತಾ ಒಳನೆಡೆದರು..

ಬಾಗಿಲಲ್ಲಿ ಕಣ್ಣೀರು ಹಾಕುತ್ತಿದ್ದವನ ನೋಡಿ ದುಃಖವಾಯಿತು.ಮೊದಲಿನಿಂದ ಪರಿಚಯಯಿರುವವ. ಬಾಲ್ಯದಿಂದಲೂ ಎತ್ತಿ ಆಡಿಸಿದ ಹುಡುಗ.ತಾನೆ ಮುಂದೆ ನಿಂತು ಮದುವೆ ಮಾಡಿ ಆಶಿರ್ವಾದ ಮಾಡಿದ ಜೋಡಿ.ಆದರೆ ತಾಯಿಯಾದ ಸುಭದ್ರಮ್ಮನ ಜೊತೆ ನಡೆದುಕೊಂಡ ರೀತಿಗೆ ಅವಳಿಗೆ ಮಾಡಿದ ಮೋಸಕ್ಕೆ ಆದ ಅನ್ಯಾಯಕ್ಕೆ ಮುಖ್ಯ ಕಾರಣನಾದ ಇವನ ಮೇಲೆ ಕೆಂಡದಂತ ಕೋಪ.

"ಹೇಳು ನನ್ನಿಂದೇನಾಗಬೇಕಿತ್ತು? ಅದ್ಯಾಕೆ ನನ್ನ ಮನೆ ಬಾಗಿಲಿಗೆ ಬಂದಿದ್ದೀಯಾ?"

"ಅದು... ನಾನು ಮಾಡಿದ ತಪ್ಪಿಗೆ ಕ್ಷಮೆ ಇಲ್ಲ ಎಂದು ನನಗೆ ತಿಳಿದಿದೆ ದಯವಿಟ್ಟು ನನ್ನನ್ನು ಕ್ಷಮಿಸಿ, ಅಮ್ಮ ಎಲ್ಲಿದ್ದಾಳೆ ಎಂದು ತಿಳಿಸುತ್ತೀರಾ.."

"ಓಹೋ ಅಮ್ಮ ಬದುಕಿದ್ದಾಳೆ ಅಂತ ನೆನಪಿದೆಯಾ? ಹೌದು.. ಈಗ ಅವಳು ಯಾಕೆ ಬೇಕಿತ್ತು, ಇನ್ನೇನಾದರೂ ಬರೆಸಿಕೊಳ್ಳುವುದು ಬಾಕಿ ಇತ್ತೇ?"

"ಇಲ್ಲ ಇಲ್ಲ ಖಂಡಿತ ಇಲ್ಲ ನಾ ಮಾಡಿದ ತಪ್ಪಿಗೆ ಈಗಾಗಲೇ ಶಿಕ್ಷೆ ಅನುಭವಿಸುತ್ತಿದ್ದೇನೆ. ಅಮ್ಮನನ್ನು ಮನೆಯಿಂದ ಹೊರಹಾಕಿ ದೊಡ್ಡ ಅಪರಾಧ ಮಾಡಿದ್ದೇನೆ .ಅದಕ್ಕೆ ಶಿಕ್ಷೆ ಎಂಬಂತೆ ನಾನು ಅತ್ಯಂತ ಪ್ರೀತಿಸುತ್ತಿದ್ದ ನನ್ನ ಹೆಂಡತಿ ನನ್ನ ಮನೆ ಆಸ್ತಿಯನ್ನು ಬರೆಸಿಕೊಂಡು ನನ್ನನ್ನು ಹೊರ ಹಾಕಿದ್ದಾಳೆ. ನಾನಿಟ್ಟ ನಂಬಿಕೆಗೆ ಮೋಸವಾಯಿತು.ಎಲ್ಲವನ್ನು ಕಳೆದುಕೊಂಡು ದುಃಖದಲ್ಲಿ ನಾನಿದ್ದೇನೆ"

"ಏನು ದುಃಖವೇ? ಅಮ್ಮನನ್ನು ಹೊರ ಹಾಕಿದಾಗ ನಿನಗೆ ದುಃಖ ಆಗಲಿಲ್ಲ. ಅಮ್ಮನ ನಂಬಿಕೆಗೆ ನೀನು ಮೋಸ ಮಾಡುತ್ತಿರುವೆ ಎಂದು ನಿನಗೆ ದುಃಖ ಆಗಲಿಲ್ಲ ನಿನ್ನ ಹೆಂಡತಿ ನಿನಗೆ ಮೋಸ ಮಾಡಿದ್ದಕ್ಕೆ ದುಃಖ ಆಗ್ತಾ ಇದೆ. ಮಾಡಿದ್ದುಣ್ಣೋ ಮಾರಾಯ.. ನೀನು ಮಾಡಿದ್ದು ನಿನ್ನನ್ನೇ ಬಂದು ಬಡಿದಿದೆ ಅಷ್ಟೇ ಹೋಗಿ ಅನುಭವಿಸು. ನಿನ್ನ ತಾಯಿ ಇದೇ ಸ್ಥಿತಿಯಲ್ಲಿದ್ದಾಗ ಅವಳ ನೋವು ದುಃಖ ನಿನಗೆ ಕಾಣಲಿಲ್ಲ ಈಗ ನಿನ್ನ ದುಃಖ ತೋಡಿಕೊಳ್ಳಲು ಅವಳು ಬೇಕಾ? ಹೋಗು, ಬೇರೆ ಏನಾದರೂ ಕೆಲಸ ಇದ್ದರೆ ನೋಡ್ಕೋ ಹೊತ್ತಾಗಿದೆ ನಾನು ಮಲಗಬೇಕು.

"ವೆಂಕಜ್ಜಿ ದಯಮಾಡಿ ಚುಚ್ಚಿ ಮಾತನಾಡಿ ನನ್ನ ಕೊಲ್ಲಬೇಡಿ ಪ್ಲೀಸ್. ನನ್ನಿಂದ ತಪ್ಪಾಗಿದೆ ತಿದ್ದಿಕೊಳ್ಳವ ಅವಕಾಶಕ್ಕಾಗಿ ಬಂದಿದ್ದೇನೆ.. ಅಮ್ಮ ಎಲ್ಲಿದ್ದಾರೆ ಅಂತ ನಿಮಗೆ ಗೊತ್ತಿರುತ್ತೆ ದಯವಿಟ್ಟು ಹೇಳಿ ಅವಳ ಕಾಲಿಗೆ ಬಿದ್ದು ಕ್ಷಮೆ ಕೇಳಿ ಅವಳ ಸೇವೆ ಮಾಡುವೆ."

"ಏನು ಕಾಲು ಹಿಡಿದು ಸೇವೆ ಮಾಡುವೆಯಾ? ಕಾಲು ಮುರಿದು ಜೀವ ತೆಗೆದು ಅವಳ ಹೆಸರಿನಲ್ಲಿರುವ ಇನ್ಸೂರೆನ್ಸ್ ತೆಗೆದುಕೊಳ್ಳುವ ಯೋಚನೆಯನ್ನು ಮಾಡಿದ್ದೀಯೋ ಹೇಗೆ?"

"ಇಲ್ಲ ಇಲ್ಲ ಅಂತಹ ಪಾಪ ಕಾರ್ಯ ಮಾಡಲಾರೆ. ಒಮ್ಮೆ ತಪ್ಪು ಮಾಡಿ ಮಣ್ಣು ತಿಂದಿದ್ದೇನೆ. ನನ್ನ ತಪ್ಪಿಗೆ ಕ್ಷಮೆ ಇಲ್ಲವೆಂದು ಗೊತ್ತು ಅಂತಹ ದೊಡ್ಡ ಅಪರಾಧ ನನ್ನಿಂದ ಆಗಿದೆ ದಯವಿಟ್ಟು ನನ್ನನ್ನು ನಂಬಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವೆ ಎಲ್ಲಿದ್ದಾಳೆ ಎಂದು ತಿಳಿಸಿ"

"ಈಗ ದುಃಖದಿಂದ ಇಷ್ಟು ಬೇಡಿಕೊಳ್ಳುತ್ತಿರುವ ನೀನು ಬಿಟ್ಟು ಹೋಗಬೇಡ ಮಗನೇ ಎಂದು ದುಃಖದಲ್ಲಿದ್ದ ನಿನ್ನ ತಾಯಿಯ ನೋವು ನಿನಗೆ ಕಾಣಲಿಲ್ಲ. ಇದ್ದ ಒಂದು ಮನೆಯನ್ನು ಬರಸಿಕೊಂಡು ಹೊರ ಹಾಕಿದ್ದೆ. ಅವಳೆಲ್ಲಿಯೂ ನೆಮ್ಮದಿಯಾಗಿದ್ದಾಳೆ. ನಿನಗೆ ನಿನ್ನ ತಲೆಯ ಮೇಲೆ ಸೂರಿಲ್ಲ. ಅವಳನ್ನು ಕರೆದುಕೊಂಡು ಮತ್ತೂ ನರಕಕ್ಕೆ ಹಾಕುವುದು ಬೇಡ. ನಾನು ಹೇಳುವುದಿಲ್ಲ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸು ನಡೆ"

"ಕಷ್ಟಪಟ್ಟು ದುಡಿದು ಅಮ್ಮನನ್ನು ಸಾಕುತ್ತೇನೆ.ನಿಮ್ಮ ಕಾಲು ಹಿಡಿಯುತ್ತೇನೆ" ಕಾಲಿಗೆ ಬಿದ್ದು ಅಳಲು ಆರಂಭಿಸಿದ.." ಛಿ ಬಿಡು ನನ್ನ ಕಾಲನ್ನ.. ಕ್ಷಮಿಸಬೇಕಾದವಳು ನಾನಲ್ಲ ನಿನ್ನ ತಾಯಿ".

ಎದ್ದು ನಿಂತ ಮನೋಹರನ ಕಣ್ಣುಗಳು ತುಂಬಿದ್ದವು. ಪಶ್ಚಾತಾಪದಿಂದ ಬೆಂದು ಹೋದ ಛಾಯೆ ಕಂಡು ವೆಂಕಜ್ಜಿ

"ಊರಾಚೆ ಇರುವ ವೃದ್ಧಾಶ್ರಮದವರು ಕರೆದುಕೊಂಡು ಹೋಗಿದ್ದಾರೆ ಎಂಬ ಸುದ್ದಿ ಕೇಳಿದ್ದೇ.. ಹೋಗಿ ನೋಡು. ನೊಂದು ಬೆಂದಿರುವ ಜೀವ ಅದು.ಮತ್ತೆ ಅವಳ ನಂಬಿಕೆಗೆ ಮೋಸ ಮಾಡಬೇಡ.. ಅದಾಗಲೇ ಮಾನಸಿಕವಾಗಿ ಸತ್ತಿರುವ ಅವಳನ್ನು ದೈಹಿಕವಾಗಿಯೂ ಸಾಯಿಸಬೇಡ. ಅವಳ ಇಚ್ಛೆ ಇದ್ದರೆ ಮಾತ್ರ ಅಲ್ಲಿಂದ ಕರೆದು ತಾ. ಅವಳ ನೆಮ್ಮದಿಯನ್ನು ಮತ್ತೆ ಹಾಳು ಮಾಡಬೇಡ. ಹೋಗು" ಎಂದು ಹೇಳಿದ ವೆಂಕಜ್ಜಿಯ ಬಳಿ ಆಶಿರ್ವಾದ ಪಡೆದು ಅಮ್ಮನ್ನನ್ನು ಹುಡುಕುವ ಕಾರ್ಯಕ್ಕೆ ಸಿದ್ಧನಾದ.

    ಅಮ್ಮ ಸಿಗಬಹುದೇ... ??ಮಗನನ್ನು ಕ್ಷಮಿಸಿ ಸುಭದ್ರಮ್ಮ ಆಶ್ರಮ ಬಿಟ್ಟು ಬರಬಹುದೇ??


     ದುಃಖಿಯನ್ನಾಗಿಸುವುದು ಸುಲಭ

      ದುಃಖ ಅನುಭವಿಸುವುದು ಕಷ್ಟ

      ನೀಡಿದಾಗ ದುಃಖ

      ನಿರೀಕ್ಷಿಸಲಾಗದು ಸುಖ...

  

    ಮುಂದುವರೆಯುವುದು......



Rate this content
Log in

Similar kannada story from Classics