ಸೊಪ್ಪು ಮಾರುವ ಶ್ರೀಮಂತ
ಸೊಪ್ಪು ಮಾರುವ ಶ್ರೀಮಂತ
ಅಂದು ಬೆಳಗಿನ ಎಂಟು ಗಂಟೆ ಸಮಯ ಸೊಪ್ಪು ಸೊಪ್ಪು ಎನ್ನುವ ಧ್ವನಿ ಕೇಳಿಸಿ ಹೊರಗೆ ಬಂದು ಅವನಿಗೆ ನಿಲ್ಲಿಸಿ ಬೇಕಾಗಿರುವ ಸೊಪ್ಪು ತೆಗೆದುಕೊಂಡು ದುಡ್ಡು ಕೊಡುವಾಗ,
"ಏನಯ್ಯಾ, ಈ ಮುರುಕಲು ಹಳೆಯ ಸಾಯಕಲ್ ಮೇಲೆ ಮುಂದೆ ಹಿಂದೆ ತುಂಬಿದ ತರಕಾರಿ ದೊಡ್ಡ ದೊಡ್ಡ ಚೀಲ ಇಟ್ಟಿದ್ದಿ. ಎಲ್ಲ ಕಡೆ ಒಂದೇ ಸಮನೆ ಸೊಪ್ಪು ಸೊಪ್ಪು ಎಂದು ಗಂಟಲು ಕೆರೆಯುವ ಹಾಗೆ ಜೋರಾಗಿ ಕೂಗುತ್ತಿ. ಈ ಮುದಿ ವಯಸ್ಸಿನಲ್ಲಿ ಇಂಥ ಕೆಲಸ ನಿನಗೆ ಬೇಕಾ?" ಎಂದಾಗ ಅವನ ಉತ್ತರ ಕೇಳಿ ಚಕಿತನಾದೆ.
"ಸ್ವಾಮಿ, ಹಳ್ಳಿಯಲ್ಲಿ ಮೂರು ಎಕರೆ ನೀರಾವರಿ ಜಮೀನು ಇದೆ. ವರ್ಷದಲ್ಲಿ ಎರಡು ಬೆಳೆ ಬರುತ್ತದೆ. ಇಷ್ಟೆಲ್ಲ ಇದ್ದರೂ ಸೊಪ್ಪು ಮಾರುವದು ಬಿಡುವ ಹಾಗಿಲ್ಲ. ನಮ್ಮಪ್ಪ ಸಾಯುವಾಗ ಎಷ್ಟೇ ಶ್ರೀಮಂತನಾದರೂ ಸೊಪ್ಪು ಮಾರುವದನ್ನು ಬಿಡಬಾರದು ಎನ್ನುವ ವಚನ ತೆಗೆದುಕೊಂಡು ಜೀವ ಬಿಟ್ಟ. ಏಕೆಂದರೆ ಇದು ನಮ್ಮ ಮುತ್ತಾತನಿಂದ ಬಂದ ವ್ಯಾಪಾರ. ಅದನ್ನು ಈಗ ನಾನು ಹಾಗೂ ನನ್ನ ಮಗ ಪಾಲಿಸುತ್ತಿದ್ದೇವೆ." ಎಂದು ಹೇಳಿ ಪೆಡಲ್ ಹೊಡೆದು ಹೊರಟೇ ಬಿಟ್ಟ.
ಅವನು ಹೇಳಿದ್ದು ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ.
ಒಂದು ಮಾತು ನಿಜ. ಕಥೆ ಬರೆಯುವ ಹವ್ಯಾಸ ಇರುವ ನನಗೆ ಇದು ಕಥಾವಸ್ತು ಆಯಿತು.
