ಸಂಸಾರದ ನಸೀಬು ಜೇಬಿನಲ್ಲಿದೆ
ಸಂಸಾರದ ನಸೀಬು ಜೇಬಿನಲ್ಲಿದೆ
ಅಪ್ಪನೆಂಬ ಪಟ್ಟ ಬಹಳ ಜವಬ್ದಾರಿಯುತವಾದದು. ಮಕ್ಕಳು ಅವರ ಕಾಲ ಮೇಲೆ ನಿಂತು ದುಡಿಯುವವರೆಗೂ ಅಪ್ಪನಾದವನು ಸಂಸಾರಕ್ಕಾಗಿ ದುಡಿಯುತ್ತಾನೆ.ಅಪ್ಪನೆಂಬ ಪಟ್ಟ ಸಿಕ್ಕ ಸಂತಸದಲ್ಲಿ ಚಟ್ಟ ಏರುವವರೆಗೂ ಅಪ್ಪನಾದವನು ನಿರಂತರವಾಗಿ ತನಗಾಗಿ ಏನನ್ನೂ ಅಪೇಕ್ಷಿಸದೆ ತನ್ನ ಕುಟುಂಬಕ್ಕಾಗಿ ದುಡಿಯುತ್ತಾನೆ.ಅಪ್ಪನ ಜೇಬು ಬರೀ ದುಡಿಮೆಗೆ ಸೀಮಿತವಲ್ಲ ಇಡಿ ಸಂಸಾರದ ನಸೀಬು ಅಡಗಿರುವುದೇ ಆ ಜೇಬಿನಲ್ಲಿ ಅಲ್ಲವೇ?
ಅದೊಂದು ಪುಟ್ಟ ಊರು.ಕಾಶಿ ಎಂಬಾತ ಕೂಲಿ ಕೆಲಸ ಮಾಡಿಕೊಂಡು ಜೀವನ ನೆಡೆಸುತ್ತಿದ್ದ.ಅವನ ಹೆಂಡತಿ ಸುಬ್ಬಿ ಆ ಊರಿನ ಪಟೇಲರ ಮನೆ ಕೆಲಸ ಮಾಡುತ್ತಿದ್ದಳು.ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ ಈ ದಂಪತಿಗಳಿಗೆ ನಾಲ್ಕು ಮಕ್ಕಳು.ನಾಲ್ಕು ಮಕ್ಕಳು ಓದಿನಲ್ಲಿ ಆಟೋಟಗಳಲ್ಲಿ ಬಾರಿ ಚುರುಕು.ಊರ ಪಟೇಲರಿಗೆ ಕಾಶಿಯ ಮಕ್ಕಳ ಬಗ್ಗೆ ಹೆಮ್ಮೆ ಇತ್ತು.ಲಕ್ಷ್ಮೀ ನಿನ್ನ ಮನೆಗೆ ಬರಲು ಯೋಚಿಸುತ್ತಿದ್ದರೂ ಸರಸ್ವತಿ ನಿನ್ನ ಮನೆಯಲ್ಲಿ ಬೀಡುಬಿಟ್ಟಿದ್ದಾಳೆ ಎಂದು ಖುಷಿಯಿಂದ ಹೇಳುತ್ತಿದ್ದರು..
ಕಾಶಿಯ ಗ್ರಹಚಾರ ಎಂಬಂತೆ ಒಂದು ದಿನ ಬಲವಾದ ಕಲ್ಲೊಂದು ಕಾಲ ಮೇಲೆ ಬಿದ್ದು ಕಾಲಿಗೆ ಬಲವಾದ ಪೆಟ್ಟು ಬಿದ್ದು ಒಂದು ತಿಂಗಳು ಓಡಾಡದಂತಾಯಿತು.ಕಾಶಿ ದಿನಗೂಲಿ ನೌಕರ.ಒಂದು ತಿಂಗಳು ತನ್ನ ಜೇಬು ಖಾಲಿಯಿದ್ದರೆ ಮನೆ ಮಂದಿ ಉಪವಾಸ ಸಾಯಬೇಕಾಗುತ್ತಲ್ಲಾ ಎಂದು ಯೋಚಿಸತೊಡಗಿದ.ಮಕ್ಕಳ ಮೇಲೆ ಪ್ರಾಣವಿಟ್ಟಿದ ಕಾಶಿ ನಿತ್ಯ ಅವರು ಸಂತೋಷಕ್ಕೆಂದು ಎರಡು ಚಾಕ್ಲೇಟ್ ತಂದು ನಾಲ್ಕು ಮಕ್ಕಳಿಗೆ ಹಂಚುತ್ತಿದ್ದ..ಮಕ್ಕಳು ಕೂಡ ಅಪ್ಪನ ಪರಿಸ್ಥಿತಿ ಅರಿತು ಅಪ್ಪ ನಾವು ಚಾಕ್ಲೇಟ್ ತಿನ್ನುವ ದುಡ್ಡು ಉಳಿಸಿ ಮನೆ ನಿಭಾಯಿಸೋಣ .ಬೇಗ ಉಷಾರಗಿ ಎಂದು ಹೇಳುತ್ತಿದ್ದ ಅವರ ಮುಗ್ಧತೆ ಅವನನ್ನು ಇನ್ನಷ್ಟು ಮರುಗುವಂತೆ ಮಾಡಿತು. ಕೈಯಲ್ಲಿ ಕೆಲಸವಿಲ್ಲ ಅರೆ ಹೊಟ್ಟೆ ತಿಂದು ನೀರು ಕುಡಿದು ಮಲಗುವ ಪರಿಸ್ಥಿತಿ ಒದಗಿತ್ತು.
ಮನೆಯಲ್ಲಿ ಒಂಟಿಯಾಗಿ ಕುಳಿತು ಯೋಚಿಸುತ್ತಿದ್ದವನಿಗೆ ಹೆಂಡತಿ ಮಕ್ಕಳನ್ನು ನೆನೆದು ಸಂಕಟವಾಯಿತು.ನನ್ನ ಜೇಬು ಖಾಲಿಯಾಗಿ ಸಂಸಾರ ನರಳುವಂತಾಗಿದೆ.ಇನ್ನು ಮುಂದೆ ಬಲವಾದ ಕೆಲಸವನ್ನು ನನ್ನಿಂದ ಮಾಡಲಾಗದು.ಏನಾದರೂ ಮಾಡಬೇಕು ಎಂದು ನಿರ್ಧರಿಸಿ ಸಾಲಕ್ಕಾಗಿ ಪಟೇಲರ ಬಳಿ ಮಾತನಾಡಲು ಬಯಸಿದ..ಪಟೇಲರು ಹೃದಯವಂತರಾಗಿದ್ದರು.ಕಾಶಿಯನ್ನು ಮಾತನಾಡಿಸಲು ಬಂದಾಗ ಕಾಶಿ ಪಟೇಲರ ಬಳಿ ಸಾಲ ಕೇಳಿ ದಲ್ಲಾಳಿಯನ್ನು ಬೇಟಿ ಮಾಡಿ ಎರಡು ಹಸುವನ್ನು ಕೊಂಡುಕೊಂಡ.ಕಾಮದೇನುವನ್ನು ನಂಬಿ ಹಾಲನ್ನು ಮಾರುವ ಕಾಯಕ ಆರಂಭಿಸಿದ.ಆರಂಭದಲ್ಲಿ ಬಹಳಾ ಕಷ್ಟವೆನಿಸಿತು.ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದೆನಿಸಲು ಆರಂಭವಾಗಿತ್ತು.ಆದರೆ ಭರವಸೆ ಕಳೆದುಕೊಳ್ಳದೆ ಶ್ರಮಪಟ್ಟು ದುಡಿದು ಎರಡು ಹಸು ನಾಲ್ಕಾಗಿ ಕ್ರಮೇಣ ಹಣಗಳಿಸಲು ಆರಂಭಿಸಿದ.ಖಾಲಿಯಾಗಿದ್ದ ಜೇಬು ಪುಡಿಕಾಸಿನಿಂದ ತುಂಬಿ ನಂತರ ನೋಟುಗಳಾಗಿ ಮಾರ್ಪಾಡಾಯಿತು.ಮಕ್ಕಳಿಗೆ ಎರಡು ಚಾಕ್ಲೇಟ್ ಬದಲು ನಲ್ಕಾಯಿತು.ಹೀಗೆ ಹಂತ ಹಂತ ದಾಟುತ್ತಿದ್ದಂತೆ ಜೇಬು ತುಂಬುತ್ತಿದ್ದಂತೆ ಕಾಶಿ ಸಂಸಾರದ ನಸೀಬು ಬದಲಾಯಿತು.ಅವನ ಭರವಸೆ ಅವನ ಧೈರ್ಯ ಅವನ ನಿಷ್ಠೆ ಪ್ರಾಮಾಣಿಕತೆ ಅವನು ಉತ್ತಮ ಜೀವನ ನಡೆಸಲು ನಾಂದಿಯಾಯಿತು.ಕಾಶಿ ಒಳ್ಳೆಯ ಸ್ಥಾನ ತಲುಪಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಒಳ್ಳೆ ಬದುಕನ್ನು ರೂಪಿಸುವಲ್ಲಿ ಯಶಸ್ವಿಯಾದ.
ಅಪ್ಪನ ಜೇಬು ಒಂದು ಕುಟುಂಬದ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ.ಅತಿಯಾಗಿ ತುಂಬಿದ ಅಪ್ಪನ ಜೇಬು ಅಶಿಸ್ತಿನ ಕಾರಣದಿಂದ ದುಡ್ಡಿನ ಬೆಲೆ ತಿಳಿಯದೆ ಮಕ್ಕಳು ಬೇಕಾಬಿಟ್ಟಿ ಖರ್ಚು ಮಾಡಿ ಜೀವನ ಹಾಳು ಮಾಡಿಕೊಳ್ಳುವ ಸಂಭವವಿರುತ್ತದೆ.ಸದಾ ಖಾಲಿಯಿರುವ ಅಪ್ಪನ ಜೇಬು ಮಕ್ಕಳ ಮನಸ್ಥಿತಿ ಕೆಡಿಸಿ ದಾರಿ ತಪ್ಪಿಸುವ ಸಂಭವವೂ ಇರುತ್ತದೆ. ಅಪ್ಪನ ಕಷ್ಷ ಸುಖ ಅರಿಯುವ ನಿಸ್ವಾರ್ಥ ಮಕ್ಕಳು ಮೇಲೆ ಹೇಳಿದ ಕಾಶಿಯ ಮಕ್ಕಳಂತೆ ಸುಖ ಕಾಣುತ್ತಾರೆ. ಒಟ್ಟಿನಲ್ಲಿ ಈ ಅಪ್ಪನ ಜೇಬು ಸಂಸಾರದ ನಸೀಬು ಬದಲಾಯಿಸುವ ಶಕ್ತಿಯನ್ನು ಹೊಂದಿದೆ.
ಅಪ್ಪನ ಜೇಬು
ಬದಲಾಯಿಸಬಲ್ಲದು ನಸೀಬು
ಕೊಡಲು ಬಯಸದೆ ಯಾವುದೇ ಸಬೂಬು
ಆಸೆಗಳನ್ನು ಈಡೇರಿಸಲು ಶ್ರಮವಯಿಸುವನು
ಅಪ್ಪನೊಬ್ಬ ತನ್ನ ಜೀವನ ಪೂರ್ತಿ...
ಆತನ ಜೇಬಿನಲ್ಲಿದೆ ಸಂಸಾರ ನಿರ್ವಹಿಸುವ ಶಕ್ತಿ
ಮಕ್ಕಳಿಗೆ ಸದಾ ಸಂಸಾರ ನಿಭಾಯಿಸುವ ಅಪ್ಪನೇ
ಜೀವನಕ್ಕೆ ಸ್ಫೂರ್ತಿ...
