ಸಂಜೆ ಕವಿಯುವ ವೇಳೆ.....
ಸಂಜೆ ಕವಿಯುವ ವೇಳೆ.....
ಕೆಂಪಡರಿದೆ ಬಾನು. ನಿತ್ಯ ಕಜ್ಜ ಮುಗಿಸಿ ಹೊರಡುತ್ತಿದ್ದಾನೆ ಭಾನು. ಆಗಷ್ಟೇ ಡ್ಯೂಟಿ ಶಿಫ್ಟ್ ಮುಗಿಸಿ ಮೈಮುರಿದುಕೊಂಡು, ಬಾಲ್ಕನಿಯತ್ತ ಬಂದು ನಿಂತಿದ್ದಾನೆ ಶಶಿ. ಹೊರಳುತ್ತಿದ್ದ ತನ್ನ ದೃಷ್ಟಿಗೆ, ಮುಸ್ಸಂಜೆಯ ಹೊಂಬಣ್ಣವ ಕಂಡೊಡನೆ ಅದೇನೋ ಖುಷಿ. "ಹ್ಞಂ! ಈ ರೀತಿಯೇ ಇತ್ತಲ್ಲವೇ ಆಕೆಯ ಮೈಬಣ್ಣ, ಅದೆಂತಹ ಹಿತವಿತ್ತು ಅವಳ ಮಡಿಲಲ್ಲಿ ಜಗಮರೆತು ಮಲಗುತ್ತಿದ್ದ ಕ್ಷಣ. ನಿಜ! ಬದುಕಲ್ಲಿ ಆಗ ಐಶಾರಾಮದ ಸುಖವಿರಲಿಲ್ಲ. ಆದರೆ ಅಮ್ಮಳೆಂಬ ಅವಳಿದ್ದಳು.
ಪ್ರತಿ ಮುಂಜಾನೆಯೂ ಬೈದು ಎಬ್ಬಿಸಿ, ಗದ್ದೆಯತ್ತ ಕರೆದೊಯ್ಯುತ್ತಿದ್ದ ಅವನಿದ್ದನು. ಬದುಕಿನ ಪಾಠಶಾಲೆಗೆ ಮೊತ್ತಮೊದಲಾಗಿ ಕರೆದೊಯ್ದ ಅಪ್ಪ!
ಈಗ ಈ ಬದುಕಿಗೆ ಕೊಂಚವು ಕಷ್ಟವಿಲ್ಲ, ಕೈತುಂಬಾ ಗರಿಗರಿ ನೋಟು, ಹಸಿವಾದರೆ ರುಚಿರುಚಿಯಾದ ತಿಂಡಿ ಮನೆಬಾಗಿಲಿಗೆ ಹಾಜಾರು ಪಡಿಸುವ ಸ್ವಿಗ್ಗಿ ಝೋಮ್ಯಾಟೋ. ಆದರೆ ಸಂಜೆ ಬಣ್ಣಕ್ಕೆ ಪೈಪೋಟಿಯೇರಿಸುವ ಬಜ್ಜಿ ಮಾಡಿಕೊಡುವ ಅಮ್ಮನಿಲ್ಲ. ಮುಸ್ಸಂಜೆ ತೋಟದಿಂದ ಲೋಕಾರೂಢಿಯ ಮಾತುಗಳನ್ನು ಆಡುತ್ತಾ ನನ್ನೊಂದಿಗೆ ಹೆಜ್ಜೆಹಾಕುವ ಆ ಅಪ್ಪನಿಲ್ಲ".
ಸಂಜೆ ಇಳಿಯುತ್ತಿದೆ, ಜಗಕ್ಕೆ ಕತ್ತಲಡರುತ್ತಿದೆ. ಶಶಿಕಾಂತನ ಹೃದಯದಲ್ಲೂ ದುಗುಡದ ಛಾಯೆ!!
