ಪ್ರೀತಿಗಾಗಿ ಹಂಬಲಿಸುವ ಮನ..
ಪ್ರೀತಿಗಾಗಿ ಹಂಬಲಿಸುವ ಮನ..
ಕನ್ನಡಿ ನೋಡುತ್ತಿದ್ದಳು..ತನ್ನ ಮುಖದ ಕಳೆ ಮಾಯವಾಗಿದನ್ನು ಗಮನಿಸಿದಳು..ಅವಳ ಮುಖ್ಯ ಆಭರಣವಾದ ನಗುವಿನ ಸುಳಿವೇ ಇರಲಿಲ್ಲ.. ಕನ್ನಡಿಯಲ್ಲಿ ಕಾಣುತ್ತಿದ್ದ ತನ್ನ ಪತಿಯ ಫೋಟೋವಿನ ಬಿಂಬವನ್ನು ನೋಡಿ ಕಣ್ಣು ಕಂಬನಿ ಸುರಿಸಿತು.... ತಡೆಯುವ ಪ್ರಯತ್ನ ಮಾಡಿದಳು.. ಆದರೆ ತಡೆಯುವ ಮನಸಾಗಲಿಲ್ಲ... ಅವಳ ಮನ ಅತ್ತು ಹಗುರಾಗಬೇಕೆಂದು ಬಯಸುತ್ತಿತ್ತು..ಮನಸ್ಸಿನ ಆಸೆಗೆ ಅಡ್ಡವಾಗದೆ ಕಂಬನಿಯನ್ನು ಹರಿಯಲು ಬಿಟ್ಟಳು...
ಸದ್ಯದ ಮಟ್ಟಿಗೆ ಈ ಕಂಬನಿಗೆ ಅವಳೊಂದು ಹೆಸರಿಟ್ಟಿದ್ದಳು.. ಈ ಕಂಬನಿ ಅವಳಿಗೆ ಜೊತೆಗಾರನಾಗಿತ್ತು... ಬಾಳಿನಲ್ಲಿ ಜೊತೆಯಾಗಿ ಹೆಜ್ಜೆ ಇಡುತ್ತೇನೆ ಎಂದು ಕೈಹಿಡಿದು ಸಪ್ತಪದಿ ತುಳಿದವ ಅರ್ಧದಲ್ಲಿಯೇ ಒಂಟಿಯಾಗಿಸಿ ಹೋಗಿದ್ದ.. ಕೈ ಮೇಲೆ ಬಿದ್ದ ಕಂಬನಿಯನ್ನು ನೋಡುತ್ತಾ ಕಣ್ಣು ಮಂಜಾಯಿತು...
"ಭೂಮಿ ನಿಜಕ್ಕೂ ನಿನ್ನ ಕೈ ಹಿಡಿಯಲು ನಾನು ಪುಣ್ಯ ಮಾಡಿದ್ದೆ.. ನಿನ್ನನ್ನು ಪ್ರೀತಿಸಿದಾಗ ಮನದಲ್ಲಿ ಭಯವಿತ್ತು.. ನಿನ್ನ ಮನೆಯವರು ಮದುವೆಗೆ ಒಪ್ಪುತ್ತಾರೋ ಇಲ್ಲವೋ ಎಂದು ಹೆದರಿದ್ದೆ... ಆದರೆ ನಮ್ಮ ಪ್ರೀತಿಗೆ ಹಲವಾರು ವಾಗ್ವಾದಗಳ ನಂತರ ಒಪ್ಪಿಗೆ ದೊರಕಿತ್ತು.. ಸದಾ ನಿನ್ನ ನೆರಳಾಗಿ ನಾನಿರುವೆ "..
ಎಂದು ಅದೇ ಕೈಯನ್ನು ಹಿಡಿದು ಹೇಳಿದ ಮನ್ವಿತ್ ನ ಮಾತುಗಳು ನೆನಪಾದವು.. ಚೂರಿ ಇರಿತದ ಅನುಭವವಾಯಿತು..ಮನದಲ್ಲಿ ಹಂಚಿಕೊಳ್ಳಲಾಗದ ಭಾವ ಭೂಮಿಯನ್ನು ಆ ಕ್ಷಣಕ್ಕೆ ಆವರಿಸಿತು..ಮನ್ವಿತ್ ಮೇಲಿನ ಕೋಪ ಹೆಚ್ಚಾಯಿತು.. ಗೋಡೆಯ ಮೇಲೆ ನೇತು ಹಾಕಿದ್ದ ಮನ್ವಿತ್ ನ ಫೋಟೋವನ್ನು ಕೈಯಲ್ಲಿ ಹಿಡಿದುಕೊಂಡಳು... ಫೋಟೋದೊಂದಿಗೆ ಮಾತನ್ನು ಆರಂಭಿಸಿದಳು..
"ಅದೆಷ್ಟು ಕನಸು ಕಂಡಿದ್ದೆ...ನಿನ್ನೊಂದಿಗೆ ಸುಂದರವಾಗಿ ಬದುಕನ್ನು ಕಟ್ಟಿಕೊಂಡು ಬಾಳಬೇಕೆಂಬ ಕನಸನ್ನು ಹೊತ್ತಿದ್ದೆ.. ಅದೆಷ್ಟು ಚೆನ್ನಾಗಿತ್ತು ಮದುವೆಯಾದ ಆರಂಭದ ಆ ದಿನಗಳು... ನೀನು ಕಚೇರಿಯಲ್ಲಿ ನಡೆದ ಎಲ್ಲಾ ವಿಚಾರವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ... ಒಂದು ಆರು ತಿಂಗಳು ಕಳೆಯುತ್ತಿದ್ದಂತೆ ನಿನ್ನ ಸ್ವಭಾವದಲ್ಲಿ ಬದಲಾವಣೆ ಗಮನಿಸಿ ನಿನ್ನನ್ನು ವಿಚಾರಿಸಿದ್ದೆ ..ಅದ್ಯಾವ ತೊಂದರೆ ಒತ್ತಡ ನಿನ್ನನ್ನು ಬಾಧಿಸುತ್ತಿದೆ ನನ್ನೊಂದಿಗೆ ಹಂಚಿಕೋ ಎಂದು ಕೇಳಿಕೊಂಡಿದ್ದೆ.. "ಏನಿಲ್ಲ ಕೆಲಸದ ಒತ್ತಡವಷ್ಟೇ" ಎಂದು ಹೇಳುವ ಬದಲು ನಿಜ ವಿಷಯವನ್ನು ನನ್ನೊಂದಿಗೆ ಹಂಚಿಕೊಂಡಿದ್ದರೆ ಬಹುಶಹ ಇಂದು ನೀನು ನನ್ನನ್ನು ಒಂಟಿಯಾಗಿಸಿ ಹೋಗುವ ನಿರ್ಧಾರವನ್ನು ಮಾಡದಂತೆ ತಡೆಯುತ್ತಿದ್ದೆ...
ನಿನ್ನ ನಂಬಿ ಬಂದವಳಿಗೆ ಮೋಸ ಮಾಡಿದೆಯೆಲ್ಲಾ? ಆತ್ಮಹತ್ಯೆ ಮಾಡಿಕೊಳ್ಳುವಂತಹ ಯೋಚನೆ ಮಾಡುವ ಮುನ್ನ ನನ್ನ ಬಗ್ಗೆ ಕಿಂಚಿತ್ತು ಯೋಚಿಸಲಿಲ್ಲವೇಕೆ? ನಿನ್ನ ಸಮಸ್ಯೆ ಏನೆಂದು ಹೇಳದೆ ನಿನ್ನಷ್ಟಕ್ಕೆ ನೀನು ಕುತ್ತಿಗೆಗೆ ಉರುಳನ್ನು ಹಾಕಿಕೊಂಡು ನನ್ನ ಬದುಕನ್ನು ಕಂದಕಕ್ಕೆ ನೂಕಿದ್ದಿ.. ಮನೆಯಲ್ಲಿ ಕೇಳುತ್ತಿರುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ... ಇಂದು ನೀನು ನನ್ನ ಅಗಲಿ ಒಂದು ತಿಂಗಳು ಕಳೆದಿದೆ... ನಿನ್ನ ಆತ್ಮಹತ್ಯೆಗೆ ಕಾರಣ ಇಂದಿಗೂ ತಿಳಿದಿಲ್ಲ... ಮನೆಯವರ ದೃಷ್ಟಿಯಲ್ಲಿ ನಾನೇ ಏನೋ ಅಪರಾಧ ಮಾಡಿದ್ದೇನೆ ಎಂಬಂತೆ ನನ್ನನ್ನು ನೋಡುವಾಗ ಏನಾದರೂ ಮಾಡಿಕೊಂಡು ನಾನು ಸಾಯಬೇಕು ಅನಿಸುತ್ತದೆ... ಆದರೆ ನನಗೆ ಸಾಯುವ ಧೈರ್ಯವಿಲ್ಲ...
ದಾಂಪತ್ಯದಲ್ಲಿ ಸಮಸ್ಯೆಗಳು ಬಂದಾಗ ಕೂತು ಪರಿಹರಿಸಿಕೊಳ್ಳುವ ಬದಲು ನಿನ್ನ ಮನದ ನೋವನ್ನು ನನಗೆ ತಿಳಿಸದೆ ಇಂತಹ ನಿರ್ಧಾರವನ್ನು ಕೈಗೊಂಡು ನನ್ನನ್ನು ಒಂಟಿಯಾಗಿಸಿ ಹೋಗಿದ್ದೆಯಲ್ಲ ನಿನಗಿದು ನ್ಯಾಯವೇ...? ನಿನಗಾಗಿ ನಾ ಸುರಿಸುತ್ತಿರುವ ಕಂಬನಿಗೆ ಹೆಸರಿಡಲು ಸಾಧ್ಯವೇ?? ನಿನ್ನ ಬದಲು ಈ ಕಂಬನಿಯೇ ನನಗೀಗ ಜೊತೆಗಾರನಾಗಿದೆ... ನೀನಂತೂ ನಿನ್ನ ನೆಮ್ಮದಿಯ ದಾರಿಯನ್ನು ಆರಿಸಿಕೊಂಡು ನನ್ನ ಬದುಕಿನ ನೆಮ್ಮದಿಯನ್ನು ನಾಶ ಮಾಡಿರುವೆ... ಸಾಯೋ ನಿರ್ಧಾರ ಕೈಗೊಳ್ಳುವ ಮುನ್ನ ನಿನ್ನನ್ನು ಬಾಧಿಸಿದ ಸಂಕಟವನ್ನು ನನ್ನೊಂದಿಗೆ ಹಂಚಿಕೊಂಡಿದ್ದರೆ ಇಬ್ಬರು ಕೂತು ಸಮಸ್ಯೆಗೆ ಪರಿಹಾರವನ್ನು ಹುಡುಕಬಹುದಾಗಿತ್ತು.. ನನ್ನ ಮನ ನಿನ್ನ ಪ್ರೀತಿಯನ್ನು ಬಯಸುತ್ತಿತ್ತೇ ಹೊರತು ಆಡಂಬರದ ಜೀವನವನ್ನಲ್ಲ.. ಈಗ ನನ್ನ ಬಳಿ ನೀನು ಬಿಟ್ಟು ಹೋದ ಹಣ ಅಂತಸ್ತು ಎಲ್ಲವೂ ಇದೆ.. ಆದರೆ ನಿನ್ನ ಪ್ರೀತಿ..??
ಪ್ರೀತಿ ಇಲ್ಲದೆ ಬದುಕುವುದು ಕಷ್ಟ.. ಅದು ನಿನಗೂ ಚೆನ್ನಾಗಿ ತಿಳಿದಿತ್ತು.. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ನನ್ನನ್ನು ಒಂಟಿಯಾಗಿಸಿ ಹೋಗುವ ಮುನ್ನ ಕೊಂಚ ಯೋಚಿಸಬಾರದಿತ್ತೇ..?? ಎಲ್ಲಾ ಸಮಸ್ಯೆಗೂ ಆತ್ಮಹತ್ಯೆ ಪರಿಹಾರವಾಗಿತ್ತೇ..? ಸಮಸ್ಯೆಯನ್ನೇ ಹೇಳದೆ ನನ್ನನ್ನು ಒಂಟಿಯಾಗಿಸಿ ನಿನ್ನ ಪ್ರೀತಿಯಿಂದ ವಂಚಿತಳನ್ನಾಗಿ ಮಾಡಿರುವೆ.. ತಂದೆ ತಾಯಿ ಅದೆಷ್ಟೇ ಪ್ರೀತಿ ತೋರಿದರು ಕೈ ಹಿಡಿದವನ ಪ್ರೀತಿ ಇಲ್ಲದೆ ಬದುಕುವುದು ಎಷ್ಟು ಕಷ್ಟ ಎಂದು ನೀನೇಕೆ ಆಲೋಚಿಸಲಿಲ್ಲ..??
ನನಗೆ ತಿಳಿದಿದೆ ಸಾಯುವ ನಿರ್ಧಾರ ಕೈಗೊಳ್ಳುವ ಮುನ್ನ ಮನದಲ್ಲಿ ನೀನು ಅದೆಷ್ಟು ನೋವನ್ನು ಅನುಭವಿಸಿದ್ದಿ ಎಂಬುದನ್ನು ನಾನು ಊಹಿಸಬಲ್ಲೇ.. ಆದರೆ ಆ ನಿರ್ಧಾರವನ್ನು ನನ್ನೊಂದಿಗೆ ಹಂಚಿಕೊಂಡಿದ್ದರೆ ಪರಿಹಾರ ಹುಡುಕಬಹುದಾಗಿತ್ತು. ನಿನ್ನ ಬದಲು ಕಂಬನಿಯನ್ನು ನನಗಾಗಿ ಬಿಟ್ಟು ಜೊತೆಗಾರನನ್ನಾಗಿಸಿ ಹೋಗಿದ್ದಿ.. ನೀನಿಲ್ಲದೆ ನನ್ನ ಜೀವನವನ್ನು ಹೇಗೆ ಕಳೆಯಲಿ?? ಇದಕ್ಕೆ ಉತ್ತರ ಕೊಡುವವರು ಯಾರು??
ಒಂದೇ ಸಮನೆ ಮನದಲ್ಲಿರುವ ಮಾತುಗಳನ್ನು ಹೊರ ಹಾಕುತ್ತಾ ಕಣ್ಣೀರ ಸುರಿಸುತ್ತಾ ಪತಿಯ ಫೋಟೋವನ್ನು ಹಿಡಿದು ಅಳುತ್ತಿದ್ದವಳ ಮಾತುಗಳನ್ನು ಆಲಿಸಿದ ಮನೆಯ ಹಿರಿ ಜೀವಗಳು ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ಅವಳು ಅನುಭವಿಸುತ್ತಿರುವ ನೋವನ್ನು ನೋಡಲಾಗದೆ ಮನದಲ್ಲಿ ನೊಂದು ಕುಸಿದರು... ಮನ್ವಿತ್ ನ ಪ್ರೀತಿಗಾಗಿ ಹಂಬಲಿಸುತ್ತಿದ್ದ ಅವಳ ಮನಕ್ಕೆ ಹೇಗೆ ಸಾಂತ್ವಾನ ಹೇಳಬೇಕೆಂದು ತೋಚದೆ ಮೌನವಾಗಿ ಉಳಿದರು..
