Harish Bedre

Comedy Romance Thriller

4  

Harish Bedre

Comedy Romance Thriller

ಪ್ರಹರಾ (ವಿಭಿನ್ನ ಪ್ರೇಮ ಕಥೆ)

ಪ್ರಹರಾ (ವಿಭಿನ್ನ ಪ್ರೇಮ ಕಥೆ)

5 mins
339



ಪ್ರೀತಂ ಖರಗ್ಪುರ್ ಐಐಟಿ ಪಾಸ್ ಔಟ್ ಆದವನು. ಆ ಕಾಲೇಜಿನಲ್ಲಿ ಸೀಟು ದೊರೆತ ಸ್ವಲ್ಪ ದಿನಗಳಲ್ಲೇ ತನ್ನ ನಡೆನುಡಿ, ಬುದ್ದಿವಂತಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಅಲ್ಲಿ ಓದುತ್ತಿರುವಾಗಲೇ ಅಮೇರಿಕಾ, ಯುಕೆ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ನಡೆದ ಸ್ಪರ್ಧೆ, ತರಬೇತಿ, ವಿಚಾರ ಸಂಕಿರಣಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದ. ಒಮ್ಮೆ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಯವರು ಆಯ್ದ ವಿದ್ಯಾರ್ಥಿಗಳಿಗಾಗಿ ಕರೆದಿದ್ದ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಅವರ ಮನಸ್ಸನ್ನು ಗೆದ್ದಿದ್ದ. ಅಂದಿನಿಂದ ಮಾನ್ಯ ಪ್ರಧಾನಿಯವರೇ ಹಲವಾರು ಬಾರಿ ಕರೆಮಾಡಿ ಇವನೊಂದಿಗೆ ತಮಗೆ ಬೇಕಾಗಿದ್ದ ವಿಷಯಗಳ ಕುರಿತು ಚರ್ಚೆ ನಡೆಸಿ ಸಲಹೆ ಪಡೆದಿದ್ದರು.


ಅಂದು ಅಮೇರಿಕಾದ ವಿದೇಶಾಂಗ ಸಚಿವರು ಕರೆಮಾಡಿ, ತಮ್ಮ ದೇಶದ ನಾಸಾದವರು ಮಂಗಳಗ್ರಹಕ್ಕೆ ಕಳಿಸುತ್ತಿರುವ ರೋವರ್ ಉಪಗ್ರಹಹದಲ್ಲಿ ಹೋಗಿ ಅಲ್ಲಿನ ಭೌಗೋಳಿಕ ವಿಷಯವನ್ನು ಅಧ್ಯಯನ ಮಾಡಿ ಬರಲು ಯಾರಾದರೂ ಅರ್ಹ ಭಾರತೀಯ ವ್ಯಕ್ತಿಯನ್ನು ಕಳಿಸಿ ಎಂದಾಗ, ಥಟ್ಟನೆ ಪ್ರಧಾನಿಯವರ ನೆನಪಿಗೆ ಬಂದದ್ದೆ ಪ್ರೀತಂ. ಈ ವಿಷಯಕ್ಕೆ ಯಾವುದೇ ಶಿಷ್ಟಾಚಾರಗಳನ್ನು ಬಳಸದೆ, ಸ್ವತಃ ತಾವೇ ಅವನಿಗೆ ಕರೆಮಾಡಿ ವಿಚಾರ ತಿಳಿಸಿ ಒಪ್ಪಿಸಿದ್ದರು. ಇಂತಹ ಒಳ್ಳೆಯ ಅವಕಾಶ ಸಿಗುವಾಗ ಮತ್ತು ದೇಶದ ಪ್ರಧಾನ ಮಂತ್ರಿಯೇ ಕರೆ ಮಾಡಿದ್ದಾರೆ ಎನ್ನುವಾಗ ಬೇಡ ಎಂದು ನಿರಾಕರಿಸಲು ಯಾರಿಂದ ಸಾಧ್ಯ. ನಂತರ ರೋವರ್ ಉಪಗ್ರಹಹದಲ್ಲಿ ಪ್ರೀತಂ ಮಂಗಳಗ್ರಹಕ್ಕೆ ಅಧ್ಯಯನ ಮಾಡಲು ಹೋಗಿಬರುವ ವಿಷಯವಾಗಿ ಎರಡೂ ದೇಶಗಳ ನಡುವೆ ಕಾನೂನು ಪ್ರಕಾರ ಒಪ್ಪಂದವಾಗಿ, ಆರು ತಿಂಗಳ ತರಬೇತಿಗಾಗಿ ಅಮೇರಿಕಾಕ್ಕೆ ಹೊರಡಲು ಹದಿನೈದು ದಿನಗಳ ಅವಕಾಶವಿತ್ತು. ಆ ಸಂದರ್ಭದಲ್ಲಿ ಒಬ್ಬನೇ ದೂರದೂರಿನಲ್ಲಿ ಇರುವ ಬದಲು ಅಪ್ಪ ಅಮ್ಮನೊಂದಿಗೆ ಇರೋಣ ಎಂದು ಹುಟ್ಟುರಾದ ಚಿತ್ರದುರ್ಗಕ್ಕೆ ಬಂದ. ಅಷ್ಟರಲ್ಲಿ, ಪ್ರೀತಂ ಮಂಗಳಗ್ರಹಕ್ಕೆ ಹೋಗಿಬರುವ ವಿಷಯ ಇಡೀ ಪ್ರಪಂಚಕ್ಕೆ ತಿಳಿದಿದ್ದರಿಂದ, ಅವನು ಮನೆಯವರೊಂದಿಗೆ ಮಾತನಾಡುವುದಕ್ಕಿಂತ ಹೆಚ್ಚು ಹೊರಗಿನವರೊಂದಿಗೆ ಮಾತನಾಡುತ್ತಾ ಕಾಲ ಕಳೆಯುವಂತಾಗಿತ್ತು. ಪ್ರೀತಂ ತಂದೆ ತಾಯಿಗೆ ಮಗ ಮಂಗಳಗ್ರಹಕ್ಕೆ ಹೋಗಿಬರುತ್ತಾನೆ ಎನ್ನುವ ಸಂತೋಷ ಒಂದೆಡೆಯಾದರೆ, ನಾಳೆ ಅಲ್ಲಿಗೆ ಹೋದಾಗ ಏನಾದರೂ ಆದರೆ ಎಂಬ ಅವ್ಯಕ್ತ ಭಯವೂ ಕಾಡುತ್ತಿತ್ತು. ತಂದೆ ತಮ್ಮ ಸಂಕಟವನ್ನು ತೋರಿಸಿ ಕೊಳ್ಳದೆ ಸುಮ್ಮನಿದ್ದರೂ, ತಾಯಿ ಹೃದಯ ತಡೆದುಕೊಳ್ಳಲಾರದೇ ಅವನೆದುರು ಆ ವಿಷಯಕ್ಕೆ ಬಿಕ್ಕುವಂತೆ ಮಾಡಿತ್ತು. ಆ ಕ್ಷಣಕ್ಕೆ ಪ್ರೀತಂ, ಅಮ್ಮ ಅಲ್ಲಿಗೆ ನಾನೊಬ್ಬನೇ ಹೋಗುತ್ತಿಲ್ಲ, ನನ್ನೊಂದಿಗೆ ಅಮೇರಿಕಾದ ಮೂವರು ಹಾಗೂ ಜಪಾನಿನ ಒಬ್ಬರು ಬರುತ್ತಿದ್ದಾರೆ. ನಮ್ಮೆಲ್ಲರ ಸುರಕ್ಷಿತ ಯಾತ್ರೆಗಾಗಿ ನಾಸಾದವರೊಂದಿಗೆ ಸ್ಪೇಸ್ ಎಕ್ಸ್ ನವರು ಕೈಜೋಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಬಯಸುವ ಪ್ರತಿಯೊಬ್ಬರಿಗೂ ಮಂಗಳಯಾನ ಕೈಗೊಳ್ಳುವ ಅವಕಾಶ ಸಿಗಬೇಕು ಎನ್ನುವುದೇ ಅವರ ಆಸೆ. ಅದಕ್ಕಾಗಿ ಅವರಿಬ್ಬರೂ ಸಾಕಷ್ಟು ಅಧ್ಯಯನಗಳನ್ನು ನಡೆಸಿಯೇ ಈ ಬಾಹ್ಯಾಕಾಶ ಯಾತ್ರೆಯನ್ನು ಸಜ್ಜುಗೊಳಿಸಿದ್ದಾರೆ, ನಮಗೇನೂ ಆಗುವುದಿಲ್ಲ ಸುಮ್ಮನಿರು ಎಂದು ಸಮಾಧಾನ ಮಾಡಿದ. ಇನ್ನೇನು ಅಮೇರಿಕಾಕ್ಕೆ ಹೊರಡಲು ಎರಡು ದಿನ ಇದೆ ಎನ್ನುವಾಗ, ತಂದೆ ತಾಯಿ ಮತ್ತು ತಂಗಿಯನ್ನು ತನ್ನ ರೂಮಿಗೆ ಕರೆದು, ಅಲ್ಲಿ ಅವನೇ ವಿಶೇಷವಾಗಿ ನಿರ್ಮಿಸಿದ್ದ ಕಂಪ್ಯೂಟರ್ ಮುಂದೆ ಕೂರಿಸಿ, ನಾನು ಅಮೇರಿಕಾದಲ್ಲಿ ಇರಲಿ ಅಥವಾ ಮಂಗಳಗ್ರಹದಲ್ಲೇ ಇರಲಿ ಪ್ರತಿದಿನ ರಾತ್ರಿ ಒಂಬತ್ತು ಗಂಟೆಗೆ ನಿಮ್ಮನ್ನು ಇದರಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತೇನೆ. ಒಂದೊಮ್ಮೆ ನಾನು ಮಂಗಳಗ್ರಹದ ಮೇಲೆ ಧರಿಸುವ ವಿಶೇಷ ದಿರಿಸಿನಿಂದಾಗಿ ಮಾತನಾಡಲು ಸಾಧ್ಯವಾಗದಿದ್ದರೂ, ನಾನು ಮನದಲ್ಲಿ ಅಂದುಕೊಳ್ಳುವುದು ಇಲ್ಲಿ ಅಕ್ಷರ ರೂಪದಲ್ಲಿ ಮೂಡುವುದು. ಅದನ್ನು ನೀವು ಓದಿ ನಿಮ್ಮ ಮನದಲ್ಲಿ ಅಂದುಕೊಂಡಿದ್ದು ನನಗಲ್ಲಿ ನನ್ನ ಬಳಿ ಇರುವ ಸಿಸ್ಟಂನಲ್ಲಿ ಗೋಚರವಾಗುತ್ತದೆ. ಇದಕ್ಕಾಗಿ ಯಾರು ನನ್ನೊಂದಿಗೆ ಮಾತನಾಡಲು ಬಯಸುವಿರೋ ಅವರು ಈ ಚಿಕ್ಕ ಡಿವೈಸ್ ಅನ್ನು ಬಿಗಿಯಾಗಿ ತಲೆಗೆ ಕಟ್ಟಿಕೊಳ್ಳಬೇಕು ಎಂದ. ಪ್ರೀತಂ ತಂಗಿ ಕೂತುಹಲ ತಡೆಯಲಾರದೆ ಏನಿದು ಎಂದಳು. ಅದಕ್ಕೆ ಪ್ರೀತಂ ನಗುತ್ತಾ ಪ್ರಹರಾ ಎಂದ. ಅದಕ್ಕೆ ಅವಳು ಆಶ್ಚರ್ಯದಿಂದ ಅಂದರೆ..... ಎಂದಳು. ಅದಕ್ಕವನು ಅಂದರೆ, ನನ್ನ ಪ್ರೀತಿಯ ತಂಗಿ ಪ್ರಣತಿ, ತಾಯಿ ಹರಿಣಿ ಮತ್ತು ಅಪ್ಪ ರಾಜಾ ರಾವ್ ಎಂದ. ಆಗ ಅವಳಿಗೆ ಇದು ಅಣ್ಣನ ಆವಿಷ್ಕಾರ ಎನ್ನುವುದು ತಿಳಿಯಿತು.


ಅಮೆರಿಕದ ನಾಸಾ ಹಾಗೂ ಸ್ಪೇಸ್ ಎಕ್ಸ್ ಕೇಂದ್ರಗಳಲ್ಲಿ ಮಂಗಳಗ್ರಹ ಯಾನಕ್ಕೆ ಬೇಕಾದ ತರಬೇತಿಗಳನ್ನು ಸಹಯಾತ್ರಿಗಳೊಂದಿಗೆ ಪಡೆಯುತ್ತಾ ಆರು ತಿಂಗಳು ಕಳೆದಿದ್ದೆ ತಿಳಿಯಲಿಲ್ಲ. ನಂತರ ನೋಡನೋಡುತ್ತಲೇ ಮಂಗಳಗ್ರಹಕ್ಕೆ ಯಾನ ಆರಂಭಿಸುವ ದಿನವೂ ಬಂದೇಬಿಟ್ಟಿತು. ಪ್ರೀತಂ ತಂದೆ ತಾಯಿಗೆ ಮಾತು ಕೊಟ್ಟಂತೆ ಹಿಂದಿನ ದಿನ ರಾತ್ರಿ ಒಂಬತ್ತು ಗಂಟೆಗೆ ಕರೆ ಮಾಡಿದಾಗ, ಅವರಿಬ್ಬರೂ ಯಾನ ಫಲಪ್ರದವಾಗಲಿ, ಅಂದುಕೊಂಡಿದ್ದನ್ನು ಸಾಧಿಸಿ ಎಲ್ಲರೂ ಸುಖವಾಗಿ ಹಿಂದಿರುಗಿ ಬನ್ನಿ ಎಂದು ಮನದುಂಬಿ ಆಶೀರ್ವಾದ ಮಾಡಿದರು. ತಂಗಿ ಪ್ರಣತಿ ಮಾತ್ರ, ಬರುವಾಗ ಸಾಧ್ಯವಾದರೆ ಅಲ್ಲಿಂದ ನೆನಪಿಗಾಗಿ ಏನಾದರೂ ತಂದುಕೊಡು ಎಂದಳು.

ಈ ಹಿಂದೆ ಮಾನವರಹಿತ ಕೃತಕ ಉಪಗ್ರಹಗಳು ಹಾರಿಬಿಟ್ಟಾಗ ಆಗಿದ್ದ ಸೋಲು ಗೆಲುವುಗಳ ಆಧಾರದ ಮೇಲೆ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರಿಂದ ಐವರು ಯಾತ್ರಿಗಳನ್ನು ಹೊತ್ತಿದ್ದ ರೋವರ್ ಯಾವುದೇ ತೊಂದರೆ ಇಲ್ಲದೆ ನಿರ್ಧಿಷ್ಟ ಜಾಗದಲ್ಲಿ ಮಂಗಳಗ್ರಹದಲ್ಲಿ ಇಳಿಯಿತು. ಭೂಮಿಗೂ ಅಂಗರಾಕಕ್ಕೂ ಸಾಕಷ್ಟು ಸಾಮ್ಯತೆ ಇದೆ. ಇಲ್ಲಿ, ನದಿಪಾತ್ರಗಳು, ಜ್ವಾಲಾಮುಖಿ, ಕೇಂದ್ರಗಳಿವೆ. ಮಂಗಳಗ್ರಹವು ದಿನಕ್ಕೆ ಭೂಮಿಗಿಂತ ನಾಲವತ್ತೊಂದು ನಿಮಿಷ ಹೆಚ್ಚು ಸುತ್ತುತ್ತದೆ. ಇದರಿಂದಾಗಿ ಭೂಮಿಯ ಗುರುತ್ವಾಕರ್ಷಣೆಗಿಂತ ಇಲ್ಲಿನ ಗುರುತ್ವಾಕರ್ಷಣೆ ಭಿನ್ನವಾಗಿದ್ದ ಇಲ್ಲಿನ ನೀರೆಲ್ಲಾ ಭೂಮಿಯೊಳಗೆ ಇಂಗಿಹೋಗಿದೆ, ಇದರ ಮಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುವುದರಿಂದ ಇದರ ಬಣ್ಣ ಕೆಂಪಾಗಿದೆ. ಅಲ್ಲದೆ ಭೂಮಿಗೆ ಹತ್ತಿರವಾಗಿ ಒಂದು ನೈಸರ್ಗಿಕ ಉಪಗ್ರಹ ಚಂದ್ರನಿದ್ದರೆ ಇಲ್ಲಿ ಪೋಬೋಸ್ ಹಾಗೂ ಡೈಮೊಸ್ ಎಂಬ ಇಬ್ಬರು ಚಂದ್ರರಿದ್ದಾರೆ ಮುಂತಾಗಿ ಓದಿ, ತರಬೇತಿ ಅವಧಿಯಲ್ಲಿ ಹಿಂದೆ ಹಾರಿಬಿಟ್ಟಿದ್ದ ಉಪಗ್ರಹಗಳು ಸಂಗ್ರಹಿಸಿದ್ದ ಮಾಹಿತಿಗಳನ್ನು ನೋಡಿ ತಿಳಿದಿದ್ದವರಿಗೆ ಪ್ರತಿಯೊಂದನ್ನೂ ಸ್ವತಃ ನೋಡಿ ಅನುಭವಿಸಿ, ಅಭ್ಯಾಸ ಮಾಡಿ ಜಗತ್ತಿಗೆ ಪರಿಚಯಿಸುವ ಸುವರ್ಣಾವಕಾಶ ದೊರಕಿತ್ತು. ನಿಜ ಹೇಳಬೇಕೆಂದರೆ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಮಾಹಿತಿಯೊಂದಿಗೆ ಮಂಗಳಗ್ರಹ ಯಾನವನ್ನು ಯಶಸ್ವಿಯಾಗಿ ಮುಗಿಸಿ ಐವರ ತಂಡ ಹಿಂದಿರುಗಿತ್ತು. 


ಪ್ರೀತಂ ಮಂಗಳಗ್ರಹ ಯಾನವನ್ನು ಯಶಸ್ವಿಯಾಗಿ ಮುಗಿಸಿ ಬಂದು ಒಂದು ವರ್ಷವಾಗುತ್ತಾ ಬಂದಿತ್ತು, ಅದೊಂದು ದಿನ ಕರೆ ಮಾಡಿದ ತಾಯಿ, ನಿನ್ನ ರೂಮಿನಲ್ಲಿ ಇರುವ ಕಂಪ್ಯೂಟರಿನಲ್ಲಿ ಚಿತ್ರವಿಚಿತ್ರ ಅಂಕೆ ಸಂಖ್ಯೆಗಳು ಬರುತ್ತಿದೆ. ಜೊತೆಗೆ ಎಂತಹದೋ ವಿಚಿತ್ರ ಸದ್ದು ಬರುತ್ತಿದೆ, ಇದು ದಿನದಿನಕ್ಕೂ ಜಾಸ್ತಿ ಆಗುತ್ತಿದೆ ಎಂದರು. ಹೌದಾ, ಬಂದಾಗ ನೋಡುವೆ ಎಂದು ಸುಮ್ಮನಾಗಿದ್ದ ಪ್ರೀತಂ. ಮತ್ತೆರೆಡೇ ದಿನಗಳಲ್ಲಿ ಕರೆ ಮಾಡಿದ ತಾಯಿ, ಆ ಕಂಪ್ಯೂಟರಿನಲ್ಲಿ ತಡೆದುಕೊಳ್ಳಲಾರದಷ್ಟು ಸದ್ದು ಬರುತ್ತಿದೆ ಏನು ಮಾಡಲಿ, ನಾವು ಸ್ವಿಚ್ ಆಫ್ ಮಾಡಿದರು ಹತ್ತೆ ನಿಮಿಷದಲ್ಲಿ ಅದು 

ಮತ್ತೆ ಆನ್ ಆಗಿ ಸದ್ದು ಮಾಡುತ್ತಿದೆ ಎಂದರು. ಅದಕ್ಕೆ 

ಪ್ರೀತಂ ಇವತ್ತು ಸ್ವಲ್ಪ ಸಹಿಸಿಕೊಳ್ಳಿ ನಾಳೆ ಬೆಳಿಗ್ಗೆ ಅಲ್ಲಿರುವೆ ಎಂದು ಕೆಲಸಕ್ಕೆ ರಜೆ ಕೊಟ್ಟು ಊರಿಗೆ ಹೊರಟ. ಅದರಲ್ಲಿ ಅವನಿಗೆ ಬೇಕಾದ ಅತೀ ಮುಖ್ಯ ದಾಖಲೆಗಳು ಇದ್ದಿದ್ದರಿಂದ ಮತ್ತು ಅದು ತನಗೆ ಬೇಕಾದಂತೆ ಸಿದ್ಧಪಡಿಸಿಕೊಂಡ ಕಂಪ್ಯೂಟರ್ ಆಗಿದ್ದರಿಂದ ಸ್ಥಳೀಯ ಟೆಕ್ನಿಷಿಯನ್ ಕರೆಸಿ ತೋರಿಸಲು ಹೇಳಿರಲಿಲ್ಲ. 

ಪ್ರೀತಂ ಮನೆಗೆ ಬಂದವನೇ ಅಪ್ಪ ಅಮ್ಮನೊಂದಿಗೆ ತಿಂಡಿ ತಿನ್ನುತ್ತಾ ನಾಲ್ಕು ಮಾತನಾಡಿ ತನ್ನ ರೂಂ ಸೇರಿದ. ಕಂಪ್ಯೂಟರಿನಲ್ಲಿ ವಿಚಿತ್ರ ಸದ್ದಿನೊಂದಿಗೆ ಏನೇನೋ ಅಂಕೆ ಸಂಖ್ಯೆಗಳು ಬರುತ್ತಲೇ ಇತ್ತು. ಮೊದಲು ಸದ್ದು ನಿಲ್ಲಿಸುವ ಸಲುವಾಗಿ ವಾಲ್ಯೂಮ್ ಕಡಿಮೆ ಮಾಡಿದ. ಅದು ಐದು ನಿಮಿಷ ಮಾತ್ರ ನಿಂತಿತ್ತು ನಂತರ ನಿಧಾನವಾಗಿ ಸದ್ದು ತನ್ನಷ್ಟಕ್ಕೆ ತಾನೇ ಹೆಚ್ಚುತ್ತಾ ಹೋಯಿತು. ಏಕೆ ಹೀಗೆ ಎಂದು ಯೋಚಿಸುವಾಗ ಏನೋ ಹೊಳೆದಂತಾಗಿ, ಪ್ರಹರಾವನ್ನು ತಲೆಗೆ ಕಟ್ಟಿಕೊಂಡ. ಆಗ ಬರುತ್ತಿದ್ದ ಸದ್ದು ನಿಂತು ಅಂಕೆ ಸಂಖ್ಯೆಗಳು ಮಾತ್ರ ಪರದೆ ಮೇಲೆ ಬರುತ್ತಿತ್ತು. ಆ ಅಂಕೆ ಸಂಖ್ಯೆಗಳು ಏನು, ಅದನ್ನು ಹೇಗೆ ಡಿಕೋಡ್ ಮಾಡಬೇಕು ಎಂದು ತುಂಬಾನೇ ತಲೆಕೆಡಿಸಿಕೊಂಡ. ಏನೇನೋ ಮಾಡಿದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು, ಇದೇ ಪ್ರಯತ್ನದಲ್ಲಿ ಎರಡು ದಿನಗಳು ಕಳೆದುಹೋದವು. ರಾತ್ರಿ ಮಲಗಿದಾಗಲೂ ಅದೇ ಯೋಚನೆ, ತಾನು ಮಾಡಿದ ಪ್ರಹರಾವನ್ನು ಯಾರು ತಲೆಗೆ ಕಟ್ಟಿಕೊಂಡಿರುತ್ತಾರೋ ಅವರ ಆ ಕ್ಷಣದ ಯೋಚನೆಗಳು ಅಕ್ಷರ ರೂಪದಲ್ಲಿ ಡಿವೈಸ್ ಕನೆಕ್ಟ್ ಆದ ಕಂಪ್ಯೂಟರ್ ಪರದೆ ಮೇಲೆ ಮೂಡುತ್ತದೆ. ಅಪ್ಪ ಅಮ್ಮನಿಗೆ ಅನುಕೂಲ ಆಗಲೆಂದು ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆಗಳ ಆಲೋಚನೆಗಳು ಅಕ್ಷರ ರೂಪ ಪಡೆಯುವಂತೆ ಮಾಡಿದ್ದ. ಅಂದರೆ ಇಲ್ಲಿ ಯಾವುದೋ ಬೇರೆ ಭಾಷೆಯ ಆಲೋಚನೆಗಳು ವಿಚಿತ್ರ ರೂಪ ಪಡೆದು ಬರುತ್ತೆ ಅನಿಸಿದೊಡನೇ ಎದ್ದು ಕುಳಿತು, ಯಾವುದೇ ಭಾಷೇಯಾದರೂ ಅದು ಇಂಗ್ಲಿಷ್ ಭಾಷೆಯಲ್ಲಿ ಅಕ್ಷರ ರೂಪ ಪಡೆಯುವಂತೆ ಪ್ರೋಗ್ರಾಂ ರೂಪಿಸಿದ. ಏನ್ಚಾರ್ಯ, ಹೀಗೆ ಬದಲಿಸಿದ ಕೆಲವೇ ಕ್ಷಣದಲ್ಲಿ ಕಂಪ್ಯೂಟರ್ ಪರದೆ ಮೇಲೆ, ಯಾರಿರಬಹುದು ಇವರು? ನಮ್ಮ ಗ್ರಹಕ್ಕೆ ಏಕೆ ಬಂದಿದ್ದರು? ಇಲ್ಲಿ ಬಿಟ್ಟು ಹೋಗಿರುವ ಈ ಯಂತ್ರ ಏನು? ಇದರ ಜಾಡು ಹಿಡಿದು ಇಲ್ಲಿಯವರೆಗೂ ಬಂದರೂ ಏಕೆ, ಯಾರೂ ಸ್ಪಂದಿಸುತ್ತಿಲ್ಲ? ಮುಂತಾಗಿ ಬರತೊಡಗಿತು. ಇದನ್ನು ನೋಡಿದಾಗಲೇ ತಾನು ಮಂಗಳಗ್ರಹದಿಂದ ಹೊರಡುವ ಹಿಂದಿನ ದಿನ ಪ್ರಹರಾ ಮತ್ತು ಅದಕ್ಕೆ ಬಳಸುತ್ತಿದ್ದ ಪೇಜರ್ ಎರಡನ್ನೂ ಅಲ್ಲೇ ಎಲ್ಲೋ ಬಿಟ್ಟುಬಂದಿದ್ದು ನೆನಪಾಯಿತು. 


ನೋಡೋಣವೆಂದು, ಹಾಯ್ ನಾನು ಪ್ರೀತಂ, ನೀವು? ಎಂದುಕೊಂಡ. ಸ್ವಲ್ಪ ಹೊತ್ತಿನ ನಂತರ ಅಊಝಛ ಎಂಬ ಉತ್ತರ ಬಂತು. 

ಎಲ್ಲಿಂದ? 

ಮಂಗಳಗ್ರಹ... 

ಏನು ಬೇಕು?

ಮಾಹಿತಿ...

ಯಾವ ಮಾಹಿತಿ?

ನೀವು ನಮ್ಮಲ್ಲಿ ಬಂದ ಕಾರಣ...

ಅಧ್ಯಯನ ಮಾಡಲು....

ಹೀಗೆ ಸಣ್ಣದಾಗಿ ಆರಂಭವಾದ ಮಾತುಗಳು ಪರಸ್ಪರ ಗ್ರಹಗಳ ಕುರಿತು ಕುರಿತು ಚರ್ಚಿಸಲು ನಾಂದಿ ಹಾಡಿತು. ಅದೊಂದು ದಿನ ಪ್ರೀತಂ ತಮಾಷೆಗಾಗಿ, ನಾನು ಗಂಡು ನೀವು? ಎಂದುಕೊಂಡಾಗ, ನಾನು ಹೆಣ್ಣು ಎಂಬ ಉತ್ತರ ಬಂತು. 

ಮದುವೆ ಆಗಿದೇಯಾ?

ಇಲ್ಲಿ...

ನಿಮಗೆ ಮದುವೆ ಎಂದರೆ ಗೊತ್ತಾ? 

ಗೊತ್ತು..

ಹೇಗೆ?

ನಾವು ನಿಮ್ಮನ್ನು ಅಧ್ಯಯನ ಮಾಡಲು ಶುರುಮಾಡಿ ದಶಕಗಳಾದವು, ಹಾಗಾಗಿ ನಿಮ್ಮಗಳ ಕುರಿತು ಸಾಕಷ್ಟು ವಿಚಾರಗಳು ಗೊತ್ತು...

ನಿಮ್ಮಲ್ಲಿ ಮದುವೆ ಪದ್ಧತಿ ಇದೆಯೇ? 

ಇದೆ

ಮತ್ತೆ ನೀವೇಕೆ ಆಗಿಲ್ಲ? 

ಇಷ್ಟಪಡುವಂತ ಗಂಡು ಸಿಕ್ಕಿಲ್ಲ.

ನೀವು ಬಯಸುವ ಗಂಡು ಹೇಗಿರಬೇಕು?

ನಿಮ್ಮ ಹಾಗೆ

ಹಾಗಿದ್ದರೆ ನನ್ನನ್ನು ಮದುವೆ ಆಗುತ್ತೀರಾ?

ನೀವು ಒಪ್ಪಿದರೆ ಖಂಡಿತಾ..

ಹೇಗೆ?

ನೀವು ಬಾ ಎಂದರೆ ಬಂದು ಬಿಡುವೆ.

ನಿಜವಾಗಿಯೂ!?

ಖಂಡಿತವಾಗಿಯೂ ಬರುತ್ತೇನೆ.

ಹೇಗೆ? ನಾವು ಅಲ್ಲಿಗೆ ಬಂದಾಗ ಒಂದು ನರಪಿಳ್ಳೆಯೂ ಕಾಣಲಿಲ್ಲ.

ನಮ್ಮಗಳ ನಡುವೆ ಬೆಳಕಿನ ಪರದೆ ಅಡ್ಡ ಇರುವುದರಿಂದ ಕಾಣುವುದಿಲ್ಲ. ಒಂದೊಮ್ಮೆ ಅದರಿಂದ ಹೊರಬಂದರೆ ಕಾಣಿಸುತ್ತೇವೆ. 

ಹೌದಾ?

ಹೌದು

ತಮಾಷೆಗೆ ಆರಂಭವಾದದ್ದು ಬೇರೆ ತಿರುವು ಪಡೆಯಿತು.

ಅಂದಿನಿಂದ ಬೇರೆ ವಿಚಾರಗಳು ಕಡಿಮೆಯಾಗಿ ಕೇವಲ ಪರಸ್ಪರರ ವಿಷಯಗಳ ಕುರಿತು ಮಾತುಗಳಾಗತೊಡಗಿದವು. ಇವನು ಅವಳ ಬಗ್ಗೆ, ಅವಳು ಇವನ ಬಗ್ಗೆ, ಇಬ್ಬರ ಭವಿಷ್ಯದ ಜೀವನದ ಆಗುಹೋಗುಗಳು, ಎಲ್ಲಕ್ಕಿಂತ ಹೆಚ್ಚಾಗಿ ಬೆಳಕಿನ ಪರದೆಯನ್ನು ಛೇದಿಸಿ ಹೊರಬರುವ ಕುರಿತು ಯೋಜನೆಗಳು ಆಗತೊಡಗಿದವು. ಏಕೆಂದರೆ, ಅವಳು ಇಲ್ಲಿಗೆ ಬಂದರೆ ಅಥವಾ ಇವನು ಅಲ್ಲಿಗೆ ಹೋದರೆ ಆಗ ಆ ವಾತಾವರಣದಲ್ಲಿ ಹೊಂದಿಕೊಂಡು ಬದುಕಲು ಸಾಧ್ಯವೆ? ಅದು ಸಾಧ್ಯವಾಗಲು ಏನಾದರೂ ಮಾಡಲೇಬೇಕು ಮತ್ತು ಅದರಿಂದ ಇಬ್ಬರೂ ಒಂದಾಗಲೇ ಬೇಕು ಎಂಬ ಹಠದಲ್ಲಿ ಇಬ್ಬರೂ ಕಾರ್ಯಪ್ರವೃತ್ತರಾಗಿದ್ದಾಗಲೇ, ಬೆಳಕಿನ ಸಾಂದ್ರತೆ, ಅದರ ಪ್ರತಿಫಲನದ ಜೊತೆ ಮಂಗಳಗ್ರಹ ಅಥವಾ ಭೂಮಿಯೂ ತನ್ನ ಕಕ್ಷೆಯಲ್ಲಿ ತಾನು ಸುತ್ತುವ ವೇಗಕ್ಕೆ ಮತ್ತು ಅಲ್ಲಿನ ಗುರುತ್ವಾಕರ್ಷಣ ಶಕ್ತಿಗೆ ನಮ್ಮ ದೇಹ ಹೊಂದಿಕೊಳ್ಳುವಂತಾದರೆ ಎಲ್ಲಿ ಬೇಕಾದರೂ ಬದುಕಬಹುದು ಎಂಬ ಮಹತ್ವದ ಸುಳಿವು ಸಿಕ್ಕಿತು. ಇದನ್ನು ತಿಳಿದೊಡನೆ ಮಂಗಳಗ್ರಹದ ಸುಂದರಿ ತನ್ನಿಷ್ಟದ ಪ್ರೀತಂನನ್ನು ವರಿಸಲು ಅಲ್ಲಿಂದ ಓಡೋಡಿ ಬಂದರು ಸಿದ್ದತೆ ಮಾಡಿಕೊಳ್ಳುತ್ತಿದ್ದರೆ, ಇಲ್ಲಿ ಪ್ರೀತಂ ಅವಳ ಬರುವಿಕೆಗಾಗಿ ಹಾಗೂ ಬಂದೊಡನೆ ತಂದೆ ತಾಯಿ ತಂಗಿ ಹಾಗೂ ತೀರಾ ಆಪ್ತ ಗೆಳೆಯರನ್ನು ಪ್ರಧಾನಿಯವರ ಕಾರ್ಯಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರ ಸಮ್ಮುಖದಲ್ಲಿ ಮದುವೆಯಾಗಲು ಭರದ ಸಿದ್ಧತೆ ನಡೆಸಿದ್ದಾನೆ.



Rate this content
Log in

Similar kannada story from Comedy