ನಮ್ಮನೆ ನರಕ ಚತುರ್ದಶಿ ಹಬ್ಬ
ನಮ್ಮನೆ ನರಕ ಚತುರ್ದಶಿ ಹಬ್ಬ
ನಾವು ಚಿಕ್ಕವರಿದ್ದಾಗ ನರಕ ಚತುರ್ದಶಿ ಅಂದರೆ ತಿಳಿಯುತ್ತಲೇ ಇರಲಿಲ್ಲ. ಕಾರಣ ನಮ್ಮ ಹಳ್ಳಿಯ ಕಡೆಗೆ ಈ ಹಬ್ಬಕ್ಕೆ ಬೋರೆ ಹಬ್ಬ ಎಂದು ಹೇಳುತ್ತಾರೆ. ಇದೊಂದು ವಿಶೇಷ ಹಬ್ಬವೇ ಸರಿ. ಈ ಹಬ್ಬದ ಕುರಿತು ಮೊದಲೊಂದು ಲೇಖನವನ್ನು ಬರೆದಿರುವೆ. ಇನ್ನೊಂದು ಸ್ವಲ್ಪ ಬರೆಯಬೇಕೆಂಬ ಮನಸ್ಸಿನ ಆಸೆಗೆ ಬೇಸರವನ್ನು ಮಾಡುವ ಮನಸ್ಸಿಲ್ಲ.
ನರಕ ಚತುರ್ದಶಿಯ ಮೊದಲ ದಿನಕ್ಕೆ ನೀರು ತುಂಬುವ ಹಬ್ಬ ಎಂದು ಮಾಡುತ್ತೇವೆ. ಅಂದು ಇರುವ ನೀರನೆಲ್ಲ ಖಾಲಿ ಮಾಡಿ ಹೊಸ ನೀರು ತುಂಬಿಸಬೇಕು. ಬಚ್ಚಲು ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಮತ್ತೊಮ್ಮೆ ಸ್ವಚ್ಛ ಮಾಡಿ , ಗೋಡೆಗೆಲ್ಲ ಸುಣ್ಣದ ಕಡ್ಡಿಯಿಂದ ಅಲಂಕಾರ ಮಾಡಿ , ನೀರು ಕಾಯಿಸುವ ಹಂಡೆಗೂ ಸಹ ಸುಣ್ಣದ ಕಡ್ಡಿಯಿಂದ ಚಿತ್ರ ಬರೆದು ಅಲಂಕಾರ ಮಾಡುತ್ತಾರೆ. ಆಮೇಲೆ ಮಾನಿಂಗನ ಬಳ್ಳಿಯಿಂದ ಅಲಂಕಾರ ಮಾಡುತ್ತಾರೆ. ಮೊದಲೆಲ್ಲ ಹೊಲದ ಬೇಲಿಯ ಸುತ್ತ ಬೆಳೆಯುತ್ತಿದ್ದ ಈ ಬಳ್ಳಿಗೆ ಈಗಂತೂ ಎಲ್ಲಿಲ್ಲದ ಬೆಲೆ. ಹತ್ತು , ಇಪ್ಪತ್ತು ರೂಪಾಯಿ ಕೊಟ್ಟರೆ ಒಂದು ಮೊಳ ಮಾನಿಂಗನ ಬಳ್ಳಿ ಸಿಗುತ್ತಿದೆ. ಇದನ್ನು ನೀರು ಕಾಯಿಸುವ ಹಂಡೆಗೆ ಸುತ್ತಿದ ಮೇಲೆಯೇ ನೀರು ಕಾಯಿಸಲು ಶುರು ಮಾಡುತ್ತಾರೆ.
ನರಕ ಚತುರ್ದಶಿ ದಿನ ಬೆಳಿಗ್ಗೆ ಬೇಗನೆ ಅಂದರೆ ನಾಲ್ಕೂವರೆಗೆಲ್ಲ ಅಮ್ಮಂದಿರು ಎದ್ದೆ ಬಿಡುತ್ತಿದ್ದರು. ನೀರು ಕಾಯಿಸಿದ ನಂತರ ನಮ್ಮನ್ನೆಲ್ಲ ಎಬ್ಬಿಸುತ್ತಿದ್ದರು. ಅದರಲ್ಲೂ ಗಂಡು ಮಕ್ಕಳಿಗೆ ಮೊದಲ ಅಭ್ಯಂಜನ ಸ್ನಾನ. ಅಮ್ಮ ಎಣ್ಣೆ ಬಿಸಿ ಮಾಡಿ , ಆರಿಸಿ ನಮ್ಮನ್ನೆಲ್ಲ ಕೂರಿಸಿ , ಮೊದಲು ನಮ್ಮ ಮೈಗೆಲ್ಲ ಆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ಆಮೇಲೆ ಬಿಸಿ ಬಿಸಿ ನೀರನ್ನು ತಲೆಗೆ ಹಾಕಿ , ಸೋಪ್ ಸಹ ಕೊಡುತ್ತಿರಲಿಲ್ಲ ಸ್ನಾನ ಮಾಡಿಸುತ್ತಿದ್ದರು. ಆಮೇಲೆ ಅಪ್ಪ ತಂದ ಹೊಸ ಬಟ್ಟೆಯನ್ನು ಹಾಕಿಕೊಂಡು ಓಡಾಡಿದ್ದೆ ಓಡಾಡಿದ್ದು. ಆಮೇಲೆ ನಮ್ಮನ್ನೆಲ್ಲ ಕೂರಿಸಿ ಆರತಿ ಮಾಡುತ್ತಿದ್ದರು.ಅಷ್ಟೊತ್ತಿಗಾಗಲೇ ಬೆಳಕು ಹರಿಯುತ್ತಿತ್ತು. ಆಗ ಮನೆಯ ಹೊರಗಿನ ಮೇಲ್ಛಾವಣಿಗೆ ಆಕಾಶಬುಟ್ಟಿಯನ್ನು ( ಕಾರ್ತಿಕ ಬುತ್ತಿಯನ್ನು ) ಪೂಜೆ ಮಾಡಿ ಹಾಕುವುದು , ಅದರಲ್ಲಿ ಮಣ್ಣಿನ ಹಣತೆಯನ್ನು ಹಚ್ಚಿಡುವುದು. ಆಮೇಲೆ ಹೊಸ ಬಟ್ಟೆಯ ಖುಷಿಯಲ್ಲಿ ಓಡಾಡುವುದೇ ಕೆಲಸ.
ಇದಾದ ಮೇಲೆ ಮನೆಯ ಹಿರಿಯರಿಗೆ ಪೂಜೆ ಮಾಡುವುದು ನಮ್ಮ ಕಡೆಯ ವಿಶೇಷ . ತೀರಿ ಹೋದಂತಹ ಹಿರಿಯರ ಫೋಟೋವನ್ನಿಟ್ಟು ಕಣಗಿಲೆ ಹೂವು , ಕಣಗಿಲೆ ಎಲೆಯಿಂದ ಕೊಡವನ್ನು ಅಲಂಕರಿಸಿ , ಬಟ್ಟೆ ಇಟ್ಟು , ವಿವಿಧ ಬಗೆಯ ಅಡುಗೆಗಳನ್ನು ಮಾಡಿ ಪೂಜೆ ಮಾಡುತ್ತೇವೆ. ಹಿರಿಯರು ಎಲೆ ಅಡಿಕೆ ತಿನ್ನುತ್ತಾರೆಂಬ ನಂಬಿಕೆಯಿಂದ ತಾಂಬೂಲ ಸಹ ಕುಟ್ಟಿ ಇಡುತ್ತಾರೆ. ಕಡುಬು , ವಡೆ , ಶ್ಯಾವಗೆ ಪಾಯಸ , ಪೂರಿ , ಅಕ್ಕಿ ಪಾಯಸ , ಶಂಡಿಗೆ , ಕರಿದ ಮೆಣಸಿನಕಾಯಿ , ಅನ್ನ ಎಲ್ಲವನ್ನೂ ಮಾಡಿ ಹಿರಿಯರ ಪೂಜೆ ಮಾಡಿ , ಲೋಬಾನ ಹಾಕಿ ಕೈ ಮುಗಿದು ಮಾಡಿದ ಅಡುಗೆಯನ್ನು ಊಟ ಮಾಡಿದರೆ ಇಂದಿನ ನರಕ ಚತುರ್ದಶಿ ಹಬ್ಬ ಮುಗಿದಂತೆ. ಅಮ್ಮಂದಿರಿಗೆ ಒಂದು ದಿನದ ಹಬ್ಬ ಮುಗಿದಂತೆ. ಅವರು ಮುಂದಿನ ದಿನದ ಹಬ್ಬದ ತಯಾರಿಯಲ್ಲಿ ತೊಡಗಿರುತ್ತಾರೆ. ಹೂ ಮಾಲೆ ಮಾಡುವುದು , ಲಕ್ಷ್ಮಿ ಪೂಜೆಯ ತಯಾರಿ ಮಾಡಿಕೊಳ್ಳುವುದು ಹೇಗೆ ಅಮ್ಮಂದಿರಿಗೆ ಮೂರು ದಿನವೂ ಬಿಡುವಿರದ ಕೆಲಸಗಳನ್ನು ನೀಡುವ ಈ ಹಬ್ಬವು ಮಕ್ಕಳ ಪಾಲಿಗಂತೂ ಖುಷಿಯ ಹಬ್ಬ.
