ನಿಸ್ವಾರ್ಥ ಸೇವೆ..
ನಿಸ್ವಾರ್ಥ ಸೇವೆ..
ಏ ಮಗುವೇ… ಎಷ್ಟು ಸತಿ ಹೇಳಿದೀನಿ ಹಸಿ ಬಾಣಂತಿ.. ಕೋಣೆ ಬಿಟ್ಟು ಹೀಗೆ ಹೊರಗಡೆ ಬಂದು ಕೂರಬಾರದು ಅಂತ ಆದ್ರೂ ನನ್ ಮಾತ್ ಕೇಳಲ್ಲ.. ಹೋಗು ಮಗು ಎದ್ದು ಅಳಕ್ ಶುರು ಮಾಡುತ್ತೆ..
ಅಯ್ಯೋ ಅಜ್ಜಿ ಬೆಳಗ್ಗೆಯಿಂದ ಮಲ್ಕೊಂಡ್ ಬೇಜಾರ್ ಬಂದಿದೆ.. ಅದು ಅಲ್ದೆ ಮನೆಗೆ ಅಂಗನವಾಡಿ ಇಂದ ಬರ್ತೀನಿ ಅಂತ ಫೋನ್ ಬಂದಿತ್ತು ಅದಕ್ಕೆ ಕಾಯ್ತಾ ಇದೀನಿ..
ಅವರ್ಯಾಕ್ ಬರ್ತಾರೆ ಅಂತ ಈಗ?
ಅದೇನೋ ಎಂಟ್ರಿ ಆಗ್ಬೇಕಂತೆ..ಆಮೇಲೆ ಮಗವಿನ ಪೋಷಣೆ ಬಗ್ಗೆ ಹೇಳತ್ತಾರಂತೆ..
ನಾವೇನು ಮಗುನ ಹೆರದಿದ್ದಿದ್ದಾ .. ನೀನ್ ಹೇಳಬೇಕಿತ್ತು ನಮ್ಮಜ್ಜಿ ಇದ್ದಾರೆ ಎಲ್ಲ ಹೇಳ್ತಾರೆ ಅಂತ..
ಅಯ್ಯೋ ಬರ್ಲಿ ಬಿಡಜ್ಜಿ ಅವರೇನು ಹೇಳ್ತಾರೆ ಅಂತ ಕೇಳಿಸಿಕೊಳ್ಳಣ್ಣ.. ಎನ್ನುವ ವೇಳೆಗೆ ಗೇಟ್ ತೆರೆದ ಸದ್ದಾಯಿತು..
ನಮಸ್ತೆ ಮೇಡಮ್ ಹೇಗಿದ್ದೀರಾ ನಾನು ರತ್ನ ಅಂತ ಆಶಾ ಕಾರ್ಯಕರ್ತೆ.. ಮಗು ಹೇಗಿದೆ..
ನಮಸ್ತೆ ಮೇಡಮ್.. ನಾವಿಬ್ರೂ ಆರಾಮ್ ಇದ್ದೀವಿ. ಮಗು ಈಗಷ್ಟೇ ಮಲಗ್ತು.. ನೀವು ಬರ್ತೀನಿ ಅಂತ ಫೋನ್ ಮಾಡಿದ್ರಲ್ವಾ? ಹಾಗಾಗಿ ನಾನ್ ಮಲಗೋಕೆ ಹೋಗ್ಲಿಲ್ಲ ಕಾಯ್ತಾ ಇದ್ದೆ..
ನೀವಾದರೂ ಹೇಳಿ ನನ್ನ ಮಾತೇ ಕೇಳಲ್ಲ ಅಂತಳೆ… ಹಸಿ ಬಾಣಂತಿ ಈತರ ಕೂತ್ರೆ ಬೆನ್ನು ನೋವು ಬರುತ್ತಲ್ವಾ..??
ದಿನಪೂರ್ತಿ ಕೂತ್ರೆ ನೋವು ಬರುತ್ತೆ ಅಜ್ಜಿ ಸ್ವಲ್ಪ ಹೊತ್ತು ಕೂತು ಅಭ್ಯಾಸ ಮಾಡ್ಕೋತಿದ್ರೆ ಮಗುಗೆ ಹಾಲು ಕುಡಿಸುವಾಗ ಕಷ್ಟ ಆಗಲ್ಲ..
ಎದೆಯಲ್ಲಿ ಹಾಲಾಗಿದ್ಯಾ? ಮಗುವಿಗೆ ಹಾಲು ಸಾಕಾಗುತ್ತಲ್ವಾ..
ಹಾಲು ಸಾಕಾಗ್ತಿಲ್ಲ.. ಡಾಕ್ಟರ್ ಹೇಳಿದ್ದನ್ನು ಫಾಲೋ ಮಾಡ್ತಾ ಇದೀನಿ .., ಜೊತೆಗೆ ಅಜ್ಜೀನು ಮನೆ ಔಷಧಿ ಮಾಡಿಕೊಡುತ್ತಿದ್ದಾರೆ..
ಗುಡ್ ಆದಷ್ಟು ಕುಳಿತುಕೊಂಡು ಹಾಲು ಕುಡಿಸಿ… ಪಕ್ಕದಲಿ ಮಲಗಿಸಿಕೊಂಡು ಹಾಲ್ ಕುಡಿಸುವಂಥದ್ದು ತುಂಬಾ ಅಪಾಯಕಾರಿ.. ಕೆಲವೊಮ್ಮೆ.. ಕಣ್ ಹತ್ತಿದ್ದು ಗೊತ್ತಾಗಲ್ಲ.. ಮಗುವಿನ ಮೇಲೆ ನಿಮ್ಮ ಭಾರ ಬೀಳುವ ಸಂಭವ ಇರುತ್ತದೆ.. ಹಾಗಾದಾಗ ಮಗುವಿಗೆ ಉಸಿರು ಕಟ್ಟಬಹುದು..ಪ್ರತಿಬಾರಿ ಹಾಲು ಕೊಡುವಾಗ ನೇರ ಕುಳಿತು ಮಗುವಿನ ತಲೆಯನ್ನು ಕೈಯಲ್ಲಿ ಹಿಡಿದು ಮಗುವಿನ ಬಾಯಿಗೆ ಸರಿಯಾಗಿ ಸಿಗುವಂತೆ ಕೊಟ್ಟರೆ ಮಗುವಿಗೂ ಹಾಲೆಳೆಯಲು ಆರಾಮ್ ಆಗುತ್ತದೆ..ಹಾಗೆ ಕನಿಷ್ಠಪಕ್ಷ ಒಂದುವರೆ ವರ್ಷವಾದರೂ ಮಗುವಿಗೆ ಹಾಲುಣಿಸಿ.. ತಾಯಿಯ ಹಾಲು ಮಗುವಿಗೆ ಶ್ರೇಷ್ಠ.. ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗಿಸುತ್ತದೆ ಜೊತೆಗೆ ಅನೇಕ ಕಾಯಿಲೆಗಳನ್ನು ತಡೆಯುತ್ತದೆ.. ನಿಮ್ಮ ಉದ್ಯೋಗ ನಿಮ್ಮ ಕೆಲಸವೆಂದು ಮಗುವಿಗೆ ಹಾಲು ಕುಡಿಸದೆ ಇರಬೇಡಿ..
ಅದನ್ನು ಇನ್ನು ಎರಡು ಸತಿ ಹೇಳಿ.. ನಮ್ಮ ಮಾತು ಕೇಳಲ್ಲ.. ಮೊಬೈಲ್ನಲ್ಲಿ ಮುಳುಗಿ ಹೋಗಿರುತ್ತಾಳೆ ..ಮಗು ಅತ್ತಿದ್ದು ಅವಳಿಗೆ ಕೇಳ್ಸಲ್ಲ..
ಅಜ್ಜಿ ಸ್ವಲ್ಪ ಸುಮ್ನಿರು ಸುಮ್ನೆ ಕಂಪ್ಲೇಂಟ್ ಹೇಳಬೇಡ… ಮಗು ಅತ್ತಿದ್ದು ಕೇಳಿಸಲ್ಲ ಅಲ್ಲ.. ಅದು ಹಾಲು ಕೊಟ್ರು ಅಳುತ್ತಾನೆ ಇರುತ್ತೆ ಏನ್ ಮಾಡಬೇಕು ಅಂತ ಗೊತ್ತಾಗ್ದೆ ಸುಮ್ನೆ ಕೂತಿರ್ತೀನಿ ಅಷ್ಟೇ..ಎಂದು ಪುಟ್ಟ ಮುಖ ಮಾಡಿಕೊಂಡು ಕುಳಿತವಳನ್ನು ಕಂಡು ರತ್ನ ಮಾತು ಮುಂದುವರಿಸಿದಳು..
ಮಗು ಅತ್ತಾಗ ಯಾಕಾಗಿ ಅಳುತ್ತದೆ ಎಂದು ತಿಳಿಯುವುದಿಲ್ಲ.. ಅದಕ್ಕಾಗುವ ಸಂಕಟವನ್ನು ಅತ್ತು ನಮಗೆ ತಿಳಿಸುತ್ತದೆ.ಕೆಲವೊಮ್ಮೆ ಬಾಯಾರಿಕೆ ಆಗಿ ಅಳಬಹುದು, ಹಸಿವಾಗಿ ಅಳಬಹುದು, ಇನ್ನು ಕೆಲವೊಮ್ಮೆ ಸುಮ್ಮನೆ ಬೇಸರವಾಗಿಯೂ ಅಳುವ ಸಂಭವವಿರುತ್ತದೆ.. ಹಾಲು ಬೇಕೆನಿಸಿದಾಗ ಕೊಟ್ಟಕೂಡಲೆ ಕುಡಿಯುವ ಮಗು ಬೇಡವೆನಿಸಿದಾಗ ಹಾಲು ಕೊಟ್ಟರು ಅಳುವುದನ್ನು ನಿಲ್ಲಿಸುವುದಿಲ್ಲ.. ಹಾಗೆಂದು ಗಾಬರಿಯಾಗುವ ಅವಶ್ಯಕತೆ ಇಲ್ಲ ಮಗುವಿನ ಜಾಗವನ್ನು ಒಮ್ಮೆ ಬದಲಾಯಿಸಿ ನೋಡಿದರಾಯಿತು.. ಮಗುವಿಗೆ ತಾಯಿ ಗರ್ಭದಿಂದ ಹೊರ ಬಂದಾಗ ಎಲ್ಲವೂ ಹೊಸದಾಗಿರುತ್ತದೆ.. ಮಗುವನ್ನು ಕೈಯಲ್ಲಿಟ್ಟುಕೊಂಡ ತಾಯಿಗೂ ಕೂಡ ಆ ಮಗುವಿನ ಚಲನವಲನ ಹೊಸದಾಗಿರುತ್ತದೆ ..ಇಬ್ಬರಿಗೂ ಆತಂಕ ಭಯ ಸಹಜ.. ಪ್ರತಿ ಬಾರಿ ಮಗು ಹಾಲಿಗಾಗಿಯೇ ಅಳುವುದಿಲ್ಲ.. ಮುದ್ದಿಸುವಂತೆ ಮಾತನಾಡಿಸುವಂತೆ ಹೊರಗೆ ಕರೆದುಕೊಂಡು ಹೋಗುವಂತೆ ಹೀಗೆ ಅನೇಕ ರೀತಿಯಲ್ಲಿ ನಿರೀಕ್ಷಿಸುತ್ತಾ ಅಳುವಿನ ಮೂಲಕ ಹೊರ ಹಾಕುತ್ತದೆ… ಆರಂಭದಲ್ಲಿ ಅರಿತುಕೊಳ್ಳುವುದು ಕೊಂಚ ಕಷ್ಟವಾಗಬಹುದು.. ಮಗುವಿಗೊಂದು ದಿನಚರಿಯನ್ನು ಪಾಲಿಸಿಕೊಂಡು ಬಂದರೆ ಸ್ವಲ್ಪ ಸುಲಭವಾಗಬಹುದು..
ಏನೇ ಸಮಸ್ಯೆ ಇದ್ದರೂ ಭಯಪಡದೆ ಕರೆಮಾಡುವ ಮೂಲಕ ಅಥವಾ ಪರಿಚಯವಿರುವ ಡಾಕ್ಟರ್ ನ ಬಳಿ ತೆರಳಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.. ಹಾಲುಣಿಸುವುದನ್ನು ಮಾತ್ರ ಕಡೆಗಣಿಸಬೇಡಿ ನಿಮ್ಮ ಮಗುವಿನ ಆರೋಗ್ಯ ನಿಮ್ಮ ಹಾಲಿನಲ್ಲಿದೆ..
ಅಜ್ಜಿ ನಾನಿನ್ನು ಬರ್ತೀನಿ ಇನ್ನೆರಡು ಮನೆಗೆ ಹೋಗಬೇಕು..
ಆಯ್ತಮ್ಮ ಹೋಗ್ಬಾ..
ಹೊರಟುನಿಂತವಳು….ತಿರುಗಿ ಬಂದು ಮಗುವಿಗೆ ಸರಿಯಾದ ಸಮಯದಲ್ಲಿ ಚುಚ್ಚು ಮದ್ದುಗಳನ್ನು ಹಾಕುವುದನ್ನು ಮರೆಯಬೇಡಿ..ಪ್ರಾರಂಭದ 3ತಿಂಗಳು ನಂತರ 9 ನೆ ತಿಂಗಳು ಹಾಗು 1ವರುಷಕ್ಕೆ ಚುಚ್ಚು ಮದ್ದುಗಳಿವೆ…ನಿಮಗೆ ಕೊಟ್ಟಿರುವ ಇಂಜೆಕ್ಷನ್ ಕಾರ್ಡ್ ನಲ್ಲಿ ವಿವರಗಳಿವೆ.. ತಪ್ಪದೇ ಹಾಕಿಸಿ ಎಂದಳು..
ಅಯ್ಯೋ ರಾಮ…ಅದೆಷ್ಟು ಚುಚ್ಚೋದು ಆ ಚಿಕ್ಕ ಮಗುವಿಗೆ..? ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ..ಎಂದು ಅಜ್ಜಿ ಹೇಳಿದ ಮಾತು ಕೇಳಿ ರತ್ನ ಮಾತನ್ನು ಮುಂದುವರಿಸಿದಳು..
ಹೌದು ಅಜ್ಜಿ ಆಗ ಹಾಗಿರಲಿಲ್ಲ.. ಅದ್ಕೆ ಮಕ್ಕಳ ಆರೋಗ್ಯನು ಹದಗೆಡುತ್ತಿತ್ತು.ಈಗಲು ಇದೆ ಆದರೆ ಪ್ರಮಾಣ ಕಡಿಮೆಯಾಗಿದೆ.. ನಿಮ್ಮ ಕಾಲದಲ್ಲಿದ ಪೋಲಿಯೋ ಸಮಸ್ಯೆ ಈಗಿನ ವ್ಯಾಕ್ಸಿನ್ ಸಂಪೂರ್ಣ ತೊಲಗಿಸಿದೆ…ಈಗ ಪೋಲಿಯೋ ಮುಕ್ತವಾಗಿದೆ ಗೊತ್ತಾ..?ಮಗುವಿಗೆ ಚುಚ್ಚುವಾಗ ನೋವಾಗಬಹುದು.ಆದರೆ ಮುಂದೆ ಅನುಭವಿಸುವ ನೋವನ್ನು ತಡೆಗಟ್ಟಬಹುದು ಎಂದಳು..
ನಮ್ಮ ಅಜ್ಜಿಗೆ ಅದರ ಬಗ್ಗೆ ತಿಳಿದಿಲ್ಲ..ನಾನು ಕಾರ್ಡ್ ನೋಡಿ ತಪ್ಪದೇ ವ್ಯಾಕ್ಸಿನ್ ಹಾಕಿಸ್ತೀನಿ..ಮನೆವರೆಗೆ ಬಂದು ಇಷ್ಟು ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ ಎಂದು ಕೈ ಮುಗಿದವಳ ಕೈ ಹಿಡಿದು ಇದು ನನ್ನ ಕರ್ತವ್ಯ ಇಬ್ಬರು ಜೋಪಾನಾ ಏನೇ ಸಮಸ್ಯೆ ಇದ್ದರು ಸಂಪರ್ಕಿಸಿ ಎನ್ನುತ್ತಾ ಹೊರ ನೆಡೆದಳು..
ಹೋಗಿ ಮಲ್ಕೋ ಎಷ್ಟು ಹೊತ್ತಾಯ್ತು ಕೂತು..ಎಂದು ಹೇಳಿದ ಅಜ್ಜಿಯ ಕಾಳಜಿ ಅರಿತು ಮನದಲಿ ನಕ್ಕು ಮಗುವಿನ ಕೋಣೆ ಹೊಕ್ಕಳು..
ಹಳ್ಳಿಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರ ಶ್ರಮವನ್ನು ಮೆಚ್ಚಲೇಬೇಕು… ಮನೆಯಲ್ಲಿ ಗರ್ಭಿಣಿ ಅಥವ ಬಾಣಂತಿಯರು ಇದ್ದಾರೆ ಎಂದು ತಿಳಿದರೆ ಅವರ ಯೋಗ ಕ್ಷೇಮ ವಿಚಾರಿಸಿಕೊಂಡು ತೆರಳುವ ಅವರು ,ಪಡೆಯುವ ಸಂಬಳಕ್ಕಿಂತ ಹೆಚ್ಚಿನ ಕೆಲಸ ಮಾಡುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.. ಸರ್ಕಾರದ ಆದೇಶದಂತೆ ಪ್ರೀತಿ ಮನೆಗೂ ತೆರಳಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಇವರ ಶ್ರಮಕ್ಕೆ ತಲೆ ಬಾಗಲೇಬೇಕು..ಮನೆ ಮನೆಗೆ ತೆರಳಿ ಜ್ಞಾನ ಪಸರಿಸುವ ಆಶಾ ಕಾರ್ಯಕರ್ತೆಯರ ಶ್ರಮವನ್ನು ಕೇವಲವಾಗಿ ಕಾಣದೆ ಗೌರವಿಸೋಣ..ಇಂತಹ ಕಾರ್ಯಕರ್ತೆಯರಿಗೆ ನನ್ನ ಬರಹದ ಮೂಲಕ ಒಂದು ಸಲಾಂ ಹೇಳಲು ಬಯಸುತ್ತೇನೆ…ಓದುವ ಮೂಲಕ ನೀವು ಹೇಳುತ್ತೀರ ಅಲ್ವಾ…??
