ನಿನ್ನೇ ಪ್ರೀತಿಸುವೆ -2
ನಿನ್ನೇ ಪ್ರೀತಿಸುವೆ -2
ಅಂತೂ ಅಪ್ಪನನ್ನು ಒಪ್ಪಿಸಿ ತಾನು ಓದಿದ ಓದಿಗೆ ಸಂಬಂಧಿಸಿದಂತೆ ಚಿಕ್ಕದೊಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸಕ್ಕೆ ಸೇರಿದಳು.. ಅಂತೂ ನೆಮ್ಮದಿಯಾಗಿ ಜೀವನ ನೆಡೆಯುತ್ತಿತ್ತು... ಅಮ್ಮನ ನೆನಪು ಅವಳನ್ನು ಕಾಡುತ್ತಲೇ ಇತ್ತು. ಅಪ್ಪ ಎಷ್ಟೇ ಪ್ರೀತಿ ತೋರಿದರು ಕೆಲವೊಂದು ವಿಷಯಗಳಲ್ಲಿ ಅಮ್ಮ ಬೇಕು ಎನಿಸುವುದು ಸಹಜ. ಅದರಂತೆ ಮೃಣಾಲಿನಿಗೂ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅಮ್ಮನಿರಬೇಕಿತ್ತು ಎಂದು ಅನಿಸಿದಾಗಲೆಲ್ಲ ಅಪ್ಪ ಬಾಲ್ಯದಲ್ಲಿ ಹೇಳಿದಂತೆ ಆಕಾಶ ನೋಡುತ್ತಾ ನಕ್ಷತ್ರಗಳನ್ನು ಎಣಿಸುತ್ತಾ ಮಾತನಾಡುತ್ತಿದ್ದಳು.. ಅಪ್ಪನನ್ನು ಬಿಟ್ಟರೆ ಅತಿಯಾಗಿ ಪ್ರೀತಿಸುವ 3 ವಿಷಯವಿತ್ತು.. ಒಂದು ಆಕಾಶದಲ್ಲಿನ ನಕ್ಷತ್ರದ ಜೊತೆಗೆ ಮಾತನಾಡುವುದು ಇನ್ನೊಂದು ಸಮುದ್ರದ ತೀರದಲ್ಲಿ ಕುಳಿತು ಕಾಲಕಳೆಯುವುದು ಮತ್ತೊಂದು ಪುಸ್ತಕಗಳನ್ನು ಓದುವುದು.. ಇದಿಷ್ಟೇ ಅವಳ ಪ್ರಪಂಚವಾಗಿತ್ತು.. ಪುಸ್ತಕಗಳನ್ನು ಓದುತ್ತಾ ಓದುತ್ತಾ ಚಿಕ್ಕಪುಟ್ಟ ಕವನಗಳನ್ನು ಬರೆಯುವ ಅಭ್ಯಾಸವನ್ನು ಮಾಡಿಕೊಂಡಿದ್ದಳು.. ಅದು ಕೂಡ ಅವಳು ಪ್ರೀತಿಸುವ ಹೊಸದೊಂದು ವಿಚಾರವಾಗಿತ್ತು...
ಅಂದುಕೊಂಡಂತೆ ಎಲ್ಲವೂ ನಡೆಯದು. ಶಾಂತವಾಗಿದ್ದ ಕಡಲಿನ ಅಲೆಗಳಲ್ಲಿ ಒಮ್ಮೆಗೆ ರಭಸವಾದ ತೆರೆ ಬಂದಂತೆ ಮೃಣಾಲಿನಿಯ ಬದುಕಿನಲ್ಲಿ ಅಲೆಯೊಂದು ಬಂದು ಅಪ್ಪಳಿಸಲು ಕಾಯುತ್ತಿತ್ತು....
ಪ್ರತಿ ಬಾರಿ ಎಲ್ಲವೂ ಸರಿಯಾಗಿದೆ ಎನ್ನುವ ವೇಳೆಯಲ್ಲಿ ಅವಘಡ ಸಂಭವಿಸುತ್ತದೆ.. ಮೃಣಾಲಿನಿಯ ಬದುಕು ಇದರಿಂದ ಹೊರತಾಗಿರಲಿಲ್ಲ...
ಮೃಣಾಲಿನಿ ಕೆಲಸ ಮಾಡುತ್ತಿದ್ದ ಪ್ರಿಂಟಿಂಗ್ ಪ್ರೆಸ್ ರಸ್ತೆ ಬದಿಯಲ್ಲಿದ್ದ ಕಾರಣ ವ್ಯಾಪಾರವೇನೋ ಒಳ್ಳೆಯ ರೀತಿಯಲ್ಲಿ ನಡೆಯುತ್ತಿತ್ತು. ಆದರೆ ರಸ್ತೆ ಅಗಲೀಕರಣ ಎಂಬ ಕಾರಣದಿಂದ ಅಂಗಡಿಯನ್ನು ತೆರವುಗೊಳಿಸಬೇಕಾಗಿ ಬಂದ ನೋಟಿಸ್ ಅಂಗಡಿ ಮುಚ್ಚುವಂತಾಗಿ ಮೃಣಾಲಿನಿಯ ಕೆಲಸವನ್ನು ಕಿತ್ತುಕೊಂಡಿತು.. ಒಂದು ವರ್ಷಗಳ ಕಾಲ ಪ್ರಿಂಟಿಂಗ್ ಪ್ರೆಸ್ ಅವಳ ಬದುಕಿಗೆ ಆಸರೆಯಾಗಿದ್ದಲ್ಲದೆ ಅಪ್ಪನನ್ನು ಕೊಂಚ ಚೇತರಿಸಿಕೊಳ್ಳುವಂತೆ ಮಾಡಲು ಸಹಕಾರಿಯಾಗಿತ್ತು.. ಈಗ ಕೈಯಲ್ಲಿ ಕೆಲಸವಿಲ್ಲ. ಮುಂದೆ ಏನು ಮಾಡಬೇಕೆಂದು ತೋಚದೆ, ಮನಸ್ಸಿನ ಗೊಂದಲವನ್ನು ಬಗೆಹರಿಸಿಕೊಳ್ಳಲು ಸಮುದ್ರದ ದಡಕ್ಕೆ ನಡೆದಳು.. ಬಂದಪ್ಪಳಿಸುವ ಸಮುದ್ರದ ಅಲೆಗಳನ್ನು ನೋಡುತ್ತಾ ಪ್ರಶಾಂತವಾದ ವಾತಾವರಣದಲ್ಲಿ ತನ್ನ ಮನಸ್ಸಿನ ಭಾವನೆಗಳನ್ನು ಕಣ್ಣೀರಿನ ರೂಪದಲ್ಲಿ ಹೊರಹಾಕುತ್ತಿದ್ದಳು..
ಎಲ್ಲಿ ನೋಡಿದರೂ ನೀರು.. ಎಷ್ಟು ದೂರ ಕಣ್ಣು ಹಾಯಿಸಿದರು ಬರೀ ನೀರು.. ಎಷ್ಟು ಅತ್ತರು ನಿಲ್ಲುತ್ತಿರಲಿಲ್ಲ ಅವಳ ಕಣ್ಣೀರು.. ಸೂರ್ಯ ಮುಳುಗುತ್ತಾ ಬಂದ. ಅಪ್ಪ ತನಗಾಗಿ ಕಾಯುತ್ತಿರುತ್ತಾರೆ ಎಂದು ನೆನಪಾಗಿ ಕಣ್ಣೀರನ್ನು ಒರಿಸಿಕೊಳುತ್ತಾ ಮನೆ ಕಡೆ ಹೆಜ್ಜೆ ಹಾಕುವಾಗ ಅದೇ ಸಮುದ್ರದ ದಡದಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತ ವೃದ್ದ ದಂಪತಿಗಳು ಆಡುತ್ತಿದ್ದ ಮಾತನ್ನು ಕೇಳಿಸಿಕೊಂಡಳು.."ಅಡುಗೆ ಕೆಲಸಕ್ಕೆ ಅನಿತಾ ಬರೋದಿಲ್ಲವಂತೆ .ನಾಳೆಯಿಂದ ಬೇರೆ ಜನ ಸಿಗುವವರೆಗೂ ನಾನೇ ಮಾಡಬೇಕು.." ಎಂಬ ಮಾತು ಕೇಳುತ್ತಿದ್ದಂತೆ ಅಮ್ಮನಿಲ್ಲದೆ ಬೆಳದ ಮೃಣಾಲಿನಿಗೆ ಅಡಿಗೆಯ ಕೆಲಸವನ್ನು ಕಲಿಯುವ ಅನಿವಾರ್ಯತೆ ಬಾಲ್ಯದಿಂದಲೇ ಇತ್ತು. ಅಪ್ಪನಿಗೆ ಸಹಾಯ ಮಾಡಲೆಂದು ಜೊತೆ ನಿಲ್ಲುತ್ತಿದ್ದವಳಿಗೆ ಅಚ್ಚುಗಟ್ಟಾದ ಅಡುಗೆಯನ್ನು ತಯಾರಿಸುವುದು ಕರಗತವಾಗಿತ್ತು.. ವೃದ್ಧ ದಂಪತಿಗಳ ಮುಂದೆ ನಿಂತು "ನಿಮ್ಮ ಮಾತುಗಳು ನನ್ನ ಕಿವಿಗೆ ಬಿದ್ದವು.. ಒಪ್ಪುವುದಾದರೆ ನಿಮ್ಮ ಮನೆಗೆ ನಾಳೆಯಿಂದ ಅಡುಗೆ ಕೆಲಸಕ್ಕೆ ನಾನು ಬರುವೆ"ಎಂದು ಹೇಳಿ ತನ್ನ ಪರಿಚಯ ತನ್ನ ವಿವರಗಳನ್ನು ತಿಳಿಸಿ ಉತ್ತರಕ್ಕಾಗಿ ಕಾಯುತ್ತಾ ನಿಂತಳು..
ದಂಪತಿಗಳಿಬ್ಬರು ಮಾತನಾಡಿಕೊಂಡು ಒಂದು ವಾರದ ಮಟ್ಟಿಗೆ ಕೆಲಸಕ್ಕೆ ಬಾ ಇಷ್ಟವಾದರೆ ಮುಂದುವರಿಸುತ್ತೇವೆ ಎಂದು ಹೇಳಿದ್ದನ್ನು ಕೇಳಿ ಸಂತಸದಿಂದ ಸಮುದ್ರದ ಅಲೆಗಳನ್ನು ನೋಡಿದಳು.. ಜೀವನಕ್ಕೆ ಒಂದು ದಾರಿಯಾಯ್ತಲ್ಲ ಎಂಬ ಸಂತಸ ಒಂದೆಡೆಯಾದರೆ ತಾನು ಪ್ರೀತಿಸುವ ಕಡಲು ನನ್ನ ಸಮಸ್ಯೆಗಳನ್ನು ಮೌನವಾಗಿ ಆಲಿಸಿ, ಸಾಂತ್ವಾನ ಹೇಳಿ ಪರಿಹಾರ ದೊರಕಿಸಿದ ಭಾವ ಮೂಡಿತು..
ಮುಂದುವರೆಯುವುದು
