STORYMIRROR

Ashritha Kiran ✍️ ಆಕೆ

Classics Inspirational Others

4  

Ashritha Kiran ✍️ ಆಕೆ

Classics Inspirational Others

ನಾಲ್ಕು ಹಂತಗಳು...

ನಾಲ್ಕು ಹಂತಗಳು...

2 mins
239


       ಸಹನೆಗೆ ಇನ್ನೊಂದು ಹೆಸರೇ ಹೆಣ್ಣು ಎಂದರೆ ಅತಿಶಯೋಕ್ತಿಯಲ್ಲ.ನೋವನ್ನು ಮರೆ ಮಾಚಿ ನಗುತ್ತಾ ಬಾಳುವ ಆಕೆಯ ಸಹನೆಗೆ ಸಾಟಿ ಯಾರು??ನನ್ನ ಈ ಕಿರು ಕಥೆ ಹೆಣ್ಣೊಬ್ಬಳು ಕಳೆಯುವ ನಾಲ್ಕು ಹಂತದ ಬಗ್ಗೆ ಬೆಳಕು ಚೆಲ್ಲುವಂತದ್ದು.ಈ ಕಥೆಯ ನಾಯಕಿ ಗಾನವಿ.

     ವೀರಭದ್ರ ಹಾಗು ಮಲ್ಲಿಕಾ ದಂಪತಿಗೆ ನಾಲ್ಕು ಗಂಡು ಮಕ್ಕಳ ನಂತರ ಹುಟ್ಟಿದವಳೇ ನಮ್ಮ ಗಾನವಿ.ಮನೆಯ ಮುದ್ದು ಮಗಳು.ಅಣ್ಣಂದಿರ ಮುದ್ದು ತಂಗಿ.ಆಗಾಗ ಅವಳ ತಂಟೆ ತಡೆಯಲಾರದೆ ಅಮ್ಮನಿಂದ ಗುದ್ದು ಬೀಳುತ್ತಿತ್ತು.ಎಲ್ಲರನ್ನು ಕಾಡಿಸುತ್ತಾ ಆಡುತ್ತಾ ಬೆಳೆದವಳ ಬಾಲ್ಯ ಸುಂದರ ನೆನಪುಗಳಿಂದ ಕೂಡಿದ್ದವು..ಯಾವ ಭಯವಿಲ್ಲದೆ ಯಾವ ಅಂಜಿಕೆ ಇಲ್ಲದೆ ಅಣ್ಣಂದಿರೊಂದಿಗೆ ಹೊಡದಾಡಿಕೊಂಡು ಕಳೆದಳು

     ವರುಷ ಉರುಳುತ್ತಿದ್ದಂತೆ ಗಾನವಿಯನ್ನು ಶಾಲೆಗೆ ಸೇರಿಸುವ ಸಮಯ ಬಂದಿತ್ತು.ಇಷ್ಟು ದಿನ ಇಲ್ಲದ ಕೆಲವೊಂದು ನಿಯಮಗಳು ಅವಳಿಗೆ ವಿಚಿತ್ರವೆನಿಸಿದರೂ ಪಾಲಿಸದೆ ಉಪಾಯವಿರಲ್ಲಿಲ್ಲ..ಹೇಗೇಗೋ ಕೂರುವಂತಿಲ್ಲ ಮಂಗತನ ಮಾಡುವಂತಿಲ್ಲ ಹೀಗೆ ಕೆಲವೊಂದು ಶುರುವಾದವು.. ಪ್ರೌಢಾವಸ್ಥೆಗೆ ಬಂದಾಗ ನಿಯಮಗಳು ಇನಷ್ಟು ಹೆಚ್ಚಿದವು.ಹುಡುಗರೊಂದಿಗೆ ಮಾತನಾಡುವಂತಿಲ್ಲ ಆಟವಾಡುವಂತಿಲ್ಲ ಕತ್ತಲೆಗೆ ಮುನ್ನ ಮನೆಗೆ ಬರಬೇಕು ಒಬ್ಬಳೆ ಓಡಾಡುವಂತಿಲ್ಲ ಎಂಬೆಲ್ಲಾ ನಿಯಮಗಳನ್ನು ಹೇರಿದಾಗ ಪ್ರಶ್ನಿಸಿದವಳಿಗೆ ಸರಿಯಾದ ಉತ್ತರ ಸಿಗುತ್ತಿರಲ್ಲಿಲ್ಲ .ಕಾಲೇಜಿಗೆಂದು ಸೇರಿದ ಸಮಯ ಯೌವನದ ಹರೆಯ.ಹೊಸ ಹೊಸ ಕನಸು ಹೊಸ ಪ್ರಪಂಚದಂತೆ ಕಂಡರು ಏನನ್ನು ಮಾತನಾಡುವಂತಿರಲ್ಲಿಲ್ಲ.ಮರ್ಯಾದಿ ತೆಗೆಯುವ ಕೆಲಸ ಮಾಡಬೇಡ ಊರಿನವರ ಬಾಯಿಗೆ ಸಿಕ್ಕಿ ನಮ್ಮನ್ನು ಸಿಲುಕಿಸಬೇಡ ಪ್ರೀತಿ ಪ್ರೇಮ ಎಂಬುದರ ಹಿಂದೆ ಬಿದ್ದು ಜೀವನ ಹಾಳು ಮಾಡಿಕೊಳ್ಳಬೇಡ ಎಂಬ ಅಮ್ಮನ ಹಿತವಚನ ಕೇಳುತ್ತಾ ಡಿಗ್ರಿ ಮುಗಿಸಿದಳು. ಓದು ಮುಗಿಯುತ್ತಿದ್ದಂತೆ ಒಬ್ಬ ವರನನ್ನು ಹುಡುಕಿ ಮದುವೆ ಮಾಡಲಾಯಿತು..

      ಸುಂದರ ಬಾಲ್ಯ ಒತ್ತಡದಲ್ಲಿದ್ದರೂ ಕಳೆದ ಸುಮಧುರ ಯೌವನ ಬದುಕಿನ ಎರಡು ಹಂತವಾಗಿತ್ತು. ಈಗ ಮದುವೆಯಾಗಿ ತನ್ನವರನ್ನು ಬಿಟ್ಟು ಹೊಸ ಮನೆ ಹೊಸ ಜನರನ್ನು ನನ್ನವರೆಂದು ತಿಳಿದು ಹೊಂದಿಕೊಂಡು ಬಾಳುವ ಸಮಯ ಬದುಕಿನ ಮೂರನೆ ಪ್ರಮೂಖ ಹಂತವಾಗಿತ್ತು.ಎಲ್ಲರೊಂದಿಗೆ ಹೊಂದಿಕೊಂಡು 2 ಮಕ್ಕಳ ತಾಯಿಯಾಗಿ ಅತ್ತೆ ಮಾವನ ನೆಚ್ಚಿನ ಸೊಸೆಯಾಗಿ ಗಂಡನಿಗೆ ಮುದ್ದಿನ ಮಡದಿಯಾಗಿ ಅಕ್ಕಪಕ್ಕದ ಮಹಿಳೆಯರಿಗೆ ಪ್ರಿಯ ಗೆಳತಿಯಾಗಿ ಬಂಧು ಬಳಗದವರ ಉಪಚಾರಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವುದರಲ್ಲಿ ಮಕ್ಕಳು ಬೆಳೆದು ಯೌವನ ತಲುಪಿದ್ದರು.

     ಈಗ ತವರಲ್ಲಿ ಅಪ್ಪ ಅಮ್ಮ ಇಲ್ಲ.ಅಣ್ಣ ಅತ್ತಿಗೆಯರದ್ದೇ ಕಾರುಬಾರು.ಮುಂಚಿನ ಹಾಗೆ ಹೋಗಲು ಗಾನವಿಗೂ ಬಿಡುವಿಲ್ಲ.ಆದರೆ ಸಂಬಂಧ ಹಾಳಾಗದಂತೆ ಆಗಾಗ ವಿಚಾರಿಸುತ್ತಿದ್ದಳು.ಮಕ್ಕಳು ಬೆಳೆದು ನಿಂತು ಮದುವೆಯ ಹಂತಕ್ಕೆ ಬಂದಾಗ ಮನದಲಿ ಹೇಳಲಾಗದ ಪುಕು ಪುಕು.ಮಕ್ಕಳ ಮದುವೆಯಾಗುತ್ತಿದಂತೆ ಜೋಡಿ ಹಕ್ಕಿಯಂತಿದ್ದ ಗಾನವಿ ಪತಿಯನ್ನು ಕಳೆದುಕೊಂಡ ಒಂಟಿ ಹಕ್ಕಿಯಾಗಿ ಅವಳ ಜವಾಬ್ದಾರಿ ಮಕ್ಕಳದ್ದಾಯ್ತು.ಈಗ ಅವಳ ಬದುಕಿನ ನಾಲ್ಕನೆ ಹಂತ.ಗಂಡ ಇದ್ದಾಗ ಸಿಗುತ್ತಿದ್ದ ಗೌರವ ಈಗ ಇಲ್ಲ.ಬಾಯಿ ಮುಚ್ಚಿಕೊಂಡು ಬೆನ್ನಿಗೆ ಕಣ್ಣಿಲ್ಲವೆಂಬಂತಿದ್ದರೆ ನೆಮ್ಮದಿಯಾಗಿ ಬದುಕಬಹುದು ಎಂದು ತಿಳಿದಿದ್ದ ಗಾನವಿ ಏನನ್ನೂ ಮಾತನಾಡದೆ ಮೌನವಾಗಿ ನಗುತ್ತಲೆ ಕೊನೆಯುಸಿರೆಳೆದಳು..

    ಬಾಲ್ಯದಲ್ಲಿ ಪ್ರಶ್ನಿಸುತ್ತಿದ್ದವಳು ಪ್ರೌಢಾವಸ್ಥೆಯಲ್ಲಿ ಮೌನವಾದಳು..ಬಾಲ್ಯದ ತುಂಟತನ ಯೌವನದಲ್ಲಿ ಮರೆಯಾಗಿತ್ತು.ಮಕ್ಕಳಾದ ಮೇಲೆ ಜವಾಬ್ದಾರಿ ಹೆಚ್ಚಾಗಿ ಅವಳನ್ನೇ ಮರೆಯುವಂತೆ ಮಾಡಿತು.ಗಾನವಿ ಅವಳಿಗಾಗಿ ಬದುಕುವುದಕ್ಕಿಂತ ಎಲ್ಲರ ನೆಮ್ಮದಿಗಾಗಿ ಬದುಕುತ್ತಾ ಅವಳ ನೆಮ್ಮದಿಯನ್ನು ಕಂಡುಕೊಂಡಿದ್ದಳು.

    ಈಗ ಕಾಲ ಬದಲಾಗಿದೆ.ಎಲ್ಲಾ ಹೆಣ್ಣು ಮಕ್ಕಳು ಗಾನವಿಯಂತಲ್ಲ..ಆಕ್ಷೇಪಿಸಿ ಪ್ರಶ್ನಿಸಿ ವಿರೋಧಿಸಿ ಬದುಕನ್ನು ರೂಪಿಸಿಕೊಂಡವರೂ ಇದ್ದಾರೆ ಹಾಳು ಮಾಡಿಕೊಂಡವರೂ ಇದ್ದಾರೆ.ಆದೇನೆ ಆದರೂ ಈ ನಾಲ್ಕು ಹಂತವನ್ನು ಬದುಕಿನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ದಾಟಲೇಬೇಕು ಅಲ್ಲವೇ ??

      ಬಾಲ್ಯದಲ್ಲಿ ಅಪ್ಪನ ಆಸರೆ

  ಪ್ರೌಢಾವಸ್ಥೆಯಲ್ಲಿ ಒಡಹುಟ್ಟಿದವನ ಆಸರೆ

     ಯೌವನದಲ್ಲಿ ಗಂಡನ ಆಸರೆ

      ಮುಪ್ಪಿನಲ್ಲಿ ಮಕ್ಕಳ ಆಸರೆ

     ಇದು ಪ್ರಕೃತಿ ಸಹಜವಾಗಿ   

      ನಡೆಯುತಿರುವುದಲ್ಲವೇ....!!

       


Rate this content
Log in

Similar kannada story from Classics