Harish Bedre

Action Classics Others

4  

Harish Bedre

Action Classics Others

ಮುಕ್ತಿ

ಮುಕ್ತಿ

5 mins
414


                


ಮುಂಜಾನೆ ಎದ್ದ ಕ್ಷಣದಿಂದಲೇ ಮನಸ್ಸಿಗೆ ಸಮಾಧಾನ ಇಲ್ಲವಾಗಿ, ಕಾಟಾಚಾರಕ್ಕೆ ಮುಖ ತೊಳೆದಂತೆ ಮಾಡಿ ಸೀದಾ ಅಡುಗೆ ಮನೆಗೆ ಬಂದು ಕಾಫಿ ಮಾಡಿದ ಕ್ರಿಷ್ಣ. ಬಿಸಿ ಇದ್ದಾಗಲೇ ಕುಡಿಯಲೆಂದು ಇನ್ನೂ ಮಲಗಿದ್ದ ತನ್ನ ತಾಯಿಯನ್ನು ಏಳಿಸಲು ಪ್ರಯತ್ನಿಸಿದ. ಅವರು ಸ್ವಲ್ಪ ಕಣ್ಣು ತೆರೆದಂತೆ ಮಾಡಿದರೆ ಹೊರತೂ ಎಚ್ಚರವಾಗಲಿಲ್ಲ. ಇವನೂ ಸುಮ್ಮನಾಗಿ , ಕಾಫಿಯನ್ನು ಅಡುಗೆ ಮನೆಯಲ್ಲಿ ಮುಚ್ಚಿಟ್ಟು ಅಂದಿನ ತಿಂಡಿ ಮಾಡಲು ಆರಂಭಿಸಿದ. ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದನೇ ಹೊರತು ತಾನು ಮಾಡುತ್ತಿದ್ದ ಕೆಲಸದ ಬಗ್ಗೆ ಗಮನ ಇರಲಿಲ್ಲ. ಒಂದೆರಡು ಬಾರಿ ಹೆಂಡತಿ ಬಂದು ಮಾತನಾಡಿಸಿದರೂ ಅದು ಅವನ ಗಮನಕ್ಕೆ ಬಂದಿರಲಿಲ್ಲ. ತಿಂಡಿ ಸಿದ್ಧವಾದ ಮೇಲೆ ಮತ್ತೆ ತಾಯಿಯನ್ನು ಏಳಿಸಲು ನೋಡಿದ, ಆಗಲೂ ಅವರು ಎಚ್ಚರವಾಗಲಿಲ್ಧ. ಕ್ರಿಷ್ಣನಿಗೆ ಏನೂ ಮಾಡಲು ತೋಚದೆ ಅಲ್ಲೇ ಹತ್ತು ನಿಮಿಷ ಕುಳಿತ್ತಿದ್ದ. ನಂತರ ಚಪ್ಪಲಿ ಹಾಕಿಕೊಂಡು ಹೊರ ನಡೆಯತೊಡಗಿದ. 


ಕ್ರಿಷ್ಣನಿಗೆ ಮೊದಲಿನಿಂದಲೂ ಒಂದು ಅಭ್ಯಾಸವಿದೆ. ಏನೆಂದರೆ ಅವನಿಗೆ ಖುಷಿಯಾದಾಗ ಅಥವಾ ತೀರಾ ಬೇಸರವಾದಾಗ ಮನೆಯ ಹತ್ತಿರದಲ್ಲೇ ಇದ್ದ ಗಣಪತಿ ದೇವಸ್ಥಾನಕ್ಕೆ ಬಂದು ಮನಸ್ಸಿಗೆ ಸಮಾಧಾನ ಆಗುವವರೆಗೂ ಕುಳಿತು ಹೋಗುತ್ತಿದ್ದ. ಇಂದು ಕೂಡ ಅವನ ಅರಿವಿಗೆ ಬಾರದೆ ಅವನು ಆ ದೇವಸ್ಥಾನಕ್ಕೆ ಬಂದಿದ್ದ. ರೂಢಿಯಂತೆ ದೇವರಿಗೆ ನಮಸ್ಕಾರ ಹಾಕಿ ಹೊರಗಡೆ ಆಲದಮರದ ಕೆಳಗೆ ಬಂದು ಕುಳಿತ.


ಕ್ರಿಷ್ಣ ಬೆಂಗಳೂರಿನ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಮಾಸ್ತರನಾಗಿ ಕೆಲಸ ಮಾಡುತ್ತಿದ್ದ. ತಂದೆ ಕೂಡಿಟ್ಟಿದ್ದ ಹಣದಲ್ಲಿ ಸಣ್ಣ ಮನೆಯೊಂದನ್ನು ಭೋಗ್ಯಕ್ಕೆ ಪಡೆದು ಅದರಲ್ಲಿ ವಾಸವಾಗಿದ್ದ. ಬೆಂಗಳೂರಿಗೆ ಬಂದ ಹೊಸದರಲ್ಲೇ ತಂದೆ ಕಾಲವಾಗಿದ್ದರು. ನಂತರ ತಾಯಿ ಮಗ ಇಬ್ಬರೇ ಆ ಮನೆಯಲ್ಲಿ ಇದ್ದರು. ಮದುವೆಗಾಗಿ ಹತ್ತಾರು ಕಡೆ ಹೆಣ್ಣು ನೋಡಿದರೂ ಯಾವುದೂ ಆಗಿಬಂದಿರಲಿಲ್ಲ. ಎಲ್ಲರೂ ಹುಡುಗ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದನೆ ಎಂದೊಡನೆ, ಏನಾದರೂ ಆಸ್ತಿ ಇದೆಯಾ ಎಂದು ಕೇಳುತ್ತಿದ್ದರು. ಇಲ್ಲ ಎಂದೋಡನೆ ಕೆಲವರು ನೇರವಾಗಿ ಮತ್ತೆ ಕೆಲವರು ನಯವಾಗಿ ಸಂಬಂಧ ಬೇಡ ಎಂದಿದ್ದರು. ಇದರಿಂದ ಬೇಸತ್ತ ಕ್ರಿಷ್ಣ ತನಗೆ ಮದುವೆಯೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಾಗ ಪರಿಚಯದವರೊಬ್ಬರಿಂದ , ಮದುವೆಯಾದ ಎರಡೇ ತಿಂಗಳಿಗೆ ಗಂಡಿನ ಮನೆಯವರ ಕಿರುಕುಳ ತಾಳಲಾರದೇ ತವರಿಗೆ ಬಂದು ವಿಚ್ಚೇದನ ಪಡೆದ ಹುಡುಗಿಯ ವಿಷಯ ತಿಳಿಯಿತು. ಅಲ್ಲದೆ ಹುಡುಗಿಯ ಮನೆಯವರು ತಕ್ಕಮಟ್ಟಿಗೆ ಅನುಕೂಲ ಇರುವರಾಗಿದ್ದು, ಕಷ್ಟಕ್ಕೆ ಕೈ ಹಿಡಿಯುತ್ತಾರೆ ಎಂದೂ ತಿಳಿಯಿತು. 

ಈ ವಿಷಯ ಕಿವಿಗೆ ಬಿದ್ದ ಒಂದಷ್ಟು ದಿನ ತಾಯಿ ಮಗ ಇಬ್ಬರೂ ಏನೂ ಮಾತನಾಡಲಿಲ್ಲ. ಅದೊಂದು ದಿನ ತಾಯಿಯೇ, ಹೋಗಿ ಹುಡುಗಿಯನ್ನು ನೋಡಿ ಬರೋಣ, ಇಷ್ಟವಾದರೆ ಮುಂದಿನ ಬಗ್ಗೆ ಯೋಚಿಸೋಣ ಎಂದರು. ಇದು ಕ್ರಿಷ್ಣನಿಗೂ ಇಷ್ಟವಾಗಿ, ಹೋಗಿ ಹುಡುಗಿಯನ್ನು ನೋಡಿ ಬಂದರು. ಹುಡುಗಿ, ಹುಡುಗಿಯ ಕಡೆಯವರು ಇಬ್ಬರಿಗೂ ಇಷ್ಟವಾಗಿ ಮದುವೆಯೂ ಆಯಿತು.  

ಮದುವೆಯಾದ ಸ್ವಲ್ಪ ದಿನ, ಮನೆ ನಂದಾಗೊಕುಲದಂತ್ತಿತ್ತು. ನಂತರ ಎಲ್ಲರ ಮನೆಯಂತೆ ಇಲ್ಲೂ ಸಣ್ಣದಾಗಿ ಸಮಸ್ಯೆಗಳು ಆರಂಭವಾದವು. ಕ್ರಿಷ್ಣನ ತಾಯಿ ಒಳ್ಳೆಯವರೆ ಆದರೆ ಅಡುಗೆಮನೆ ಮಾತ್ರ ತನ್ನ ಒಡೆತನದಲ್ಲೇ ಇರಬೇಕು, ಅಡುಗೆಯನ್ನು ತಾವೇ ಮಾಡಬೇಕು, ಮಗನಿಗೆ ತಾವೇ ಬಡಿಸಬೇಕು ಎಂದು ಬಯಸುತ್ತಿದ್ದರು. ಆದರೆ ಸೊಸೆ, ತನಗೆ ಬಾಳು ನೀಡಿದ ಹಿರಿ ಜೀವ ಏಕೆ ಕಷ್ಟಪಡಬೇಕು. ಹೇಳಿಕೊಟ್ಟರೆ ಅವರ ಇಷ್ಟದಂತೆಯೇ  ಮಾಡಿ ತಾಯಿ ಮಗ ಇಬ್ಬರಿಗೂ ಕೂರಿಸಿ ಬಡಿಸಬಹುದಲ್ಲ ಎಂದು ಆಸೆ ಪಡುತ್ತಿದ್ದಳು. ತನಗೆ ಮರುಬಾಳು ಕೊಟ್ಟ ಮನೆಯವರ ಮನಸ್ಸನ್ನು ಹೇಗಾದರೂ ಮಾಡಿ ಗೆಲ್ಲಬೇಕು ಎಂಬ ಏಕೈಕ ಕಾರಣದಿಂದ ಬೆಳಿಗ್ಗೆ ಬೇಗ ಎದ್ದು ಅಥವಾ ಅತ್ತೆ ಹೊರಹೋದಾಗ ಅವರು ಬರುವ ಮುಂಚೆಯೇ ತಾಯಿ ಮಗನಿಗೆ ಇಷ್ಟವಾಗುವ ಅಡಿಗೆ ಮಾಡಿದಾಗ ಗಂಡ ಇಷ್ಟಪಟ್ಟು ತಿಂದರೂ, ಅತ್ತೆ ಮಾತ್ರ ತನಗೆ ಹಸಿವಿಲ್ಲ ಎಂದೋ, ಹೊರಗಡೆ ಹೋದಾಗ ಅಲ್ಲಿ ಹೊಟ್ಟೆ ತುಂಬಾ ಊಟ ಮಾಡಿರುವೆ ಎಂದು ಹೇಳಿ, ತಿನ್ನುತ್ತಿರಲಿಲ್ಲ. ಒಂದೆರಡು ಬಾರಿ ಬಲವಂತಕ್ಕೆ ತಿಂದ ಶಾಸ್ತ್ರ ಮಾಡಿ, ಇದನ್ನು ಹೀಗಲ್ಲ ಮಾಡೋದು. ಅದಕ್ಕೆ ಅಡಿಗೆ ನಾನೇ ಮಾಡೋದು ಎಂದಿದ್ದರು. 

ಅದೊಂದು ದಿನ ಸೊಸೆಯ ತಂದೆ ತಾಯಿ ಮನೆಗೆ ಬಂದಾಗ, ಹಿಂದಿನ ದಿನ ಇಂತಹುದೇ ಘಟನೆ ನಡೆದಿತ್ತು. ಅದನ್ನು ಮನಸ್ಸಲ್ಲಿ ಇಟ್ಟುಕೊಂಡಿದ್ದ ಅತ್ತೆ, ಜೋರು ಧ್ವನಿಯಲ್ಲಿ, ನಿಮ್ಮ ಮಗಳಿಗೆ ಏನು ಸಂಸ್ಕಾರ ಹೇಳಿಕೊಟ್ಟಿದ್ದೀರಿ? ಹಿರಿಯರ ಮಾತಿಗೆ ಅವಳಲ್ಲಿ ಸ್ವಲ್ಪವೂ ಬೆಲೆ ಇಲ್ಲ.... ಮುಂತಾಗಿ ದೂರಿದರು. ಇದನ್ನು ಸೊಸೆ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಮನೆಗೆ ಬಂದ ತಂದೆ ತಾಯಿಯರ ಎದುರಿಗೆ ಅವಮಾನ ಆದಂತಾಯಿತಲ್ಲದೆ, ತನ್ನಿಂದ ಅವರಿಗೂ ಕೆಟ್ಟ ಹೆಸರು ಬರುವಂತಾಯಿತು ಎಂದು ಒಳಗೇ ಬಹಳ ನೊಂದುಕೊಂಡಳು. ಅವರು ಮಗಳ ಪರವಾಗಿ ಕ್ಷಮೆ ಕೇಳಿದ್ದಲ್ಲದೇ, ಅವರೆದುರೇ ಮಗಳಿಗೂ ಬುದ್ಧಿ ಹೇಳಿ ಹೊರಟರು.

ಸೊಸೆ ಏನೇ ಯೋಚನೆ ಮಾಡಿದರೂ, ತಾನು ಬಾಳಲು ಬಂದ ಮನೆಯವರ ಮನಸ್ಸು ಗೆಲ್ಲಲು, ಅವರ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡಲು ಪ್ರಯತ್ನಿಸಿದ್ದಳೆ ಹೊರತೂ, ತಂದೆ ತಾಯಿಯರ ಎದುರು ಸಂಸ್ಕಾರದ ಕುರಿತು ಮಾತನಾಡುವಷ್ಟು ಕೆಟ್ಟದಾಗಿ ಎಂದೂ ನಡೆದುಕೊಂಡಿರಲಿಲ್ಲ. ಸಂಜೆ ಗಂಡ ಮನೆಗೆ ಬಂದಾಗ ಇದನ್ನೇ ಕೇಳಿದರೆ, ಶಾಲೆಯಲ್ಲಿ ಆಗಿದ್ದ ಕಿರಿಕಿರಿಯಿಂದಾಗಿ ಅವನೂ, ನಿನಗೆ ಎಷ್ಟು ಸಾರಿ ಹೇಳಬೇಕು, ಅಮ್ಮ ಹೇಳಿದಂತೆ ಕೇಳು ಎಂದು, ಈಗ ಅನುಭವಿಸು ಎಂದುಬಿಟ್ಟ. ಇದು ಅವಳ ಮನಸ್ಸಿನಲ್ಲಿ ಅಳಿಸಲಾಗದ ಗಾಯದ ಗುರುತಾಗಿ ಉಳಿದುಬಿಟ್ಟಿತು.


ನಾಲ್ಕು ದಿನ ತೀವ್ರ ಬೇಸರದಲ್ಲಿದ್ದ ಸೊಸೆ, ಹೇಳಿದ್ದು ಅತ್ತೆ ತಾನೇ ಹೋಗಲಿ ಬಿಡು ಎಂದುಕೊಂಡು ಎಂದಿನಂತೆ ಇರಲು ಪ್ರಯತ್ನಿಸಿದಳು. ಆದರೆ ಅತ್ತೆಯ ಕೊಂಕು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಹೋಯಿತು. ಒಂದೆರಡು ಬಾರಿ ಕ್ರಿಷ್ಣ, ಅಮ್ಮ ಇದೆಲ್ಲ ಏನು ಎಂದಾಗ, ಹೆಂಡತಿಯನ್ನು ವಹಿಸಿಕೊಂಡು ಬರಬೇಡ ಸುಮ್ಮನಿರು ಎಂದು ಬಾಯಿ ಮುಚ್ಚಿಸಿದ್ದರು. ಇವನೂ ಮತ್ತೆನಾದರು ಹೇಳಲು ಹೋದರೆ ವಿಕೋಪಕ್ಕೆ ಹೋಗಬಹುದೆಂದು ಸುಮ್ಮನಾದ. ಅದೊಂದು ದಿನ ಮಧ್ಯಾಹ್ನ ಮದುವೆಗೆಂದು ಕರೆಯಲು ಹತ್ತಿರದ ಸಂಬಂಧಿಗಳು ಬಂದಿದ್ದರು. ಅತ್ತೆಯೇ ಹೇಳಿದರೆಂದು ಅವರಿಗೆ ಕುಡಿಯಲು ಮಜ್ಜಿಗೆ ತಂದುಕೊಟ್ಟಳು ಸೊಸೆ. ಅದಕ್ಕೆ ಒಂದು ಹರಳು ಉಪ್ಪು ಕಮ್ಮಿ ಇತ್ತು ಅಷ್ಟೆ. ಅದನ್ನೇ ದೊಡ್ಡದು ಮಾಡಿದ ಅತ್ತೆ, ಬಂದವರ ಎದುರು, ನೋಡಿ ಕುಡಿಯುವ ಮಜ್ಜಿಗೆಗೆ ಎಷ್ಟು ಉಪ್ಪು ಹಾಕಬೇಕು ಎಂದು ಹೇಳಿಕೊಟ್ಟಿಲ್ಲ ಇವರಮ್ಮ. ಪ್ರಾರಬ್ಧ ಹೋಗಿ ಹೋಗಿ ನಮಗೇ ಗಂಟು ಬಿದ್ದಿದೆ ಎಂದರು. ಈ ಮಾತು ಕೇಳುತ್ತಿದ್ದಂತೆ ಸೊಸೆ, ಹೌದು ನಾನು ಪ್ರಾರಬ್ಧನೇ, ನನ್ನಮ್ಮ ನನಗೆ ಏನೂ ಹೇಳಿಕೊಟ್ಟಿಲ್ಲ. ನಿಮಗೆ ನಿಮ್ಮ ಅಮ್ಮ, ಮನೆ ಸೊಸೆಯನ್ನು ಕಂಡವರ ಎದುರು ಹೀಯಾಳಿಸುವುದನ್ನು ಹೇಳಿಕೊಟ್ಟಿದ್ದಾರ? ಸಾಯೋ ವಯಸ್ಸು ಬಂದರೂ ಬುದ್ಧಿ ಮಾತ್ರ ಇಲ್ಲ. ನಿಮ್ಮಂತವರು ಏಕೆ ಬದುಕಬೇಕು ಥೂ... ಎಂದು ಆ ಕ್ಷಣದವರೆಗೆ ಮನದಲ್ಲಿ ತುಂಬಿಕೊಂಡಿದ್ದ ನೋವನ್ನು ಈ ರೀತಿ ಹೊರಹಾಕಿದಳು.

ಮದುವೆಯಾಗಿ ಬಂದ ದಿನದಿಂದ ಇಂದಿನವರೆಗೂ ಒಂದೇ ಒಂದು ಅಡ್ಡ ಮಾತನಾಡದ ಸೊಸೆ ತಿರುಗಿಸಿ ಹೇಳಿದ್ದು, ಅತ್ತೆಗೆ ಬರಸಿಡಿಲು ಬಡಿದಂತಾಯಿತು. ಆ ದಿನದಿಂದ ಅತ್ತೆ ಸೊಸೆಯರಲ್ಲಿ ಮಾತು ನಿಂತುಹೋಯಿತು. ಜೊತೆಗೆ ಸೊಸೆ ಅಡಿಗೆ ಮಾಡುವ ಸಾಹಸ ಬಿಟ್ಟು ಬಿಟ್ಟಳು. ಮೊದಲೆರಡು ದಿನ ಕ್ರಿಷ್ಣ ತನ್ನ ಶಾಲೆಯ ಕೆಲಸಗಳ ಒತ್ತಡದ ನಡುವೆ ಮನೆಯ ಕಡೆ ಗಮನ ಕೊಡಲಿಲ್ಲ. ನಂತರ ಮನೆಯಲ್ಲಿ ಏನೋ ನಡೆದಿದೆ ಎಂದು ಅರಿವಿಗೆ ಬಂದರೂ ತಾನೇ ಮೇಲೆ ಬಿದ್ದು ತಾಯಿಯ ಹತ್ತಿರ ಅಥವಾ ಹೆಂಡತಿ ಬಳಿ ಏನನ್ನು ಕೇಳಲಿಲ್ಲ. ಅವರಿಬ್ಬರೂ ಇವನ ಬಳಿ ಹೇಳಲಿಲ್ಲ. ಈ ಸಮಯದಲ್ಲಿ ಕ್ರಿಷ್ಣ ತಾನೇ ಮಾತನಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತೇನೋ ಆದರೆ ಅವನು, ತನ್ನಷ್ಟಕ್ಕೆ ತಾನೇ ಅದು ಬಗೆಹರಿಯಲಿ ಎಂದು ಸುಮ್ಮನಾದದ್ದು ಅತ್ತೆ ಸೊಸೆಯರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿತು.

ತಾಯಿಯ ಕೈಯಲ್ಲಿ ಅಡುಗೆ ಕೆಲಸ ಮಾಡಲು ಸಾಧ್ಯವಾಗದೆ ನೆಲ ಕಚ್ಚಿದಾಗ ಕ್ರಿಷ್ಣ, ಹೆಂಡತಿಗೆ ಅಡುಗೆ ಮಾಡಲು ಹೇಳಿದ. ಆದರೆ ಅವಳು ಕಡ್ಡಿ ಮುರಿದ ಹಾಗೆ ನಿಮ್ಮ ತಾಯಿ ಇರುವವರೆಗೆ ನಾನು ಅಡಿಗೆ ಮಾಡಲ್ಲ. ಬೇಕಿದ್ದರೆ ನೀವು ಮಾಡಿ ಸಹಾಯ ಮಾಡುವೆ ಎಂದು ಬಿಟ್ಟಳು. ಅಂದಿನಿಂದ ಕ್ರಿಷ್ಣನೇ ಅಡುಗೆ ಮಾಡುವಂತಾಯಿತು.

ದಿನದಿನಕ್ಕೂ ತಾಯಿಯ ಆರೋಗ್ಯ ಹದಗೆಡತೊಡಗಿತು. ಎಲ್ಲಿ ಯಾವ ಡಾಕ್ಟರಿಗೆ ತೋರಿಸಿದರೂ, ವಯಸ್ಸಾದ ಮೇಲೆ ಇದೆಲ್ಲಾ ಮಾಮೂಲು ಏನೂ ಮಾಡಲು ಆಗುವುದಿಲ್ಲ. ಅವರು ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ. ತುರ್ತು ಸಂದರ್ಭದಲ್ಲಿ ಇಲ್ಲಿಗೆ ಕರೆತಂದರೆ ಸಾಕು ಎಂದು ಮನೆಗೆ ಕಳುಹಿಸುತ್ತಿದ್ದರು.

 ಕಳೆದ ಹತ್ತು ದಿನಗಳಿಂದ ತಾಯಿಯ ಪರಿಸ್ಥಿತಿ ಗಂಭೀರವಾಗಿತ್ತು. ಮೊದಲು ಊಟ ಸೇರುತ್ತಿಲ್ಲ ಅಂದರು ನಂತರ ನೀರು ಕುಡಿಯಲು ಬೇಡ ಅನ್ನತೊಡಗಿದರು. ಎಲ್ಲಾ ಮಲಗಿದ ಜಾಗದಲ್ಲೇ ಆಗುತ್ತಿತ್ತು. ಕೊವಿಡ್ ಕಾರಣ ಶಾಲೆಗೆ ರಜೆ ಇದ್ದಿದ್ದರಿಂದ ಕ್ರಿಷ್ಣನಿಗೆ ಮನೆಯಲ್ಲೇ ಇದ್ದು ತಾಯಿಯ ಸೇವೆ ಮಾಡಲು ಅನುಕೂಲವಾಗಿತ್ತು. ಸೊಸೆಯೂ ಅಡುಗೆ ಮಾಡುವುದು ಒಂದು ಬಿಟ್ಟು ಉಳಿದಂತೆ ಅತ್ತೆಯ ಸೇವೆ ಮಾಡುತ್ತಿದ್ದಳು. ಬೇಕು ಬೇಡಗಳನ್ನು ವಿಚಾರಿಸುತ್ತಿದ್ದಳು‌ 


 ತಾಯಿಯನ್ನು ಆಸ್ಪತ್ರೆಗೆ ಸೇರಿಸೋಣ ಎಂದು ಪ್ರಯತ್ನಿಸಿದರೆ ಅದು ಸಾಧ್ಯವಾಗಲಿಲ್ಲ. ಪುಣ್ಯಕ್ಕೆ ಪರಿಚಯದ ಡಾಕ್ಟರ್ ಮನೆಗೇ ಬಂದು ನೋಡಿ ಬೇಕಾದ ಮೆಡಿಸಿನ್ ಕೊಟ್ಟು ಹೋಗಿದ್ದರು. ಅದು ಅಂತಹ ಪರಿಣಾಮ ಬೀರಿದಂತೆ ಕಾಣಲಿಲ್ಲ.

ಹಿಂದಿನ ದಿನದಿಂದ ಸಂಪೂರ್ಣ ಮಾತು ನಿಂತುಹೋಗಿ ಅಪರೂಪಕ್ಕೆ ಕಣ್ಣು ಬಿಡುತ್ತಿದ್ದರು. ಒಂದು ಅಗಳು ಅನ್ನವಾಗಲಿ, ಗುಟುಕು ನೀರಾಗಲಿ ಕುಡಿಯಲಿಲ್ಲ. ಡಾಕ್ಟರಿಗೆ ಕರೆಮಾಡಿ ಆಸ್ಪತ್ರೆಗೆ ಕರೆದುಕೊಂಡು ಬರುವೆ ಎಂದರೆ, ಬೇಡ ನಾನೇ ಬರುವೆ. ಇಲ್ಲಿ ಸೇರಿಸಬೇಕು ಎಂದರೆ ಮೊದಲು ಕೊವಿಡ್ ಟೆಸ್ಟ್ ಆಗಬೇಕು. ಅದು ಪಾಸಿಟಿವ್ ಬಂದು ಹೆಚ್ಚುಕಮ್ಮಿಯಾದರೆ ಬಾಡಿ ಕೊಡುವುದಿಲ್ಲ. ಹಾಗಾಗಿ ಮನೆಯಲ್ಲೇ ಇರಲಿ ಎಂದು ಬಂದು ನೋಡಿದರು. ಪರೀಕ್ಷೆ ಮಾಡಿದ ನಂತರ, ಮನಸ್ಸು ಗಟ್ಟಿ ಮಾಡಿಕೊಳ್ಳಿ, ನಿಮ್ಮ ತಾಯಿಯ ಆಯಸ್ಸು ಒಂದೆರಡು ದಿನಗಳಲ್ಲಿ ಮುಗಿದ ಹಾಗೆ. ತಿಳಿಸುವವರಿಗೆ ತಿಳಿಸಿಬಿಡಿ ಎಂದರು. 

ಕ್ರಿಷ್ಣನೂ ಇದನ್ನು ಊಹಿಸಿದ್ದ, ಡಾಕ್ಟರ್ ಅದನ್ನೇ ಹೇಳಿದೊಡನೆ ಕುಗ್ಗಿಹೋದ. ಎಷ್ಟೆಂದರೂ ಜನ್ಮಕೊಟ್ಟ ತಾಯಿ, ಹೇಗೇ ಇದ್ದರೂ ಇರಲಿ ಎಂದೆ ಮನಸ್ಸು ಬಯಸುತ್ತದೆ.

ತನ್ನ ತಾಯಿ ಯಾವುದೇ ಕ್ಷಣದಲ್ಲಿ ಶಾಶ್ವತವಾಗಿ ಬಿಟ್ಟು ಹೋಗಬಹುದು ಎನ್ನುವ ವಿಚಾರ ಅವನಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣವಾಗಿ ರಾತ್ರಿ ಸರಿಯಾಗಿ ನಿದ್ದೆಯನ್ನು ಮಾಡಿರಲಿಲ್ಲ. ಬೆಳಿಗ್ಗೆ ಎದ್ದಾಗ ಅದೇ ವಿಚಾರವಾಗಿ ಅವನಿಗೆ ಸಮಾಧಾನ ಇರಲಿಲ್ಲ. ದೇವರ ಬಳಿ, ಅಮ್ಮನಿಗೆ ಮತ್ತಷ್ಟು ದಿನ ಆಯಸ್ಸು ಕೊಡು. ಅವರು ಚೆನ್ನಾಗಿ ತಿಂದುಂಡು, ಎಲ್ಲರ ಬಳಿ ಮಾತನಾಡುತ್ತಾ ಯಾವುದೇ ನೋವಿಲ್ಲದೆ ಕಣ್ಣು ಮುಚ್ಚುವಂತಾಗಲಿ ಎಂದು ಮನಸಾರೆ ಬೇಡಿಕೊಂಡ. 

ಎಷ್ಟು ಹೊತ್ತು ಅಲ್ಲಿ ಕುಳಿತಿದ್ದನೋ ಅವನಿಗೇ ಗೊತ್ತಿಲ್ಲ. ಅವನು ಮನೆಗೆ ಬಂದಾಗ, ತಾಯಿ ಎದುಸಿರು ಬಿಡುತ್ತಿದ್ದರು. ಪಕ್ಕದಲ್ಲಿ ಕುಳಿತಿದ್ದ ಸೊಸೆ, ಅತ್ತೆ ನಿಮ್ಮ ಮಗ ಬಂದ ನೋಡಿ ಎಂದಾಗ ಸರಿಯಾಗಿ ಕಣ್ಣುಬಿಟ್ಟು ನೋಡಿ, ಕೈಯಿಂದ ಹತ್ತಿರ ಬಾ ಎನ್ನುವಂತೆ ಸನ್ನೆ ಮಾಡಿದರು. ಇವನು ಹತ್ತಿರ ಹೋಗಿ ಅಳುತ್ತಾ ಏನಮ್ಮಾ ಎಂದಾಗ, ಅವರು ಕಷ್ಟಪಟ್ಟು ಕ್ರಿಷ್ಣ ಎಂದು ನಂತರ ನೀರು ಕುಡಿಸುವಂತೆ ಸನ್ನೆ ಮಾಡಿದರು. ತಕ್ಷಣ ಸೊಸೆ ಹೋಗಿ ನೀರು ತಂದಳು. ಒಂದೆರಡು ಗುಟುಕು ಅವನ ಕೈಯಿಂದ ಕುಡಿದ ಅವರು ಹಾಗೆ ಕಣ್ಣು ಮುಚ್ಚಿದರು. ಅವರ ಮುಖದಲ್ಲಿ ನೆಮ್ಮದಿ ಎದ್ದು ಕಾಣುತ್ತಿತ್ತು.



Rate this content
Log in

Similar kannada story from Action