ಮಗುವಾಯಿತು ಸ್ಪೂರ್ತಿ
ಮಗುವಾಯಿತು ಸ್ಪೂರ್ತಿ
"ನಿಶು..ಏಳು ನಿಶು ಮಾತಾಡು ನಿಶು.. ಪ್ಲೀಸ್ ಕಣೋ ಏಳೋ..ನಂಗೆ ಭಯ ಆಗ್ತಿದೆ..ಎದ್ದೇಳೋ..ನನ್ನ ಒಂಟಿ ಮಾಡಿ ಹೋಗ್ಬೇಡ ನಿಶು..ನೀನಿಲ್ದೆ ನಂಗೆ ಇರೋಕ್ ಆಗಲ್ಲ " ಎಂದು ಒಂದೇ ಸಮನೆ ನಿಶಾಂತ್ ಶವದ ಮುಂದೆ ಅಳುತ್ತಾ ಕೂಗಾಡುತ್ತಿದ್ದ ಶ್ರೇಷ್ಠ ಜ್ಞಾನ ತಪ್ಪಿ ಬಿದ್ದಳು..
ಮದುವೆಯಾಗಿ ಎರಡು ವರುಷ ಕಳೆದಿತ್ತು..4 ವರುಷ ಪ್ರೇಮಿಸಿ ಎರಡು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು.. ಶ್ರೇಷ್ಠ ಮನೆಯಲಿ ಮೊದಲು ಒಪ್ಪದ್ದಿದ್ದರು ನಂತರ ಮದುವೆಗೆ ಹಸಿರು ನಿಶಾನೆ ತೋರಿದರು..
ನಿಶಾಂತ್ ಗೆ ಮೊದಲಿನಿಂದಲು ಟ್ರೆಕ್ಕಿಂಗ್ ಎಂದರೆ ಹುಚ್ಚು..ಅವನ ಮನೆಯಲಿ ಆಕ್ಷೇಪವಿದ್ದರು ಸುಳ್ಳು ಹೇಳಿ ಟ್ರೆಕ್ಕಿಂಗ್ ಹೋಗಿ ಬಂದ ಮೇಲೆ ನಿಜಾಂಶ ತಿಳಿಸುತ್ತಿದ್ದ..ಮದುವೆಯ ನಂತರ ಸರಿ ಹೋಗಬಹುದು ಎಂಬ ನಿರೀಕ್ಷೆಯಲ್ಲಿ ನಿಶಾಂತ್ ನ ಹೆತ್ತವರಿದ್ದರು..ಪ್ರೀತಿಸಿ ಮದುವೆಯಾದವನು ಬದಲಾಗುತ್ತಾನೆ ಎಂದು ಭಾವಿಸಿದ್ದರು..ಆದರೆ ವಿಧಿ ಲಿಖಿತ ಬೇರೆಯೇ ಇತ್ತು..
ಹೆಂಡತಿಗೂ ಸುಳ್ಳು ಹೇಳಿ ಹೋಗುವ ಅಭ್ಯಾಸ ಮಾಡಿಕೊಂಡಿದ್ದ.. ವಿಷಯ ತಿಳಿದು ಶ್ರೇಷ್ಠ ಕೆಂಡಾಮಂಡಲವಾಗಿ ಇನ್ನೊಂದು ಸಲ ಸುಳ್ಳು ಹೇಳಿ ಹೋಗದಂತೆ ಆಣೆ ಮಾಡಿಸಿಕೊಂಡಿದ್ದಳು..
"ಮೇಡಂ ಕಣ್ಣು ಬಿಡಿ ..ಇಲ್ಲಿ ನೋಡಿ" ಎಂದು ಯಾರೋ ಕರೆದಂತೆ ಶ್ರೇಷ್ಠಗೆ ಭಾಸವಾಗುತ್ತಿತ್ತು..ಕಣ್ಣು ತೆರೆಯಲು ಶಕ್ತಿ ಸಾಲದೆಂಬಂತೆ ಒದ್ದಾಡುತ್ತಿದ್ದಳು..ಮನದಲಿ ದುಗುಡ..ಕಣ್ಣು ತೆರೆದವಳು "ನಿಶಾಂತ್ ಎಲ್ಲಿ..ನಾನೆಲ್ಲಿದಿನಿ..ಅಮ್ಮ ನಾವು ಎಲ್ಲಿದ್ದೇವೆ ಎಂದು ಅಮ್ಮನನ್ನು ಕಂಡು ಅಳಲಾರಂಭಿಸಿದಳು...ತಾಯಿ ಕರುಳಿಗೆ ಮಗಳು ಸಂಕಟ ತಡೆಯಲಾಗಲಿಲ್ಲ..ಬರುತ್ತಿರುವ ಅಳು ನುಂಗಿ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದರು..ಕೋಣಿಯಲ್ಲಿ ಮಲಗಿದವಳಿಗೆ ಎದುರು ಹಾಲ್ ನಲ್ಲಿ ತುಂಬಾ ಜನ ಸೇರಿರುವುದು ಕಾಣಿಸಿತು..
"ನಿಶು..ನಿಶು..ಎಂದು ಎದ್ದು ಓಡಲು ಹೊರಟವಳನ್ನ ತಡೆದ ವೈದ್ಯರು "ಮೇಡಂ ಕಾಮ್ ಡೌನ್..ಯು ಆರ್ ಕ್ಯಾರಿಯಿಂಗ್" ಎಂದ ಮಾತು ಬಿಸಿ ಕಾವಲಿಯ ಮೇಲೆ ನೀರು ಸುರಿದಾಗ ಕೇಳುವ ಶಬ್ದದಂತೆ ಭಾಸವಾಯಿತು..ಕುಸಿದು ಕುಳಿತಳು...
" ಶ್ರೇಷ್ಠ ನಂಗೊತ್ತು ನಿಂಗೆ ನಾನು ಟ್ರೆಕ್ಕಿಂಗ್ ಹೋಗೋದು ಇಷ್ಟವಿಲ್ಲ ಅಂತ..ಪ್ಲೀಸ್ ಡಿಯರ್ ಇದೊಂದು ಸಲ ಫ್ರೆಂಡ್ಸ್ ಜೊತೆ ಹೋಗ್ತೀನಿ...ಮಕ್ಕಳಾದ ಮೇಲೆ ಹೇಗು ಹೋಗೋಕ್ಕೆ ಆಗಲ್ಲ" ಎಂದು ಕಾಡಿ ಬೇಡಿ ಒಪ್ಪಿಸಿ ಒಂದು ದಿನದಲ್ಲಿ ವಾಪಸ್ ಬರುವುದಾಗಿ ಹೇಳಿ ಹೊರಟವ ಬಂದಿದ್ದು ಶವವಾಗಿ...
" ನೋ ...ನೋ" ಎನ್ನುತ್ತಾ ಎದ್ದು ಓಡಿ ಹೋಗಿ ನಿಶಾಂತ್ ಶವದ ಬಳಿ ಬಂದು " ನಿಶು ನೋಡು ನಿಶು ನಿನ್ನಾಸೆ ಈಡೇರಿದೆ ..ನೀನು ಅಪ್ಪ ಆಗ್ತಿದ್ಯ...ಏಳು ನಿಶು ನೋಡಿಲ್ಲಿ "ಎನ್ನುತ್ತಾ ನಿಶಾಂತ್ ಕೈಯನ್ನು ತನ್ನ ಹೊಟ್ಟೆಯ ಮೇಲಿಟ್ಟು ಅಳಲಾರಂಭಿಸಿದಳು..
ಅಲ್ಲಿ ಸೇರಿದವರಿಗೆ ಕ್ರೂರ ವಿಧಿಯ ಬಗ್ಗೆ ಕೋಪ ಉಕ್ಕುತ್ತಿತ್ತು.. ಶ್ರೇಷ್ಠ ಗೋಳಾಟ ನೋಡಲಾಗದೆ ಎಲ್ಲರ ಮನ ಮರುಗಿತು..
ಟ್ರೆಕ್ಕಿಂಗ್ ಹೋದವನು ಸ್ನೇಹಿತರು ಬೇಡವೆಂದರು ಕೇಳದೆ "ಲೈಫ್ ನಲ್ಲಿ ಎಂಜಾಯ್ ಮಾಡಬೇಕು ರಿಸ್ಕ್ ತಗೋಬೇಕು ಎನ್ನುತ್ತಾ ದೊಡ್ಡದೊಂದು ಬಂಡೆ ಹತ್ತುವಾಗ ಆಯಾ ತಪ್ಪಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು...
ನಿಶಾಂತ್ ನ ಅಂತಿಮ ಕಾರ್ಯ ಮುಗಿದ ಕ್ಷಣದಿಂದ ಮಂಕಾದ ಶ್ರೇಷ್ಠ ಬದುಕುವ ಉತ್ಸಾಹವನ್ನು ಕಳೆದುಕೊಂಡು ಕಣ್ಣೀರಿನಲ್ಲಿ ದಿನ ಕಳೆಯ ತೊಡಗಿದಳು.ಮನೆಯವರ ಸರ್ಪಗಾವಲಿನಲ್ಲಿ 7 ತಿಂಗಳು ತುಂಬಿತು... ಯಾವುದೇ ಲವಲವಿಕೆ ಇಲ್ಲದೆ ಮೌನ ಗೌರಿಯಂತಿರುತ್ತಿದ್ದಳು..
ಒಂದು ದಿನ ಮನೆಯವರ ಕಣ್ಣು ತಪ್ಪಿಸಿ ಮನೆಯ ಹಿತ್ತಲಿನ ಬಾವಿ ಕಟ್ಟೆಯ ಬಳಿ ಬಂದು ಬದುಕಲು ಇಷ್ಟವಿಲ್ಲದೇ ಇನ್ನೇನು ಹಾರಬೇಕು ಎಂದು ಭಾಗುವಾಗ ಹೊಟ್ಟೆಯ ಒಳಗಿನ ಕೂಸು ಮೊದಲ ಬಾರಿಗೆ ಜೋರಾಗಿ ಒದಯಿತು..ಒಂದು ಕ್ಷಣ ಎಲ್ಲವನ್ನು ಮರೆತು ಆ ಹಿತವಾದ ನೋವನು ಅನುಭವಿಸಿದಳು...
ಅಂದಿನಿಂದ ಒಡಲಿನ ಮಗುವಿಗಾಗಿ ಬದುಕನು ಹೊಸತಾಗಿ ಆರಂಭಿಸಲು ನಿರ್ಧರಿಸಿದಳು.. ಹೆರಿಗೆಯಾಯಿತು.. ನಿಶಾಂತ್ ಹೋಲುವ ಮಗು ಮಡಿಲು ಸೇರಿತು...ಅವಳು ಬದುಕಲು ಆ ಮಗುವೇ ಸ್ಪೂರ್ತಿಯಾಯಿತು...
