ಮೌನ ಮಾತಾದಾಗ...!
ಮೌನ ಮಾತಾದಾಗ...!
"ಪಲ್ಲವಿ ಏ ಪಲ್ಲವಿ … ಪ್ಲೀಸ್ ನಿಲ್ಲು ಒಂದು ನಿಮಿಷ ನನ್ನ ಮಾತು ಕೇಳು.. ಏನು ಮಾತಾಡಬೇಡ..ಪಲ್ಲವಿ ಪ್ಲೀಸ್…!"
"ನೋ ರಮೇಶ್! ನಂಗೆ ಆಗಲ್ಲ. ಇಷ್ಟು ವರುಷಗಳು ಈ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ಇವತ್ತು ನಾನು ಮಾತನಾಡುವ ಸಮಯ ಬಂದಿದೆ..ನನ್ನ ತಾಳ್ಮೆ ಕೈ ಮೀರಿದೆ."
"ಪಲ್ಲವಿ ಈಗ ನೀನು ಹೋಗಿ ಮಾತಾಡಿದ್ರೆ ಮನೆ ಮರ್ಯಾದೆ ಪ್ರಶ್ನೆ.."
"ಮದುವೆ ಮನೆಯಲ್ಲಿ ನನ್ನ ಬಗ್ಗೆ ಮಾತಾಡುವಾಗ ನನ್ನ ಮರ್ಯಾದೆ ಪ್ರಶ್ನೆ ಬರೋದಿಲ್ಲ ಅಲ್ವಾ ರಮೇಶ್? ಯಾಕೆ ಅಂತ ತಪ್ಪು ನಾನೇನು ಮಾಡಿದ್ದೇನೆ.. ಯಾವುದೇ ಫಂಕ್ಷನ್ ಗೆ ಹೋದರು ಇದೇ ಮಾತು. ಕೇಳಿ ಕೇಳಿ ಸಾಕಾಗಿದೆ ..ಐ ಯಾಮ್ ಡನ್ ವಿತ್ ದಿಸ್" ಎನ್ನುತ್ತಾ ಮದುವೆಯ ರಿಸೆಪ್ಶನ್ ಗೆ ಎಂದು ಸಜ್ಜಾಗಿದ್ದ ವೇಡಿಕೆಯ ಮೇಲೆ ತನ್ನ ಮಾತುಗಳನ್ನ ಆಡಲು ಹೊರಟು ನಿಂತಳು..
"ಪಲ್ಲವಿ ಇದೇ ನಿನ್ನ ಕಡೆ ನಿರ್ಧಾರ ಆದರೆ ನನ್ನ ಮಾತನ್ನು ಕೇಳಿಸಿಕೊ.. ಇದು ನನ್ನ ತಂಗಿ ಮದುವೆ.ಮದುವೆಯ ವಾತಾವರಣವನ್ನು ನಿನ್ನ ಮಾತುಗಳು ಹಾಳು ಮಾಡುವುದಾದರೆ ನನ್ನ ಮನೆಯಲ್ಲಿ ನಿನಗಿನ್ನು ಜಾಗವಿಲ್ಲ ಯೋಚಿಸು.."
ಕಣ್ಗಳು ತುಂಬಿದ್ದವು, ಲಕ್ಷಣವಾಗಿ ತಯಾರಾದ ಪಲ್ಲವಿ ಮುಖ ಕೆಂಪಾಗಿತ್ತು.. ಆದರೆ ಪ್ರತಿಬಾರಿಯಂತೆ ಈ ಬಾರಿ ಅವಳನ್ನು ನಿಲ್ಲಿಸುವಲ್ಲಿ ರಮೇಶ್ ಗೆ ಸೋಲಾಯಿತು.. ವರುಷಗಳ ಮೌನ ಮಾತಿನ ರೂಪ ಪಡೆಯಿತು..
ಸ್ಟೇಜ್ ಏರಿ ಮೈಕ್ ಹಿಡಿದಳು..
"ಹಾಯ್ ಎಲ್ಲರಿಗೂ ನಮಸ್ತೆ. ನಾನು ಪಲ್ಲವಿ .ಪಲ್ಲವಿ ರಮೇಶ್.. ನಾಳೆ ಮದುವೆ ಆಗ್ತಿದ್ದಾಳಲ್ಲ ರಾಗ ,ಅವಳ ಅಣ್ಣನ ಹೆಂಡತಿ.. ನಾನು ರಮೇಶ್ ಮದುವೆಯಾಗಿ 10 ವರ್ಷ ಕಳೆದಿದೆ.. ನಾನು ಮದುವೆಯಾಗಿ ಮನೆಗೆ ಬರುವಾಗ ರಾಗ ಹೈಸ್ಕೂಲ್ ನಲ್ಲಿ ಓದುತ್ತಿದ್ದಳು… ನಾನು ಸಾಫ್ಟ್ವೇರ್ ಉದ್ಯೋಗಿ.. ಒಂದಷ್ಟು ತಿಂಗಳು ಹಗಲು ಪಾಳಿ ಕೆಲಸವಾದರೆ ಇನ್ನೊಂದಷ್ಟು ತಿಂಗಳು, ರಾತ್ರಿ ಪಾಳಿ ಇರುತ್ತದೆ. ಅದೇ ನೈಟ್ ಡ್ಯೂಟಿ…"
ಸಭೆಯ ಸುತ್ತ ಗುನುಗುನು ಪ್ರಾರಂಭವಾಯಿತು .. ರಮೇಶ್, ರಮೇಶನ ತಾಯಿ ಪ್ರೇಮ ಹಾಗೂ ಅವನ ತಂದೆ ರಘುರಾಮ್ ಹಲ್ಲು ಕಚ್ಚಿಕೊಂಡು ಸ್ಟೇಜಿನ ಮುಂಭಾಗದಲ್ಲಿ ಕೆಳಗೆ ಇಳಿಯುವಂತೆ ಸನ್ನೆ ಮಾಡುತ್ತಿದ್ದರು..ಪಲ್ಲವಿ ಧೃತಿಗೆಡಲಿಲ್ಲ.. ಮಾತನ್ನು ಮುಂದುವರಿಸಿದಳು..
" ಈಗ ಗುನುಗುನು ಮಾತನಾಡುತ್ತಿರುವ ನೀವುಗಳು ಕಳೆದ ಹತ್ತು ವರ್ಷಗಳಿಂದಲೂ ನನ್ನ ಬಗ್ಗೆ ಇದೇ ಗುನುಗುನು ಮಾತನಾಡುತ್ತಿದ್ದೀರಿ.. ಇಷ್ಟು ವರ್ಷಗಳು ಸಹಿಸಿದೆ ಇನ್ನೂ ಸಾಧ್ಯವಿಲ್ಲ.. ಹಾಗಾಗಿ ಮನದ ಮಾತನ್ನು ಎಲ್ಲರಿಗೂ ಮುಟ್ಟುವಂತೆ ತಿಳಿಸಲು ಇಂದು ಮುಂದೆ ನಿಂತಿದ್ದೇನೆ.. ಹೌದು ನಮಗೆ ಮಕ್ಕಳಿಲ್ಲ ನಾನು ಬಂಜೆ ಒಪ್ಪಿಕೊಳ್ಳೋಣ ಹಾಗಂತ ಮಕ್ಕಳಿರುವ ನೀವುಗಳೆಲ್ಲ ಬಹಳ ಸುಖದಿಂದ ಇದ್ದೀರಾ ಈ ಪ್ರಶ್ನೆಗೆ ಉತ್ತರಿಸಿ.. !ಯಾರಿಗೂ ಉತ್ತರಿಸಲು ಉತ್ತರವಿಲ್ಲ ಅಲ್ಲವೇ..?? ಮಕ್ಕಳಿದ್ದು ನೀವುಗಳು ಸುಖವಾಗಿಲ್ಲವೆಂದ ಮೇಲೆ ಮಕ್ಕಳಿಲ್ಲವೆಂದು ಹಂಗಿಸಿ ಮಾತನಾಡಿ ನನ್ನ ಸುಖವನ್ನೇಕೆ ಹಾಳು ಮಾಡುತ್ತಿದ್ದೀರಿ?ಎಲ್ಲೇ ಹೋದರು ಎಲ್ಲೇ ಬಂದರೂ” ಏನ್ ಪಲ್ಲವಿ ಏನು ವಿಶೇಷ ಇಲ್ವಾ? 10 ವರ್ಷ ಕಳಿತು ಯಾವುದಾದರೂ ಡಾಕ್ಟರ್ ನ ನೋಡ್ಬೋದಲ್ವಾ ಎಂದು ತಿಳಿಸುವವರೇ ಹೆಚ್ಚು ..ನಾನು ವಿದ್ಯಾವಂತೆ. ಮಕ್ಕಳಾಗದಾಗ ಡಾಕ್ಟರ್ಗಳನ್ನು ಸಂಪರ್ಕಿಸಲು ಪ್ರಯತ್ನ ಪಟ್ಟೆವು.. ಕಾದು ನೋಡಿ ಎಂಬುದಷ್ಟೇ ಅವರ ಉತ್ತರವಾಗಿತ್ತೇ ಹೊರತು ಪ್ರಯೋಜನವಾಗಲಿಲ್ಲ ಇದನ್ನು ಹೇಳಿದರೆ ನೀವು ಒಪ್ಪುವಿರಾ…??"
ಪಲ್ಲವಿಯ ಸ್ವರ ನಡುಗಲು ಆರಂಭಿಸಿತು..ಮಾತು ಮುಂದುವರಿಸಿದಳು.."ನನಗೂ ಮಕ್ಕಳೆಂದರೆ ಇಷ್ಟವೇ ಮಕ್ಕಳಾಗಬಾರದೆಂದು ಯಾವುದೇ ಔಷಧಿ ತಿಂದಿಲ್ಲ.ನನ್ನ ದುರಾದೃಷ್ಟ ದೇವರಿಗೆ ನನಗೆ ಮಗು ಕರುಣಿಸಲು ಇನ್ನು ಮನಸ್ಸಾಗಲಿಲ್ಲವಷ್ಟೇ.. ಅದೆಷ್ಟೋ ಕಡೆ ಓದಿದ್ದೇನೆ ಕೇಳಿದ್ದೇನೆ ಮದುವೆಯಾಗಿ 16/ 18 ವರ್ಷಗಳ ನಂತರ ಮಗುವಾದ ಘಟನೆಗಳಿವೆ.. ಅಷ್ಟಕ್ಕೂ ಯಾರಿಗಾದರೂ ಮಗುವಾಗಲಿ ಆಗದಿರಲಿ ಅವರ ಬದುಕಿನ ವಿಷಯ ನಿಮಗೇಕೆ?? ನಿಮ್ಮೆಲ್ಲರ ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ಮನೆ ಮನಸ್ಸಿನ ನೆಮ್ಮದಿ ಹಾಳಾಗಿದೆ..ಸಾಕು ಇಂದು ಹೇಳುತ್ತಿದ್ದೇನೆ ಕೇಳಿ ನನಗೆ ಮಕ್ಕಳಿಲ್ಲ..ಮಕ್ಕಳಾಗುತ್ತೇ ಆಗೋದಿಲ್ಲ ಎನ್ನುವುದು ಸಹ ತಿಳಿದಿಲ್ಲ.ಆದರೆ ನಾನು ಅನುಭವಿಸಿದ ಇಷ್ಟು ವರ್ಷದ ಯಾತನೆಗಳನ್ನು ನೀವಿನ್ನು ಮುಂದೆ ಯಾರಿಗೂ ನೀಡಬೇಡಿ ಎಂದು ಬೇಡಿಕೊಳ್ಳುತ್ತೇನೆ ..ಪ್ರತಿಯೊಂದು ಹೆಣ್ಣಿಗೆ ಮಗುವಿನ ಬಯಕೆ ಇದ್ದೇ ಇರುತ್ತದೆ.. ಅದನ್ನು ಕೆಣಕಿ ಆಡಿ ದಯವಿಟ್ಟು ಗಾಸಿಗೊಳಿಸಬೇಡಿ..ನನ್ನ ತಾಳ್ಮೆಗೂ ಮಿತಿಯಿದೆ.. ಇಷ್ಟು ದಿನ ಸುಮ್ಮನಿದ್ದೆ.. ಇನ್ನು ಮೌನವಾಗಿ ನೋವು ಸಹಿಸಲು ನನಗೆ ಸಾಧ್ಯವಿಲ್ಲ " ಎನ್ನುತ ಮಾತು ನಿಲ್ಲಿಸಿ ಕೆಳಗಿಳಿದಳು.
ಸಿಟ್ಟಿನಿಂದ ಬುಸುಗುಡುತ್ತಿದ್ದ ರಮೇಶ್ “ಸಮಾಧಾನ ಆಯ್ತಾ ನೆಮ್ಮದಿ ಆಯ್ತಾ ಏನ್ ಸಿಕ್ತು ನಿನಗೆ ಇದರಿಂದ ಮನೆ ಮರ್ಯಾದೆ ಬೀದಿಗೆ ಹಾಕಿದ ನಿನ್ನ ಮುಖ ನೋಡೊಕು ಇಷ್ಟ ಇಲ್ಲ ಹೋಗು ಹೊರಟು ಹೋಗು “ಎಂದು ಕೂಗಾಡಿದ..
"ಏನು ಸಿಕ್ತಾ?? ಇಷ್ಟು ವರ್ಷಗಳು ಮನಸ್ಸಿನಲ್ಲಿ ಇಟ್ಟುಕೊಂಡ ಮಾತು ಹೊರ ಹಾಕಿ ನೆಮ್ಮದಿಯಾಗಿದ್ದೇನೆ. ಸಾಕು ಇನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ .ಮಗುವಾಗದಕ್ಕೆ ನಾನೊಬ್ಬಳೇ ಹೊಣೆಯಲ್ಲ.. ನಿಮ್ಮದು ಲೋಪ ದೋಷಗಳಿರಬಹುದು. ಆದರೆ ಇಲ್ಲಿ ಸುತ್ತ ನೆರೆದಿರುವವರ ಪ್ರಕಾರ ತಪ್ಪು ನನ್ನದೆ. ನಾನೇ ಕಾರಣ. ನನ್ನ ಕೆಲಸವೇ ಕಾರಣ .ನನ್ನ ವಿದ್ಯೆಯೇ ನನಗೆ ಮಗುವಾಗದಿದ್ದಕ್ಕೆ ಕಾರಣ ಎಂಬ ಅಭಿಪ್ರಾಯವನ್ನು ಹೋಗಲಾಡಿಸಬೇಕಿತ್ತು,.. ಇಷ್ಟು ಜನರಲ್ಲಿ ನಿಮ್ಮ ಬಳಿ ಬಂದು ಮಕ್ಕಳ ಬಗ್ಗೆ ಕೇಳಿದವರು ಯಾರು ಇಲ್ಲ..ಇಂದಿಗೆ ನೆಮ್ಮದಿಯಾಯಿತು. ಹೋಗು ಅಂದ್ರಲ್ವಾ ಹೋಗ್ತೀನಿ.ನಿಮಗೆ ನಿಮ್ಮ ತಪ್ಪಿನ ಅರಿವಾಗುವವರೆಗೂ ನಾನು ನಿಮ್ಮ ಮನೆಯ ಹೊಸ್ತಿಲನ್ನು ಮೆಟ್ಟುವುದಿಲ್ಲ" ಎನ್ನುತ್ತಾ ಮದುವೆಯ ಮಂಟಪದಿಂದ ಹೊರ ನಡೆದಳು..
ಮಂಟಪದ ತುಂಬಾ ನೀರವ ಮೌನ. ಯಾರಲ್ಲಿಯೂ ಮದುವೆಯ ಕಳೆ ಇಲ್ಲ.. ಸಂತಸವಿಲ್ಲ..ಅಲ್ಲಿದ್ದ ಕೆಲವು ಜನರಿಗೆ ಪಲ್ಲವಿಯ ಮನದ ಮಾತು ಅರಿವಾಯಿತು.ಇನ್ನಷ್ಟು ಜನರು “ಎಷ್ಟು ಸೊಕ್ಕು ಅವಳಿಗೆ “ಎಂದು ಮಾತನಾಡಿದರು..ಅಂತೂ ಇಟ್ಟ ಮುಹೂರ್ತದಲ್ಲಿ ರಾಗಾಳ ಮದುವೆ ನೆರವೇರಿತು..
ಸಮಯ ಯಾರಿಗೂ ಕಾಯುವುದಿಲ್ಲ. ದಿನಗಳು ಉರುಳಿದವು ರಾಗಾಳ ಮದುವೆಯಾಗಿ ಅದಾಗಲೇ ಮೂರು ವರ್ಷಗಳು ಕಳೆದಿತ್ತು..ಆಕೆಗೂ ಮಕ್ಕಳಾಗಿರಲಿಲ್ಲ.ಪಲ್ಲವಿ ಅಷ್ಟು ವರ್ಷಗಳ ಕಾಲ ಅನುಭವಿಸಿದ ನೋವು ಯಾತನೆ ಮನಸ್ಸಿನ ಸಂಕಟ ರಾಗಾಳಿಗೆ ಅರಿವಾಯಿತು… ರಾಗಾಳ ನೋವು ಸಂಕಟವನ್ನು ಸಹಿಸಲಾರದ ಅವಳ ತಂದೆ ತಾಯಿ ನಿತ್ಯವೂ ಕೊರಗಲಾರಂಭಿಸಿದರು… ಎಲ್ಲರಿಗೂ ಪಲ್ಲವಿಯ ಮನದ ಭಾರ ಅರ್ಥವಾಯಿತು..ತಪ್ಪಿನ ಅರಿವಾಗಿ ಕ್ಷಮೆ ಕೇಳಲು ನಿರ್ಧರಿಸಿ ಅವಳ ಮನೆ ದಾರಿ ಹಿಡಿದರು..
ಘಟನೆಯ ನಂತರ ಪಲ್ಲವಿಯ ತಂದೆ ತಾಯಿಯು ಕೂಡ ಅವಳದ್ದೇ ತಪ್ಪು ಎಂಬಂತೆ ಅವಳನ್ನು ದೂರ ಇಟ್ಟಿದ್ದರು.ಹಾಗಾಗಿ ಪಲ್ಲವಿ ತನ್ನ ಮೇಲೆ ನಂಬಿಕೆ ಇಟ್ಟು ಕೆಲಸಕ್ಕೆ ಸೇರಿ ಪ್ರತ್ಯೇಕ ಮನೆ ಒಂದನ್ನು ಮಾಡಿ ತನ್ನ ಜೀವನವನ್ನು ನೋಡಿಕೊಳ್ಳುತ್ತಿದ್ದಳು…
ಪಲ್ಲವಿ ಮನೆಯ ಮುಂದೆ ಅವಳ ಇಡೀ ಕುಟುಂಬ ಮನೆ ಬಾಗಿಲಲ್ಲಿ ನಿಂತಿತು.. ಎಲ್ಲರನ್ನೂ ಒಂದೇ ಬಾರಿಗೆ ನೋಡಿ ಹೃದಯ ಕಂಪಿಸಿತು… ಆದರೆ ಅವಳು ಅಲ್ಲಿರುವ ವಿಷಯ ತಿಳಿಸಿದವರಾರು ಎಂಬ ಪ್ರಶ್ನೆ ಕಾಡತೊಡಗಿತ್ತು..
ಒಳಗೆ ಬರುವಂತೆ ಹೇಳಿದಳು… ಎಲ್ಲರಿಗೂ ಕುಡಿಯಲು ನೀರು ಕೊಟ್ಟಳು.. ಯಾರ ಬಳಿಯಲ್ಲಿಯೂ ಮಾತಿಲ್ಲ.ಇಡೀ ಮನೆ ಮೌನದಿಂದ ಆವರಿಸಿತು. ಅದೇ ವೇಳೆಯಲ್ಲಿ ಪಲ್ಲವಿಯ ಗೆಳತಿ ಆಗಮಿಸಿದಳು… ಪಲ್ಲವಿಗೆ ಅವಳಲ್ಲಿರುವ ವಿಷಯ ಹೇಳಿದವಳು ತನ್ನ ಗೆಳತಿ ಎಂದು ಸ್ಪಷ್ಟವಾಯಿತು…ಮೌನ ಮಾತಾಯಿತು..
“ಪಲ್ಲವಿ ದಯವಿಟ್ಟು ಕ್ಷಮಿಸು.. ತಪ್ಪು ನಮ್ಮದೇ ಈಗ ಎಲ್ಲವೂ ಅರ್ಥವಾಗಿದೆ ನಿನ್ನ ಕಣ್ಣೀರು ನಿನ್ನ ನೋವು ನಮ್ಮ ಮನೆಗೆ ಶಾಪದಂತೆ ಭಾಸವಾಗುತ್ತಿದೆ.. ರಾಗಾಳಿಗೂ ಮಕ್ಕಳಿಲ್ಲ ಪ್ರತಿ ಬಾರಿ ನಾನು ಈ ವಿಚಾರ ಹೇಳುತ್ತಿದ್ದಂತೆ ಅನುವಂಶಿಯ ಸಮಸ್ಯೆ ಇರಬಹುದು ಎಂದು ನೀನು ಹೇಳುತ್ತಿದ್ದ ಮಾತು ನಿಜವಿರಬಹುದು..ದಯವಿಟ್ಟು ಕ್ಷಮಿಸಿ ಮನೆಗೆ ಬಾ ಮಗಳೇ" ಎಂದು ಅತ್ತೆ ಪ್ರೇಮ ಆಡಿದ ಮಾತಿಗೆ ಮೌನವಾಗಿ ರಮೇಶ್ ನತ್ತ ನೋಡಿದಳು.
"ಪಲ್ಲು ನನ್ನನ್ನು ಕ್ಷಮಿಸು. ನಾನು ನಿನ್ನ ಪರವಾಗಿ ನಿಲ್ಲಬೇಕಿತ್ತು.. ಈಗ ಎಲ್ಲವೂ ಅರಿವಾಗಿದೆ.. ಇಷ್ಟು ವರ್ಷಗಳ ಸುಖದ ಜೀವನವನ್ನು ನೆಮ್ಮದಿಯನ್ನು ಮೂರನೇಯವರ ಮಾತಿಗಾಗಿ ಹಾಳು ಮಾಡಿಕೊಂಡಿದ್ದಾಗಿದೆ.ಇನ್ನು ಬದುಕಿರುವಷ್ಟು ದಿವಸ ಮಕ್ಕಳಾಗಲಿ ಆಗದೆ ಇರಲಿ ನಿನ್ನನ್ನು ಸುಖದಿಂದ ಬಾಳಿಸುತ್ತೇನೆ ದಯವಿಟ್ಟು ಕ್ಷಮಿಸಿ ನನ್ನೊಂದಿಗೆ ಬಾ " ಎಂದು ಕೈಹಿಡಿದು ಕ್ಷಮೆ ಬೇಡಿದ.ಪಲ್ಲವಿಗೆ ಮಾತೆ ಹೊರಡಲಿಲ್ಲ..ಹೋಗಬೇಕು ಬೇಡವೋ ಎಂಬ ಗೊಂದಲ ಮತ್ತೆ ಆರಂಭವಾಯಿತು…. ತಪ್ಪಿನ ಅರಿವಾಗಿ ಬಂದವರನ್ನು ಕ್ಷಮಿಸಿ ಮನೆಗೆ ವಾಪಾಸಾಗಲು ಒಪ್ಪಿದಳು..
ಇದಾಗಿ ಸರಿಯಾಗಿ ಎರಡು ವರ್ಷಕ್ಕೆ ಪಲ್ಲವಿ ಹಾಗೂ ರಾಗ ಇಬ್ಬರು ಉದರದಿ ಪುಟ್ಟ ಕೂಸನ್ನು ಹೊತ್ತು ಮನೆತುಂಬಾ ಓಡಾಡುತ್ತಿದ್ದರು.. ಮನೆ ಮನದ ಸಂತಸ ಮುಗಿಲು ಮುಟ್ಟಿತ್ತು..ದೂರದ ಸಂಬಂಧಿಯೊಬ್ಬರು ಮದುವೆ ಹೇಳಿಕೆಗೆ ಮನೆಗೆ ಬಂದು ತಮ್ಮ ಸೊಸೆಗೆ ಮಕ್ಕಳಾಗಿಲ್ಲ ಎಂದು ಹೇಳುವಾಗ ಮೌನವಾಗಿ ಆಲಿಸುತ್ತಿದ್ದ ಪಲ್ಲವಿಯ ಅತ್ತೆ ಮಾತನ್ನು ಆರಂಭಿಸಿದರು..
"ನಾನು ಮಾಡಿದ ತಪ್ಪು ನನಗೆ ಅರಿವಾಗಿದೆ..ನೀವು ಅದೇ ತಪ್ಪನ್ನು ಮಾಡಬೇಡಿ ..ಮದುವೆಯಾದ ಕೂಡಲೇ ಅಥವಾ ಆಗಿ ಇಂತಿಷ್ಟೇ ವರ್ಷದಲ್ಲಿ ಮಕ್ಕಳಾಗಲೇಬೇಕು ಎಂಬ ಧೋರಣೆ ನಮ್ಮ ಮಕ್ಕಳ ಮನಸ್ಸನ್ನು ಘಾಸಿಗೊಳಿಸುತ್ತದೆ.. ಪ್ರಪಂಚ ಅದೆಷ್ಟೇ ಮುಂದುವರಿದಿದೆ ಎಂದುಕೊಂಡರು ಈ ಮಕ್ಕಳಾಗಲಿಲ್ಲ ಎಂಬ ಒಂದು ವಿಚಾರ ಜನರ ತಲೆಯಿಂದ ಹೋಗುವುದೇ ಇಲ್ಲ… ಮಕ್ಕಳನ್ನು ಕರುಣಿಸುವುದು ದೇವರ ಇಚ್ಛೆ…. ಮಕ್ಕಳಾಗದವರು ಅದಾಗಲೇ ಮಕ್ಕಳಿಲ್ಲ ಎಂಬ ಕೊರಗಿನಲ್ಲಿರುವಾಗ ಅದೇಕೆ ಆಗಲಿಲ್ಲ ?ಯಾಕಿನ್ನು ಆಗಲಿಲ್ಲ? ಯಾವಾಗ ಮಾಡಿಕೊಳ್ಳುವರು? ಬರಿ ದುಡ್ದೋಂದೆ ಜೀವನವೇ? ಮಕ್ಕಳು ಬೇಡವೇ? ಇಂತಹ ಪ್ರಶ್ನೆಗಳು ಆ ದಂಪತಿಗಳನ್ನು ಮತ್ತಷ್ಟು ಕುಗ್ಗಿಸುತ್ತದೆ… ಮಕ್ಕಳಿಲ್ಲದವರ ಮುಂದೆ ಮಕ್ಕಳ ಬಗ್ಗೆ ಮಾತನಾಡುವುದಕ್ಕಿಂತ ಸುಮ್ಮನೆ ಉಪದೇಶಗಳನ್ನು ಸಲಹೆಗಳನ್ನು ನೀಡುವುದಕ್ಕಿಂತ ಸುಮ್ಮನಿದ್ದು ಅವರ ಮನಸ್ಸಿನ ನೆಮ್ಮದಿಗೆ ಭಂಗ ಬಾರದಂತೆ ನೋಡಿಕೊಳ್ಳುವುದು ಕರ್ತವ್ಯವಾಗಿರುತ್ತದೆ… ಮದುವೆಯಾದವರನ್ನು ನೆಮ್ಮದಿಯಾಗಿ ಬದುಕಲು ಬಿಡಬೇಕಲ್ಲವೇ…??ಆಗುವ ಕಾಲಕ್ಕೆ ಎಲ್ಲವೂ ಆಗುತ್ತದೆ..ಆರಾಮ್ ಆಗಿರಿ " ಎಂದು ಬುದ್ದಿ ಹೇಳುತ್ತಿದ್ದ ಅತ್ತೆಯಲ್ಲಿನ ಬದಲಾವಣೆ ಕಂಡು ಪಲ್ಲವಿ ಸಂತಸಪಟ್ಟಳು..
ಮೌನ ಮಾತಾದಾಗ...ಮುಂದೇನು..? ಎಂದು ಅವಳನ್ನು ಕಾಡಿತ್ತು..ಪರಿಣಾಮವಾಗಿ ಒಂಟಿಯಾಗಿ ಬದುಕು ನಡೆಸಬೇಕಾಗಿ ಬಂದ ಸಮಯ ನೆನೆದು ಭಾವುಕಳಾದಳು..ತನ್ನ ಮೌನ ಮಾತಾದಾಗ ಕೋಪಿಸಿಕೊಂಡ ಮನೆಯವರು ಬೇರೆಯವರಿಗೆ ತಿಳಿ ಹೇಳುವಷ್ಟು ಬದಲಾಗಿರುವುದನ್ನು ಕಂಡು ಸಂತಸಪಟ್ಟಳು..
