ಕೈ ಹಿಡಿದ ಮೇಲೆ
ಕೈ ಹಿಡಿದ ಮೇಲೆ


ಗೋಡೆ ಗಡಿಯಾರ ೪ ಘಂಟೆ ಹೊಡೆದಾಗ ಅದನ್ನೇ ಶೂನ್ಯ ಭಾವದಿಂದ ದಿಟ್ಟಿಸಿದಳು ಶೋಭ. ಸರಿಯಾಗಿ ೩ ವರುಷಗಳ ಹಿಂದೆ. ತನ್ನ ಬದುಕು ಹಳಿ ತಪ್ಪಿ ಎಲ್ಲೆಲ್ಲೋ ಹೋಗಿ ದಿಕ್ಕಾಪಾಲಾಗಿದ್ದು. “ ಹಾಗೆಲ್ಲಾ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬಾರದು. ತಪ್ಪು ಯಾರದು. ಎಷ್ಟು ಎಂದು ಇನ್ನೂ ತಿಳಿದಿಲ್ಲ. ನೀವೊಂದು ಸಲ ಆದಿತ್ಯನ ಹತ್ತಿರ ಮಾತಾಡಿ. ನಡೆದದ್ದು ಏನು ಎಂದಾದರೂ ತಿಳಿಯಲಿ. ಆಮೇಲೆ ನಿರ್ಧಾರ ನಿಮ್ಮದು” ಕೌನ್ಸೆಲ್ಲರ್ ಹೇಳಿದ್ದರು.” ನಿಮ್ಮೆದುರು ಬರಲು ಅವರಿಗೆ ಧೈರ್ಯ ಇಲ್ಲವೆಂದ ಮಾತ್ರಕ್ಕೆ ತಪ್ಪು ಅವರದು ಎಂದಾಗದು.ನೀವು ಅವರಲ್ಲಿ ನಂಬಿಕೆ, ವಿಶ್ವಾಸ ತೋರಬೇಕು. ಆಗಲೇ ಅವರಿಗೆ ನಿಮ್ಮೆದುರು ಬರಲಾಗುವುದು” ಆದರೂ ಮೊದಲ ಹೆಜ್ಜೆ ಇಡಲು ಹಿಂಜರಿಕೆ.ಸತ್ಯವನ್ನು ಎದುರಿಸುವ ಶಕ್ತಿ ತನಗಿಲ್ಲ.ಮಕ್ಕಳೂ ಸುಮಾರು ಸರಿ ಹೋಗಿದ್ದಾರೆ. ಇನ್ನೂ ತನ್ನ ಸರದಿ.ನಿರ್ಧಾರಕ್ಕೆ ಬರಲು ಆಗುತ್ತಲೇ ಇಲ್ಲ.
ಕಲಾವಿದೆಯಾಗಬೇಕೆಂದು ಚಿಕ್ಕ ವಯಸ್ಸಿನ ಆಸೆ ಶೋಭಾಳದು.ಕುಂಚ, ಬಣ್ಣ, ಬ್ರಶ್ ಇದುವೇ ಪ್ರಪಂಚವಾದವಳಿಗೆ ಈ ಕ್ಷೇತ್ರದಲ್ಲಿ ಜಾಸ್ತಿ ಸಾಧಿಸಲಾಗಲಿಲ್ಲ, ಜನರ ಮೆಚ್ಚುಗೆ ಹಾಗೂ ಹಣ ಗಳಿಸುವ ಕಲಾವಿದೆಯಾಗಬೇಕೆಂಬ ಕನಸು ಕನಸಾಗೆ ಉಳಿದಿತ್ತು. ಆಗಲೇ ಬಂದಿದ್ದು ಆದಿತ್ಯನ ಸಂಬಂಧ. “ ನಿನಗಿಂತ ಹತ್ತು, ಹನ್ನೆರಡು ವರುಷ ದೊಡ್ಡವನಿರಬಹುದು. ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನ ಕೆಲಸ. ತನ್ನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನೂ ಮಾಡಿರುವನಂತೆ. ಒಳ್ಳೆ ಹೆಸರಿದೆಯಂತೆ. ನಿನಗೂ ೩೦ ತುಂಬಿತು. ಇನ್ನೂ ತಡ ಮಾಡುವುದು ಸರಿಯಲ್ಲ.” ತಾಯಿಯ ಒತ್ತಾಯಕ್ಕೊ, ಏರುತ್ತಿರುವ ವಯಸ್ಸಿಗೆ ಅಂಜಿಯೋ ಆದಿತ್ಯನನ್ನು ವರಿಸಿದ್ದಳು.ವಯಸ್ಸಾದವನ ಜತೆ ಮದುವೆಯಾದರೆ ಮಕ್ಕಳಾಗುವುದೊ ಇಲ್ಲವೋ ಎಂಬ ಭಯ ಒಂದರ ಹಿಂದೆ ಒಂದು ಹೆಣ್ಣುಮಕ್ಕಳು ಹುಟ್ಟಿದಾಗ ನಿವಾರಣೆಯಾಗಿತ್ತು.ಮದುವೆಯಾಗಿ ಸುಮಾರು ೧೨ ವರುಷವಾಗುವುದರಲ್ಲಿ ಬದುಕು ಒಂದು ಘಟ್ಟಕ್ಕೆ ಬಂದಿತ್ತು. ಆದಿತ್ಯ ಸಾಕಷ್ಟು ಸಂಶೋಧನೆಗಳನ್ನು ಮಾಡಿ, ಪ್ರಭಂಧಗಳನ್ನು ಮಂಡಿಸಿ, ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಹೆಸರು ಗಳಿಸಿದ್ದ. ೨ ಬೆಡ್ರೂಮೀನ ಒಂದು ಫ್ಲಾಟ್ ಕೊಂಡಿದ್ದರು.ಶೋಭಾಳಿಗೆ ಹತ್ತಿರದಲ್ಲೇ ಇದ್ದ ಅಂತರ್ರಾಷ್ಟ್ರೀಯ ಶಾಲೆಯೊಂದರಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸ ದೊರಕಿತ್ತು.ಹೆಸರಿಗೆ ಕಲಾ ಶಿಕ್ಷಕಿಯಾಗಿದ್ದರೂ , ಎಲ್ಲ ಕೆಲಸ ಮಾಡಬೇಕಿತ್ತು. ಯಾರು ರಜೆ ಹಾಕಿದರೂ ಇವಳನ್ನೇ ಆ ತರಗತಿಗೆ ಕಳುಹಿಸುತ್ತಿದ್ದರು. ಹೇಗೂ ನಿಮಗೆ ಮೌಲ್ಯ ಮಾಪನವಿಲ್ಲವಲ್ಲ ಎಂದು ಪರೀಕ್ಷಾ ವಿಭಾಗಕ್ಕೆ ಸೇರಿದ ಕೆಲಸ ಹಚ್ಚುತ್ತಿದ್ದರು.ಆದರೆ ಕೈ ತುಂಬಾ ಸಂಬಳ. ಮಕ್ಕಳಿಗೆ ಅರ್ಧ ಫೀಸು.
ಅಬ್ಬಾ, ಬದುಕು ಒಂದು ನೆಲೆ ಕಂಡಿತು ಎಂದು ನಿಟ್ಟುಸಿರು ಬಿಡುವಾಗ ಬರಸಿಡಿಲು ಬಡಿದಿತ್ತು. ಆದಿತ್ಯನಿಗೆ ಬೇರೆ ದೇಶದಲ್ಲಿ ೨ ವರುಷಗಳ ಅವಧಿಗೆ ಸಂಶೋಧನೆಗೆ ಅವಕಾಶ ಸಿಕ್ಕಿತು. ಖಂಡಿತ ಅಷ್ಟು ಧೀರ್ಘಾವದಿ ರಜೆ ಸಿಗುವುದಿಲ್ಲ. ರಿಸೈನ್ ಮಾಡೇ ಹೋಗಬೇಕು. ವಾಪಸ್ಸು ಬಂದ ಮೇಲೆ ಮಕ್ಕಳಿಗೆ ಇಂತಹ ಶಾಲೆ ಮತ್ತೆ ಸಿಗುವುದೊ ಇಲ್ಲವೋ ಎಂಬ ಯೋಚನೆಯಲ್ಲಿದ್ದವಳಿಗೆ “ ನೀನು ಮಕ್ಕಳು ಇಲ್ಲೇ ಇರಿ. ಎಲ್ಲಾ ಹೋದರೆ ತುಂಬಾ ಅಪ್ಸೆಟ್ ಆಗುತ್ತದೆ. ಮಧ್ಯೆ ಒಮ್ಮೆ ಬರಲು ಪ್ರಯತ್ನಿಸುತ್ತೇನೆ. ನೋಡು ನೋಡುತ್ತಾ ೨ ವರುಷಗಳು ಕಳೆದುಹೋಗುತ್ತವೆ” ಎಂದು ಆದಿತ್ಯ ನುಡಿದಾಗ ಸಂತಸವೆ ಆಗಿತ್ತು.ಎಲ್ಲ ಪ್ಯಾಕ್ ಮಾಡಿ, ಮಕ್ಕಳಿಗೆ ಅವಳಿಗೆ ಸಾಕಷ್ಟು ಬುದ್ಧಿವಾದ ಹೇಳಿ ಅವನು ಹೊರಟಾಗ ಎಲ್ಲರ ಮನಸ್ಸೂ ಒಂದು ವಿಚಿತ್ರ ಸ್ಠಿತಿಯಲ್ಲಿತ್ತು. ಒಂದೆಡೆ ಹೆಮ್ಮೆ, ಇನ್ನೊಂದೆಡೆ ಅಷ್ಟು ದಿನ ಬಿಟ್ಟಿರಬೇಕಲ್ಲ ಎಂಬ ಆತಂಕ,” ನೀವೆಲ್ಲ ಮಲಗಿರಿ. ವಿಮಾನವನ್ನೇರುವ ಮುನ್ನ ಫೋನ್ ಮಾಡುವೆ” ಎಂದು ಹೊರಟವನ ಕಣ್ಣಂಚು ಒದ್ದೆಯಾಗಿತ್ತು.ಸುಮಾರು ಒಂದು ತಾಸಿನಲ್ಲಿ ಬಂದ ಆ ಕರೆ.” ಇದೇನು, ವಾಪಸ್ಸಾ? ಯಾಕೆ, ಫ್ಲೈಟ್ ರದ್ದಾಯಿತೇನು? ಏನಾಯಿತು?” ಇವಳ ಪ್ರಶ್ನೆಗೆ ಅವನು ಉತ್ತರಿಸಲೇ ಇಲ್ಲಾ.ಮನೆಗೆ ಬಂದವನ ಜತೆ ಇಬ್ಬರು ಪೊಲೀಸರು. ತನ್ನ ಲಗ್ಗೆಜೆಲ್ಲ ರೂಮಲ್ಲಿಟ್ಟು, ಒಂದು ಸಣ್ಣ ಬ್ಯಾಗಿನಲ್ಲಿ ತನಗೆ ಬೇಕಾದ್ದನ್ನು ತುಂಬಿಕೊಂಡಿದ್ದ.” ನನ್ನನ್ನು ಅರ್ರೆಸ್ಟ್ ಮಾಡಿದ್ದಾರೆ. ನಾಳೆ ನಾಡಿದ್ದರಲ್ಲಿ ಬೈಲ್ ಸಿಗಬಹುದು. ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನ ಮೇಲೆ ಲೈಂಗಿಕ ಕಿರುಕುಳದ ಆಪಾದನೆ ಹೊರಿಸಿದ್ದಾಳೆ. ನಿದ್ದೆ ಮಾತ್ರೆ ನುಂಗಿ ಅವಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.ನನ್ನ ಕಿರುಕುಳ ತಾಳಲಾಗದೆ ಈ ರೀತಿ ಮಾಡಿದ್ದಾಳಂತೆ” ಹೇಳುವಷ್ಟರಲ್ಲಿ ಅವನ ಕಣ್ಣು ತುಂಬಿ ಬಂದಿತ್ತು. ಧ್ವನಿ ನಡುಗುತ್ತಿತ್ತು.
ಗರಬಡಿದವಳಂತೆ ಕೂತೆ ಇದ್ದಳು.ಅವನು ಮಕ್ಕಳ ಕಡೆ ನೋಡಲೂ ಇಲ್ಲ. ಸುಮಾರು ಹೊತ್ತಾದ ಮೇಲೆ ಗೆಳತಿಯ ಕರೆ. “ಟೀವಿ ನೋಡು, ನಂಬಲೆ ಆಗುತ್ತಿಲ್ಲ” ಎಲ್ಲ ಲೋಕಲ್ ಚಾನೆಲ್ಗಳಲ್ಲೂ ಇದೇ ಸುದ್ದಿ. ಆಸ್ಪತ್ರೆಯ ಅಂಗಳ. ಮುಬ್ಬುಗತ್ತಲು. ಎಲ್ಲ ಕಡೆ ಜನ. ಮಧ್ಯೆ ಮಧ್ಯೆ ಆದಿತ್ಯನ ಫೋಟೋ. ವಿಶ್ವ ವಿದ್ಯಾಲಯದ ಹಾಗೂ ಅವನ ಡೆಪಾರ್ಟ್ ಮೇಂಟಿನ ಭಾವಚಿತ್ರ. ಅದರ ಮೆಟ್ಟಲುಗಳು,ಆಸ್ಪತ್ರೆಯ ವಾರ್ಡ್.” ಪೀ ಎಚ್ ಡೀ ಮಾರ್ಗದರ್ಶಕನಿಂದ ಲೈಂಗಿಕ ಕಿರುಕುಳ.ತಾಳಲಾಗದೆ ಸಾವಿಗೆ ಶರಣಾಗ ಬಯಸಿದ ಮುಗ್ಧ ಹೆಣ್ಣು!” “ ಯಾವುದರಲ್ಲಿ ಮಾರ್ಗದರ್ಶನ?” “ ಇಂತಹ ನೀಚರಿಂದ ಇಡೀ ಪ್ರಾಧ್ಯಾತ್ಮಕ ವರ್ಗಕ್ಕೆ ಕಳಂಕ” “ ಈ ಅನ್ಯಾಯಕ್ಕೆ ನ್ಯಾಯ ಬೇಕೆ ಬೇಕು. ಡಾ. ಆದಿತ್ಯನಿಗೆ ಬೈಲ್ ಕೊಡಬಾರದು” ಹಾಕಿದ್ದನ್ನೆ ಪುನಃ ಪುನಃ ತೋರಿಸುತ್ತಿದ್ದರು. ಅದಾದ ಮೇಲೆ “ಪ್ಯಾನಲ್ ಡಿಸ್ಕಷನ್” ಬೇರೆ. ೪-೫ ಮಹಿಳೆಯರು ಸೇರಿ ಆದಿತ್ಯನ ವರ್ತನೆಯನ್ನು ಖಂಡಿಸುತ್ತಿದ್ದರು.ಸಂಜೆಯ ಹೊತ್ತಿಗೆ ಹಸಿವಿನಿಂದ,ಅಸಹಾಯಕತೆಯಿಂದ ತಲೆ ತಿರುಗಿ ಬಿದ್ದಿದ್ದಳು.ಅತ್ತೆ, ಮಾವ ಊರಿನಿಂದ ಬಂದಿಳಿದ್ದಿದ್ದರು.ಯಾರ ಕರೆಗೂ ಪ್ರತಿಕ್ರಿಯಿಸಬಾರದು, ಏನೂ ಹೇಳಿಕೆ ಕೊಡಬಾರದು ಎಂದು ಆದಿತ್ಯನ ಬಾಸ್ ಫೋನ್ ಮಾಡಿ ತಿಳಿಸಿದ್ದರು.ಸಧ್ಯ, ಅಪಾರ್ಟ್ಮೆಂಟ್ ಸೆಕ್ಯೂರಿಟಿ ಯಾರನ್ನೂ ಒಳ ಬಿಟ್ಟಿರಲಿಲ್ಲ.ಸುಮಾರು ಜನ ಕ್ಯಾಮೆರಾ ಹಿಡಿದು ಮುಖ್ಯ ದ್ವಾರದ ಬಳಿ ಹೊಂಚು ಹಾಕುತ್ತಿದ್ದಾರೆ ಎಂದು ಕೆಲಸದ ಹೆಂಗಸು ತಿಳಿಸಿದ್ದಳು. ಮಾರನೆಯ ದಿನ ಪತ್ರಿಕೆಯಲ್ಲಿ ಆದಿತ್ಯನ ಫೋಟೋ ರಾರಾಜಿಸಿತ್ತು. ಬೇಕೆಂದೆ ಸ್ಟೈಲಿಶ್ ಆಗಿರುವ ಭಾವಚಿತ್ರ ಹಾಕಿದ್ದರು. ಎಲ್ಲಿ ಸಿಕ್ಕಿತೋ ದೇವರೇ ಬಲ್ಲ.
ಅವಳು ಆದಿತ್ಯನ ಬಳಿ ಪೀ ಹೆಚ್ ಡೀ ಮಾಡುತ್ತಿರುವ ಹುಡುಗಿ. ಸುಮಾರು ೩ ವರುಷಗಳಿಂದ ಅವನ ಶಿಷ್ಯೆ. ಆದರೂ ಕೆಲಸ ಜಾಸ್ತಿ ಮುಂದುವರೆದಿಲ್ಲ.ಅದಕ್ಕೆ ಕಾರಣ ಆದಿತ್ಯನ ಅತೀ ಶಿಸ್ತು.ದಬ್ಬಾಳಿಕೆ.ನನ್ನ ತಲೆ ನೋಯುತ್ತಿದೆ, ಸ್ವಲ್ಪ ಒತ್ತು, ನನಗೆ ಕಾಫೀ ತೆಗೆದುಕೊಂಡು ಬಾ, ನನ್ನ ಈ ನೋಟ್ಸುಗಳನ್ನೆಲ್ಲ ಇವತ್ತೇ ಟೈಪ್ ಮಾಡು.ಈ ದಿನ ನನಗೆ ಮೂಡ್ ಇಲ್ಲ, ನಾಳೆ ನೋಡೋಣ” ಹೀಗೆಲ್ಲಾ ಹೇಳುತ್ತಾ ಇದ್ದನಂತೆ.ಇನ್ನೂ ಸುಮಾರು ವಿಷಯ ಹೇಳುತ್ತಿಲ್ಲವಂತೆ. ಉಹಾಪೂಹಗಳು ಎಲ್ಲ ಕಡೆ ಹರಡಿದ್ದವು. ಶಾಲೆಗೆ ಹೋಗುವುದಿರಲಿ, ಮನೆಯಿಂದ ಈಚೆಯೇ ಬಂದಿರಲಿಲ್ಲ. ಸಪ್ಪೆ ಮುಖ ಹಾಕಿದ ಅಣ್ಣ ಬಂದು ಹೋಗಿ ಮಾಡುತ್ತಿದ್ದ. ಅತ್ತೆ ಮಾವ ಇದ್ದುದರಿಂದ ಅಡುಗೆ ಮಾಡಲೇಬೇಕಿತ್ತು. ಅವರ ಬಲವಂತಕ್ಕೆ ಊಟ ಮಾಡುತ್ತಿದ್ದಳು. ಮಕ್ಕಳಂತೂ ಮೂಕವಾಗಿಬಿಟ್ಟಿದ್ದರು. ಯಾರ ಮುಖ ಯಾರೂ ನೋಡುತ್ತಿರಲಿಲ್ಲ. ಯಾವುದೋ ಅಪರಾಧಿ ಭಾವನೆಯಿಂದ ಎಲ್ಲರೂ ಕುಗ್ಗಿ ಹೋಗಿದ್ದರು. ೨ ದಿನಗಳಾದ ಮೇಲೆ ಆದಿತ್ಯ ಮನೆಗೆ ಬಂದ. “ ಬೈಲ್ ಆಯಿತು, ಆ ಹುಡುಗಿ ಅಪಾಯದಿಂದ ಪಾರಾಗಿದ್ದಾಳೆ.ಆಸ್ಪತ್ರೆಯಿಂದ ಮನೆಗೆ ಕಳುಹಿಸಿದಾರೆ. ಕೇಸ್ ವಾಪಸ್ಸು ತೆಗೆದುಕೊಳ್ಳುವ ಸಾಧ್ಯತೆ ಇದೆ” ಒಬ್ಬನೇ ಒಬ್ಬ , ಅವನೂ ಆದಿತ್ಯನ ಶಿಷ್ಯ, ಇವರೊಂದಿಗೆ ಇದ್ದ. ಬೇರೆಲ್ಲಾ ಜನ ಇವರಿಂದ ಸಂಪೂರ್ಣವಾಗಿ ವಿಮುಖವಾಗಿಬಿಟ್ಟಿದ್ದರು.
ಸುಮಾರು ೧೫ ದಿನಗಳ ಬಳಿಕ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಹೋದಳು. ಅದೂ ಪ್ರಾಂಶುಪಾಲರ ಕೊಠಡಿಗೆ.” ಏನು ಹೇಳಲೂ ತೋಚುತ್ತಿಲ್ಲ ನನಗೆ. ನಿಮ್ಮನ್ನು ಕೆಲಸದಿಂದ ತೆಗೆಯಬೇಕೆಂಬ ಒತ್ತಾಯವಿದೆ. ಆದರೆ ಅದು ತಪ್ಪು. ಆದಿತ್ಯನ ವಿಚಾರಣೆ ಆಗುವ ಮುನ್ನವೇ ಜನರು ಅವರನ್ನು ಅಪರಾಧಿಯಾಗಿಸಿದ್ದಾರೆ. ಟೀವಿ ಚ್ಯಾನಲ್ಲ್ ಗಳು,ಪ್ರಿಂಟ್ ಮಾಧ್ಯಮಗಳು ಅವರ ತೇಜೋವಧೆ ಮಾಡಿ ಮುಗಿಸಿವೆ.ಪ್ರಕರಣಕ್ಕೆ ಸಂಬಂಧವೆ ಇಲ್ಲದ ಜನ ಇವರ ವಿರುದ್ಧ ಘೋಷಣೆ ಕೂಗಿ, ಇವರ ಬಗ್ಗೆ ಮಾತನಾಡಿ ಮಾನಸಿಕವಾಗಿ ಹಿಂಸಿಸಿದ್ದಾರೆ.ಏನು ಮಾಡುವುದು, ಈಗ ಕಾನೂನು ಹೆಣ್ಣುಮಕ್ಕಳ ಪರ. ಆ ಹುಡುಗಿಯ ಮಾತಿನ ಮುಂದೆ ಯಾರದೂ ನಡೆಯುವುದಿಲ್ಲ. ನೀವು ಧೈರ್ಯದಿಂದಿರಬೇಕು. ಮಕ್ಕಳಿಗೂ ಹೇಳಿ. ನಿಮ್ಮ ಕೆಲಸ ಮುಂದುವರಿಸಿಕೊಂಡು ಹೋಗಿ” ಎಂದ ಅವರಿಗೆ ಕೈ ಮುಗಿದು ಹೊರಬಂದಿದ್ದಳು. ಮುಂದಿನ ದಿನಗಳು ನರಕಸದೃಶವಾಗಿದ್ದವು. ಕುಹುಕ ನೋಟಗಳು,ಪಿಸು ಮಾತುಗಳು, ಎದೆದುರೆ ಪ್ರಶ್ನಿಸುವ ಭಂಡರು, ಎಲ್ಲವನ್ನೂ ಎದುರಿಸಿದಾಗಲೆ ಅವಳಿಗರಿವಾದುದ್ದು. ದೇವರು ಆ ಸಮಯಕ್ಕೆ ಬೇಕಾದ ಶಕ್ತಿಯನ್ನೂ ಕಷ್ಟಗಳೊಂದಿಗೆ ನೀಡುತ್ತಾನೆಂದು.
“ ಕೇಸ್ ವಾಪಸ್ಸು ಪಡೆಯಲಾಗಿದೆ. ಆ ಹುಡುಗಿ ಬೇರೊಬ್ಬ ಮಾರ್ಗದರ್ಶನದಲ್ಲಿ ತನ್ನ ಕೆಲಸ ಮುಂದುವರೆಸುತ್ತಾಳೆ.ನನ್ನನ್ನು ಸಧ್ಯಕ್ಕೆ ಸಸ್ಪೆಂಡ್ ಮಾಡಿದ್ದಾರೆ.” ಆದಿತ್ಯನ ಧ್ವನಿ ಗಂಭೀರವಾಗಿತ್ತು. ಅವಳ ಬಾಯಲ್ಲಿ ಮಾತೆ ಹೊರಡಲಿಲ್ಲ.” ಏನಾಯಿತು ನನಗೆ ಹೇಳಿ, ಯಾಕೀ ರೀತಿಯ ಆರೋಪ ಬಂದಿತು? ಯಾವ ಹೆಣ್ಣಿನ ಜತೆಯಲ್ಲೂ ಅನುಚಿತವಾಗಿ ವರ್ತಿಸದ ನಿಮಗೇಕೆ ಈ ಬುದ್ಧಿ ಬಂತು? ಇನ್ನೇನು ನಡೆದಿದೆ?” ಹೇಳಬೇಕೆಂಬ ಮಾತುಗಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡವು.” ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ.ಮನಸ್ಸು ತಿಳಿಯಾದ ಮೇಲೆ ಬರುತ್ತೇನೆ.ಐ ಆಮ್ ಸ್ಸಾರಿ ಶೋಭ. ನಿನ್ನನ್ನು, ಮಕ್ಕಳನ್ನು ಎದುರಿಸುವ ಶಕ್ತಿ ನನಗಿಲ್ಲ.ಹೆದರಬೇಡ, ನಾನು ಜೀವ ತೆಗೆದುಕೊಳ್ಳುವ ಅಥವಾ ಇನ್ನೆನಾದರೂ ಕಷ್ಟ ತಂದುಕೊಳ್ಳುವ ಕೆಲಸ ಮಾಡುವುದಿಲ್ಲ” ಕೆಲವು ಬಟ್ಟೆ ಬರೆ ಪುಸ್ತಕಗಳೊಂದಿಗೆ ಅವನು ಹೊರಟೆ ಬಿಟ್ಟ. ತಡೆಯಲೂ ಸಾಧ್ಯವಾಗಲಿಲ್ಲ ತನಗೆ. ಅತ್ತೆ ಮಾವ ಹಳ್ಳಿಗೆ ವಾಪಸ್ಸು ಹೊರಟರು. ತಾಯಿ ತಂದೆ ಒಮ್ಮೆ ಬಂದು ದೊಡ್ಡ ಮೊತ್ತದ ಚೆಕ್ ಕೊಟ್ಟರು. ನಿನಗಾಗಿ ಕೊಂಚ ಹಣವಿಟ್ಟೆದ್ದೆವು. ಈ ದುಡ್ಡು ತೊಗೋ, ಮನೆ ಸಾಲ ಎಷ್ಟಾಗುತ್ತದೆಯೋ ತೀರಿಸಿಬಿಡು.ನಿನ್ನ ಸಂಬಳ ಮನೆ ಖರ್ಚಿಗೆ ಸಾಕಾಗಬಹುದು.”
ಆದಿತ್ಯನ ಸಹೋದ್ಯೋಗಿಯೊಬ್ಬ ಕರೆ ಮಾಡಿದ್ದ.” ಆದಿತ್ಯ ಸಾರ್ ನನಗೆ ಗುರುಗಳಿದ್ದಂತೆ. ಅವರ ಮೇಲಿರುವ ಯಾವ ಆಪಾದನೆಯೂ ನಿಜವಲ್ಲ. ಆ ಹುಡುಗಿ ಇವರ ಅತೀ ಶಿಸ್ತು, ಕಠಿಣ ವರ್ತನೆ ತಾಳಲಾಗದೆ ಈ ರೀತಿ ಮಾಡಿದ್ದಾಳೆ. ಯಾವುದೋ ಕಾನ್ಫೆರೆನ್ಸ್ ನಲ್ಲಿ ಮಂಡಿಸಬೇಕಾದ ವಿಷಯವನ್ನು ಇವಳು ಕೃತಿಚೈರ್ಯ ಮಾಡಿದ್ದಾಳೆಂದು ಗೊತ್ತಾದಾಗ ಆದಿತ್ಯ ಇವಳನ್ನು ಚೆನ್ನಾಗಿ ಬೈದರಂತೆ.ಇದೇ ರೀತಿ ಆಶಿಸ್ತಿನಿಂದ ಕೆಲಸ ಮಾಡಿದರೆ ನಿನ್ನ ಮೇಲೆ ಕ್ರಮ ತೆಗೆದುಕೊಳ್ಳುವೆ ಎಂದು ಹೇಳಿದ್ದರಂತೆ. ಅದಕ್ಕೆ ಹೆದರಿ ಇವಳು ನಿದ್ದೆ ಮಾತ್ರೆಗಳನ್ನು ನುಂಗಿದ್ದಾಳೆ.ಅದೂ ಜಾಸ್ತಿಯೇನಲ್ಲ. ತಂದೆ ತಾಯಿ ಹೆದರಿ ಕೋಪಗೊಂದು ಪರಿಸ್ಥಿತಿ ಇಲ್ಲಿವರೆಗೂ ಮುಟ್ಟಿದೆ.ಇದು ಇಲ್ಲೆಲ್ಲರಿಗೂ ಗೊತ್ತಾಗಿದೆ. ಆದರೆ ಪೊಲೀಸ್ ಕೇಸ್ ಆದ ಮೇಲೆ ಆದಿತ್ಯನ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು. ಸಧ್ಯಕ್ಕೆ ಸಸ್ಪೆಂಡ್ ಮಾಡಿದ್ದರೆ. ಮುಂದೆ ನೋಡುವ.ನಿಮಗೂ ಸತ್ಯ ತಿಳಿದಿರಲಿ ಎಂದು ಕರೆ ಮಾಡಿದೆ” ಮನಸ್ಸು ತುಸು ಶಾಂತವಾಗಿತ್ತು. ಛೇ, ಎಂತಹ ಜನ. ಈ ರೀತಿ ಅಪವಾದ ಹೊರೆಸುವ ಮುನ್ನ ಬೇರೆಯವರ ಬಗ್ಗೆ ಯೋಚಿಸುವುದೇ ಇಲ್ಲವಲ್ಲ. ಎಂದೆಂದಿಗೂ ಉಳಿಯುವ ಕಳಂಕ ಇದು. ಅವರ ಹೆಂಡತಿ, ಮಕ್ಕಳಿಗೆ ಯಾವ ರೀತಿ ನೋವಾಗಬಹುದು, ಇನ್ನೂ ಮುಂದೆ ಯಾವ ಹೆಂಡತಿ ಗಂಡನಿಗೆ ಹೊಂದಿ ಬಾಳಬಹುದು? ಯಾವ ಮಕ್ಕಳು ಇಂತಹ ಅಪವಾದ ಹೊತ್ತ ಅಪ್ಪನನ್ನು ಕ್ಷಮಿಸಬಹುದು?ಯಾವ ನೈತಿಕ ಬಲದ ಮೇಲೆ ಆ ವ್ಯಕ್ತಿ ಸಮಾಜವನ್ನೆದುರಿಸಬಹುದು?ಕಳ್ಳತನ, ದರೋಡೆಗಿಂತಲೂ ಮಧ್ಯಮವರ್ಗದವರನ್ನು ಶಿಕ್ಷಿಸುವ ಆಪಾದನೆ ಇದು. ಹೆಣ್ಣು ಮಕ್ಕಳು ಅಬಲೆಯರು,ಕಾನೂನು ಅವರ ಪರವಾಗಿರಬೇಕು,ಅವರ ಮಾತನ್ನೆ ಸತ್ಯ ಎಂದು ನಂಬಿ ಕ್ರಮ ತೆಗೆದುಕೊಳ್ಳಬೇಕು ಎಂದೆಲ್ಲ ನಿಜವೇ. ಆದರೆ ಈ ರೀತಿಯ ದುರುಪಯೋಗ ಪಡಿಸಿಕೊಳ್ಳುವಾಗ ಅದರ ದೌರ್ಜನ್ಯಕ್ಕೊಳಗಾದವರ ಗತಿ?
ಎಷ್ಟೊಂದು ಕೌನ್ಸೆಲ್ಲಿಂಗ್ ಬೇಕಾಯಿತು ತನಗೆ, ಮಕ್ಕಳಿಗೆ. ಆದರೂ ಏನೋ ಕೀಳರಿಮೆ, ಏನೋ ದುಗುಡ, ಅಪರಾಧೀ ಭಾವ.ವರಾಂಡದಲ್ಲಿ ಪೇಪರ್ ಬಿದ್ದ ಸದ್ದು ಕೇಳಿ ತನ್ನ ಯೋಚನೆಯಿಂದ ಹೊರ ಬಂದಳು ಶೋಭ. ೨ನೇ ಪುಟದಲ್ಲಿ ವಿಶ್ವವಿದ್ಯಾಲಯದ ಘಟಿಕೋತ್ಸವದ ಭಾವಚಿತ್ರ. ಪದವಿ ಪಡೆದವರ ಹೆಸರುಗಳು.ಒಂದು ಹೆಣ್ಣು ದಿಟ್ಟ ನೋಟ ಬೀರುತ್ತಾ ಕ್ಯಾಮೆರಾವನ್ನೇ ನೋಡುತ್ತಿದ್ದ ದೃಶ್ಯ.” ಲೈಂಗಿಕ ಕಿರುಕುಳದ ಅಪವಾದ ಹೊರೆಸಿ, ವಾಪಸ್ಸು ತೆಗೆದುಕೊಂಡು, ಬೇರೆ ಮಾರ್ಗದರ್ಶಕರ ಬಳಿ ಡಾಕ್ಟರೇಟ್ ಪಡೆದ ಧೈರ್ಯವಂತೆ” ಎಂಬ ಶೀರ್ಷಕ. “ ಬಿದ್ದವ ಏಳಬೇಕು,ಸಮೀಪದವರು ಸಹಾಯ ಮಾಡಬೇಕು, ಅದಕ್ಕೆ ತಾನೇ ಫ್ಯಾಮಿಲಿ ಎನ್ನುವುದು, ಆದಿತ್ಯನ ಬಳಿ ಮಾತಾಡಿ, ಅವರನ್ನು ವಾಪಸ್ಸು ಪಡೆಯಿರಿ, ಧೈರ್ಯ ತುಂಬಿ, ಬದುಕನ್ನು ರೂಪಿಸಿಕೊಳ್ಳಿ” ಕೌನ್ಸೆಲ್ಲರ್ ಮಾತುಗಳು ಕಿವಿಯಲ್ಲಿ ಮೊಳಗಿದಂತಾಯಿತು. ತಕ್ಷಣವೇ ಫೋನ್ ಎತ್ತಿದಳು” ಮಾವ, ಆದಿತ್ಯನ ನಂಬರ್ ಕೊಡಿ”.