Ashritha G

Abstract Classics Others

4.7  

Ashritha G

Abstract Classics Others

ಕಾಯುವುದೂ ಇಲ್ಲ...!

ಕಾಯುವುದೂ ಇಲ್ಲ...!

2 mins
352



    ಎಲ್ಲೊ ಹುಟ್ಟಿ ಬೆಳೆದ ಎರಡು ಜೀವಗಳು ಮದುವೆ ಎಂಬ ಸುಂದರ ಬಂಧನದಲ್ಲಿ ಒಂದಾಗಿ ನಮ್ಮದು ಎಂಬ ಪುಟ್ಟ ಪ್ರಪಂಚವನ್ನು ಕಟ್ಟುವುದು ಒಂದು ಸುಂದರ ಪಯಣ..ಈ ಪಯಣದ ದಾರಿ ಅಂದುಕೊಂಡಂತೆ ಇರದು.ಏರಿಳಿತಗಳ ನಡುವೆ ಸರಿದೂಗಿಸಿಕೊಂಡು ಹೋದರೆ ಬದುಕು ಸುಂದರ ಎನಿಸುತ್ತದೆ..ಎಲ್ಲರ ಬದುಕಿನಲ್ಲಿಯು ಎದುರಿಸುವ ಒಂದು ಮುಖ್ಯವಾದ ಘಟ್ಟವನ್ನು ಕಥೆಯ ರೂಪದಲ್ಲಿ ಬರೆಯುವ ಪ್ರಯತ್ನ ನನ್ನದು..ಒಂದೇ ವಾಕ್ಯವನ್ನು ಎರಡು ಘಟ್ಟದಲ್ಲಿ ಎರಡು ಧ್ವನಿಯಲ್ಲಿ ಪ್ರಯೋಗಿಸುತ್ತೇವೆ..ಯಾವುದೆಂದು ಯೋಚಿಸುತ್ತಿದ್ದೀರಾ..?ಮುಂದೆ ಓದಿ..

     ಸೂರ್ಯ ಛಾಯ ಮದುವೆಯಾಗಿ ಸುಂದರವಾದ ದಾಂಪತ್ಯದ ಬದುಕನ್ನು ಆರಂಭಿಸಿದ್ದರು.ಒಬ್ಬರನ್ನೊಬ್ಬರು ಅರಿತು ಸುಖ ದುಃಖಗಳನ್ನು ಸಮನಾಗಿ ಹಂಚಿಕೊಂಡು ಬಾಳುತ್ತಿದ್ದರು.ಮದುವೆಯಾದ ವರುಷದಲ್ಲಿ ಅದೃಷ್ಟ ವೆಂಬಂತೆ ಉದ್ಯೋಗದಲ್ಲಿ ಭಡ್ತೀ ಹೊಂದಿ ದೊಡ್ಡ ಸ್ಥಾನವನ್ನು ಗಿಟ್ಟಿಸಿಕೊಂಡ ಸೂರ್ಯನಿಗೆ ಕೆಲಸದ ಒತ್ತಡ ಪ್ರಾರಂಭವಾಯಿತು. ಮೊದಲೆಲ್ಲ ಹೆಂಡತಿಗೆ ಸಮಯ ಮೀಸಲಿಟ್ಟು ಹೊರಗೆಲ್ಲ ಸುತ್ತಾಡಿಕೊಂಡು ಬರುತ್ತಿದ್ದವನಿಗೆ ವೀಕೆಂಡ್ ಬಂತೆಂದರೆ ಆರಾಮಾಗಿ ಮನೆಯಲ್ಲಿ ರೆಸ್ಟ್ ಮಾಡಬೇಕೆಂದು ಅನಿಸಲು ಪ್ರಾರಂಭವಾಯಿತು. ಒಂದೆರಡು ತಿಂಗಳು ಸಮಾಧಾನವಾಗಿದ್ದ ಛಾಯ ಮನೆಯಲ್ಲಿಯೇ ಇದ್ದು ನನಗೂ ಬೇಸರವಾಗುತ್ತದೆ ಎಂದು ಗೋಗರೆಯಲು ಪ್ರಾರಂಭಿಸಿದಳು. ಅವಳ ಗೋಳಾಟ ನೋಡಲಾರದೆ ಸಿನಿಮಾಗೆ ಕರೆದುಕೊಂಡು ಹೋಗಲು ನಿರ್ಧರಿಸಿ ಕರೆದೊಯ್ದ.ಅರ್ಧ ಸಿನಿಮಾ ಮುಗಿಯುತ್ತಿದ್ದಂತೆ ತಲೆ ಸುತ್ತಿ ಬಿದ್ದ ಛಾಯಾ ಪ್ರಜ್ಞೆ ತಪ್ಪಿದಳು. ಗಾಬರಿಯಿಂದ ಅವಳನ್ನು ಕರೆದುಕೊಂಡು ಆಸ್ಪತ್ರೆಗೆ ಕರೆದೊಯ್ದವನಿಗೆ ಸಂತೋಷದ ಸಮಾಚಾರ ಒಂದು ಸಿಕ್ಕಿತ್ತು. ಹೌದು ನಿಮ್ಮ ಊಹೆ ಸರಿ.. ಛಾಯಾ ಗರ್ಭಿಣಿ ಎಂದು ವೈದ್ಯರು ತಿಳಿಸಿ ಒಂದಿಷ್ಟು ಮಾತ್ರೆ ಔಷಧಿಗಳನ್ನು ಬರೆದುಕೊಟ್ಟು ಕಳುಹಿಸಿದರು. ಇಬ್ಬರ ಸಂತಸ ಹೇಳಿತಿರದು. ಕೆಲಸದ ಒತ್ತಡವಿದ್ದರೂ ಮಡದಿಗಾಗಿ ಒತ್ತಡವನ್ನು ಬದಿಗೊತ್ತಿ ಸಮಯ ಕೊಡುವ ಪ್ರಯತ್ನ ಮಾಡುತ್ತಿದ್ದ. ಕೆಲವೊಮ್ಮೆ ಸಮಯ ಕೊಡಲಾಗದೆ ಇಬ್ಬರ ನಡುವೆ ಸಣ್ಣಪುಟ್ಟ ಚರ್ಚೆಗಳೂ ನಡೆಯುತ್ತಿದ್ದವು

      ಅಂತೂ ದಂಪತಿಗಳು ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿತು. ಮುದ್ದಾದ ಹೆಣ್ಣು ಮಗು ಹುಟ್ಟುವ ಮೂಲಕ ಅವರ ಬದುಕಿನ ಸಂತಸವನ್ನು ಹೆಚ್ಚಿಸಿತು.. ಒಂದು ಮಗುವಿನ ಹುಟ್ಟು ತಾಯಿಯ ದಿನಚರಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಛಾಯಾಳಿಗೂ ಕೂಡ ಈ ಅನುಭವಗಳು ಪ್ರಾರಂಭವಾದವು. ಮಗು ಯಾಕಾಗಿ ಅಳುತ್ತಿದೆ ಎಂದು ತಿಳಿಯದೆ ಅದೆಷ್ಟೋ ಬಾರಿ ಕಣ್ಣೀರು ಹಾಕುತ್ತಿದ್ದಳು.. ಸರಿಯಾಗಿ ಊಟ ತಿಂಡಿ ನಿದ್ದೆಯನ್ನು ಮಾಡಲಾಗದೆ ಸೊರಗಿದ್ದಳು. ಮಗು ಬೆಳೆಯುತ್ತಿದ್ದಂತೆ ಅದರ ಚೇಷ್ಟೆ ಹಠ ತರಲೆ ತುಂಟತನ ಸಂತಸ ಕೊಟ್ಟರು ನಿಭಾಯಿಸಲು ಕಷ್ಟವಾಗುತ್ತಿತ್ತು. ಸೂರ್ಯನಿಗೂ ಪ್ರಮೋಷನ್ ಆದ ಕಾರಣ ಹೆಚ್ಚಿನ ಸಮಯ ಮನೆಯವರಿಗೆಂದು ಕೊಡಲಾಗುತ್ತಿರಲಿಲ್ಲ. ಗಂಡ ಹೆಂಡತಿ ಕುಳಿತು ಮಾತನಾಡದೆ ಅದೆಷ್ಟೋ ವರ್ಷಗಳು ಕಳೆದಂತೆ ಭಾಸವಾಗುತ್ತಿತ್ತು.

     ಸಮಯ ಯಾರಿಗೂ ಕಾಯುವುದಿಲ್ಲ ವರ್ಷಗಳು ಉರುಳುತ್ತಿದ್ದಂತೆ ಛಾಯಾ ಮತ್ತೊಮ್ಮೆ ಗರ್ಭಿಣಿಯಾಗಿ ಇನ್ನೊಂದು ಸುಂದರ ಮಗುವಿಗೆ ಜನ್ಮ ನೀಡಿದಳು. ಮೊದಲ ಮಗು ಕಲಿಸಿದ ಪಾಠವನ್ನು ನೆನಪಿಟ್ಟು ಎರಡನೇ ಮಗುವನ್ನು ಬೆಳೆಸಲು ನಿರ್ಧರಿಸಿದಳು.ಈ ಬಾರಿಯೂ ಗಂಡನಿಂದ ಹೆಚ್ಚಿನ ಸಹಾಯ ನಿರೀಕ್ಷೆ ಮಾಡಲಾಗುತ್ತಿರಲ್ಲಿಲ್ಲ..ಎರಡು ಮಕ್ಕಳನ್ನು ಸಂಭಾಳಿಸುವುದು ಸವಾಲಾಗಿತ್ತು."ಎಷ್ಟು ಬೇಗ ದೊಡ್ಡವರಾಗುತ್ತಾರೆ ಇವ್ರು"ಎಂದು ಮನಸು ಕೂಗಿ ಕೇಳಿದಂತಾಗುತ್ತಿತ್ತು..

    ತರಲೆ ತುಂಟಾಟ ಜಗಳ ಹುಸಿ ಮುನಿಸುಗಳ ನಡುವೆ ಸಮಯ ಕಳೆದದ್ದು ತಿಳಿಯಲಿಲ್ಲ.. ಸೂರ್ಯನ ಕೆಲಸದ ಒತ್ತಡವು ಕೊಂಚ ಕಡಿಮೆಯಾಗುತ್ತಾ ಬಂತು.ಆರಾಮ್ ಆಗಿ ರಜಾದಿನಗಳಲ್ಲಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರು.. ನಿತ್ಯ ಮನೆಯಲ್ಲಿ ಜಗಳವಾಡುವ ಮಕ್ಕಳು ಬೆಳೆದು ಉನ್ನತ ಶಿಕ್ಷಣಕ್ಕೆ ಮನೆಯಿಂದ ಹೊರ ಹೋಗಬೇಕಾಗಿತ್ತು...ಓದು ಮುಗಿಸಿ ಕೆಲಸಕ್ಕೆ ಸೇರಿ ಮದುವೆ ವಯಸ್ಸಿಗೆ ಬಂದಾಗಿತ್ತು ಈಗ ಮನವು "ಎಷ್ಟು ಬೇಗ ದೊಡ್ಡವರಾಗುತ್ತಾರೆ ಇವ್ರು" ಮೊನ್ನೆ ಮೊನ್ನೆ ರಚ್ಚೆ ಹಿಡಿದು ಅಳ್ತಾ ಇದ್ರು..ನಿದ್ದೆ ಮಾಡಲು ಊಟ ಮಾಡಲು ಹಠ ಮಾಡುತ್ತಿದ್ದ ಮಕ್ಕಳು ಬೆಳೆದು ನಿಂತಿದ್ದಾರೆ ಎಂದು ಯೋಚಿಸಲು ಪ್ರಾರಂಭಿಸಿತು..

   ಹೌದು..ಸಮಯ ನಿಲ್ಲುವುದಿಲ್ಲ..ಯಾರಿಗಾಗಿ ಕಾಯುವುದು ಇಲ್ಲ.. ಓಡಿದಂತೆ ಅನಿಸುವುದು ಸಹಜ.. ರಾತ್ರಿ ಕಳೆದು ಹಗಲು , ಹಗಲು ಮುಗಿದು ರಾತ್ರಿ ಬಂದೇ ಬರುತ್ತದೆ. ಪ್ರತಿಯೊಬ್ಬ ತಾಯಿಯ ಮನಸ್ಥಿತಿ ಹೀಗೆ... ಮಕ್ಕಳನ್ನು ಸಂಭಾಳಿಸುವುದು ಸುಲಭದ ಕೆಲಸವಲ್ಲ...ಹಠ ಮಾಡುವಾಗ ಬೇಗ ದೊಡ್ಡವರಾಗಲಿ ಎನ್ನುವ ಮನಸು ಮುಗ್ಧ ಮಾತನ್ನು ಆಲಿಸುವಾಗ ಈ ಸಮಯ ಹೀಗೆ ಇರಬಾರದೇ ಎಂದು ಯೋಚಿಸದೆ ಇರದು.. ಅಲ್ಲವೇ?

          ಗರ್ಭಿಣಿಯಾದಾಗ ಬೇಗ ಮಗುವಾದರೆ ಸಾಕು ಎನ್ನುವ ಮನ ಮಗುವಾದ ಮೇಲೆ ಮಗು ಬೇಗ ನಡೆದರೆ ಸಾಕು ಎನ್ನುತ್ತದೆ. ನಡೆಯಲಾರಂಭಿಸಿದಾಗ ತಂಟೆ ತಡೆಯಲಾಗದೆ ಬೇಗ ದೊಡ್ಡವರಾದರೆ ಸಾಕು ಎನ್ನುವ ಮನ ದೊಡ್ಡವರಾಗುತ್ತಿದ್ದಂತೆ "ಎಷ್ಟು ಬೇಗ ಬೆಳೆದರು"ಎಂದು ಬೇಸರಿಸಿಕೊಳ್ಳುತ್ತದೆ...!ಇದುವೆ ತಾಯಿ ಹೃದಯ..ಅವಳು ತೋರುವ ಮಮತೆಗೆ ವಯಸ್ಸಿನ ಮಿತಿ ಇರುವುದಿಲ್ಲ... ಮಕ್ಕಳು ಎಷ್ಟೇ ದೊಡ್ಡವರಾದರು ತಾಯಿ ಮಗುವಂತೆಯೇ ಕಾಣುತ್ತಾಳೆ...ಪ್ರೀತಿಸುತ್ತಾಳೆ...ಆದರೆ ಬೆಳೆದು ನಿಂತ ಮಕ್ಕಳಲ್ಲಿ ಬಾಲ್ಯದ ಮುಗ್ಧತೆ , ಮುಗ್ಧ ಪ್ರೀತಿ ಮಾಯವಾಗಿರುತ್ತದೆ...ಅಲ್ಲವೇ..!

    

   


Rate this content
Log in

Similar kannada story from Abstract