STORYMIRROR

Ashritha Kiran ✍️ ಆಕೆ

Abstract Classics Others

4  

Ashritha Kiran ✍️ ಆಕೆ

Abstract Classics Others

ಕಾಲ ಮಿಂಚಿ ಹೋಗಿತ್ತು...!

ಕಾಲ ಮಿಂಚಿ ಹೋಗಿತ್ತು...!

3 mins
227


     ಮೃದುಲಾ ಅಪ್ಪನ ಮುದ್ದಿನ ಮಗಳು.ಅವಳು ಕೇಳಿದ್ದನ್ನು ಇಲ್ಲ ಎನ್ನುತ್ತಿರಲ್ಲಿಲ್ಲ.ವೆಂಕಟೇಶ್ ವಸುಧಾ ದಂಪತಿಗಳ ಮುದ್ದಿನ ಮಗಳಿಗೆ ಮೂಗು ತುದೀಯಲಿ ಕೋಪ.ಅಂದುಕೊಂಡಿದ್ದನ್ನು ಮಾಡಿಯೇ ಬಿಡುವಷ್ಟು ಹಠ ಛಲ ಮೃದುಲಾಳಿಗಿತ್ತು..ಅವಳು ಆಸೆಯಂತೆಯೇ ಓದಿ ಕೆಲಸಕ್ಕೆ ಸೇರಿದ್ದಳು.. ಮಗಳಿಗೆ ಮೊದಲಿನಿಂದಲೂ ತಾಯಿ ವಸುಧಾಳನ್ನು ಕಂಡರೆ ಒಂದು ರೀತಿಯ ತಾತ್ಸಾರ.ಅಮ್ಮ ಹೆಚ್ಚು ಓದಿಲ್ಲ..ತನ್ನ ಗೆಳತಿಯರ ತಾಯಿಯ ಹಾಗೆ ಹೊರೆಗೆಲ್ಲಾ ಸುತ್ತುವುದಿಲ್ಲ..ಮನೆಯಲ್ಲಿ ಬರಿ ಕೆಲಸ ಮಾಡಿಕೊಂಡು ಟೀ ವಿ ನೋಡುತ್ತಾ ಕಾಲ ಕಳೆಯುತ್ತಾಳೆ..ಅಪ್ಪನಂತೆ ಎಲ್ಲದಕ್ಕೂ ತನಗೆ ಬೆಂಬಲ ನೀಡದೆ ಎಲ್ಲದಕ್ಕೂ ಬೇಡ ಅನ್ನುತ್ತಾಳೆ ಎಂಬ ಅನೇಕ ಅಸಮಾಧಾನದ ಪಟ್ಟಿ ಅವಳಲ್ಲಿತ್ತು.ತಂದೆ ತಿದ್ದುವ ಪ್ರಯತ್ನದಲ್ಲಿ ಸೋತಿದ್ದರು.ಮೃದುಲಾಳ ತಾಯಿ ಅವಳ ವರ್ತನೆಗೆ ನೊಂದು ಅನೇಕ ಬಾರಿ ಕಣ್ಣೀರು ಸುರಿಸಿ "ನನ್ನ ಮಗಳೇ ಅಲ್ಲವೇ" ಎಂದು ಸಮಾಧಾನ ಪಟ್ಟುಕೊಂಡಿದ್ದರು..

     ಮನೆಯಲ್ಲಿ ಒಮ್ಮೆ ಯಾರು ಇಲ್ಲದ ವೇಳೆಯಲ್ಲಿ ಮೃದುಲಾಳ ತಾಯಿ ಅವಳಿಗೊಂದು ಪತ್ರ ಬರೆಯಬೇಕೆಂದು ನಿರ್ಧರಿಸಿ ಬರೆದು ಭದ್ರವಾಗಿ ಕಪಾಟಿನಲ್ಲಿಟ್ಟರು.. ಸಮಯ ಯಾರಿಗೂ ಕಾಯದು. ದಿನಗಳು ಉರುಳಿದಂತೆ ಮೃದುಲ ಮದುವೆ ವಯಸ್ಸಿಗೆ ಬಂದು ಮನೆಯಲ್ಲಿ ತೋರಿದ ಹುಡುಗನೊಂದಿಗೆ ಅದ್ದೂರಿಯಾಗಿ ಮದುವೆಯಾದಳು.. ಮದುವೆಯಾದ ಒಂದೆರಡು ವರ್ಷ ಎಲ್ಲವೂ ಚೆನ್ನಾಗಿತ್ತು. ಅವಳಂದು ಕೊಂಡ ಬದುಕು ಅವಳದ್ದಾಗಿತ್ತು ಎಂಬ ಸಂತಸದಲ್ಲಿದ್ದಳು.. ಹೀಗಿರುವಾಗ ಇನ್ನೊಂದು ಸಂತಸವೆಂಬಂತೆ ಮೃದುಲ ಗರ್ಭಿಣಿ ಎಂಬ ವಿಚಾರ ತಿಳಿಯಿತು. ಎಲ್ಲರಿಗಿಂತ ಹೆಚ್ಚು ಸಂತಸ ಪಟ್ಟವರು ಮೃದುಲಾಳ ತಾಯಿ. ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಮುಗಿಸಿ ಹೆರಿಗೆಗೆಂದು ತವರಿಗೆ ಕರೆದೊಯ್ದು ಅಚ್ಚುಕಟ್ಟಾಗಿ ಬಾಣಂತನವನ್ನು ಮಾಡಿ ಮನೆಗೆ ಕಳುಹಿಸಿಕೊಟ್ಟರು. ಮನೆಗೆ ಹಿಂದಿರುಗಿದ ಮೇಲೆ ತಾಯಿಯ ನಿಜವಾದ ಕಷ್ಟ ಅವಳಿಗರಿವಾಗುತ್ತಾ ಬಂತು..

ಅದೆಷ್ಟೋ ರಾತ್ರಿಗಳು ನಿದ್ದೆಗೆಟ್ಟು ಮಗುವನ್ನು ನೋಡಿಕೊಳ್ಳುವಾಗ ಅಮ್ಮನ ನೆನಪಾಗಿ ಕಣ್ಣೀರ ಹರಿಸುತ್ತಿದ್ದಳು.. ಮಗುವಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಅವಳ ಕೆಲಸ ಬಿಡಬೇಕಾಗಿತ್ತು. ಮಗು ಮನೆಯನ್ನು ನೋಡಿಕೊಳ್ಳುವುದರಲ್ಲಿ ದಿನ ಕಳೆದು ಹೋಗುತ್ತಿತ್ತು. ಒಂದು ದಿನ ಗಂಡ ಆಫೀಸಿನಿಂದ ಬರುವ ವೇಳೆಗೆ ಮೊಬೈಲ್ ನಲ್ಲಿ ಹಾಡು ಕೇಳುತ್ತಾ ಕುಳಿತಿದ್ದವಳನ್ನು ಕಂಡು ಹೌಹಾರಿದ .."ನಿನಗೇನು ಆರಾಮಾಗಿ ಹಾಡು ಕೇಳುತ್ತಾ ಕಾಲ ಕಳೆಯುತ್ತಿ ನನ್ನ ಹಾಗೆ ಹೊರಗೆ ಕೆಲಸಕ್ಕೆ ಹೋದರೆ ತಿಳಿಯುತ್ತಿತ್ತು ಹೊರಗಿನ ಟ್ರಾಫಿಕ್ ಕೆಲಸದ ಒತ್ತಡ ಎಲ್ಲವೂ ಸಾಕಾಗಿ ಹೋಗಿದೆ ನಿನ್ನಷ್ಟು ಪುಣ್ಯವಂತ ನಾನಲ್ಲ" ಎಂದು ತನ್ನ ಆಫೀಸ್ನ ಒತ್ತಡವನ್ನು ಸಹಿಸಲಾಗದೆ ಮೃದುಲಾಳ ಮೇಲೆ ಕೂಗಾಡಿದ.. ಅವಳ ಮನಸು ನೊಂದಿತು. ದಿನವಿಡೀ ಮಾಡುವ ಕೆಲಸ ಕಣ್ಣಿಗೆ ಕಾಣುವುದಿಲ್ಲ.. ಒಂದು ಮಗುವನ್ನು ನೋಡಿಕೊಳ್ಳುವ ಕಷ್ಟ ಇವರಿಗೇನು ಗೊತ್ತು ಎಂದು ಆಲೋಚಿಸುತ್ತಿರುವಾಗ.."ಆಹಾ ಆ ಟೀ ವಿ ಸಿರಿಯಲ್ ಇದ್ರೆ ಸಾಕಲ್ವಾ ಏನು ತಲೆ ಬಿಸಿ ಇಲ್ಲ ನಿಂಗೆ ಎಂಥಾ ಆರಾಮ್ ಲೈಫ್ ಅಮ್ಮ ನಿಂದು"ಎಂದು ಅಮ್ಮನಿಗೆ ಹೇಳಿದ ಮಾತುಗಳು ನೆನಪಾಗಿ ಚೂರಿ ಇರಿತದ ಅನುಭವವಾಯಿತು..ಅಮ್ಮನಿಗೆ ಅನ್ನುತ್ತಿದ್ದ ಮಾತುಗಳು ನೆನಪಾಗಿ ಬಹಳಾ ಸಂಕಟವಾಯಿತು..ಅಮ್ಮ ಈಗ ಅರಿವಾಗುತ್ತಿದೆ ನಿನ್ನ ಕಷ್ಟ ಎಂದು ಪರಿತಪಿಸಿದಳು.ಅಮ್ಮನ ಬಳಿ ಮಾತನಾಡಿ ಕ್ಷಮೆ ಕೇಳಬೇಕೆಂದುಕೊಂಡಳು.. ಗಡಿಯಾರ ಅದಾಗಲೇ 11 ತೋರಿಸುತ್ತಿತ್ತು. ಅಮ್ಮ ಮಲಗಿರಬಹುದು ಮುಂಜಾನೆ ಎದ್ದು ಮಾಡಿದರಾಯಿತು ಎಂದು ಸುಮ್ಮನಾದಳು..        ಮುಂಜಾನೆ ಎದ್ದು ಎಲ್ಲಾ ಕೆಲಸವನ್ನು ಮುಗಿಸಿ ಅಮ್ಮನಿಗೆ ಫೋನ್ ಮಾಡಬೇಕೆಂದು ಫೋನ್ ಹಿಡಿದವಳಿಗೆ ಆಶ್ಚರ್ಯವೆಂಬಂತೆ ಅಪ್ಪನಿಂದ ಕರೆ ಬರುತ್ತಿತ್ತು.. ಎತ್ತಿ ಮಾತನಾಡಿದವಳಿಗೆ ಆಕಾಶವೇ ಕಳಚಿ ಬಿದ್ದ ಹಾಗೆ ಭಾಸವಾಯಿತು. ರಾತ್ರಿ ಮಲಗಿ ಮುಂಜಾನೆ ಏಳುವಷ್ಟರಲ್ಲಿ ತಾಯಿ ಇಹಲೋಕ ತ್ಯಜಿಸಿದ್ದರು.. ಅಮ್ಮನ ಬಳಿ ಕ್ಷಮೆ ಕೇಳಬೇಕೆಂದುಕೊಂಡ ಮೃದುಲಾಳ ಆಸೆ ಈಡೇರಲೇ ಇಲ್ಲ.. ನೋವಿನಿಂದ ಅಮ್ಮನಿಗೆ ವಿದಾಯ ಸಲ್ಲಿಸಿ ತವರು ಮನೆಗೆ ಬಂದು ತನ್ನ ಬಟ್ಟೆಯನ್ನು ತೆಗೆಯಬೇಕೆಂದು ಕಬೋರ್ಡ್ ಬಾಗಿಲು ತೆಗೆದವವಳಿಗೆ ಪತ್ರ ಒಂದು ಕಾಣಿಸಿತು. ಇದೆಂತ ಪತ್ರ ಎಂದು ತೆಗೆದು ಓದಲಾರಂಭಿಸಿದಳು. " ಪ್ರೀತಿಯ ಮಗಳೇ...ನಿನಗೆ ಈ ಪತ್ರ ಬರೆಯಲು ಮುಖ್ಯ ಕಾರಣ ಒಂದಿದೆ. ಏಕೆಂದರೆ ಪ್ರತಿ ಬಾರಿ ನಾನು ಮಾತನಾಡುವಾಗ ಕೇಳಿಸಿಕೊಳ್ಳುವಷ್ಟು ತಾಳ್ಮೆ ನಿನ್ನ ಬಳಿ ಇರುತ್ತಿರಲಿಲ್ಲ. ಹಾಗಾಗಿ ಈ ಪತ್ರ. ಯಾವ ಜವಾಬ್ದಾರಿಯೇ ಆಗಲಿ ಅಂದುಕೊಂಡಷ್ಟು ಸುಲಭವಲ್ಲ .ಅದರಲ್ಲೂ ತಾಯಿಯಾಗಿ ನಿರ್ವಹಿಸುವ ಕರ್ತವ್ಯಗಳು ಎಣಿಸಿದಷ್ಟು ಸುಲಭವಲ್ಲ. ನನಗೂ ಓದಬೇಕೆಂಬ ಹಂಬಲವಿತ್ತು. ನಿನ್ನಜ್ಜ ನನ್ನನ್ನು ಓದಿಸಲು ಹಿಂಜರಿದರು. ನಿಮ್ಮಪ್ಪನ ಬಳಿ ನನ್ನ ಆಸೆಯನ್ನು ಹೇಳಿಕೊಂಡಾಗ ಇಬ್ಬರು ದುಡಿದು ಸಂಸಾರ ನಡೆಸುವುದೇನಿದೆ ನಾನೊಬ್ಬ ದುಡಿದರೆ ಸಾಕು ನೀನು ಮನೆ ನಿಭಾಯಿಸಿಕೊಂಡು ಹೋಗು ಎಂದರು. ಅವರ ಮಾತಿಗೆ ಇಲ್ಲವೆನ್ನದೆ ಮನೆಯಲ್ಲಿಯೇ ಉಳಿಯಬೇಕಾಯಿತು.ಪ್ರತಿ ಬಾರಿ ನೀನು ನನ್ನನ್ನು ತಾತ್ಸಾರದಿಂದ ಕಾಣುವಾಗ ಸತ್ತು ಹೋಗುವಷ್ಟು ಬೇಸರವಾಗುತ್ತಿತ್ತು. ಆದರೆ ಚಿಕ್ಕ ಹುಡುಗಿ ಜೀವನದ ಬಗ್ಗೆ ಇನ್ನೂ ಅನುಭವಕ್ಕೆ ಬಂದಿಲ್ಲ.. ಹೇಳುತ್ತಿರುವುದಾದರೂ ಯಾರು  ನನ್ನ ಮಗಳಲ್ಲವೆ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ. ಈಗ ನೀನು ತಾಯಿಯಾಗಿದ್ದಿ, ತಾಯಿಯ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸಬಲ್ಲೆ ಎಂಬ ನಂಬಿಕೆ ನನಗಿದೆ.ಆದರೆ ನೆನಪಿಟ್ಟುಕೋ ಮಗಳೇ ಮಕ್ಕಳು ಹರೆಯಕ್ಕೆ ಬಂದಾಗ ತಾಯಿಯಾದವಳನ್ನು ಕಂಡರೆ ಕೋಪಿಸಿಕೊಳ್ಳುವುದು ಮಾತು ಬಿಡುವುದು ನೋಯಿಸುವುದು ಎಲ್ಲವೂ ಸಹಜ. ಪ್ರೀತಿಯಿಂದ ತಿಳಿಸಿ ಹೇಳಬೇಕೆ ವಿನಃ ಯಾವುದೇ ಕಾರಣಕ್ಕೂ ಗದರಬೇಡ.ಗದರುವುದಾದರೆ ತಿರುಗಿ ಅವರ ಆಡುವ ಮಾತನ್ನು ಸಯಿಸಿಕೊಳ್ಳುವಷ್ಟು ಗಟ್ಟಿ ಮನಸನ್ನು ನೀನು ಮಾಡಬೇಕಾಗುತ್ತದೆ. ನನ್ನ ಮಗಳು ನೋವು ತಿನ್ನುವುದನ್ನು ನಾನು ಸಹಿಸಲಾರೆ. ಹಾಗಾಗಿ ಈಗಲೇ ನಿನ್ನನ್ನು ಎಚ್ಚರಿಸುತ್ತಿರುವೆ. ಇದನ್ನು ನನ್ನ ಕಿವಿ ಮಾತು ಎಂದುಕೊ.ತಾಯಿಯಾದವಳಿಗೆ ಸಹಿಸುವ ಶಕ್ತಿ ಹೆಚ್ಚಿರುತ್ತದೆ. ಆ ಸಹನೆಗೆ ಸವಾಲೊಡ್ಡುವ ಪ್ರಸಂಗಗಳು ಮನೆಯಲ್ಲಿ ನಡೆಯುತ್ತಲೇ ಇರುತ್ತವೆ. ಧೃತಿಗೆಡದೆ ಎದುರಿಸಬೇಕು.... ಇವಷ್ಟನ್ನು ನಿನ್ನೆದುರಿಗೆ ನಿಂತು ಹೇಳಬೇಕೆಂದುಕೊಂಡೆ ಆದರೆ ಅದಾಗಲಿಲ್ಲ. ಇದನ್ನು ಓದುವ ಹೊತ್ತಲ್ಲಿ ನಿನ್ನ ತಪ್ಪು ನಿನಗರಿವಾಗಿರಬಹುದು. ಕ್ಷಮೆ ಕೇಳಲಾಗಲ್ಲಿಲ್ಲ ಎಂದು ಪಶ್ಚಾತಾಪ ಪಡಬೇಡ ನಿನ್ನ ಮೇಲೆ ನನಗೆ ಯಾವ ಕೋಪವಿಲ್ಲ ಬೇಜಾರು ಇಲ್ಲ..ಸದಾ ನಗುತ್ತಿರು


ಇಂತಿ ನಿನ್ನ ಅಮ್ಮ

ಪತ್ರ ಓದಿದವಳಿಗೆ ಏನು ಮಾಡಬೇಕೆಂದು ತೋಚದೆ ತಾಯಿಯ ಭಾವಚಿತ್ರವನ್ನು ತಬ್ಬಿ ಅಳಲಾರಂಭಿಸಿದಳು.. ಎಷ್ಟೇ ನೋವು ಕೊಟ್ಟರು ಅವಮಾನ ಮಾಡಿದರು ಕ್ಷಮಿಸುವ ತಾಯಿಯ ದೊಡ್ಡಗುಣಕ್ಕೆ ತಲೆಬಾಗಿದಳು. ಅಮ್ಮನ ಕಷ್ಟಗಳು ನಾನು ಅಮ್ಮನಾದಾಗ ತಿಳಿಯಿತು.ಆದರೆ ಕ್ಷಮೆ ಕೇಳಲು ಅಮ್ಮ ಜೀವಂತವಿಲ್ಲ ಎಂದು ನೊಂದು ಕಣ್ಣೀರ ಸುರಿಸಿದಳು..

ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ತಾಯಿಯ ಹೃದಯ ಎಂದಿಗೂ ಕೆಡುಕನ್ನು ಬಯಸುವುದಿಲ್ಲ. ಅಮ್ಮನಾದವಳು ಹೇಳುವ ಮಾತುಗಳನ್ನು ಕಿವಿ ಕೊಟ್ಟು ಆಲಿಸಿದಾಗ ಆಕೆಯ ಅಂತರಾಳ ತಿಳಿಯುತ್ತದೆ. ಅಂತರಾಳ ತಿಳಿದಾಗ ಅವಳು ಅನುಭವಿಸಿದ ಸಂಕಟಗಳ ಅನುಭೂತಿಯಾಗುತ್ತದೆ. ಯಾವುದೇ ಆದರೂ ಅನುಭವಿಸಿದಾಗ ಮಾತ್ರ ಅದರ ವಾಸ್ತವ ತಿಳಿಯುತ್ತದೆ. ಆದರೆ ಅನುಭವಗಳನ್ನು ಹಂಚಿಕೊಳ್ಳುವವರ ಮುಂದೆ ಕೇಳುವ ಕಿವಿಗಳಿದ್ದಾಗ ಅನುಭವಿಸುವ ಪ್ರಮಾಣವನ್ನು ಕೊಂಚ ತಗ್ಗಿಸಬಹುದು.ತಾಯಿಯಾದವಳಿಗೆ ಪ್ರಪಂಚವೇ ತನ್ನ ಮಗುವಾಗಿರುತ್ತದೆ .ಆ ಮಗು ತನ್ನ ಮಾತುಗಳನ್ನ ಆಲಿಸದೆ ಇದ್ದಾಗ ಆಗುವ ಸಂಕಟ ಹೆರಿಗೆಯ ನೋವಿಗಿಂತ ದೊಡ್ಡದು. ತಂದೆ ತಾಯಿ ಇರುವಾಗಲೇ ಅವರ ಮಾತುಗಳನ್ನು ಆಲಿಸಿ, ಅವರಿಗೆ ಆಸರೆ ಆದರೆ ಅವರನ್ನು ಕಳೆದುಕೊಂಡ ಮೇಲೆ ಪಶ್ಚಾತಾಪ ಪಡುವ ಪ್ರಮೇಯ ವಿರುವುದಿಲ್ಲ ಅಲ್ಲವೇ...!



Rate this content
Log in

Similar kannada story from Abstract