ಕಾಡುತ್ತಿದೆ ಆ ಸಂತಸ, ಆ ಸಂಭ್ರಮ…
ಕಾಡುತ್ತಿದೆ ಆ ಸಂತಸ, ಆ ಸಂಭ್ರಮ…
ಹೊಸ ವರ್ಷ ಬಾಳಿಗೆ ತರಲಿ ನವಹರುಷ, ಉಲ್ಲಾಸ, ಉತ್ಸಾಹ. ಕಳೆದುಹೋದ ದಿನಗಳು ಕಲಿಸಿದ ಪಾಠದೊಂದಿಗೆ ನವ ಸಂವತ್ಸರವ ಖುಷಿಯಾಗಿ ಸ್ವಾಗತಿಸೋಣ ನಾವೆಲ್ಲರೂ. ನಮ್ಮೊಳಗೆ ಇದ್ದ ಭಯವನ್ನು ದೂರಮಾಡಿ ಮುಂದೆ ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಗೆದ್ದೇ ಗೆಲ್ಲುವೆನೆಂಬ ಆತ್ಮವಿಶ್ವಾಸದೊಂದಿಗೆ ಮುಂದಡಿಯಿಡೋಣ. ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದೆ, ಮುಂದೆ ಬರುವ ನೋವು-ನಲಿವುಗಳನ್ನು ಸಮನಾಗಿ ಸ್ವೀಕರಿಸೋಣ ಬೇವು-ಬೆಲ್ಲದಂತೆ.
ನನ್ನ ಪಾಲಿಗೆ ಕಳೆದ ಹತ್ತು ವರ್ಷಗಳಲ್ಲಿ ನನ್ನ ಪಾಲಿನ ಮಹತ್ವದ ವರ್ಷ 2016. ಈ ವರ್ಷ ನನ್ನ ಬಾಳಿನ ನನ್ನ ಜೀವನದ ತಿರುವಿಗೆ ಕಾರಣವಾದ ವರ್ಷ, ಅಂದರೆ ಎಸ್ಸೆಸೆಲ್ಸಿ ಪಾಸಾದ ವರ್ಷ. ಆ ಅದೃಷ್ಟದ ವರ್ಷವನ್ನು ನಾನೆಂದು ಮರೆಯಲಾರೆ. ಆದರೆ ಅಲ್ಲೂ ನೋವುಗಳನ್ನು ಅನುಭವಿಸಿದ್ದೇನೆ. 10ನೇ ತರಗತಿ ಪಾಸ್ ಎಂದು ಸಂತಸ ಖುಷಿ ಮನದ ಒಂದು ಮೂಲೆಯಲ್ಲಿದ್ದರೆ, ಹತ್ತು ವರ್ಷ ಜೊತೆಗಿದ್ದ ಜೀವಕ್ಕೆ ಜೀವ ನೀಡುವ ಗೆಳೆಯರ ಗೆಳೆತನದ ಅಗಲಿಕೆ ಸಂತಸಕ್ಕೆ ಸ್ವಲ್ಪ ಅಡ್ಡಿಪಡಿಸಿದ್ದಂತೂ ಸತ್ಯ.
ಈಗಲೂ ಆ ಕ್ಷಣಗಳು ಬೇವು-ಬೆಲ್ಲದಂತೆ, ಕಹಿಯ ಜೊತೆ ಸಿಹಿಯನ್ನೂ ತರುತ್ತವೆ. ನಮ್ಮ ತರಗತಿಯ ಡೆಸ್ಕನ್ನು ಬ್ಯಾಂಡ್ ನಂತೆ ಬಡಿದ ಸವಿನೆನಪು, ಗೆಳತಿಯರನ್ನು ಚುಡಾಯಿಸಿದ ಮೋಜು, ಅವರ ಉದ್ದುದ್ದನೆಯ ನಿಲ್ದಾಣವಿಲ್ಲದ ರೈಲಿನಂತಿದ್ದ ಬೈಗುಳ . ಅಧ್ಯಾಪಕರ ನಾಗರಬೆತ್ತದ ಏಟಿನ ರುಚಿ ನನ್ನ ಕಣ್ಣಮುಂದೆ ಬರುತ್ತದೆ. ಇವೆಲ್ಲದಕ್ಕೂ ಸಾಕ್ಷಿಯಾದ ತರಗತಿಯ ಗೋಡೆಗಳು ಇಂದಿಗೂ ಹಾಗೆ ಇವೆ. ಶಾಲೆಗೆ ಹೋದಾಗಲೆಲ್ಲ ಆ ದಿನಗಳನ್ನು ನೆನಪಿಸುತ್ತವೆ.
ಸಂತಸದಿಂದ ಸ್ವಾಗತಿಸಿದ ವರ್ಷ ಒಳ್ಳೆ ಅನುಭವಗಳ ಪಾಠದ ಮೂಲಕ, ಗೆಳೆಯರ ನೆನಪುಗಳ ಮೂಲಕ ಕೊನೆಯಾಯಿತು. ಹೊಸ ವರ್ಷದ ಆಗಮನಕ್ಕೆ ಕಾಯುವಾಗ, ಕಾಡುತ್ತಿದೆ ಆ ಸಂಭ್ರಮ, ಆ ಸಡಗರ.