ಚಳಿಗಾಲದ ಒಂದು ದಿನ
ಚಳಿಗಾಲದ ಒಂದು ದಿನ


ಶರಧಿ ಗೆ ಚಳಿಗಾಲ ಅಂದ್ರೆ ಏನೋ ಒಂದು ಆಪ್ತತೆ... ದೂರದ ಗಡಿಯಲ್ಲಿ ದೇಶ ಕಾಯೋ ಯೋಧನ ಮುದ್ದು ಮಡದಿ ಅವಳು...
ಬೆಳಗ್ಗೆ ನಿತ್ಯಕರ್ಮಗಳನ್ನು ಮುಗಿಸಿ ಅವಳು ಮಾಡೋ ಮೊದಲ ಕೆಲ್ಸ ಒಂದು ಕಪ್ ಬಿಸಿ ಬಿಸಿ ಕಾಫೀ ಹಿಡಿದು ತನ್ನ ಗಂಡನಿಗೆ ಒಂದು ಫೋನ್ ಮಾಡೋದು.... ಕರೆ ಸಿಕ್ಕಿದ್ರೆ ಆ ಕಾಫೀ ಮುಗಿಯೋ ವರೆಗೂ ಹರಟೆ... ಎಷ್ಟ್ ಆಗಲಿ ಯೋಧನ ಪತ್ನಿ ಅಲ್ಲವೇ... ಅವಳೇ ತನ್ನ ಗಂಡನ ಜವಾಬ್ದಾರಿ ಅರಿತು ತಾನೇ ತಾನಾಗಿ ಕರೆ ಕಟ್ ಮಾಡುವಳು...
ಪ್ರತಿ ಚಳಿಗಾಲಕ್ಕೆ ಅವಳ ಗಂಡ ಮನೆಗೆ ಬರುವ.. ಅವಳಿಗೆ ಅದಕ್ಕೆ ಚಳಿಗಾಲ ಅಂದ್ರೆ ಅಷ್ಟು ಆಪ್ತ.... ವರ್ಷ ಪೂರ್ತಿ ಚಳಿಗಾಲಕ್ಕೆ ಕಾಯುವಳು ಉಸಿರು ಬಿಗಿ ಹಿಡಿದು....
ಈ ಬಾರಿ ಏನೇ ಆಗಲಿ ಅವರು ಬಂದಾಗ ಒಂದು ಮುದ್ದು ಮಗು ತನಗೆ ಬೇಕು ಎಂದು ಹಠ ಮಾಡಲೇಬೇಕು.. ಈ ಒಂಟಿ ಜೀವನ ಸಾಕಾಗಿದೆ ಎಂದು ನಿರ್ಧಾರ ಮಾಡಿ ಮನೆಯನ್ನು ಸ್ವಚ್ಛ ಮಾಡಲು ಶುರು ಮಾಡಿದಳು..
ಇನ್ನೇನು ನಾಳೆ ತನ್ನ ಗಂಡ ಬರುವರು. ಬರೋಬ್ಬರಿ ಒಂದು ತಿಂಗಳು ತನ್ನ ಜೊತೆಗೆ ಇರುವರು.. ಮಾಡಬೇಕಾದ ಅಡುಗೆ ಎಲ್ಲ ಲಿಸ್ಟ್ ಮಾಡಿದ್ದಾಳೆ, ಸುತ್ತ ಬೇಕಾದ ಸ್ಥಳಗಳ ಮಾಹಿತಿ ಸಹ ಜೊತೆಯಲ್ಲಿ ತಯಾರು ಇದೆ... ಈ ಬಾರಿ ಏನೇ ಆಗಲಿ ತನಗೆ ಮಗು ಬೇಕೇಬೇಕು ಎಂದು ಹಠ ಹಿಡಿಯಲೇ ಬೇಕು ತನ್ನ ಒಡಲು ತುಂಬಲೆ ಬೇಕು ಎಂದು ಮನದಲ್ಲಿ ಗಟ್ಟಿ ನಿರ್ಧಾರ ಮಾಡಿದಳು...
ಆಗ್ಲೇ ಬಂತು ಮಿಲಿಟರಿ ವ್ಯಾನ್.. ಏನಿದು ನಾಳೆ ಬರುವುದು
ಒಂದೇ ಬಂದಿದೆ ಎಂದು ಲಗುಬಗೆ ಅಲ್ಲಿ ಆಚೆ ಓಡಿದ್ರೆ ಗಂಡನ ಸಮವಸ್ತ್ರ ನೀಡಲು ಒಬ್ಬ ಮೇಲಧಿಕಾರಿ ಜೊತೆ ರಾಷ್ರ ಧ್ವಜ ಹೊದ್ದು ಕೊಂಡು ಮಲಗಿದ್ದ ತನ್ನ ಗಂಡನು ನಾಲ್ಕು ಜನರ ಹೆಗಲು ದಾಟಿ ಮನೆಗೆ ಬಂದನು...
ಒಂದು ಹನಿ ಕಣ್ಣೀರು ಸಹ ಬರಲಿಲ್ಲ ಶರದಿಗೆ.. ಹೆಸರೇ ಶರದಿ ತಾನೇ ಅವಳೇ ಉಪ್ಪು ನೀರ ಸಮುದ್ರ... ತನ್ನ ಗಂಡನಿಗೆ ನೀಡಿದ ವಚನ ಅವಳಿಗೆ ಅರಿವಿತ್ತು... ಶರಧಿ ನಾನೂ ಇರೋದು ಸೇನೆಯಲ್ಲಿ ಯಾವ ಕ್ಷಣ ಮರಣ ನನ್ನ ಅಪ್ಪುತ್ತೋ ಗೊತ್ತಿಲ್ಲ, ನನ್ನ ಸಾವು ನಿನಗೆ ಕಣ್ಣೀರು ತರಿಸಬಾರ್ದು, ಹೆಮ್ಮೆ ಇರಲಿ ನನ್ನ ಮೇಲೆ ನಿನಗೆ ಸದಾ ಸರ್ವದಾ... ಅದರಂತೆ ನಡೆದಳು.. ಗಂಡನನ್ನು ಬೆಂಕಿಯ ಬಾಯಿಗೆ ಅರ್ಪಿಸಿ ಮನೆ ಗೆ ಬಂದಳು...
ಚಳಿಗಾಲ ತನ್ನ ಚಳಿಯನ್ನು ಮತ್ತಷ್ಟು ಹೆಚ್ಚಿಗೆ ಮಾಡಿತ್ತು... ಶರಧಿ ನಿರ್ಧರಿಸಿ ಆಗಿತ್ತು ಇಂದಿನ ದಿನವೇ ಒಂದು ಮಗುವನ್ನು ದತ್ತು ಪಡೆಯಬೇಕು ಎಂದು... ಅದರಂತೆ ಒಂದು ಹೆಣ್ಣು ಮಗು ಅವಳ ಮಗಳಾಗಿ ಬಂದಳು.. ಅವಳ ಹೆಸ್ರು ಭಾರತಿ....
ಎಷ್ಟೋ ಚಳಿಗಾಲ ಗಳು ಕಳೆದು ಹೋದವು.. ಶರಧಿ ಇಂದು ಕಾಯ್ತಾ ಇರುವಳು ಸೇನೆಯಿಂದ ಮನೆ ಬರುವ ತನ್ನ ಡಾಕ್ಟರ್ ಮಗಳ ನೀರಿಕ್ಷೆಯಲ್ಲಿ... ನೀರಿಲ್ಲದ ಕಣ್ಣುಗಳಲ್ಲಿ ನಿರೀಕ್ಷೆ ಮಾಡುತ್ತಾ... ಭಾರತಿ ಬಂದಳು ಅಪ್ಪನಂತೆ ಹೆಗಲ ಮೇಲೆ ಅಲ್ಲ, ತನ್ನ ಕಾಲ ಮೇಲೆ ನಡೆದುಕೊಂಡು... ಆಗ ಅತ್ತಳು ಶರಧಿ.. ಇಷ್ಟು ದಿನಗಳ ನೋವು ಕಣ್ಣೀರಾಗಿ ಹರಿದು ಶರಧಿಯೆ ಬರಿದು ಆಗುವಷ್ಟು.....