STORYMIRROR

Ashritha Kiran ✍️ ಆಕೆ

Abstract Inspirational Others

4  

Ashritha Kiran ✍️ ಆಕೆ

Abstract Inspirational Others

ಅವಿವೇಕಿ ವಿವೇಕ

ಅವಿವೇಕಿ ವಿವೇಕ

3 mins
357

"ವಿವೇಕ್ ಯೋಚನೆ ಮಾಡು.ನೀನು ಹೋಗ್ತಾ ಇರೋ ದಾರಿ ಸರಿ ಇಲ್ಲ"


"ಥೋ ಸುಮ್ಮನೆ ಇರು ಮಾರಾಯ ಇದ್ನ ಎಷ್ಟು ಸಾರಿ ಹೇಳ್ತ್ಯಾ"


"ನಾನು ನಿನ್ನ ಸ್ನೇಹಿತ.ಇನ್ನು ಹತ್ತು ಸಾರಿ ಹೇಳ್ತೀನಿ.ಗೆಳೆಯ ಹೋಗ್ತಾ ಇರೋ ದಾರಿ ಸರಿಯಿಲ್ಲ ಅಂತ ತಿಳಿದು ಮೇಲೆ ತಿದ್ದಿ ಬುದ್ಧಿ ಹೇಳೋನು ನಿಜವಾದ ಗೆಳೆಯ.ಬೇರೆಯವರ ಬಗ್ಗೆ ಗೊತ್ತಿಲ್ಲ.ನನ್ನ ಗೆಳೆಯ ಜೀವನ ಚೆನ್ನಾಗಿರಬೇಕು ಅಂತ ಬಯಸೋನು ನಾನು."


"ಅಯ್ಯೋ ರವೀಂದ್ರ..ಸಾಕು ಬಿಡೋ ನೀನು ಲೆಕ್ಚರರ್ ಅಂತ ಗೊತ್ತು.ನೀನು ನಿನ್ನ ಕಾಲೇಜು ಮಕ್ಕಳಿಗೆ ಕ್ಲಾಸ್ ಮಾಡು.ನನ್ನ ಬಿಟ್ಟುಬಿಡು ."


"ನಿಂಗೆ ನಾನು ಯಾಕೆ ಹೇಳ್ತಾ ಇದ್ದೀನಿ ಅಂತ ಅರ್ಥ ಆಗ್ತಿಲ್ವಾ? ನೀನು ಡಬ್ಬಲ್ ಗ್ರಾಜುವೇಟ್ ಆಗಿ ಹೀಗೆ ಯೋಚನೆ ಮಾಡ್ತಾ ಇದ್ಯಾ ಅಂದ್ರೆ ಆಶ್ಚರ್ಯ ಆಗ್ತಿದೆ.ನಿನ್ನ ಅಪ್ಪ ಅಮ್ಮ ನಿನ್ನ ಮೇಲೆ ತುಂಬ ನಂಬಿಕೆ ಇಟ್ಟಿದ್ದಾರೆ.ಅವರಿಗೆ ಮೋಸ ಮೋಡ್ಬೇಡ ."


"ನೋಡು ಮಗನ ಶ್ರೀಮಂತಿಕೆ ನೋಡಿ ಅವರು ಹೆಮ್ಮೆ ಪಡ್ತಾರೆ.ಬರಿ ತಿಂಗಳು ಸಂಬಳ ನಂಬಿಕೊಂಡು ಕೂತ್ರೆ ನಿನ್ನ ತರ ಅಪ್ಪನ ತರ ತಿಂಗಳ ಅಂತ್ಯದಲ್ಲಿ ಸಾಲ ಮಾಡ್ಬೇಕಾಗುತ್ತೆ.ನೀನು ನಂಗೆ ಬುದ್ಧಿ ಹೇಳೋ ಬದ್ಲು ನನ್ನ ಜೊತೆ ಕೈ ಜೊಡ್ಸು.ಬೇಗ ಶ್ರೀಮಂತ ಆಗಬಹುದು.ನನ್ನ ಹೀರೋ ಸುಮ್ ಸುಮ್ನೆ ಅಡ್ವಟೈಸ್ಮೆಂಟ್ ಕೊಡಲ್ಲ ಅವರು ಕೊಟ್ಟಿದ್ದಾರೆ ಅಂದಮೇಲೆ ಗ್ಯಾರೆಂಟಿ ಮೋಸ ಇರಲ್ಲ ನಾನ್ ರಮ್ಮಿ ಆಡ್ತೀನಿ ಹಣ ಗೆದ್ದೇ ಗೆಲ್ತಿನಿ ನೋಡು."


"ನಿನಗೆ ಬುದ್ಧಿ ಹೇಳ್ತಾ ಇದ್ದೀನಿ ನೋಡು ನಂಗೆ ಬುದ್ಧಿ ಇಲ್ಲ.ನಿನ್ನ ಅಮ್ಮ ನನ್ನ ಹತ್ರ ಬೇಡಿಕೊಂಡಿದಕ್ಕೆ ಬಂದೆ. ನಿನ್ನಪ್ಪ ನನಗೆ ಪಾಠ ಮಾಡಿದ ಮೇಷ್ಟ್ರು ಅವರಂದ್ರೆ ನನ್ ತುಂಬಾ ಗೌರವ ಅವರ ಮಗನಾಗಿ ನೀನು ಅವರು ತಲೆ ಎತ್ತಿ ನಿಲ್ಲೋ ಹಾಗೆ ಮಾಡೋದು ಬಿಟ್ಟು ಆನ್ಲೈನ್ ಗೇಮ್ಸ್ ಆಡಿ ಹಣ ಗಳಿಸ್ತೀನಿ ಅಂತ ಸಿಕ್ಕಿರೋ ಕೆಲಸ ಬಿಟ್ಟು ಮನೆಗೆ ಬಂದು ಕೂತು ಮೇಷ್ಟ್ರು ಮರ್ಯಾದೆ ಕಲಿತಿದ್ಯಲ್ಲ ನಾಚಿಕೆ ಆಗಬೇಕು ನಿನಗೆ.. ಹೇಳುವಷ್ಟು ಹೇಳಿದ್ದೇನೆ ಇನ್ನೂ ನಿನ್ನ ಹಣೆಬರಹ ಅನುಭವಿಸು.. ನಿನ್ ಹೀರೋ ಆ ಅಡ್ವಟೈಸ್ಮೆಂಟ್ ಗೆ ಕೋಟಿಗಟ್ಟಲೆ ತಗೊಂಡಿರ್ತಾರೆ ಅವರಿಗ್ ನಷ್ಟ ಇಲ್ಲ. ಆದರೆ ಅವರ ನಂಬಿ ಅವರ ಮಾತನ್ನು ನಂಬಿ ಸಿಕ್ಕ ಕೆಲಸ ಬಿಟ್ಟು ಹಳ್ಳಕ್ಕೆ ಹಾರ್ತಿದ್ಯಾ ನಿನ್ನ ಅಪ್ಪ-ಅಮ್ಮನಿಗೆ ಈ ವಯಸ್ಸಿನಲ್ಲಿ ಕಣ್ಣೀರು ಹಾಕಿಸ್ತಿದ್ಯಾ. ಕಡೆ ಸರಿ ಹೇಳ್ತಿದೀನಿ ಇದನ್ನ ಬಿಟ್ಟು ಮರ್ಯಾದೆಯಾಗಿ ಕೆಲಸ ಹುಡುಕೋ".


"ಸಾಕು ರವೀಂದ್ರ ಈಗಾಗಲೇ ತುಂಬಾ ಮಾತಾಡಿದ್ದಿ ನಾನೇನ್ ಮಾಡಬೇಕು ಅಂತ ನನಗೆ ಗೊತ್ತು. ನೀನು ಹೇಳಬೇಕಾದ ಅವಶ್ಯಕತೆ ನನಗಿಲ್ಲ.ಬಂದ್ ಕೆಲಸ ಆಗಿದ್ದರೆ ನೀನು ಹೋಗಬಹುದು".


ಗೆಳೆಯನ ಮಾತು ಕೇಳಿ ನೊಂದ ರವೀಂದ್ರ ಒಂದು ಕ್ಷಣ ಅಲ್ಲಿ ನಿಲ್ಲದೆ ಹೊರಟ.


ಮರುದಿನ ಬೇಸರದ ಮುಖ ಹೊತ್ತು ಶ್ರೀಕಂಠ ಮೇಷ್ಟ್ರ ಮುಂದೆ ನಿಂತು ರವೀಂದ್ರ ಕ್ಷಮೆ ಕೇಳಿದ."ನೀವು ವಿವೇಕ್ ಗೆ ಬುದ್ದಿ ಹೇಳಿ ಮನವೊಲಿಸುವುದು ಬೇಡಾ ಎಂದು ಹೇಳಿದ್ರಿ ಆದರೆ ಸ್ನೇಹದ ಮಾತಿಗೆ ಬೆಲೆ ಕೊಟ್ಟು ಬರ್ತಾನೆ ಅಂತ ನಂಬಿಕೆಯಿಂದ ಹೋದೆ.ಆದರೆ ಸೋತೆ ಮೇಷ್ಟ್ರೇ" ಎಂದು ಕೈ ಹಿಡಿದು ಅಳಲಾರಂಭಿಸಿದ.


ಶ್ರೀಕಂಠ ಮೇಷ್ಟ್ರ ರವೀಂದ್ರನ್ನನು ಮೇಲೆತ್ತಿ ಪಕ್ಕದಲ್ಲಿ ಕೂರಿಸಿಕೊಂಡು ದೀರ್ಘವಾದ ಉಸಿರನ್ನು ಹೊರದಬ್ಬಿ ಮಾತನಾರಂಭಿಸಿದರು..


ಹೊಳೆಯ ನೀರೊಬ್ಬನೆ| ಅಳೆಯಬಹುದೆಂದರೆ| ಅಳೆಯಬಹುದೆನಬೇಕು ಮೂರ್ಖನಿಗೆ| ತಿಳಿಯಹೇಳಲು ಬೇಡ |ಸರ್ವಜ್ಞ |


ಇದರ ಅರ್ಥ ನಿನಗೆ ನೆನಪಿದೆಯಾ ರವಿ ಎಂದು ಮೇಷ್ಟ್ರು ಬಾಯಿ ಮುಚ್ಚುವಷ್ಟರಲ್ಲಿ "ಹೊಳೆಯ ನೀರನ್ನು ಒಬ್ಬನೇ ಅಳತೆ ಮಾಡಬಹುದೆಂದರೆ, ಹೌದು ಅಳೆಯಬಹುದು ಎಂದರೆ ಹುಂ ಎನ್ನಬೇಕು. ಮೂರ್ಖನಿಗೆ ಮಾತ್ರ ಬುದ್ಧಿ ಹೇಳಬೇಡ" ಎಂದಲ್ಲವೇ ಎಂದು ಮಾತು ನಿಲ್ಲಿಸಿದ.


"ಹೌದು ರವೀಂದ್ರ ವಿವೇಕ ಅವಿವೇಕದಿಂದ ನಿರ್ಧಾರ ಕೈಗೊಂಡಿದ್ದಾನೆ ಅವನಿಗೆ ಬುದ್ಧಿ ಹೇಳುವುದು ವ್ಯರ್ಥ ಪ್ರಯತ್ನ. ಎರಡರಷ್ಟು ಹಣ ಸಂಪಾದಿಸಿ ಶ್ರೀಮಂತನಾಗುತ್ತೇನೆ ಎಂಬ ದಾರಿಯನ್ನು ಹಿಡಿದಿದ್ದಾನೆ ಹಣಗಳಿಸಲು ಕಷ್ಟಪಟ್ಟು ದುಡಿಯುವ ಬದಲು ಜೂಜಾಡಿ ಸಂಪಾದಿಸುತ್ತೇನೆ ಎಂದು ಹೊರಟವನ್ನನು ತಡೆಯುವ ಪ್ರಯತ್ನ ಒಂದೆರಡು ಬಾರಿ ಮಾಡಬಹದಷ್ಟೇ. ಹೇಳಿದ್ದನ್ನು ಕೇಳದಿದ್ದಾಗ ಹಣೆಬರಹವನ್ನು ಅನುಭವಿಸಲು ಬಿಡಬೇಕು. ಬೇಸರ ಮಾಡಿಕೊಳ್ಳಬೇಡ ಮಗು" ಎಂದು ಸಮಾಧಾನ ಮಾಡಿ ಕಳುಹಿಸಿದರು.


ವಿವೇಕ್ ಆನ್ಲೈನ್ ರಮ್ಮಿ ಆಡಲು ಹೋಗಿ ಕೈಯಲ್ಲಿದ್ದ ತನ್ನ ಗಳಿಕೆಯ ಹಣವನ್ನು ಕಳೆದುಕೊಂಡು ಬೀದಿಗೆ ಬೀಳುವಂತಾದ.ಒಂದಿಷ್ಟು ಸಾಲ ಮಾಡಿ ಸಾಲಗಾರರಿಂದ ತಪ್ಪಿಸಿಕೊಂಡು ಓಡಾಡಲು ಆರಂಭಿಸಿದ. ಅಪ್ಪ ಅಮ್ಮ ಗೆಳೆಯ ಹೇಳಿದ ಮಾತುಗಳೆಲ್ಲ ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಒಂದೊಂದೇ ನೆನಪಾಗಲು ಪ್ರಾರಂಭವಾಯಿತು. ಆದರೆ ಸಮಯ ಮಿಂಚಿಹೋಗಿತ್ತು. ಹಣ ಗಳಿಸಲು ಅಡ್ಡ ಮಾರ್ಗವನ್ನು ಹಿಡಿದರೆ ಅಥವಾ ಬೇಗ ಹಣ ಗಳಿಸುತ್ತೇನೆ ಎಂಬ ಆತುರದಲ್ಲಿ ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಅದು ಬದುಕಿನ ನೆಮ್ಮದಿಯನ್ನು ಸರ್ವನಾಶ ಮಾಡುತ್ತದೆ ಎಂದು ಅಪ್ಪ ಹೇಳುತ್ತಿದ್ದ ಮಾತನ್ನು ನೆನೆದು ತನ್ನ ಅವಿವೇಕದ ಕೆಲಸಕ್ಕೆ ಪಶ್ಚಾತಾಪ ಪಟ್ಟ. ಕಷ್ಟಪಟ್ಟು ದುಡಿದು ನಾಲ್ಕು ಜನರಿಗೆ ಪಾಠ ಮಾಡುತ್ತಿದ್ದ ಅಪ್ಪನನ್ನು ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳುವ ಬದಲು ನಟನೆ ಮಾಡುವವರನ್ನು ನಿಜ ಬದುಕಿನ ಹೀರೋ ಎಂದು ತಿಳಿದು ಅವರು ಹೇಳಿದ ಮಾತುಗಳನ್ನು ತನ್ನ ಬುದ್ಧಿಯಿಂದ ಯೋಚಿಸದೆಯೇ ಜೀವನ ಹಾಳು ಮಾಡಿಕೊಂಡೆನಲ್ಲ ಎಂದು ಕೊರಗಿದ. ಬುದ್ಧಿ ಹೇಳಲು ಬಂದವನನ್ನು ಬೈದು ಕಳುಹಿಸಿದೆನಲ್ಲ ಎಂದು ಗೆಳೆಯನನ್ನು ನೆನೆದು ಕಣ್ಣೀರಿಟ್ಟ.. ಮನಸು ಖಿನ್ನತೆಗೆ ಒಳಪಟ್ಟು ಆತ್ಮಹತ್ಯೆ ನಿರ್ಧಾರ ಕೈಗೊಂಡ.ಬದುಕಿನ ಪಯಣಕ್ಕೆ ಅಂತ್ಯ ಹಾಡಿದ.


ಇದು ಹೀಗೆ ಆಗೋದೆಂದು ತಿಳಿದಿದ್ದ ಶ್ರೀಕಂಠ ಮೇಷ್ಟ್ರಿಗೆ ಮಗನ ಸಾವು ಆಘಾತ ತರಲಿಲ್ಲ.ಮಗನ ಉದಾಹರಣೆಯನ್ನು ನೀಡುತ್ತಾ, ಇನ್ನಷ್ಟು ಮಕ್ಕಳಿಗೆ ಮಾದರಿಯಾದರು. ತಂದೆ ತಾಯಿ ಇಲ್ಲದ ರವೀಂದ್ರ ವಿವೇಕನ ತಂದೆ ತಾಯಿಗೆ ಮಗನಂತೆ ಹೆಗಲಾದ.


Rate this content
Log in

Similar kannada story from Abstract