ಅತ್ಯಾಚಾರವೆಂಬ ಅನಾಚಾರ
ಅತ್ಯಾಚಾರವೆಂಬ ಅನಾಚಾರ
ಎಳೆ ಮಗುವಿಗೆ ಆನ್‌ಲೈನ್‌ನಲ್ಲಿ ಅತ್ಯಾಚಾರದ ಬೆದರಿಕೆ, ಪ್ರೀತಿಯ ಸೋಗಿನಲ್ಲಿ ಮೋಸ, ಸಾಮೂಹಿಕ ಅತ್ಯಾಚಾರ- ಕೊಲೆ, ಕಾಲೇಜ್‌ನಲ್ಲೇ ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆ….ಹೀಗೆ ಒಂದಲ್ಲಾ ಒಂದು ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಇಂತಹ ʼಸುದ್ದಿʼ ಗಳನ್ನು ಕೇಳಿದಾಗ ನಮ್ಮಲ್ಲಿ ವಿಷಾದದ ಛಾಯೆಯೊಂದು ಹಾದು ಹೋಗುತ್ತದೆ.
ಹೆಣ್ಣೆಂದರೆ ಆಕೆಗೂ ಸುಂದರವಾದ ಬದುಕು ಸಾಗಿಸಬೇಕೆಂಬ ಬಯಕೆಯಿಲ್ಲವೇ? ಕನಸು ನನಸಾಗಿಸಿಕೊಳ್ಳುವ ತವಕ, ಅಪೂರ್ವವಾದುದನ್ನು ಸಾಧಿಸಬೇಕೆಂಬ ಹಂಬಲ ಅಕೆಗಿಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಸ್ವತಂತ್ರವಾಗಿ ತನ್ನ ಜೀವನ ರೂಪಿಸಿಕೊಳ್ಳುವ ಅಧಿಕಾರವನ್ನು ನಿರಾಕರಿಸಲಾದೀತೇ? ಅವಳಿಗೂ ಒಂದು ಮನಸ್ಸಿದೆ, ಅದರಲ್ಲೂ ಭಾವನೆಗಳಿವೆ ಎಂಬುದನ್ನೂ ನಾವು ಮರೆಯುತ್ತೇವೇಕೆ?
ಆಕೆ ತನ್ನದೇ ಪ್ರಪಂಚದೊಳಗೆ ಸವಾಲುಗಳ ಮೆಟ್ಟಿನಿಂತು ಎದುರಾಳಿಗಳ ತಾಳಕ್ಕೆ ಕುಣಿಯದೆ ಸಂತಸದಿಂದ ಜೀವನ ಸಾಗಿಸುತ್ತಾಳೆ. ನಿಜವೆಂದರೆ ಭಾವನೆಗಳಿಗೆ ಕೂಡಲೆ ಸ್ಪಂದಿಸುವ, ಆದರೆ ಕಷ್ಟಕಾಲದಲ್ಲಿ ಕುಗ್ಗತೆ ತನ್ನನ್ನೂ ಸಂಭಾಳಿಸಿಕೊಂಡು ತನ್ನವರಿಗೂ ಧೈರ್ಯ ತುಂಬುವ ಶಕ್ತಿ ಹೆಣ್ಣಿಗೆ ಮಾತ್ರವಿದೆ. ಆದರೆ ಕಟುಕರ ಅನಾಚಾರ ಕೃತ್ಯದಿಂದ ಹೆಣ್ಣಿನ ಮಾನ ಪ್ರಾಣ ಎಲ್ಲವೂ ಕ್ಷಣಕಾಲದಲ್ಲೇ ಆರಿದ ದೀಪದಂತಾಗುತ್ತದೆ. ಮತ್ತೆಂದೂ ಬೆಳಗದಂತೆ.
ಅವರ ಇಂತಹ ಕೃತ್ಯಕ್ಕೆ ಹೆಣ್ಣು ಮನಸ್ಸು ಎಷ್ಟು ರೋಧಿಸಿರಬೇಡ. ಎಷ್ಟೊಂದು ಹಿಂಸೆ ಅನುಭವಿಸಿರಬೇಡ. ಆ ಕ್ಷಣದಲ್ಲಿ ಭಗವಂತನು ಮೌನಕ್ಕೆ ಜಾರಿದನೇನೋ. ನನ್ನಿಂದ ಏನು ಆಗದು ಎಂಬಂತೆ ಎಲ್ಲವೂ ನೋಡಿ ಸುಮ್ಮನಿದ್ದನೋ. ಆದರೆ ಇಂತಹ ಘಟನೆಗಳು ಹೆಣ್ಣು ಮಕ್ಕಳ ನಿದ್ದೆ ಕೆಡಿಸುವಂತೆ ಮಾಡಿರುವುದಂತೂ ಸತ್ಯ. ಅವರು ಸ್ವತಂತ್ರವಾಗಿ ಹೊರಗೆ ಹೋಗಲು ಭಯದ ವಾತಾವರಣ ನಿರ್ಮಾಣವಾಗುತ್ತದೆ.
ಅತ್ಯಾಚಾರಿಗಳೆಂಬ ಅಸುರ ಮೃಗಗಳಿಗೆ ಘೋರ ಶಿಕ್ಷೆ ಆಗಬೇಕು. ಇಂತಹ ಕೃತ್ಯ ಮಾಡುವವರು ಮನುಷ್ಯರಲ್ಲ. ಅವರು ನರಭಕ್ಷಕ ದುರುಳರು. ಅನಾಚಾರವೇ ತುಂಬಿಕೊಂಡಿರುವ, ಸ್ವಂತ ವಿವೇಕವಿದ್ದರೂ ಅವಿವೇಕಿಗಳಂತೆ ವರ್ತಿಸುವ ನೀಚರು. ಇಂತಹವರಿಗೆ ಎಲ್ಲರಿಗೂ ಎಚ್ಚರಿಕೆಯಾಗುವಂತಹ ಶಿಕ್ಷೆಯಾಗಬೇಕು. ಅತ್ಯಾಚಾರವೆಂಬ ಅನಾಚಾರ ಎಸಗಲು ಮುಂದೆದೂ ಯಾರೂ ಧೈರ್ಯ ಮಾಡಬಾರದು.
