ಅಲೆ ಬಂತು ಅಷ್ಟೇ
ಅಲೆ ಬಂತು ಅಷ್ಟೇ
ಡಿಸೆಂಬರ್ ತಿಂಗಳು ಕಾಲೇಜಿಗೆ ಒಂದು ವಾರ ರಜಾ ಇದ್ದ ಕಾರಣ ತಾರಿಣಿ ಮನಸಿನ ಭಾರ ಕಡಿಮೆ ಮಾಡಿಕೊಳ್ಳಲು ಹೊರಟು ನಿಂತಳು...ಹಳೆಯ ನೆನಪುಗಳು ಅಪ್ಪಳಿಸುತ್ತಿತ್ತು.. ಎಲ್ಲವನ್ನು ಬದಿಗೊತ್ತಿ ಗಟ್ಟಿ ಮನಸು ಮಾಡಿ ಈ ಬಾರಿ ಹೊರಟಿದ್ದಳು..ಪ್ರತಿ ವರುಷ ಹೋಗಬೇಕು ಎಂದು ಯೋಚಿಸಿ ನಿರ್ಧಾರ ಕೈ ಬಿಡುತ್ತಿದ್ದಳು..ಈ ಬಾರಿ ಬದಲಾಯಿಸದೆ ಹೊರಟಳು..
ಧೋ ಎಂದು ಕಡಲಿಗೆ ಅಪ್ಪಳಿಸುವ ಅಲೆಯ ಶಬ್ದ ಕೇಳುತ್ತಾ ಸುಯ್ಯ ಎಂದು ಬೀಸುವ ಗಾಳಿಗೆ ಹಾರುತ್ತಿದ್ದ ಮುಂಗುರುಳನ್ನು ಹಿಂದಕ್ಕೆ ಸುರಿಸುತ್ತಾ ಸಮುದ್ರದ ದಡದಲ್ಲಿ ಕುಳಿತು ಮುಳುಗುತ್ತಿದ್ದ ಕೆಂಪಾದ ರವಿಯನ್ನು ನೋಡುತ್ತಾ ಒತ್ತರಿಸಿ ಬರುತ್ತಿದ್ದ ಅಳುವನ್ನು ತಡೆಯಲು ಪ್ರಯತ್ನಿಸಿ ಸೋತು ಕಣ್ಣೀರನ್ನು ಹರಿಯಲು ಬಿಟ್ಟು ಕಣ್ಮುಚ್ಚಿ ಕುಳಿತಳು.. ಬದುಕಿನಲಿ ಊಹಿಸದ ಘಟನೆ ನಡೆದು ಹೋಗಿತ್ತು..ವಿಧಿಯ ಆಟಕ್ಕೆ ತಾರಿಣಿಯ ಬದುಕು ಏರುಪೇರಾಗಿ ನಲುಗುವಂತೆ ಮಾಡಿತು..ಹಿಂದಿನ ದಿನಗಳನ್ನು ನೆನೆಯಲಾರಂಭಿಸಿದಳು....
ಮುದ್ದಾದ ಕುಟುಂಬ ತಾರಿಣಿಗೆ ವರವಾಗಿ ದೊರೆತಿದೆ ಎಂದು ಎಲ್ಲರೂ ಮಾತನಾಡುವಂತಿತ್ತು ಅವಳ ಕುಟುಂಬ..ಪ್ರೀತಿಯಿಂದ ಕಾಳಜಿಯಿಂದ ಓದಿಸಿ ಬೆಳೆಸಿದ ಅಪ್ಪ ಅಮ್ಮ ಒಂದೊಳ್ಳೆ ವರನನ್ನು ಹುಡುಕಿ ಮದುವೆ ಮಾಡಿದ್ದರು..ತಾರಿಣಿಯ ಗಂಡ ವರುಣ್ ವೃತ್ತಿಯಲ್ಲಿ ಉಪನ್ಯಾಸಕನಾಗಿದ್ದ..ಅವಳ ಅತ್ತೆ ಮಾವನಿಗೆ ತಾರಿಣಿ ಬರಿ ಸೊಸೆಯಾಗಿರಲ್ಲಿಲ್ಲ ಮನೆಯ ಮಗಳು ಆಗಿದ್ದಳು..ತಾರಿಣಿ ವರುಣ್ ಮದುವೆಯಾಗಿ ಎರಡು ವರುಷ ಕಳೆಯುತ್ತಿದ್ದಂತೆ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು..ದೇವರು ಎಲ್ಲವನ್ನು ಕೊಟ್ಟಿದ್ದಾನೆ ಎಂದು ಸಂತೃಪ್ತಿಯಿಂದ ನೆಮ್ಮದಿಯಿಂದ ಸಂತೋಷದಿಂದ್ದರು..
ವರುಣ್ ಕಾಲೇಜಿಗೆ ರಜೆ ಇತ್ತೆಂದರೆ ಮನೆಯವರನ್ನು ತಿರುಗಾಡಲು ಕರೆದೊಯ್ಯುತ್ತಿದ್ದ..ಅಂತೆಯೆ ಎಲ್ಲಾ ಪ್ಲಾನ್ ಮಾಡಿ 3 ದಿನದ ಮಟ್ಟಿಗೆ ಗೋವಾಗೆ ಹೋಗಲು ತಯಾರಿ ನಡೆಸಿ ಹೊರಟರು..ಹೊರಡವಾಗ ತಾರಿಣಿ ಮನಸಿಗೆ ಹೇಳಲಾಗದ ಕಸಿವಿಸಿಯನ್ನು ಅನುಭವಿಸುತ್ತಿದ್ದಳು..ಈ ಬಾರಿ ಅವಳ ಅಪ್ಪ ಅಮ್ಮನನ್ನು ಜೊತಗೆ ಕರೆದುಕೊಂಡು ಹೊಗಲಾಗಿತ್ತು..ತಾರಿಣಿ ಮನದಿ ಮೂಡಿದ ಭಯವನ್ನು ತೋರಿಸಿದೆ ನಗುನಗುತಾ ಅವರೊಂದಿಗೆ ಕಾಲಕಳೆಯಲು ಪ್ರಯತ್ನಿಸುತ್ತಿದ್ದಳು..
ಅಂದುಕೊಂಡಂತೆ ಆರಾಮ್ ಆಗಿ ಗೋವಾ ತಲುಪಿ ಒಂದು ದಿನ ಸಂತಸದಿಂದ ಕಳೆದರು..ಆರು ವರುಷದ ಇಬ್ಬರು ಪೋರರಂತೂ ನೀರಿನಲ್ಲಿ ಬಿದ್ದು ಹೊರಳಾಡಿ ನಲಿಯುತ್ತಿದ್ದರು...ಎರಡನೆಯ ದಿನದಂದು ಹಗಲೆಲ್ಲಾ ಊರು ಸುತ್ತಿ ಸಂಜೆ ಮತ್ತೆ ಸಮುದ್ರ ತೀರಕ್ಕೆ ಬಂದರು..ಹಿಂದಿನ ದಿನಕ್ಕಿಂತ ನೀರಿನ ಮಟ್ಟ ಹಾಗು ರಭಸ ಎರಡೂ ಜಾಸ್ತಿ ಇತ್ತು.. ವರುಣ್ ಗೆ ಎಷ್ಟು ಬಾರಿ ತಾರಿಣಿ ಹೇಳಿದರು ಕೇಳದೆ "ನೀನು ಹೆದರಿ ಹೆದರಿ ಇಲ್ಲೇ ಕೂತು ನೋಡು ನಾವು ಮಜಾ ಮಾಡೊದನ್ನ"ಎಂದು ಹೇಳುತ್ತಾ ಮಕ್ಕಳು ಅಪ್ಪ ಅಮ್ಮ ಅತ್ತೆ ಮಾವನನ್ನು ಕರೆದುಕೊಂಡು ನೀರಿಗಿಳಿದ..
ತಾರಿಣಿ "ರೀ ಉಷಾರು"ಎಂದು ಹೇಳಿ ಬಾಯಿ ಮುಚ್ಚುವಷ್ಟರಲ್ಲಿ ಭೀಕರವಾದ ರಕ್ಕಸ ಅಲೆಯೊಂದು ದಡಕ್ಕೆ ಅಪ್ಪಳಿಸಿತು.. ಅಲೆ ಬಂತು ಅಷ್ಟೇ... ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ತಾರಿಣಿಯ ಈಡಿ ಕುಟುಂಬ ನೀರಿನಲ್ಲಿ ದಿಕ್ಕು ತಪ್ಪಿದ್ದರು..ಕೂಗಿ ಕಿರುಚಿ ಜನ ಸೇರಿಸಿದರು ಯಾರನ್ನು ಕಾಪಾಡಲು ಸಾದ್ಯವಾಗಲ್ಲಿಲ್ಲ.. ತೀವ್ರವಾದ ಹುಡುಕಾಟದ ನಂತರ ಎಲ್ಲರ ಹೆಣಗಳು ಸಿಕ್ಕವು..ದಿಕ್ಕು ತೋಚದೇ ಕಂಗೆಟ್ಟು ಕುಳಿತಳು.. ತಾರಿಣಿ ಎಲ್ಲರನ್ನೂ ಕಳೆದುಕೊಂಡು ಅನಾಥೆಯಾದಳು..ಅದ್ಯಾರ ಕಣ್ಣು ಈ ಸುಂದರ ಕುಟುಂಬದ ಮೇಲೆ ಬಿದ್ದಿತ್ತು ತಿಳಿಯಲ್ಲಿಲ್ಲ...ಒಂದು ಅಲೇ 6 ಜೀವವನ್ನು ತನ್ನೊಳಗೆ ಸೆಳೆದುಕೊಂಡಿತು.
ತಾರಿಣಿ ಅಂದಿನಿಂದ ಒಂಟಿಯಾದಳು..ಓದಿದ್ದರಿಂದ ಜೀವನೋಪಾಯಕ್ಕೆ ಉಪನ್ಯಾಸಕಿಯಾಗಿ ಕಾಲೇಜೊಂದಕ್ಕೆ ಸೇರಿದಳು...ಮಕ್ಕಳೊಂದಿಗೆ ಕಾಲ ಕಳೆಯುತ್ತಾ ತನ್ನ ನೋವನ್ನು ಮರೆಯಲು ಪ್ರಯತ್ನಿಸುತ್ತಾ ಜೀವನ ನಡೆಸಲಾರಂಭಿಸಿದಳು. ಕಾಲೇಜಿಗೆ ರಜೆ ಬಂತೆಂದರೆ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡು ವಿಧಿಯ ಬರಹಕ್ಕೆ ಶಪಿಸುತ್ತಾ ಕಳೆಯುತ್ತಿದ್ದಳು.. ಬದುಕಿನ ಈ ಕರಾಳ ಘಟನೆಯ ನಂತರ ಸಮುದ್ರ ತೀರಕ್ಕೆ ಹೋಗುವುದನ್ನೇ ಬಿಟ್ಟಿದ್ದಳು..
ಆದರೆ ಅದೇಕೋ ಈ ಬಾರಿ ಹೋಗಬೇಕೆಂದು ನಿರ್ಧರಿಸಿ ಹೋದವಳು ದಡದಲ್ಲಿ ಕುಳಿತು ಎಲ್ಲವನ್ನೂ ನೆನೆಯುತ್ತಾ ಕಣ್ಣೀರು ಸುರಿಸುತ್ತಿದ್ದವಳನ್ನು ತಂಗಾಳಿ ಬಂದು ಸೋಕಿತು..ಆ ಅಪ್ಪುಗೆಯಲ್ಲಿ ತನ್ನ ಗಂಡ ಮಕ್ಕಳನ್ನು ತಬ್ಬಿದ ಭಾವ ಮೂಡಿತು..ಅದೇನೋ ಹುರುಪು ಅವಳಲ್ಲಿ ಹೊಕ್ಕಂತೆ ಭಾಸವಾಯಿತು..ಅನೇಕ ವರುಷಗಳ ನಂತರ ಕಣ್ಮುಚ್ಚಿದ ಕೂಡಲೆ ನಿದ್ರೆ ಆವರಿಸಿತು.. ಕನಸಿನಲಿ ಮಕ್ಕಳು "ಅಮ್ಮ ದಿನಾ ಬಾಮ್ಮ"ಎಂದಂತೆ ಅನಿಸಿತು..ಮುಂಜಾನೆ ಎದ್ದವಳು ಊರಿಗೆ ಒಂದು ಕಾಲೇಜಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾಯಿಸುವಂತೆ ಕೇಳಿದಳು...ಆರು ತಿಂಗಳ ನಂತರ ಮಂಗಳೂರಿಗೆ ವರ್ಗಾವಣೆ ಪಡೆದು ಅಲ್ಲಿ ತನ್ನ ಬದುಕನ್ನು ಮುನ್ನೆಡೆಸುವ ನಿರ್ಧಾರ ಮಾಡಿ ನಿತ್ಯ ಸಂಜೆ ಸಮುದ್ರದ ದಡದಲ್ಲಿ ಕುಳಿತು ಕಾಲ ಕಳೆಯುವುದು ಅವಳ ದಿನಚರಿಯ ಮುಖ್ಯ ಭಾಗವಾಗಿಸಿಕೊಂಡಳು..
ಬದುಕು ಅಂದುಕೊಂಡಂತೆ ನಡೆಯುವುದಿಲ್ಲ..ಸಾವು ನೋವುಗಳನ್ನು ಸಹಿಸುತ್ತಾ ಮಣ್ಣಿನ ಋಣ ತೀರುವವರೆಗು ಬದಕನ್ನು ಮುನ್ನೆಡೆಸಬೇಕು..
ಕುಗ್ಗಿ ಕೂರುವ ಬದಲು ಮುನ್ನಿಗಿದ್ದರೆ ಮುಂದಿನ ದಾರಿ ಕಾಣಿಸುತ್ತದೆ..ಅಲ್ಲಿಯವರೆಗೆ ತಾಳ್ಮೆಯಿಂದ ಧೈರ್ಯದಿಂದ ಬದುಕುವ ಕಲೆಯನ್ನು ಕರಗತ ಮಾಡಿಕೊಂಡಾಗ ಬದುಕನ್ನು ಮುನ್ನೆಡೆಸಲು ಸಾಧ್ಯ ಎಂಬುದಕ್ಕೆ ತಾರಿಣಿ ಮಾದರಿಯಾದಳು.
