ಯಾಂತ್ರಿಕತೆ
ಯಾಂತ್ರಿಕತೆ
ಓಡುತಿರುವನು ಸೆಳೆಯುವ
ಮಾಯಾಮೃಗದ ಬೆನ್ನತ್ತಿ
ಮಿಂಚಿ ಮರೆಯಾಗುತಿದೆ
ಸುಖವೆಂಬ ಸುಂದರ ಕಲ್ಪನೆ!!
ಮೋಹಕ ಸಂಜೆಗಳೂ ಬಂಜೆಯಾಗಿವೆ
ಹಗಲು ರಾತ್ರಿಗಳಿಗೆ ಭಿನ್ನತೆಯಿಲ್ಲ
ಸವಿನಿದ್ದೆಯೂ ಸಪ್ಪೆಯಾಗಿದೆ
ಮಗ್ಗಲು ಬದಲಿಸಿದಾಗ
ಸಾಂಗತ್ಯದ ನವಿರು ಅನುಭೂತಿಯಿಲ್ಲ
ಒಂಟಿತನದ ಯಾತನೆಗೆ ಅಂತ್ಯವಿಲ್ಲ
ತೊಟ್ಟಿಲ ಹಸುಳೆ ಬಾಯಲ್ಲಿ
ಖಾಲಿಯಾಗಿದೆ ಹಾಲಿನ ಬಾಟಲಿ
ಮಮತೆಯೂಡುವ ಮಾತೆ ಸನಿಹವಿಲ್ಲ
ವೈಭವದ ಕೋಣೆ, ಸುಪ್ಪತ್ತಿಗೆ
ಸುತ್ತಲೂ ಭಿತ್ತಿ ಚಿತ್ತಾರ
ಐಷರಾಮಿ ಬಂಗಲೆ ಬಣಗುಡುತ್ತಿದೆ
ಆಪ್ತತೆ,ಬಾಂಧವ್ಯಗಳಿಲ್ಲಿ ಬರಡಾಗಿವೆ
ಜೊತೆಗಿದ್ದರೂ ಅಪರಿಚಿತರು
ನೆಮ್ಮದಿಯಿಲ್ಲಿ ಮರೀಚಿಕೆ
ಭಾವಗಳೆಲ್ಲಾ ಸತ್ತು ಗೋರಿ ಸೇರಿವೆ
ಯಂತ್ರವಾದನೆ ಮಾನವ?!
