ಸ್ವಪ್ನದ ಚೆಲುವೆ
ಸ್ವಪ್ನದ ಚೆಲುವೆ
ದೂರ ತೀರದ ರಾಗ ಮಾಲಿಕೆಯಾಗಿ ನೀನಂದು
ಕೂಗಿ ಕೂಗಿ ಕರೆದಿದ್ದೆಯಲ್ಲಾ ನನ್ನ ಹರೆಯವ,
ತಂಗಾಳಿ ಹೊತ್ತು ತಂದದ್ದ ಸಿಂಚನದ ಬಿಂದು
ಬಿತ್ತಿ ಹೋಗಿತ್ತು ನನ್ನೆದೆಯಲ್ಲಿ ಒಲವ ಬೀಜವ!
ಹೇಗೆ ಹೇಳಲಿ ಸುತ್ತ ಹುಡುಕಿ ಸೋತಿದ್ದೆನೆಂದು
ತೀರದಿ ಅಲೆದರೂ ತೀರಿಸಿಕೊಳ್ಳದಾಗಿದ್ದೆ ದಾಹವ,
ಮೈಮರೆತ ಗುಂಗಿನಲ್ಲಿ ಮನದ ಮಂಡಿಗೆ ತಿಂದು
ಕಂಡೂ ಕಾಣದೆ ಹೋಗಿತ್ತು ಮರೀಚಿಕೆಯ ಭಾವ!
ಬುವಿ ಬಾನಿಗೆ ಹೊಸತಲ್ಲ ಪರಿತಾಪದ ಜಾಡೊಂದು
ಅಲೆಮಾರಿ ಬದುಕಿಗೆ ಸಾಕ್ಷಿಯಾಗಿ ಕಳೆದಿತ್ತು ದಿನವ,
ಬಹುಶಃ ಈ ಪರಿಹಾರಸವ ಕಂಡು ನಕ್ಕೂ ಇರಬಹುದು
ಕಡೆಗಣಿಸಿ ಬಿಟ್ಟರೂ ಉಳಿದಿದ್ದ ಮೌನವಲ್ಲವೇ ನೀರವ!
ಹೊತ್ತೆಲ್ಲವೂ ಕಳೆದು ಇರುಳು ತೆಕ್ಕೆಗೆಲ್ಲವು ಬಂದು
ಕರೆದಾಗ ಹಾಸಿಗೆಯು ನೀಡಲು ಶಯನದಾ ಸುಖವ,
ಮಡಿಲ ಮಗುವಂತಾಗಿ ನಾನು ಮೈಚೆಲ್ಲಿದೆ ದಣಿದು
ಆಗಲೇ ನಿನಗಾಗಿ ನಿದ್ರಾದೇವಿ ಹೂಡಿದ್ದಳು ಮುಷ್ಕರವ!
ಕಾಡಬೇಡ ಗೆಳತಿ ಕನಸಿಗೂ ಬಾರದಲೆ ದೂರನಿಂದು
ಆರಾಧಿಸುವ ಮನಕೆ ಕೊಡಬಹುದೇ ಇಂತಹ ನೋವ?
ಘೋಷಿಸಿಯಾಗಿದೆ ನೀ ನನ್ನ ಮನದ ಒಡತಿಯೆಂದು
ಓ ಸ್ವಪ್ನದ ಚೆಲುವೆ ಆಲಂಗಿಸಿಕೋ ಬಡಪಾಯಿ ಜೀವವ!

