ನಾ ಒಂಟಿಯಲ್ಲ...?!
ನಾ ಒಂಟಿಯಲ್ಲ...?!
ನೀಲಾಗಸದ ಕೆಳಗೂ,
ಮಿಂಚುವ ಬೆಳ್ಳನೆಯ ಮರಳಿನ ಮೇಲೂ, ನಾನೊಬ್ಬನೇ ಇಂದು ಇಲ್ಲಿದ್ದರೂ,
ಅದೇಕೋ ನಾ ಒಂಟಿಯಲ್ಲ ಎಂದೆನಿಸುತ್ತಿದೆ..!
ನಾ ಶುನಕನಾದರೂ,
ನನ್ನ ನೀವೆಲ್ಲರೂ ತೆಗಳಿದರೂ,
ನಾನೊಬ್ಬ ಬೀದಿ ನಾಯಿ ಎಂದು ಗೊತ್ತಿದ್ದರೂ,
ಅದೇಕೋ ನಾ ಒಂಟಿಯಲ್ಲ ಎಂದೆನಿಸುತ್ತಿದೆ..!
ಸ್ವಚ್ಛಂದವಾಗಿ ನನಗೆ ಇಷ್ಟ ಬಂದಂತೆ
ಇರುವ ಹಕ್ಕು ನನಗಿದೆ.
ತಿನ್ನಲು ಒಪ್ಪೊತ್ತು ಊಟ ಸಿಕ್ಕರೆ
ಅದೇ ನನಗೆ ಮೃಷ್ಟಾನ್ನವಲ್ಲವೇ..?!
ಯಾರ ಹಂಗೂ ನನಗಿಲ್ಲ...
ಯಾರ ಅಧೀನದಲ್ಲೂ ನಾನಿಲ್ಲ..!
ಇಲ್ಲಿ ನಾನೇ ರಾಜ, ನಾನೇ ಸೇವಕ
ಇದು ನನ್ನದೇ ಲೋಕ...
ನಾನೇನಂದರೂ ಅದೇ ಸತ್ಯ..?!
ಇಂತಹ ಭಾಗ್ಯ ನಿಮಗಿಲ್ಲ,
ಮಹಲಿನಲ್ಲಿ ಕುಳಿತು ಸಿಹಿ ಉಂಡರೂ,
ಒಂಟಿತನ ನಿಮಗೆ ತಪ್ಪಿದ್ದಲ್ಲ..!
ಎಷ್ಟೇ ಸ್ನೇಹಮಯವಾಗಿದ್ದರೂ,
ಒಂದು ಚಿಕ್ಕ ಕಿಡಿ, ಮನಸ್ತಾಪ ಹಚ್ಚಿ
ನಿಮ್ಮನ್ನು ಒಬ್ಬಂಟಿ ಮಾಡಿ ಬಿಡುತ್ತದೆಯಲ್ಲ..!!
ಅದ ತಿಳಿದ ಮೇಲಾದರೂ,
ನನ್ನಂತವನನ್ನು ನೀವೇಕೆ
ಗೆಳೆಯ ಎಂದು ಸ್ವೀಕರಿಸುವುದಿಲ್ಲ..?
ಒಂದೊಮ್ಮೆ ಸ್ವೀಕರಿಸಿದರೆ,
ನೀವೇ ಹೇಳುತ್ತೀರಾ ನೋಡಿ...
"ನಾಯಿಗಿಂತ ಮಿಗಿಲಾದ ಗೆಳೆಯನಿಲ್ಲ..!!"
