ಅಮ್ಮ
ಅಮ್ಮ
ನವಮಾಸಗಳು ಉದರದಿ ಭರಿಸಿ
ನೋವುಗಳ ನಗುನಗುತ ನುಂಗಿ
ನವಜೀವವ ಅವನಿಗಿಳಿಸುತ
ನವೋಲ್ಲಾಸದಿ ನಲಿವ ಓ ಅಮ್ಮ
ಅನುಕ್ಷಣವು ಕಂದನಾರೈಕೆಯಲಿ
ತನ್ನ ತಾನ್ ಮರೆಯುತಲಿ
ಅನ್ನಪಾನಾದಿಗಳ ಉಣಿಸುತ
ಅನವರತ ಓಲೈಸುವ ಓ ಅಮ್ಮ
ಕಂದನ ಸುಖ ಸಂತೋಷಕೆ
ಬಂದ ಬವಣೆಗಳ ನುಂಗುತ್ತಾ
ಮಂದಹಾಸವನು ಸೂಸುತಾ
ಮುದವನುಣಿಸುವ ಓ ಅಮ್ಮ
ಅಕ್ಕರದಿ ಅಕ್ಕರಗಳ ಕಲಿಸುತ
ಸಕ್ಕರೆಯ ಮಾತುಗಳನಾಡುತ
ಕಕ್ಕುಲಾತಿಯಲಿ ಕರುಳಕುಡಿಯ
ಚೊಕ್ಕದಲಿ ಮುದ್ದಿಸುವ ಓ ಅಮ್ಮ
ಮಗುವಿನ ಜಗವೇ ನೀನು
ಜಗದ ಅದ್ಭುತವೇ ನೀನು
ಸಗ್ಗಸುಖದಾ ಖಣಿ ನೀನು
ಲೋಗರ ಮೂಲ ನೀ ಓ ಅಮ್ಮ
ನೀನಿಲ್ಲದೆ ಮಗುವಿಗೆ ಉಸಿರಿಲ್ಲ
ನೀನಿಲ್ಲದ ಮನೆ ಮನೆಯಲ್ಲ
ನೀನಿಲ್ಲದೆ ಮಗುವಿಗೆ ಬದುಕಿಲ್ಲ
ನೀನಿಲ್ಲದೆ ಜಗವಿಲ್ಲ ಓ ಅಮ್ಮ
