ತೃಪ್ತಿ
ತೃಪ್ತಿ
ಸಿಟಿ ಪೋಲಿಸ್ ಸ್ಟೇಷನ್, ಎಸ್ ಪಿ ರಾಘವ್ ಅಂದಿನ ಕೆಲಸ ಮುಗಿಸಿದ್ದಾನೆ. ಹೆಡ್ ಕಾನ್ಸ್ಟೇಬಲ್ ಹರಿಗೆ ಏನಾದರೂ ಎಮರ್ಜನ್ಸಿ ಇದ್ದರೆ ಫೋನ್ ಮಾಡುವಂತೆ ಹೇಳಿ ಹೊರಡುತ್ತಾನೆ. ಆಗ ಕರೆಯೊಂದು ಬರುತ್ತದೆ. ಹರಿ ಒಡನೆಯೇ ಹೊರಗೆ ಓಡುತ್ತಾನೆ. ರಾಘವ್ ತನ್ನ ಕಾರನ್ನು ಹತ್ತುತ್ತಿರುವಾಗಲೇ ಹರಿ, “ಸರ್.. ಸರ್..” ಎಂದು ಓಡುತ್ತ ಬರುತ್ತಾನೆ.
ರಾಘವ್ : ಏನು ಹರಿ? ಏನಾಯ್ತು?
ಹರಿ : ಹೊಟೆಲ್ ಪ್ಯಾರಡೈಸ್ ಇಂದ ಕರೆಯೊಂದು ಬಂದಿತ್ತು. ಯುವತಿಯೊಬ್ಬಳು ತಾನೊಂದು ಕೊಲೆ ಮಾಡಿರುವುದಾಗಿ ಹೇಳ್ತಿದ್ದಾಳೆ. ರೂಂ ನಂಬರ್ ಸಹ ಹೇಳಿದ್ದಾಳೆ.
ರಾಘವ್ : ವಾಟ್? ಬೇಗ ಡ್ಯೂಟಿಲಿರೋ ಲೇಡಿ ಕಾನ್ಸ್ಟೇಬಲ್ ಮತ್ತೆ ಇನ್ನೊಂದಿಬ್ಬರು ಕಾನ್ಸ್ಟೇಬಲ್ಗಳನ್ನ ಕರೆದುಕೊಂಡು ಬಾ. ಹೋಗಿ ಚೆಕ್ ಮಾಡೋಣ. ಕರೆ ನಿಜವಾಗಿದ್ದಾರೆ ಫೊರೆನ್ಸಿಕ್ ಲ್ಯಾಬ್ ಗೆ ಅಲ್ಲಿಂದಲೇ ಕರೆ ಮಾಡೊಣ.
ಎಂದು ಹೇಳಿ ಕಾರ್ ಸ್ಟಾರ್ಟ್ ಮಾಡುತ್ತಾನೆ. ಹರಿ, ರೂಪಾ ಎಂಬ ಲೇಡಿ ಕಾನ್ಸ್ಟೇಬಲ್ ಅನ್ನೂ ಮತ್ತಿಬ್ಬರು ಕಾನ್ಸ್ಟೇಬಲ್ಗಳನ್ನೂ ಕರೆದುಕೊಂಡು ಬರುತ್ತಾನೆ. ಎಲ್ಲರೂ ಹೊಟೆಲ್ ಗೆ ಹೋಗುತ್ತಾರೆ. ಹೊಟೆಲ್ ಪ್ಯಾರಡೈಸ್ ಒಂದು ದೊಡ್ಡ ಫೈ ಸ್ಟಾರ್ ಹೊಟೆಲ್ ಆಗಿರುತ್ತದೆ. ಎಸ್ ಪಿ ರಾಘವ್ ಬಂದೊಡನೆ ರಿಸೆಪ್ಷನಿಸ್ಟ್ ಹತ್ತಿರ ಬಂದು ತಮಗೆ ಬಂದ ಕರೆಯ ಬಗ್ಗೆ ತಿಳಿಸಿ ಯುವತಿ ತಿಳಿಸಿದ ರೂಂ ನಂಬರ್ ಎಲ್ಲಿ ಎಂದು ತಿಳಿದು ಅತ್ತ ಹೋಗುತ್ತಾನೆ. ಇತ್ತ ರಿಸೆಪ್ಷನಿಸ್ಟ್ ಪೊಲೀಸ್ ಬಂದಿರುವ ವಿಚಾರವನ್ನು ತಿಳಿಸಲು ಮ್ಯಾನೇಜರ್ ಗೆ ಕರೆ ಮಾಡುತ್ತಾಳೆ. ರೂಂಗೆ ಬಂದಾಗ ಬಾಗಿಲು ಸುಮ್ಮನೆ ಹಾಕಿರುತ್ತದೆ. ಒಳಗೆ ಹೋದಾಗ ಯುವತಿಯೊಬ್ಬಳು ಕೈಯಲ್ಲಿ ರಕ್ತಮಯವಾದ ಚಾಕು ಒಂದನ್ನು ಹಿಡಿದು, ತಲೆ ಬಗ್ಗಿಸಿ ಕುಳಿತಿರುತ್ತಾಳೆ. ಕೆಳಗೆ ಪುರುಷನೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾನೆ. ಎಸ್ ಪಿ ರಾಘವ್ ಬಂದಿದ್ದನ್ನು ಕಂಡು ಅವನು ಕೇಳುವುದಕ್ಕೆ ಮೊದಲೇ,
ಯುವತಿ : ಇನ್ಸಪೆಕ್ಟರ್ ರೂಂನಲ್ಲಿ ಒಂದು ಹುಡುಗಿ ಪ್ರಜ್ಞೆಯಿಲ್ಲದೆ ಮಲಗಿದ್ದಾಳೆ. ಈ ಪಾಪಿ ಆಕೆಯನ್ನ ಪ್ರಜ್ಞೆ ತಪ್ಪಿಸಿ ಕೆಡಿಸಲು ಹೋಗಿದ್ದ. ಇವನನ್ನ ಕೊಂದಿದ್ದು ನಾನೇ. ನನ್ನನ್ನ ಅರೆಸ್ಟ್ ಮಾಡಿ. ಆ ಹುಡುಗಿಯನ್ನ ಸುರಕ್ಷಿತವಾಗಿ ಅವಳಿರುವಲ್ಲಿಗೆ ಸೇರಿಸಿ.
ಎಂದು ಹೇಳಿ ಕೈಯಲ್ಲಿದ್ದ ಚಾಕುವನ್ನು ಕೆಳಗೆ ಹಾಕಿ ಎರಡೂ ಕೈಗಳನ್ನ ಮುಂದೆ ಚಾಚುತ್ತಾಳೆ. ರಾಘವ್ ರೂಪಾಳಿಗೆ ಆ ಯುವತಿಯನ್ನ ಅರೆಸ್ಟ್ ಮಾಡಲು ಹೇಳಿ,
ರಾಘವ್ : ನಿಮ್ಮನ್ನ ಒಬ್ಬ ವ್ಯಕ್ತಿಯನ್ನ ಕೊಲೆ ಮಾಡಿರುವ ಆಧಾರದ ಮೇಲೆ ಅರೆಸ್ಟ್ ಮಾಡ್ತಿದ್ದೀವಿ. ನಿಮಗೆ ಒಬ್ಬ ಲಾಯರ್ ಅನ್ನು ಪಡೆಯುವ ಹಕ್ಕಿದೆ.
ಹೀಗೆ ಹೇಳಿ ಹರಿಗೆ ಫೊರೆನ್ಸಿಕ್ ಲ್ಯಾಬ್ ಗೆ ಕರೆ ಮಾಡಲು ಹೇಳುತ್ತಾನೆ.
ವಿಚಾರಣಾ ಕೊಠಡಿಯಲ್ಲಿ ಬಂಧಿತ ಯುವತಿ ಕುಳಿತಿದ್ದಾಳೆ. ಅವಳ ಮುಖದಲ್ಲಿ ಯಾವುದೇ ವಿಧವಾದ ಭಯವಿಲ್ಲ. ಕೊಠಡಿಯಲ್ಲಿ ಉರಿಯುತ್ತಿದ್ದ ಬಲ್ಬ್ ಕಡೆಗೇ ಆಕೆಯ ದೃಷ್ಟಿ ನೆಟ್ಟಿದೆ. ಬಾಗಿಲು ತೆರೆದುಕೊಂಡು ರಾಘವ್ ಮತ್ತೆ ರೂಪಾ ಒಳ ಬರುತ್ತಾರೆ. ಯುವತಿ ಅವರತ್ತ ಒಮ್ಮೆ ನೋಡಿ ಮತ್ತೆ ಬಲ್ಬ್ ಕಡೆಗೇ ಮುಖ ಮಾಡುತ್ತಾಳೆ.
ರಾಘವ್ : ಲಾಯರ್ ಬೇಡ ಅಂದ್ರಂತೆ.
ಯುವತಿ ಯಾವುದೇ ರೀತಿಯಾದ ಪ್ರತಿಕ್ರಿಯೆ ನೀಡಲಿಲ್ಲ.
ರಾಘವ್ : ಸರಿ. ನಾನು ಕೇಳೋ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಿ. ನಿಮ್ಮ ಹೆಸರು?
ಯುವತಿ : ಮಾಧುರ್ಯ
ರಾಘವ್ : ತಂದೆ ತಾಯಿ ಹೆಸರು?
ಮಾಧುರ್ಯ: ಗೊತ್ತಿಲ್ಲ. ನಾನೊಬ್ಬ ಅನಾಥೆ. ಬುದ್ಧಿ ತಿಳಿದಾಗಿನಿಂದ ನಾನು ಅನಾಥಾಶ್ರಮದಲ್ಲೇ ಇದ್ದಿದ್ದು.
ರಾಘವ್ : ವಯಸ್ಸು?
ಮಾಧುರ್ಯ: 25
ರಾಘವ್: ಉದ್ಯೋಗ?
ಮಾಧುರ್ಯ : ಕನ್ಸಲ್ಟೇಷನ್ ಏಜೆನ್ಸಿ ಒಂದರಲ್ಲಿ ಕೆಲಸ ಮಾಡ್ತಿದ್ದೆ. ಆದ್ರೆ ಇತ್ತೀಚೆಗೆ ಕೆಲಸ ಬಿಟ್ಟೆ.
ರಾಘವ್ : ಕೊಲೆಯಾದ ವ್ಯಕ್ತಿಗೂ ನಿಮಗೂ ಏನು ಸಂಬಂಧ?
ಮಾಧುರ್ಯ: ಆತ ನಮಗೆ ಮನೋವಿಜ್ಞಾನ ಹ್ಯಾಂಡಲ್ ಮಾಡುತ್ತಿದ್ದ ಪ್ರೊಫೆಸರ್ ನಿಶ್ಚಿತ್.
ರಾಘವ್ : ನಿಮ್ಮ ಪ್ರೊಫೆಸರ್ ಅನ್ನ ಕೊಲೆ ಮಾಡೋಕ್ಕೆ ಕಾರಣ?
ಮಾಧುರ್ಯ: ಆತ ನನ್ನ ಹಾಗೂ ಇನ್ನೊಂದು ಹುಡುಗಿಯ ಬಾಳನ್ನ ಹಾಳು ಮಾಡ್ದ. ಅದು ಸಾಲ್ದು ಅಂತ ಈಗ ಇನ್ನೊಂದು ಹುಡುಗಿಯ ಬಾಳನ್ನ ಹಾಳು ಮಾಡಲು ಹೊರಟಿದ್ದ.
ರಾಘವ್ : ವಿವರವಾಗಿ ಹೇಳ್ತೀರಾ?
ಮಾಧುರ್ಯ: ಎರಡು ವರ್ಷಗಳ ಹಿಂದಿನ ಮಾತು. ಅವತ್ತು ನಮ್ಮ ಗ್ರ್ಯಾಜುಯೇಷನ್ ಡೇ. ಬೆಳಗ್ಗೆ ಕಾಲೇಜಿನಲ್ಲಿ ಪ್ರೋಗ್ರಾಂ ಮುಗಿಸಿಕೊಂಡ ನಂತರ ರಾತ್ರಿ ನಮ್ಮ ಡಿಪಾರ್ಟ್ಮೆಂಟ್ ಕಡೆಯಿಂದ ಒಂದು ಡಿನ್ನರ್ ಪಾರ್ಟಿ ಪ್ಲಾನ್ ಮಾಡಿದ್ರು. ಎರಡು ವರ್ಷಗಳು ನಮಗೆ ಪಾಠ ಮಾಡಿದ್ದ ನಮ್ಮ ಪ್ರೊಫೆಸರ್ ನಿಶ್ಚಿತ್. ಮತ್ತು ಉಳಿದ ಎಲ್ಲ
ಪ್ರಾಧ್ಯಾಪಕರು ಸೇರಿದ್ದರು. ಅವರೆಲ್ಲರಲ್ಲಿ ನಮಗೆಲ್ಲ ಪ್ರೊಫೆಸರ್ ನಿಶ್ಚಿತ್.
ಅವರನ್ನ ಕಂಡರೆ ಒಂದು ರೀತಿಯಾದ ವಿಶೇಷ ಗೌರವ. ಡಿನ್ನರ್ ಗಾಗಿ ನಾವೆಲ್ಲ ಸೇರಿದ್ದಾಗಲೂ ಅಷ್ಟೆ ಆತ ಮಾತಾಡಿದ ಒಂದೊಂದು ಮಾತುಗಳು ಎಂಥ ಗೊಡ್ಡನಿಗೂ ಮಾರ್ಗದರ್ಶನದಂತಿತ್ತು. ಡಿನ್ನರ್ ಮುಗಿದ ನಂತರ ಎಲ್ಲರೂ ಅವರವರ ಮನೆಗೆ ಹೊರಟರು. ನಾನೂ ಹಾಸ್ಟೆಲ್ ಕಡೆ ಹೊರಟೆ. ನನ್ನ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿ ಮಾರನೆಯ ದಿನ ಅನಾಥಲಯಕ್ಕೆ ಹೋಗಬೇಕೆಂದುಕೊಂಡಿದ್ದೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ತಲೆ ಸುತ್ತಿದಂತಾಯ್ತು. ಆಯಾಸದಿಂದ ಹಾಗಾಗಿರಬೇಕೆಂದು ಅಂದುಕೊಂಡು ಇನ್ನೊಂದೆರಡು ಹೆಜ್ಜೆ ಇಡುವಷ್ಟರಲ್ಲಿ ನಿಶ್ಚಿತ್ ತನ್ನ ಕಾರಲ್ಲಿ ಪಕ್ಕದಲ್ಲಿ ಪಾಸ್ ಆದವನು ಮತ್ತೆ ರಿವರ್ಸ್ ಬಂದು ನನ್ನನ್ನು ಬೇಕಾದ್ರೆ ಡ್ರಾಪ್ ಮಾಡುವುದಾಗಿ ಹೇಳಿದ. ನಾನು ಆತನಿಗೆ ಉತ್ತರ ನೀಡುತ್ತಿರುವಾಗಲೇ ತಲೆಸುತ್ತಿ ಕೆಳಗೆ ಬಿದ್ದೆ. ಆದರೆ ಎಚ್ಚರವಾದಾಗ ನಾನು ಹೊಟೆಲ್ ರೂಂ ಒಂದರಲ್ಲಿ ಇದ್ದೆ. ಮೇಲೇಳಲು ಪ್ರಯತ್ನ ಮಾಡಿದೆ. ಆದ್ರೆ ಆಗಲಿಲ್ಲ. ಪ್ರಾಣಹೋಗುವಷ್ಟು ನೋವು. ಕಷ್ಟಪಟ್ಟು ರಿಸೆಪ್ಷನ್ ಗೆ ಕಾಲ್ ಮಾಡಿ ಹೆಲ್ಪ್ ಕೇಳಿದೆ ಆದ್ರೆ ಅವರು ಬರೋ ಹೊತ್ತಿಗೆ ಮತ್ತೆ ಪ್ರಜ್ಞೆ ಕಳೆದುಕೊಂಡಿದ್ದೆ.
ಮತ್ತೆ ನನಗೆ ಜ್ಞಾನ ಬಂದಾಗ ನಾನು ಹಾಸ್ಪಿಟಲ್ ಅಲ್ಲಿ ಇದ್ದೆ. ಪಕ್ಕದಲ್ಲಿ ನನ್ನ ಫ್ರೆಂಡ್ ಸುಜಾತಾ ಕೂತಿದ್ಲು. ನನ್ನ ಕೈ ಹಿಡಿದುಕೊಂಡು ಅಳ್ತಿದ್ಲು.ನಾನು ಕಣ್ಣುಬಿಟ್ಟಿದ್ದನ್ನ ನೋಡಿ ಆಕೆ ಡಾಕ್ಟರ್ನ ಕರೆದುಕೊಂಡು ಬಂದ್ಲು.
ಡಾಕ್ಟರ್ ಬಂದು ನನ್ನನ್ನ ಚೆಕ್ ಮಾಡಿದ್ರು. ನನ್ನನ್ನ ಕೆಲವು ಪ್ರಶ್ನೆಗಳನ್ನ ಕೇಳಿದ್ರು. ನಂತರ ನನ್ನ ಫ್ರೆಂಡ್ ಅನ್ನ ಹೊರಗೆ ಕರೆದುಕೊಂಡು ಹೋದ್ರು. ಅವಳು ವಾಪಸ್ಸು ಬಂದಮೇಲೆ “ನನಗೆ ಏನಾಗಿದೆ” ಎಂದು ಕೇಳಿದೆ.
ಸುಜಾತಾ : ನೀನು ತಲೆ ಕೆಡಿಸ್ಕೋಬೇಡ. ಬೇಗ ಹುಷಾರಾಗು
ಎಂದಷ್ಟೇ ಆಕೆ ಹೇಳಿದ್ಲು. ಒಂದೆರಡು ದಿನಗಳಾದ ಮೇಲೆ ನಾನು ಎದ್ದು ಓಡಾಡುವಂತೆ ಆದೆ. ಆಗ ನಾನು ಸುಜಾತಾಳನ್ನು ನನಗೇನಾಗಿದೆಯೆಂದು ಮತ್ತೆ ಕೇಳಿದೆ. ಮೊದಮೊದಲು ಆಕೆ ಹೇಳಲು ಹಿಂದುಮುಂದು ನೋಡುತ್ತಿದ್ದಳು. ನಾನು ಬಹಳ ಒತ್ತಾಯಿಸಿದ ಮೇಲೆ ಆಕೆ ನನಗೆ ಮೊದಲು ಧೈರ್ಯ ತೆಗೆದುಕೊಳ್ಳುವಂತೆ ಹೇಳಿ ನಂತರ ನಾನು ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ಹೇಳಿದಳು. ಆ ಮಾತು ಕೇಳಿ ನನಗೆ ಬರಸಿಡಿಲು ಬಡಿದಂತಾಯಿತು. ಅದನ್ನು ಅರಗಿಸಿಕೊಳ್ಳಲು ಬಹಳ ಕಷ್ಟವಾಯಿತು. ನಾನು ಸ್ವಲ್ಪ ಚೇತರಿಸಿಕೊಂಡ ಮೇಲೆ,
ಸುಜಾತಾ : ಮಾಧುರ್ಯ, ಆ ದಿನ ಏನಾಯ್ತು ಅಂತ ಗೊತ್ತಿರೋದು ನಿನ್ನೊಬ್ಬಳಿಗೇ. ಹೇಳು ಎನಾಯ್ತು ಅಂತ.
ನಾನು : ಅವತ್ತು ಡಿನ್ನರ್ ಆದ್ಮೇಲೆ ನಾನು ಹಾಸ್ಟೆಲ್ ಕಡೆ ಹೊರಟೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಪ್ರೊಫೆಸರ್ ನಿಶ್ಚಿತ್ ಬಂದು ನನ್ನನ್ನು ಡ್ರಾಪ್ ಮಾಡುವುದಾಗಿ ಹೇಳಿದ್ರು. ಅಷ್ಟೆ ನನಗೆ ಜ್ಞಾಪಕ ಇರೋದು….ಎಂದು ಹೇಳಿ ಜೋರಾಗಿ ಅತ್ತೆ.
ಸುಜಾತಾ : ನಾವು ಪೊಲೀಸ್ ಕಂಪ್ಲೇಂಟ್ ಕೊಡೋಣ. ಅಳ್ಬೇಡ ನಾನು ನಿನ್ನ ಜೊತೆ ಯಾವಾಗಲೂ ಇರ್ತೀನಿ….
ಎಂದು ಹೇಳಿದಳು.ನಾನು ಅದಕ್ಕೆ ಒಪ್ಪಿದೆ ಆದ್ರೆ ಅದಕ್ಕಿಂತ ಮೊದಲು ನಾನು ಪ್ರೊಫೆಸರ್ ನಿಶ್ಚಿತ್ ಜೊತೆ ಮಾತಾಡಬೇಕೆಂದು ಆಕೆಗೆ ತಿಳಿಸಿದೆ. ಆಕೆ ಹಾಗೇ ಆಗಲೆಂದು ಹೇಳಿ ನಿಶ್ಚಿತ್ ಅನ್ನು ಭೇಟಿ ಆಗಲು ಹೊರಟಳು.
ಈತ ನನ್ನನ್ನ ಭೇಟಿ ಆಗಲು ಬಂದ. ಆದರೆ ಆಸ್ಪತ್ರೆಯಲ್ಲಿ ಆತನನ್ನು ನೋಡಿದೊಡನೆ ಒಂದು ರೀತಿಯ ಭಯ ಶುರುವಾಯಿತು. ಆತ ಹತ್ತಿರ ಬರುತ್ತಿದ್ದಂತೆ ಆತ ಹಾಕಿದ್ದ ಪರ್ಫ್ಯೂಮ್ ವಾಸನೆ ಮೂಗಿಗೆ ಬಡಿಯಿತು. ಆ ದಿನ ಹೊಟೆಲ್ ನಲ್ಲಿ ನನಗೆ ಪ್ರಜ್ಞೆಬಂದಾಗ ಸಹ ಇದೇ ವಾಸನೆಯ ಅನುಭವವಾಗಿದ್ದು ಜ್ಞಾಪಕಕ್ಕೆ ಬಂದು ಎದೆ ನಡುಗಿತು. ನನ್ನ ಸ್ಮೃತಿಪಟಲದಲ್ಲಿದ್ದ ಅಂದಿನ ಘಟನೆಗಳೆಲ್ಲವೂ ಒಂದಕ್ಕೊಂದು ಸೇರಿಕೊಂಡು ನನ್ನ ಕಲ್ಪನೆಗೂ ಮೀರಿದ ಒಂದು ಕಟುಸತ್ಯದ ಅರಿವಾಗಿ, ತಲೆ ಸುತ್ತಿತು, ಕಣ್ಣಲ್ಲಿ ನೀರು ತುಂಬಿಕೊಂಡಿತು. ಆತನ ಕಡೆ ನಂಬಲಾರದ ಕಣ್ಣುಗಳಿಂದ ನೋಡಿದೆ. ಏನು ಕೇಳಬೇಕೆಂಬುದೇ ತಿಳಿಯಲಿಲ್ಲ. “ಯಾಕೆ ಹೀಗೆ ಮಾಡಿದ್ರಿ?” ಎಂಬುದಷ್ಟೆ ಬಾಯಿಯಿಂದ ಬಂದದ್ದು. ಅದನ್ನ ಕೇಳಿ ಆತ ಸಹ ಬೆಚ್ಚಿದ. ತನ್ನ ಕೃತ್ಯ ಅಷ್ಟು ಬೇಗ ಬಯಲಾಗುವುದೆಂಬ ಪರಿಕಲ್ಪನೆ ಸಹ ಆತನಿಗಿರಲಿಲ್ಲ. ಆದರೆ ಆತ ಯಾವುದನ್ನೂ ನಿರಾಕರಿಸಲಿಲ್ಲ. ಬದಲಿಗೆ ತಾನು ಮಾಡಿದ್ದನ್ನ ಒಪ್ಪಿಕೊಂಡ.
ನಿಶ್ಚಿತ್ : ಮಾಧುರ್ಯ, ನನ್ನನ್ನ ಕ್ಷಮಿಸು. ನಾನು ಮಾಡಿದ ತಪ್ಪಿಗೆ ಯಾವುದೇ ರೀತಿಯಾದ ಕ್ಷಮೆಯಿಲ್ಲ ಅಂತ ನನಗೆ ಗೊತ್ತು. ಆದ್ರೆ ನಾನು ನಿನ್ನನ್ನ ನಿಜವಾಗಿ ಪ್ರೀತಿಸ್ತೀನಿ… ನಾನು ಇದನ್ನ ಯಾವತ್ತು ಹೇಳಿರ್ಲಿಲ್ಲ. ಆದ್ರೆ ನನಗೆ ನಿನ್ನ ಮೇಲಿದ್ದ ಭಾವನೆ ನಿಜವಾದದ್ದು. ಅವತ್ತು ಗ್ರ್ಯಾಜುಯೇಷನ್ ಆದ ನಂತರ ನಿನ್ನನ್ನ ಮತ್ತೆ ನೋಡಲಾಗುವುದಿಲ್ಲ ಎಂಬ ಯೋಚನೆಯೇ ನನ್ನ ತಲೆ ಕೆಡಿಸುತಿತ್ತು. ಅದಿಕ್ಕೆ ಹೀಗೆ ಮಾಡ್ಬಿಟ್ಟೆ. ನನ್ನನ್ನ ಕ್ಷಮಿಸು ….
ಎಂದು ನನ್ನ ಕಾಲು ಹಿಡಿದ.
ನಾನು : ಪ್ರೀತಿ ಮಾಡ್ತಿದ್ದೆ ನನ್ನನ್ನ ಅಂತ ಹೇಳ್ದೆ ಅಲ್ವಾ? ಹಾಗಾದ್ರೆ ನನ್ನನ್ನ ಅವತ್ತು ಹೊಟೆಲ್ ಅಲ್ಲಿ ಹಾಗೆ ಬಿಟ್ಟು ಹೋದ್ಯಲ್ಲ ನನಗೆ ಜ್ಞಾನಬಂದ ಮೇಲೆ ನನ್ನ ಪರಿಸ್ಥಿತಿ ಏನಾಗಬಹುದೆಂದು ಒಂದ್ಸಲ ಆದ್ರೂ ಯೋಚನೆ ಮಾಡ್ದ್ಯಾ? ಪ್ರೀತಿ ಅನ್ನೋ ಪವಿತ್ರವಾದ ಶಬ್ದನ ಉಪಯೋಗಿಸಬೇಡ…. ನಿನ್ನನ್ನ ನಾನು ಸುಮ್ಮನೆ ಬಿಡಲ್ಲ. ಕೋರ್ಟ್ ಅಲ್ಲಿ ನಿನ್ನನ್ನ ನಿಲ್ಲಿಸಿ ನಿನಗೆ ತಕ್ಕ ಶಿಕ್ಷೆ ಕೊಡಿಸದೆ ನಾನು ಸುಮ್ಮನಾಗೊಲ್ಲ.
ನಿಶ್ಚಿತ್ : ಮಾಧುರ್ಯ.. ಪ್ಲೀಸ್ ಹಾಗೆ ಹೇಳ್ಬೇಡ. ನಾನು ಒಪ್ಕೋತೀನಿ ನಾನು ಮಾಡಿದ್ದು ಅಕ್ಷಮ್ಯ ಅಪರಾಧ. ಆದ್ರೆ ನನ್ನ ಹೆಂಡ್ತಿಗೆ ಈಗ ಆರು ತಿಂಗಳು. ಮಗು ಬಗ್ಗೆ ಯೋಚನೆ ಮಾಡು. ಅಪ್ಪ ಅಮ್ಮನ ಪ್ರೀತಿ ಎಷ್ಟು ಮುಖ್ಯ ಒಂದು ಮಗುವಿಗೆ ಅಂತ ನಿನಗೂ ಗುತ್ತು….
ನಾನು : ನಿನ್ನಂತ ಅಪ್ಪ ಇರೋಕ್ಕಿಂತ ಇಲ್ದೇ ಇರೋದೆ ವಾಸಿ. ನೀನು ಇದ್ದೂ ಆ ಮಗುವಿಗೆ ಏನು ಸಂಸ್ಕಾರ ಕೊಡ್ತೀಯ?
ನಿಶ್ಚಿತ್ : ನೀನು ಹೇಳೋದು ನಿಜ. ನಾನು ಇದ್ದೂ ಏನು ಪ್ರಯೋಜನ
ಅಂತ ಹೇಳಿ ಅಲ್ಲೇ ಇದ್ದ ಚಾಕು ತೆಗೆದುಕೊಂಡು ಕೈ ಕಟ್ ಮಾಡ್ಕೊಂಡ. ಆತ ಹಾಗೆ ಸಾಯೋದು ನನಗೆ ಬೇಡವಾಗಿತ್ತು. ಯಾಕೆಂದ್ರೆ ಸಾವು ಅನ್ನೋದು ಆತನಿಗೆ ಬಹಳ ಕಮ್ಮಿ ಶಿಕ್ಷೆ. ಅದ್ದರಿಂದ ನಾನು ನರ್ಸ್ ಅನ್ನು ಕರೆದೆ. ಆತನ ಜೀವ ಉಳಿಸಿದೆ.
ಹೀಗೆ ಹೇಳಿ ಮಾಧುರ್ಯ ನಿಟ್ಟುಸಿರು ಬಿಡುತ್ತಾಳೆ. ಕಣ್ಣೊರೆಸಿಕೊಂಡು ಮುಂದುವರೆಸುತ್ತಾಳೆ.
ಮಾಧುರ್ಯ : ಅದೇ ನಾನು ಮಾಡಿದ ಮೊದಲನೇ ತಪ್ಪು. ಅದಾದ ನಂತರ ಆತನ ಪತ್ನಿ ಆಸ್ಪತ್ರೆಗೆ ಬಂದಳು. ಆತನಿಗೆ ಪ್ರಜ್ಞೆ ಬರುವವರೆಗೆ ಆತನ ಬಳಿಯೇ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಆಕೆಯ ಪರಿಸ್ಥಿತಿಯನ್ನು ಕಂಡು ಆಕೆಯ ಬಗೆಗೆ ನನಗೆ ಕನಿಕರ ಉಂಟಾಯಿತು. ಮತ್ತೆ ನನ್ನ ವಾರ್ಡಿಗೆ ಬಂದೆ. ನನ್ನ ಈ ಪರಿಸ್ಥಿತಿಗೆ ಯಾರು ಕಾರಣವೆಂದು ತಿಳಿದ ಮೇಲೆ ಆತನನ್ನು ಶಿಕ್ಷಿಸದೆ ಬಿಡಬೇಕೆ? ಎಂಬ ಪ್ರಶ್ನೆ ಒಂದು ಕಡೆಯಾದ್ರೆ ತನ್ನ ಪತಿ ಇಂತಹವನೆಂದು ತಿಳಿಯದೆಯೇ ಆತನ ಮಗುವನ್ನು ಗರ್ಭದಲ್ಲಿಟ್ಟುಕೊಂಡು ಅವನಿಗಾಗಿ ಮರುಗುತ್ತಿರುವ ಆಕೆಗೆ ತಾನು ತೊಂದರೆಕೊಡುವುದು ಎಷ್ಟು ಸರಿಯೆಂಬ ಯೋಚನೆ ಇನ್ನೊಂದು ಕಡೆ. ಕೊನೆಗೆ ನಾನು ಇದ್ದರೂ ಹೋದರೂ ನನ್ನನ್ನ ಕೇಳುವವರಿಲ್ಲ. ಆದರೆ ನಾನು ಅವನನ್ನ ಕೋರ್ಟಿಗೆ ಎಳೆದರೆ ಅದರಿಂದ ಏನೂ ತಪ್ಪು ಮಾಡದ ಆ ತಾಯಿ ಮಗುವನ್ನ ನಾನೇ ನನ್ನ ಕೈಯಾರೆ ಕಷ್ಟಕ್ಕೆ ನೂಕಿದ ಹಾಗಾಗುತ್ತೆ. ಅದಲ್ಲದೆ ಮುಂದೆ ಆ ಮಗು ,ತನ್ನ ಜೀವನ ಪೂರ್ತಿ ಒಬ್ಬ ಕಾಮುಕನ ಸಂತಾನ ಎಂಬ ಪಟ್ಟಹೊರಬೇಕಾಗುತ್ತೆ ಎಂದೆಲ್ಲ ಯೋಚನೆ ಮಾಡಿ ಕೊನೆಗೆ ಯಾರಿಗೂ ತಿಳಿಯದಂತೆ ಎಲ್ಲಾದರೂ ದೂರ ಹೊರಟುಹೋಗಬೇಕೆಂದು ಯೋಚನೆ ಮಾಡಿದೆ. ಸಂಜೆ ಡಿಸ್ಚಾರ್ಜ್ ಆದ ನಂತರ ನಾನು ಸುಜಾತಾ ಹೊರಗೆ ಬಂದ್ವಿ. ಅಲ್ಲಿಂದ ನೇರ ಪೊಲೀಸ್ ಸ್ಟೇಷನ್ ಗೆ ಹೋಗಬೇಕೆಂದು ಮೊದಲು ಪ್ಲ್ಯಾನ್ ಮಾಡಿದ್ವಿ. ಆದ್ರೆ ನಾನು ನನ್ನ ಫೋನ್ ಅನ್ನು ವಾರ್ಡ್ ಅಲ್ಲೇ ಮರೆತು ಬಂದಿರುವುದಾಗಿ ಸುಳ್ಳು ಹೇಳಿ, ಆಕೆ ಒಳಗೆ ಹೋದ ಮೇಲೆ ನಾನು ಆಟೋ ಮಾಡಿಕೊಂಡು ಅಲ್ಲಿಂದ ಹೊರಟೆ. ಆದರೆ ಎಲ್ಲಿಗೆ ಹೋಗಬೇಕೆಂದು ಸಹ ನನಗೆ ಗೊತ್ತಿರಲಿಲ್ಲ. ಹೀಗೆ ಅಲ್ಲಿಂದ ನಾನು ಅವನನ್ನು ಸುಮ್ಮನೆ ಬಿಟ್ಟುಹೋದದ್ದು ನಾನು ಮಾಡಿದ ಎರಡನೇ ತಪ್ಪು.
ನಂತರ ನಾನು ಈ ಊರನ್ನೇ ಬಿಟ್ಟು ಹೊರಟೆ. ಒಂದು ಕನ್ಸಲ್ಟೇಷನ್ ಏಜೆನ್ಸಿನಲ್ಲಿ ಕೆಲಸಕ್ಕೆ ಸೇರಿದ. ನನ್ನಂತೆಯೇ ನೊಂದ ಅನೇಕರಿಗೆ ಕನ್ಸಲ್ಟೇಷನ್ ನೀಡುತ್ತಿದ್ದೆ. ನನಗಿಂತ ಕಷ್ಟಪಟ್ಟ ಜೀವಗಳನ್ನು ಕಂಡಾಗಲೆಲ್ಲ ನಾನು ಅನುಭವಿಸಿದ್ದು ಏನೇನೂ ಇಲ್ಲವೆಂದು ಅನಿಸುತಿತ್ತು. ಹೀಗೇ ಎರಡು ವರ್ಷಗಳು ಕಳೆಯಿತು. ನಾನು ನನ್ನ ಜೀವನದಲ್ಲಿ ನಡೆದ ಆ ದುರಂತದಿಂದ ಹೊರಬರತೊಡಗಿದ್ದೆ, ಆಗಲೇ ಆ ಘಟನೆ ನಡೆದದ್ದು.
ನಮ್ಮ ಏಜೆನ್ಸಿ ಕಡೆಯಿಂದ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರಿಗೆ ಉಚಿತವಾಗಿ ಕನ್ಸಲ್ಟೇಷನ್ ನೀಡುವ ಕಾರ್ಯಕ್ರಮ ಅದಾಗಿತ್ತು. ಅನೇಕ ಜನ ಆ ಕಾರ್ಯಕ್ರಮದಿಂದ ಪ್ರಯೋಜನ ಪಡೆದುಕೊಂಡರು. ಅವರಲ್ಲಿ ಆ ಹುಡುಗಿಯೂ ಒಬ್ಬಳಾಗಿದ್ದಳು. ಆಕೆಯ ಹೆಸರು ಮೈತ್ರಿ .ಆಕೆ ತನ್ನ ಪ್ರಾಣಗೆಳತಿ ರೇಖಾಳ ಸಾವಿನಿಂದ ಡಿಪ್ರೆಷನ್ ಗೆ ಹೋಗಿದ್ದಳು. ಆಕೆಯನ್ನು ಅವಳ ತಾಯಿ ಕರೆತಂದಿದ್ದರು.
ನಾನು ರೇಖಾಳ ಕುರಿತಾಗಿ ಅವರ ಗೆಳತನದ ಕುರಿತಾಗಿ ಕೇಳಿದಾಗ ಆಕೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದಳು. ಆಕೆಯನ್ನು ನಾನು ಸಮಾಧಾನ ಪಡಿಸಿದೆ. ಆಕೆಯ ಸ್ಥಿತಿ ಗಂಭೀರವಾಗಿತ್ತಾದ್ದರಿಂದ ನನ್ನ ಬಳಿ ಕನ್ಸಲ್ಟೇಷನ್ ಪಡೆಯಲು ಕಾಯುತ್ತಿದ್ದವರನ್ನು ನನ್ನ ಸಹೋದ್ಯೋಗಿಗಳ ಬಳಿ ಕಳಿಸಲಾಯಿತು. ನಂತರ ನಾನು ಆಕೆಗೆ ಧೈರ್ಯ ತುಂಬಿದೆ. ನಡೆದ ವಿಚಾರವನ್ನು ಯಾರ ಬಳಿಯೂ ಹೇಳದೆ ಮನಸ್ಸಲ್ಲೇ ಇಟ್ಟುಕೊಂಡರೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳಿದೆ. ಅದಲ್ಲದೆ ನಾವು ಕನ್ಸಲ್ಟೇಷನ್ ಪಡೆಯುವವರ ಪ್ರೈವೆಸಿಯ ಕಡೆಗೆ ಒತ್ತುನೀಡುವುದಾಗಿ ಆಶ್ವಾಸನೆ ನೀಡಿದ ಬಳಿಕ ಮೈತ್ರಿ ನಡೆದ ವಿಷಯವೆಲ್ಲವನ್ನು ನನ್ನ ಬಳಿ ಹೇಳಿದಳು.
ಮೈತ್ರಿ : ರೇಖಾ ಮತ್ತೆ ನಾನು ಹೊಸದರಲ್ಲಿ ಅಪರಿಚಿತರಾಗಿದ್ದರೂ ಸಮಯಕಳೆದಂತೆ ನಮ್ಮಿಬ್ಬರ ನಡುವೆ ಬಹಳ ಗಾಢವಾದ ಸ್ನೇಹ ಬೆಳೆಯಿತು. ರೇಖಾ ಬಹಳ ಎಮೋಷನಲ್, ಆಕೆಗೆ ತಂದೆ ತಾಯಿ ಇರಲಿಲ್ಲ. ನಾವಿಬ್ಬರೂ ಒಂದೇ ತಾಯಿಯ ಮಕ್ಕಳಲ್ಲದಿದ್ದರೂ, ಒಡಹುಟ್ಟಿದವರಂತೆಯೇ ಇದ್ದೆವು. ಅಂದು ನಮ್ಮ ಗ್ರ್ಯಾಜುಯೇಷನ್ ದಿನ. ರಾತ್ರಿ ಡಿನ್ನರ್ ಪಾರ್ಟಿಗೆ ನಾವೆಲ್ಲ ಹೋಗಿದ್ವಿ. ವಿಧಿ! ಅವತ್ತು ನಾನು ಪಾರ್ಟಿಯಲ್ಲಿ ಕೊನೇವರೆಗೂ ಇರಲಿಲ್ಲ. ಮನೆಯಿಂದ ಕರೆ ಬಂತೆಂದು ಮಧ್ಯದಲ್ಲೇ ಹೊರಟುಬಿಟ್ಟೆ. ಆಮೇಲೆ ಏನಾಯಿತೆಂದು ನನಗೂ ಗೊತ್ತಿಲ್ಲ. ಆಕೆ ಹಾಸ್ಟೆಲ್ ಎದುರು ಪ್ರಜ್ಞೆತಪ್ಪಿ ಬಿದ್ದಿದ್ದಳಂತೆ. ಆಸ್ಪತ್ರೆಗೆ ಸೇರಿಸಿದ್ದರು ಅವಳನ್ನ. ನಾನು ವಿಷಯ ತಿಳಿದ ಕೂಡಲೇ ಅಲ್ಲಿಗೆ ಹೋದೆ. ಆಕೆಯ ಮೇಲೆ ಬಲಾತ್ಕಾರವಾಗಿದೆಯೆಂದು ಅಲ್ಲಿಗೆ ಹೋದ ಬಳಿಕ ನನಗೆ ತಿಳಿಯಿತು. ರೇಖಾಳಿಗೆ ಪ್ರಜ್ಞೆ ಬಂದ ನಂತರ ಆಕೆಗೆ ವಿಚಾರವನ್ನು ಹೇಗೆ ತಿಳಿಸಬೇಕೆಂದೇ ನನಗೆ ತಿಳಿಯಲಿಲ್ಲ. ಆದ್ರೆ ಪ್ರಜ್ಞೆ ಬಂದ ಕೆಲವು ಸಮಯದಲ್ಲೇ ಆಕೆ ಜೋರಾಗಿ ಅಳತೊಡಗಿದಳು. ನಾನು ಎಷ್ಟೇ ಕೇಳಿದರೂ ಆಕೆ ಏನೂ ಹೇಳಲಿಲ್ಲ. ಒಂದೆರಡು ಬಾರಿ ನಮ್ಮ ಪ್ರೊಫೆಸರ್ ಒಬ್ಬರ ಹೆಸರನ್ನು ಹೇಳುತ್ತಿದ್ದಳು.ನಾನು ಆಕೆಯನ್ನ ಸಮಾಧಾನ ಪಡಿಸಲು ಹರಸಾಹಸಪಟ್ಟೆ. ರಾತ್ರಿ ಬಹಳ ಒತ್ತಾಯ ಮಾಡಿದ ಮೇಲೆ ಒಂದೆರಡು ತುತ್ತು ಊಟಮಾಡಿದಳು. ಅಂದು ನಾನು ಆಕೆಯ ಬಳಿಯೇ ಇದ್ದೆ. ರಾತ್ರಿ ಅದ್ಯಾವಾಗ ನನಗೆ ನಿದ್ದೆ ಬಂತೋ ನನಗೇ ಗೊತ್ತಿಲ್ಲ. ನನಗೆ ಎಚ್ಚರವಾದಾಗ ಬೆಡ್ ಪೂರಾ ರಕ್ತ. ರೇಖಾ ತನ್ನ ಕೈಕಟ್ ಮಾಡಿಕೊಂಡಿದ್ದಳು. ನಾನು ಹೆಲ್ಪ್ಗ್ ಗಾಗಿ ಕೂಗಿಕೊಂಡೆ ಆದರೆ ಆಗಲೇ ಬಹಳ ಲೇಟ್ ಆಗೋಗಿತ್ತು. ನಾನು ರೇಖಾಳನ್ನ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಹೀಗೆ ಹೇಳಿ ಮತ್ತೆ ಅಳಲಾರಂಭಿಸಿದಳು. ಅದನ್ನ ಕೇಳಿ ನನ್ನ ಹೃದಯ ಬಡಿದುಕೊಳ್ಳಲಾರಂಭಿಸಿತು. ನನ್ನ ಜೀವನದಲ್ಲಿ ನಡೆದಿದ್ದೆಲ್ಲವೂ ಕಣ್ಣಮುಂದೆ ಬಂದಂತಾಗಿ ಕಣ್ಣುಮಂಜಾಯಿತು. ನಾನು ಮೈತ್ರಿಯ ಕಾಲೇಜಿನ ಹೆಸರು ಮತ್ತೆ ರೇಖಾ ಕೊನೆಯದಾಗಿ ಹೇಳಿದ ಆ ಪ್ರೊಫೆಸರ್ ಹೆಸರನ್ನ ಕೇಳಿದ. ಆಕೆಯ ಉತ್ತರವನ್ನು ನಾನು ನಿರೀಕ್ಷಿಸಿದ್ದರೂ ನನಗೆ ಅದು ಆಘಾತ ಉಂಟುಮಾಡಿತು. ನಿಶ್ಚಿತ್ ಎಂಬ ಆ ಮೃಗ ಮತ್ತೆ ತನ್ನ ಕಾಮುಕತೆಯನ್ನ ಮೆರೆದಿತ್ತು. ನಾನು ಅವನನ್ನ ಸುಮ್ಮನೆ ಬಿಟ್ಟಿದ್ದರ ಪರಿಣಾಮವಾಗಿ ಮತ್ತೊಂದು ಅಮಾಯಕ ಹುಡುಗಿಯ ಬಾಳು ಹಾಳಾಯಿತಲ್ಲ ಎಂಬ ಸಂಗತಿ ನನ್ನನ್ನ ಚುಚ್ಚಲಾರಂಭಿಸಿತು.
ನಾನು ಮೈತ್ರಿಗೆ, ರೇಖಾಳ ಸಾವಿಗೆ ಆಕೆ ಯಾವುದೇ ರೀತಿಯಿಂದ ಜವಾಬ್ದಾರಳಲ್ಲ. ರೇಖಾಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಆಕೆ ತನ್ನ ಜೀವನವನ್ನ ಸಂತೋಷವಾಗಿ ಕಳೆಯಬೇಕೆಂದು ಆಕೆಗೆ ಮನವರಿಕೆ ಮಾಡಿಸಿ ಅವಳನ್ನ ಕಳುಹಿಸಿಕೊಟ್ಟೆ.
ಅದಾದ ನಂತರ ಕೆಲಸ ಬಿಟ್ಟು, ಆ ಕಾಮಿಯನ್ನ ಹಿಡಿಯಬೇಕೆಂದು ನಿರ್ಧಾರ ಮಾಡಿ ಅವನ ವಿರುದ್ಧ ಎವಿಡೆನ್ಸ್ ಕಲೆಕ್ಟ್ ಮಾಡಬೇಕೆಂದು ಮತ್ತೆ ಈ ಊರಿಗೆ ಬಂದೆ. ಅವನ ಮುಂದಿನ ಟಾರ್ಗೆಟ್ ಯಾರೆಂದು ತಿಳಿದುಕೊಳ್ಳಲು ಅವನ ಪ್ರತಿಯೊಂದು ಚಲನವಲನಗಳನ್ನ ಗಮನಿಸುತ್ತಿದ್ದೆ. ನೆನ್ನೆ ಸಹ ಆತನನ್ನ ಹಿಂಬಾಲಿಸಿತ್ತಾ ಹೊಟೆಲ್ ರೂಂಗೆ ಹೋದೆ. ನನ್ನನ್ನ ನೋಡಿ ಆತ ಒಂದು ಕ್ಷಣ ಬೆಚ್ಚಿದ. ನಾನು ಆ ಹುಡುಗಿಯನ್ನ ನನ್ನ ಜೊತೆ ಕರೆದುಕೊಂಡು ಹೋಗಲು ಪ್ರಯತ್ನಮಾಡಿದೆ. ಆದರೆ ಆತ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ. ಆ ಚಕಮಕಿಯಲ್ಲೇ ನಾನು ಅವನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದೆ.
ಹೀಗೆ ಹೇಳಿ ಮಾಧುರ್ಯ ತನ್ನ ಮಾತನ್ನ ಮುಗಿಸಿದಳು. ಇದನ್ನೆಲ್ಲ ಕೇಳಿದ ರಾಘವ್ ಮಾಧುರ್ಯ ಹೇಳಿದ ಮಾತನ್ನು ಧೃಢಪಡಿಸಿಕೊಳ್ಳಲು ಹೊಟೆಲ್ ನ ಸಿಸಿಟಿವಿ ಫುಟೇಜ್ ಚೆಕ್ ಮಾಡಲು ಹೊರಟ.
ಮಾರನೆಯ ದಿನ ಮಾಧುರ್ಯಳನ್ನ ಕೋರ್ಟ್ನಲ್ಲಿ ಹಾಜರು ಪಡಿಸಲಾಯಿತು. ಕೋರ್ಟ್ನಲ್ಲಿ ವಾದ ವಿವಾದಗಳ ನಂತರ, ಆತ್ಮರಕ್ಷಣೆ ಮಾಡಿಕೊಳ್ಳುವ ಸಮಯದಲ್ಲಿ ಘಟನೆನಡೆದಿರುವುದಾಗಿಯೂ ಕೊಲೆ ಮಾಡುವ ಯಾವುದೇ ಉದ್ದೇಶ ಆಕೆಯದ್ದಾಗಿರಲಿಲ್ಲವೆಂಬುದು ಸಾಬೀತಾದ ಕಾರಣದಿಂದಲೂ ಮಾಧುರ್ಯಳಿಗೆ 2 ವರ್ಷಗಳ ಕಾಲ ಕಾರಾಗೃಹ ವಾಸವನ್ನು ವಿಧಿಸಲಾಗುತ್ತದೆ. ಮಾಧುರ್ಯಳನ್ನ ಕೋರ್ಟ್ನಿಂದ ಹೊರಗೆ ಕರೆತಂದಾಗ, ಅಲ್ಲಿ ಸುಜಾತಾ ನಿಂತಿರುವುದು ಕಾಣಿಸುತ್ತದೆ. ಆಕೆಯನ್ನ ನೋಡಿ ಮಾಧುರ್ಯ ಸ್ಮೈಲ್ ಮಾಡುತ್ತಾಳೆ. ಸುಜಾತಾ ತನ್ನ ಬಳಿ ಬರುತ್ತಿರುವುದನ್ನು ಕಂಡು ಅಧಿಕಾರಿಗಳ ಬಳಿ ಅನುಮತಿ ಪಡೆದು ಮಾಧುರ್ಯ ಸುಜಾತಾಳೊಂದಿಗೆ ಮಾತನಾಡಲು ಹೋಗುತ್ತಾಳೆ.
ಸುಜಾತಾ ಮಾಧುರ್ಯಳನ್ನ ತಬ್ಬಿಕೊಂಡು ಅಳುತ್ತಾಳೆ.
ಮಾಧುರ್ಯ ಆಕೆಯನ್ನ ಸಮಾಧಾನ ಪಡಿಸುತ್ತಾಳೆ.
ಸುಜಾತಾ : ನಾನು ನಿನ್ನ ಪಾಲಿಗೆ ಸತ್ತು ಹೋಗಿದ್ನಾ? ಒಂದೇ ಒಂದು ಸಲವಾದರೂ ನನ್ನನ್ನ ಕಾಂಟ್ಯಾಕ್ಟ್ ಮಾಡಿದ್ಯಾ? ನಿನ್ನನ್ನ ನೆನೆಸಿಕೊಳ್ಳದೇ ಇರೋ ದಿನಾನೇ ಇಲ್ಲ. ನಿನ್ನನ್ನ ಹುಡುಕಲು ಎಷ್ಟು ಪ್ರಯತ್ನ ಮಾಡ್ದೆ ಗೊತ್ತಾ?
ಮಾಧುರ್ಯ : ಐ ಆ್ಯಮ್ ಸಾರಿ…. ನಾನು ಅವತ್ತು ಹಾಗೆ ಹೋಗ್ಬಾರ್ದಿತ್ತು. ನಂದೇ ತಪ್ಪು. ನನ್ನ ಆ ತಪ್ಪು ನಿರ್ಧಾರದಿಂದ ಒಂದು ಜೀವಹೋಯಿತು. 2 ವರ್ಷ ನಿನ್ನನ್ನ ಬಿಟ್ಟು ನನಗೆ ಮಾತ್ರ ನೆಮ್ಮದಿ ಇತ್ತಾ ಹೇಳು?
ಸುಜಾತಾ : ಆದದ್ದು ಆಯ್ತು. ಬೇಗ ಶಿಕ್ಷೆ ಮುಗಿಸಿಕೊಂಡು ಬಾ ನಿನಗಾಗಿ ನಾನು ಕಾಯ್ತಾಯಿರ್ತೀನಿ….
ಹೀಗೆ ಹೇಳಿ ಮತ್ತೆ ಮಾಧುರ್ಯಳನ್ನ ಅಪ್ಪಿಕೊಳ್ಳುತ್ತಾಳೆ. ಮಾಧುರ್ಯ ಅಧಿಕಾರಿಗಳೊಂದಿಗೆ ಜೀಪ್ ಬಳಿ ಬರುತ್ತಾಳೆ. ಅಲ್ಲಿ ತಾನು ಕಾಪಾಡಿದ ಆ ಹುಡುಗಿಯನ್ನ ಮಾಧುರ್ಯ ನೋಡುತ್ತಾಳೆ. ಆ ಹುಡುಗಿ ಮಾಧುರ್ಯಳಿಗೆ ಕೈಮುಗಿದು ತನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾಳೆ. ಮಾಧುರ್ಯ ಆಕೆಯನ್ನು ಕಂಡು ನೆಮ್ಮದಿಯಿಂದ ಜೀಪ್ ಹತ್ತುತ್ತಾಳೆ. ನಿಶ್ಚಿತ್ ನಂತಹ ಕಾಮುಕನಿಂದ ಇನ್ನಷ್ಟು ಹುಡುಗಿಯರ ಬಾಳು ಹಾಳಾಗುವುದನ್ನ ತಪ್ಪಿಸಿದ ತೃಪ್ತಿ ಆಕೆಯ ಮನಸನ್ನಾವರಿಸುತ್ತದೆ.
