ಆ ಮುಖ ಧಿಗ್ಗನೆ ಎದುರು ಬಂದಾಗ...!
ಆ ಮುಖ ಧಿಗ್ಗನೆ ಎದುರು ಬಂದಾಗ...!
ಶಿಲ್ಪಾ ಹಾಗೂ ಸಂಜಯ್ ದಂಪತಿ ಹೊಸದಾಗಿ ಆ ಮನೆಗೆ ಶಿಫ್ಟ್ ಆಗಿದ್ದರು.
ಅವರ ಮನೆಯಿಂದ ಸ್ವಲ್ಪವೇ ದೂರದಲ್ಲಿ ೨ವರ್ಷಗಳ ಕೆಳಗೆ ಒಂದು ಅಪಾರ್ಟ್ಮೆಂಟ್ ನಿರ್ಮಾಣವಾಗಿತ್ತು. ಅಪಾರ್ಟ್ಮೆಂಟ್ ಅರ್ಧದಷ್ಟು ನಿರ್ಮಾಣವಾಗಿದ್ದಾಗ ಒಬ್ಬ ಕೂಲಿ ಕಾಲು ಜಾರಿ ೩ನೇ ಅಂತಸ್ತಿನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದ. ಆತ ದೆವ್ವವಾಗಿ, ಆ ಅಪಾರ್ಟ್ಮೆಂಟ್ ಸುತ್ತವೇ ಅಲೆಯುತ್ತಿರುತ್ತಾನೆ ಎಂಬ ವದಂತಿಯನ್ನು ತನ್ನ ನೆರೆಮನೆಯವರಿಂದ ಶಿಲ್ಪಾ ಕೇಳಿ ತಿಳಿದುಕೊಂಡಿದ್ದಳು. ಶಿಲ್ಪಾಳಿಗೆ ಈ ದೆವ್ವ- ಭೂತಗಳ ಬಗ್ಗೆ ಮೊದಲಿನಿಂದಲೂ ಬಹಳ ಕುತೂಹಲ.ಈ ವಿಷಯವಾಗಿ ಪತಿಯೊಂದಿಗೆ ಚರ್ಚಿಸಿದಾಗ ಅವನು ಇದರ ಕುರಿತಾಗಿ ಹೆಚ್ಚು ಆಸಕ್ತಿ ತೋರಿಸಿರುವುದಿಲ್ಲ.
ಹೀಗಿರಲು ಆ ರಾತ್ರಿ ಶಿಲ್ಪಾ ಹಾಗೂ ಸಂಜಯ್ ಮಲಗಿದ್ದಾರೆ. ರಾತ್ರಿ ೧೨:೩೦ ಸಮಯ. ನಾಯಿಗಳು ಊಳಿಡಲು ಪ್ರಾರಂಭಿಸುತ್ತವೆ. ಇದರಿಂದ ಶಿಲ್ಪಾಗೆ ಎಚ್ಚರವಾಗುತ್ತದೆ. ಬಹಳ ಬಾಯಾರಿದ ಕಾರಣ ನೀರು ಕುಡಿಯಲು ಅಡುಗೆಮನೆಗೆ ಹೋಗುತ್ತಾಳೆ. ಆಗ ಆಕೆಗೆ ಯಾರೋ ಅಳುತ್ತಿರುವ ಸದ್ದು ಕೇಳುತ್ತದೆ. ಎಲ್ಲೋ ತನ್ನ ಭ್ರಮೆಯಿರಬೇಕೆಂದುಕೊಂಡು ನೀರು ಕುಡಿದು ಹೋಗಿ ಮಲಗುತ್ತಾಳೆ. ಆದರೆ ಆಕೆಗೆ ನಿದ್ದೆ ಬರುತ್ತಿಲ್ಲ. ಕೆಲ ಹೊತ್ತು ಹಾಗೇ ಮಂಚದ ಮೇಲೆ ಹೊರಳಾಡುತ್ತಿರುತ್ತಾಳೆ. ಒಮ್ಮೆಗೇ ಆ ಅಳುವ ಶಬ್ದ ನಿಂತುಹೋಗುತ್ತದೆ. ಸುತ್ತಲೂ ನೀರವ ಮೌನ. ಶಿಲ್ಪಾಳಿಗೆ ತಾನು ನೆರೆಯವರಿಂದ ಕೇಳಿದ್ದ ದೆವ್ವದ ವಿಷಯವೇ ತಲೆಯಲ್ಲಿ ಓಡುತ್ತಿದೆ. ಅಷ್ಟರಲ್ಲಿ ಮತ್ತದೇ ಅಳುವಿನ ಧ್ವನಿ. ಶಿಲ್ಪಾಳಿಗೆ ಹೊರಹೋಗಿ ಅಳುತ್ತಿರುವವರಾರೆಂದು ನೋಡಿ ಬರಬೇಕೆಂದನಿಸುತ್ತದೆ. ಆದರೆ ಆ ರಾತ್ರಿಯಲ್ಲಿ ಹೊರಹೋಗಲು ಧೈರ್ಯಸಾಲುತ್ತಿಲ್ಲ. ಆದರೆ ಆಕೆಗೆ ನೆಮ್ಮದಿಯಿಂದ ಮಲಗಲೂ ಸಾಧ್ಯವಾಗುತ್ತಿಲ್ಲ.ಆ ಅಳುವನ್ನು ಕೇಳುತ್ತಿದ್ದರೆ ಕರುಳು ಹಿಂಡಿದಂತಾಗುತ್ತಿದೆ ಶಿಲ್ಪಾಳಿಗೆ.
ಕೊನೆಗೆ ಧೈರ್ಯಮಾಡಿ ಕಿಟಕಿಯ ಬಳಿ ಬಂದು ಹೊರಗೆ ನೋಡುತ್ತಿರಬೇಕಾದರೆ, ಧಿಡೀರನೆ ಆಕೆಯ ಮುಂದೆ ದೆವ್ವದ ಮುಖ ಕಾಣಿಸಿಕೊಳ್ಳುತ್ತದೆ.
ಕಿಟಾರನೆ ಶಿಲ್ಪಾ ಕಿರುಚಿಕೂಂಡು ನಿದ್ದೆಯಿಂದ ಏಳುತ್ತಾಳೆ.ಸುತ್ತಲೂ ನೋಡಿದಾಗ ತಾನು ಕಂಡದ್ದೊಂದು ಕನಸೆಂದು ಆಕೆಗೆ ಅರಿವಾಗುತ್ತದೆ. ಆಕೆ ಕಿರುಚಿಕೊಂಡಿದ್ದನ್ನು ಕೇಳಿ ಸಂಜಯ್ ಸಹ ಗಾಬರಿಯಿಂದ ಎಳುತ್ತಾನೆ.

