ತಿರುವು
ತಿರುವು
ರಾಮಪ್ಪ ಮಾಸ್ತರರು ಎಂದಿನ ತಮ್ಮ ವಾಡಿಕೆಯಂತೆ ಸಂಜೆ ದೇವಸ್ಥಾನಕ್ಕೆ ಹೋಗಿ ಕೈಮುಗಿದು ನಂತರ ತಮ್ಮ ವಯೋಮಾನದವರೊಂದಿಗೆ ಒಂದಷ್ಟು ಹೊತ್ತು ಮಾತನಾಡಿ ಮನೆಗೆ ಬಂದಾಗ ಎಂಟು ಗಂಟೆಯಾಗಿತ್ತು. ಮನೆಯ ಮುಂದೆ ಕಾರು ನಿಂತಿತ್ತು, ಯಾರು ಬಂದಿರಬಹುದು ಎಂದು ಯೋಚಿಸುತ್ತಲೆ ಒಳಗೆ ಹೆಜ್ಜೆ ಇಟ್ಟರು. ಅದೊಂದು ಹಳೆಯ ಕಾಲದ ಹಳ್ಳಿಯ ಪುಟ್ಟ ಮನೆ. ಬಾಗಿಲು ತೆಗೆಯುತ್ತಿದ್ದಂತೆ ಒಂದು ಹಾಲು, ಹಾಲಿನ ಅರ್ಧ ಭಾಗದಷ್ಟು ಜಾಗದ ಒಂದು ರೂಂ ಮತ್ತು ಅಷ್ಟೇ ಅಳತೆಯ ಅಡುಗೆಮನೆ. ಬಚ್ಚಲು ಮತ್ತು ಪಾಯಖಾನೆ ಹಿತ್ತಲಲ್ಲಿ ಇತ್ತು. ಹಾಲಿನಲ್ಲಿ ಮಧ್ಯವಯಸ್ಸಿನ ಗಂಡ ಹೆಂಡತಿ ಹಾಗೂ ಹತ್ತು ಹನ್ನೆರಡು ವಯಸ್ಸಿನ ಹುಡುಗ ಕುಳಿತಿದ್ದ.
ಮಾಸ್ತರರಿಗೆ ಈಗಾಗಲೇ ವಯಸ್ಸು ಎಪ್ಪತ್ತು, ಕಣ್ಣು ಮಂಜಾಗಿ ಕನ್ನಡಕ ಧರಿಸಿದ್ದರೂ, ಅದು ಎಷ್ಟೋ ವರ್ಷಗಳ ಕೆಳಗೆ ಡಾಕ್ಟರಿಗೆ ತೋರಿಸಿ ತೆಗೆದುಕೊಂಡಿದ್ದು. ಮತ್ತೆ ಅದನ್ನು ತೋರಿಸಿ ಬದಲಾಯಿಸಲು ಹೋಗಿರಲಿಲ್ಲ, ಹಾಗಾಗಿ ತಕ್ಷಣಕ್ಕೆ ಮನೆಗೆ ಬಂದವರು ಯಾರೆಂದು ಗುರುತಿಸಲು ಅವರಿಗೆ ಆಗಲಿಲ್ಲ. ಯಾರೂ ಎನ್ನುವಂತೆ ಅವರನ್ನೇ ನೋಡುತ್ತಾ ಒಳಗೆ ಬಂದರು. ಮಾಸ್ತರರನ್ನು ನೋಡಿದೊಡನೆ ಬಂದವರು ಎದ್ದು ನಿಂತಿದ್ದರು. ನೇರವಾಗಿ ಬಂದವರಿಗೆ ಯಾರೆಂದು ಕೇಳುವುದು ಸರಿಯಲ್ಲ ಎಂದುಕೊಂಡು ಅವರಿಗೆ ಕೂರಲು ಕೈಸನ್ನೆ ಮಾಡುತ್ತಾ, ಅಲ್ಲಿ ಕಾಣದಿದ್ದ ತಮ್ಮ ಹೆಂಡತಿಗೆ, ಲೇ ಇವಳೇ ಬಂದವರಿಗೆ ಕಾಫಿ ಟೀ ಏನಾದರೂ ಕೊಟ್ಟೆಯೋ ಇಲ್ಲವೋ ಎನ್ನುತ್ತಾ ಅಡಿಗೆಮನೆ ಕಡೆ ಹೆಜ್ಜೆ ಹಾಕಿದರು. ಗಂಡನ ಧ್ವನಿ ಕೇಳಿ ಹೊರಬಂದ ಹೆಂಡತಿ ಸೀತಮ್ಮ, ಅಯ್ಯೋ ಬಂದವರು ಯಾರು ಗೊತ್ತಾಗಲಿಲ್ಲವೇ, ನೋಡಿ ಸರಿಯಾಗಿ! ಅವರು ನಮ್ಮ ಮಗ ಸೊಸೆ ಅಲ್ಲವೇ ಎಂದರು. ಮಾಸ್ತರರು ಆಶ್ಚರ್ಯದಿಂದ ಅತ್ತ ನೋಡುವಷ್ಟರಲ್ಲಿ ಮಗ ಪ್ರಕಾಶ ಅವರ ಕಾಲು ಬುಡದಲ್ಲಿದ್ದ.
ಪ್ರಕಾಶ, ತಂದೆಯ ಮೇಲೆ ಮುನಿಸಿಕೊಂಡು ಮನೆಬಿಟ್ಟು ಹೋಗಿ ಹದಿನೈದು ವರ್ಷಗಳಿಗಿಂತ ಹೆಚ್ಚಾಗಿತ್ತು. ಸಾಕಷ್ಟು ಜನ, ಸಾಕಷ್ಟು ಬಾರಿ ಇಬ್ಬರನ್ನು ಒಂದು ಮಾಡಲು ಪ್ರಯತ್ನಪಟ್ಟರೂ ಪ್ರಕಾಶನ ಹಠದಿಂದಾಗಿ ಸಾಧ್ಯವಾಗಿರಲಿಲ್ಲ. ಸ್ವತಃ ತಾಯಿ ಸೀತಮ್ಮನೇ ಕಾಡಿ ಬೇಡಿದರೂ, ನೀನು ಬೇಕಾದರೆ ಬಂದು ನಮ್ಮ ಜೊತೆಗಿರು ಆದರೆ ಅಪ್ಪನ ನೆರಳೂ ನೋಡಲು ಇಷ್ಟವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದ. ಇದರಿಂದ ಮನಸ್ಸನ್ನು ಕಲ್ಲು ಮಾಡಿಕೊಂಡ ಸೀತಮ್ಮ ಗಂಡನೊಂದಿಗೆ ಹಳ್ಳಿಯಲ್ಲೇ ಉಳಿದಿದ್ದರು.
ರಾಮಣ್ಣ ಸರ್ಕಾರಿ ಪ್ರಾಥಮಿಕ ಶಾಲೆಯ ಮಾಸ್ತರರು. ಮೊದಲು ದೂರದ ಒಂದೆರಡು ಹಳ್ಳಿಗಳಲ್ಲಿ ಕೆಲಸ ಮಾಡಿ ನಂತರ ತಮ್ಮ ಹಳ್ಳಿಯ ಹತ್ತಿರದ ಶಾಲೆಗಳಲ್ಲಿ ಕೆಲಸ ಮಾಡುತ್ತಾ ಕೊನೆಗೆ ತಮ್ಮ ಊರಲ್ಲೇ ಕೆಲಸದಿಂದ ನಿವೃತ್ತರಾದರು. ಇವರು ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ಶಾಲೆಯ ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ತಮ್ಮ ಬಳಿ ಇದ್ದಾಗ ಯಾರಾದರೂ ಕಷ್ಟ ಎಂದು ಬಂದಾಗ ಮನೆಯ ಖರ್ಚಿನ ಬಗ್ಗೆ ಯೋಚಿಸದೆ ಕೊಟ್ಟುಬಿಡುತ್ತಿದ್ದರು. ಇದರಿಂದ ಒಂದಷ್ಟು ಬಾರಿ ಪ್ರಕಾಶ ತನಗೆ ಹಣ ಬೇಕೆಂದು ಕೇಳಿದಾಗ, ಇವರು ಹೂಂ ಎಂದು ನಂತರ ಸಮಯಕ್ಕೆ ಕೊಡದೆ ಅವನ ಮುನಿಸಿಗೆ ಕಾರಣವಾಗಿತ್ತು. ಅವನು ಮನೆಬಿಟ್ಟು ಹೋಗಲು ಕೂಡ ಇದೇ ಕಾರಣ. ಪ್ರಕಾಶನ ಓದು ಮುಗಿದು ಅವನ ಹಳ್ಳಿಯಿಂದ ಮೂವತ್ತು ಕಿಲೋಮೀಟರ್ ದೂರದ ಊರಲ್ಲಿ ಕೆಲಸ ಸಿಕ್ಕಿತ್ತು. ಅಲ್ಲಿಗೆ ಪ್ರತಿದಿನ ಬಸ್ಸಲ್ಲಿ ಹೋಗಿ ಬರುತ್ತಿದ್ದ. ಆದರೆ ಆ ಬಸ್ಸು ಪ್ರತಿ ಹಳ್ಳಿಯಲ್ಲೂ ನಿಂತು ಹೊರಡುತ್ತಿದ್ದರಿಂದ ಕೆಲವೊಮ್ಮೆ ಸಾಕಷ್ಟು ತಡವಾಗಿ ಕಚೇರಿಯಲ್ಲಿ ಮುಜುಗರ ಅನುಭವಿಸಬೇಕಿತ್ತು. ಅದಕ್ಕಾಗಿ ಬೈಕ್ ಕೊಳ್ಳಲು ತನ್ನ ಬಳಿ ಇದ್ದ ಹಣ ಸಾಕಾಗುವುದಿಲ್ಲ ಎಂದು ತಂದೆಯ ಬಳಿ ಕೇಳಿದ್ದ. ಎರಡು ದಿನದಲ್ಲಿ ಕೊಡುವೆ ಎಂದಿದ್ದರು ರಾಮಣ್ಣನವರು. ಹೇಳಿದಂತೆ ಹಣವನ್ನು ಹೊಂದಿಸಿದ್ದರು ಆದರೆ ಮಗ ಕಚೇರಿಯಿಂದ ಬರುವ ಮುನ್ನವೇ ಮನೆಗೆ ಬಂದಿದ್ದ ಪರಿಚಯದವರು, ತಮ್ಮ ಮಗಳಿಗೆ ಮೆಡಿಕಲ್ ಸೀಟ್ ಸಿಕ್ಕಿದೆ ಆದರೆ ಫೀ ಕಟ್ಟಲು ಹಣವಿಲ್ಲ, ನಾಳೆಯೇ ಕೊನೆಯ ದಿನ. ಇಲ್ಲಾ ಎನ್ನದೆ ಕೊಡಲೇಬೇಕೆಂದು ಕೇಳಿದಾಗ, ಬೈಕ್ ಬೇಕಿದ್ದರೆ ಸ್ವಲ್ಪ ದಿನ ಬಿಟ್ಟು ಕೊಳ್ಳಬಹುದು ಆದರೆ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಾರದೆಂದು ಆ ಹಣವನ್ನು ಅವರಿಗೆ ಕೊಟ್ಟಿದ್ದರು.
ಸಂಜೆ ಕಚೇರಿಯಿಂದ ಮನೆಗೆ ಬರುವಾಗಲೇ ಪ್ರಕಾಶ ಯಾವುದೋ ವಿಷಯಕ್ಕೆ ಬೇಸರವಾಗಿ ಬಂದಿದ್ದ. ರಾತ್ರಿಯ ಊಟವಾದ ಮೇಲೆ ತಂದೆಗೆ, ಹಣ ಸಿಗುತ್ತದೆ ಅಲ್ಲವೇ ಎಂದ. ಅದಕ್ಕೆ ರಾಮಣ್ಣ ಇರುವ ವಿಷಯ ತಿಳಿಸಿ, ಮತ್ತೆರಡು ದಿನಗಳಲ್ಲಿ ಹೊಂದಿಸಿ ಕೊಡುವುದಾಗಿ ಹೇಳಿದರು. ಊರಿನವರಿಗೆ ಕೊಡಲು ನಿಮ್ಮ ಬಳಿ ಹಣ ಇದೆ, ಮಗನಿಗೆ ಕೊಡಲು ಇಲ್ಲ ಅಲ್ಲವೇ? ಇರಲಿ ಬಿಡಿ, ನನಗೆ ನೀವೂ ಬೇಡ ನಿಮ್ಮ ಹಣವೂ ಬೇಡ ಎಂದು ಅಲ್ಲಿಂದ ಎದ್ದು ರೂಮಿಗೆ ಹೋದ. ರಾಮಣ್ಣನಿಗೆ ಇದರಿಂದ ತಮ್ಮ ಮೇಲೇ ಬೇಸರವಾಯಿತು. ಹೇಗಾದರೂ ಮಾಡಿ ನಾಳೆಯೇ ಅವನಿಗೆ ಹಣ ಹೊಂದಿಸಿ ಕೊಡಬೇಕು ಎಂದುಕೊಂಡು ಮಲಗಿದರು.
ಬೆಳಿಗ್ಗೆ ಎಂದಿನಂತೆ ಕಚೇರಿಗೆ ಹೋಗುವಾಗ ಪ್ರಕಾಶ ಎರಡು ಬ್ಯಾಗುಗಳಲ್ಲಿ ತನ್ನೆಲ್ಲಾ ವಸ್ತುಗಳನ್ನು ತುಂಬಿಕೊಂಡು ಹೊರಟ. ರಾಮಣ್ಣ ಮಾಸ್ತರರು ಹಣ ಹೊಂದಿಸುವ ಸಲುವಾಗಿ ಹೊರಹೋಗಿದ್ದರು. ಸೀತಮ್ಮ ಪಾತ್ರೆ ತೊಳೆಯಲೆಂದು ಹಿತ್ತಲಿಗೆ ಹೋಗಿದ್ದರು. ಹಾಗಾಗಿ ಪ್ರಕಾಶ ಬ್ಯಾಗ್ ಹಿಡಿದು ಹೊರಟ್ಟಿದ್ದು ಇಬ್ಬರೂ ನೋಡಲಿಲ್ಲ. ಪ್ರಕಾಶ ಮಾಮೂಲಿ ಬರುವ ಸಮಯ ಮೀರಿ ಬಹಳ ಹೊತ್ತಾದರೂ ಬಾರದಿದ್ದನ್ನು ನೋಡಿ ರಾಮಣ್ಣ ದಂಪತಿಗಳಿಗೆ ದಿಗಿಲಾಗಿ, ದಿನ ಅವನೊಂದಿಗೆ ಓಡಾಡುತ್ತಿದ್ದ ಪಕ್ಕದ ಓಣಿಯ ಹುಡುಗನಿಗೆ ಹೋಗಿ ಕೇಳಿದಾಗ, ಪ್ರತಿದಿನ ಕಚೇರಿಗೆ ತಡವಾಗುತ್ತಿದ್ದ ಕಾರಣ ಇಂದಿನಿಂದ ಅಲ್ಲೇ ರೂಂ ಮಾಡಿಕೊಂಡು ಇರುವೆ ಎಂದ ವಿಷಯ ತಿಳಿಯಿತು. ಖಂಡಿತವಾಗಿಯೂ ನಿಜವಾದ ಕಾರಣ ಇದಲ್ಲ ಎಂದು ರಾಮಣ್ಣನವರಿಗೆ ತಿಳಿದು ಹೋಯಿತು.
ನಂತರ ಅವನನ್ನು ಮನೆಗೆ ಕರೆತರುವ ಎಲ್ಲಾ ಪ್ರಯತ್ನಗಳು ವಿಫಲವಾದವು. ಪ್ರಕಾಶ ಮದುವೆ ಆಗುವಾಗ ಮತ್ತು ಮಗು ಹುಟ್ಟಿದಾಗ ಸ್ನೇಹಿತರ ಕಡೆಯಿಂದ ತಾಯಿಗೆ ಹೇಳಿ ಕಳಿಸಿದನೆ ಹೊರತು ತಂದೆಯನ್ನು ಕರೆಯಲಿಲ್ಲ. ಗಂಡನಿಗೆ ಕರೆಯದಿದ್ದ ಮೇಲೆ ತಾನೇಕೆ ಹೋಗಬೇಕೆಂದು ಸೀತಮ್ಮನೂ ಹೋಗಲಿಲ್ಲ.
ಪ್ರಕಾಶನಿಗೆ ಕೇಳಿದವರಿಗೆ ಹಿಂದೆ ಮುಂದೆ ಯೋಚಿಸದೆ ಕೈ ಎತ್ತಿ ಕೊಡುವ ತಂದೆಯ ಗುಣ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಇದು ಅವನ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ತಾನು ಯಾರಿಗಾದರೂ ತುಂಬಾ ಹಚ್ಚಿಕೊಂಡರೆ, ನಾಳೆ ಅವರು ಏನಾದರೂ ಸಹಾಯ ಕೇಳಬಹುದು, ತಾನು ಅವರಿಗೆ ಸಹಾಯ ಮಾಡಲು ಹೋಗಿ ಎಲ್ಲಿ ಮಗನೂ ತನ್ನಂತೆ ನೋವು ಅನುಭವಿಸಬೇಕಾಗುವುದೊ ಎಂದು ಯಾರನ್ನು ಹಚ್ಚಿಕೊಳ್ಳುತ್ತಿರಲಿಲ್ಲ. ಹೆಂಡತಿ, ಮಗ ಅಕ್ಕಪಕ್ಕದವರನ್ನು ಸಲಿಗೆಯಿಂದ ಮಾತನಾಡಿಸಿದರೂ ಸಾಕು ಇವನಿಗೆ ಸಿಟ್ಟು ಬರುತ್ತಿತ್ತು. ಕೆಲಸ ಮಾಡುವ ಕಚೇರಿಯಲ್ಲೂ ಯಾರನ್ನು ಹೆಚ್ಚು ಮಾತನಾಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಪ್ರಕಾಶನಿಗೆ ಆತ್ಮೀಯ ಗೆಳೆಯರೆ ಇರಲಿಲ್ಲ.
ಹೇಗೋ ಒಟ್ಟಿಗೆ ಜೀವನ ಸಾಗುತ್ತಿತ್ತು. ಆದರೆ ಮೊದಲ ಬಾರಿ ಕೊರೋನಾ ಬಂದು ಲಾಕ್ ಡೌನ್ ಆದಾಗ ಎರಡು ಮೂರು ತಿಂಗಳು ಸಂಬಳ ಬರಲಿಲ್ಲ. ಆಮೇಲೆ ಕೆಲಸ ಶುರುವಾದ ಮೇಲೂ ಸಂಬಳದಲ್ಲಿ ಕಡಿತವಾಯಿತು. ಇದನ್ನು ಹೇಗೋ ಸಹಿಸಿಕೊಂಡು ಬದುಕಿರುವಾಗಲೇ ಎರಡನೇ ಅಲೆ ಅಪ್ಪಳಿಸಿ ಮತ್ತೆ ಲಾಕ್ ಡೌನ್ ಆದಾಗ ಕೆಲಸವನ್ನು ಕಳೆದುಕೊಂಡ. ಬೇರೆ ಕಡೆ ಕೆಲಸದ ಹುಡುಕಾಟ ನಡೆಸಿದರೂ ಉಪಯೋಗವಾಗಲಿಲ್ಲ. ಕೂಡಿಟ್ಟ ಹಣ ಕೊರಗುತ್ತಾ ಬಂದು ಬೇರೆಯವರ ಬಳಿ ಸಹಾಯ ಕೇಳುವ ಪರಿಸ್ಥಿತಿ ಬಂತು. ಜನಬಳಕೆ ಇಲ್ಲದ ಅವನಿಗೆ ಯಾರ ಬಳಿಯೂ ಹೋಗಿ ಸಹಾಯ ಕೇಳಲು ಆಗುತ್ತಿರಲಿಲ್ಲ. ಈಗ ಬೇಡವೆಂದರೂ ತಂದೆಯ ನೆನಪಾಗತೊಡಗಿತು. ಜೊತೆಗೆ ಅವರು ಬೇಡಿಬಂದವರಿಗೆ ಸಹಾಯ ಮಾಡುವ ಗುಣ. ತಾನೂ ತಂದೆಯಂತೆ ಇದ್ದಿದ್ದರೆ ಈ ಗತಿ ಬರುತ್ತಿರಲಿಲ್ಲ ಎಂದು ಸಾವಿರ ಬಾರಿ ಯೋಚಿಸಿದ. ತಕ್ಷಣ ಹೋಗಿ ತಂದೆಯನ್ನು ನೋಡಬೇಕು ಅನಿಸಿದ್ದು ಅದೇಷ್ಟು ಬಾರಿಯೋ. ಆದರೆ ಸ್ವಾಭಿಮಾನ ಅಡ್ಡ ಬರುತ್ತಿತ್ತು.
ಅಂದು ಏಳುವಾಗಲೇ ಮಗನ ಮೈ ಬೀಸಿಯಾಗಿತ್ತು, ಪ್ರಕಾಶನಿಗೆ ಏನೇನೋ ಯೋಚನೆಗಳು ಬಂದು ಒದ್ದಾಡಿ ಹೋದ. ಜೇಬಲ್ಲಿ ಕಾಸಿಲ್ಲ, ಈಗ ಮಗನಿಗೆ ಕೊರೋನಾ ಬಂದಿದೆ ಎಂದಾದರೆ ಹಣ ಹೇಗೆ ಹೊಂದಿಸುವುದು, ದೇವರೇ ನೀನೇ ಕಾಪಾಡಪ್ಪ ಎಂದು ಮನಸಾರೆ ಬೇಡಿದ. ಹೆಂಡತಿ ಹೋಗಿ ಪಕ್ಕದ ಮನೆಯವರ ಬಳಿ ಸ್ವಲ್ಪ ಹಣ ಕೇಳಿ ತಂದಳು. ಪುಣ್ಯಕ್ಕೆ ಮಗನಿಗೆ ಮಾಮೂಲಿ ಜ್ವರ ಬಂದಿತ್ತು. ಇದು ಪ್ರಕಾಶನಿಗೆ ಒಂದು ದೃಢ ನಿರ್ಧಾರ ಮಾಡಲು ಸಹಾಯ ಮಾಡಿತು.
ತಂದೆ ಒಪ್ಪಿದರೆ ಊರಲ್ಲಿ ಅವರೊಂದಿಗೆ ಇರುವ ಬಯಕೆ ಬಲವಾಗಿ ಅದನ್ನೇ ಹೆಂಡತಿಗೆ ಹೇಳಿದಾಗ, ಅವಳೂ ಸಂತೋಷದಿದಲೇ ಒಪ್ಪಿಕೊಂಡಳು. ಅದೇ ದಿನ ಬಾಡಿಗೆ ಕಾರಿನಲ್ಲಿ ಊರಿಗೆ ಬಂದ. ಅಪ್ಪ ಹೇಗೆ ವರ್ತಿಸುವರೊ ಎಂಬ ಅಳುಕಿತ್ತು ಅವನಿಗೆ. ಊರಿಗೆಲ್ಲ ಸಹಾಯ ಮಾಡುವ ರಾಮಣ್ಣ ಮಗನಿಗೆ ಕೈಬಿಡುವ ಅವಕಾಶವೆಲ್ಲಿ, ಅವರೇ ಪ್ರಕಾಶನ ಪರಿಸ್ಥಿತಿ ಅರ್ಥಮಾಡಿಕೊಂಡು, ಮೂರು ಜನ ಊರಲ್ಲೇ ಇರುವಂತೆ ಹೇಳಿದರು. ಯಾರೂ ಹೇಳಿಕೊಡದ ಪಾಠ ಬದುಕು ಹೇಳಿಕೊಟ್ಟಿತು.
