ಸಿಂಹ ಮತ್ತು ನೊಣ
ಸಿಂಹ ಮತ್ತು ನೊಣ
ಕಾಡಿನಲ್ಲಿ ಸಿಂಹವೊಂದು ಗರ್ವದಿಂದ ಕಾಡನ್ನು ಆಳುತ್ತಿತ್ತು. ಆ ಮೃಗರಾಜನ ಘರ್ಜನೆಗೆ ಇಡೀ ಕಾಡಿನ ಪ್ರಾಣಿಗಳು ಹೆದರಿ ನಡುಗುತ್ತಿದ್ದವು. ಆನೆಯಂತಹ ದೊಡ್ಡ ಪ್ರಾಣಿಯೇ, ಸಿಂಹವನ್ನು ಕಂಡರೆ ತುಂಬಾ ಹೆದರುತ್ತಿತ್ತೆಂದ ಮೇಲೆ ಮಿಕ್ಕ ಪ್ರಾಣಿಗಳ ಪಾಡು ಹೇಳತೀರದು. ಆ ಕಾಡಿನ ರಾಜ ಸಿಂಹದ ಜಂಭವನ್ನು ಮುರಿಯಲು ಯಾವ ಪ್ರಾಣಿಗೂ ಸಾಧ್ಯವಾಗುತ್ತಿರಲಿಲ್ಲ.
ಒಂದು ದಿನ ಮರದ ಕೆಳಗೆ ಗತ್ತಿನಿಂದ ಮಲಗಿದ್ದ ಆ ಸಿಂಹದ ಸುತ್ತಾ ಒಂದು ನೊಣ ಗುಂಯ್ ಅಂತ ಶಬ್ದ ಮಾಡುತ್ತಾ ಸುತ್ತುತ್ತಿತ್ತು. ಆ ನೊಣದ ಗಲಾಟೆಯನ್ನು ತಾಳಲಾರದ ಸಿಂಹ, ಅದರ ಮೇಲೆ ಜೋರಾಗಿ ಘರ್ಜಿಸಿತು. " ಏಯ್ ನೀನೊಂದು ಸಣ್ಣ ನೊಣ. ನಿನಗೆ ನನ್ನ ಶಕ್ತಿಯ ಪರಿಚಯವಿದ್ದಂತಿಲ್ಲ. ನನ್ನ ಶಕ್ತಿಯ ಮುಂದೆ ನೀನು ಯಾವ ಲೆಕ್ಕ, ದೂರ ಹೋಗು " ಎಂದು ತನ್ನ ಬಗ್ಗೆ ಜಂಭ ಕೊಚ್ಚಿಕೊಂಡು, ನೊಣವನ್ನು ತನ್ನಿಂದ ದೂರ ಹೋಗುವಂತೆ ಹೇಳಿತು. ಆಗ ಆ ನೊಣ
"ಅಯ್ಯಾ ಮೃಗರಾಜ,ಈ ಜಗತ್ತಿನಲ್ಲಿ ನಿನ್ನಂತಹ ದೊಡ್ಡ ದೇಹದವರಿಗೆ ಮಾತ್ರ ಶಕ್ತಿಯಿದೆ ಎಂದು ತಿಳಿಯಬೇಡ. ಆಯಾ ಪ್ರಾಣಿಗಳಿಗೆ ಅದಕ್ಕೆ ತಕ್ಕಂತೆ ದೇವರು ಶಕ್ತಿಕೊಟ್ಟಿರುತ್ತಾನೆ. ಎಲ್ಲರೂ ಪರಸ್ಪರ ಕೂಡಿ ಬಾಳಿದರೆ ಚೆನ್ನಾಗಿರುತ್ತದೆ. ನೀನು ನಿನ್ನ ಜಂಭ ಬಿಟ್ಟು ಬಿಡು . ಎಲ್ಲರೂ ಈ ಕಾಡಿನಲ್ಲಿ ನೆಮ್ಮದಿಯಿಂದ ಬಾಳೋಣ"
ಎಂದಿತು.
" ಏಯ್, ನೀನೊಂದು ಚೋಟುದ್ದದ ಪುಟ್ಟ ಜೀವ. ನನಗೆ ಸವಾಲು ಎಸೆಯಬೇಡ. ನಿನಗೆ ಒಳ್ಳೆಯದಾಗುವುದಿಲ್ಲ, ಈಗ ನೀನು ಈ ಜಾಗ ಬಿಟ್ಟು ದೂರ ಹೋದರೆ ಬದುಕುತ್ತೀಯ. " ಸಿಂಹ ಮತ್ತೆ ಘರ್ಜಿಸಿದಾಗ, ಆ ನೊಣ ಈ ಸಿಂಹಕ್ಕೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ,ನನ್ನ ಶಕ್ತಿಯೇನೆಂದು ತೋರಿಸುತ್ತೇನೆ ಎಂದುಕೊಂಡಿತು.
ನಂತರ ಸಿಂಹ ಮಲಗಿದ್ದಾಗ, ಆ ನೊಣ ಅದರ ಮೂಗಿನ ಹೊಳ್ಳೆಯನ್ನು ಹೊಕ್ಕಿ, ಸಿಂಹದ ಮೂಗನ್ನು ಕಚ್ಚತೊಡಗಿತು. ಇಡೀ ಕಾಡನ್ನೇ ಹೆದರಿ ನಡುಗಿಸುತ್ತಿದ್ದ ಸಿಂಹ, ನೋವು ತಾಳಲಾರದೆ, ಒದ್ದಾಡತೊಡಗಿತು.
ಅದರ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಕಡೆಗೆ ಅದು ಆ ನೊಣವನ್ನೆ ಕೇಳಿಕೊಂಡಿತು.
’ಅಯ್ಯ, ನೊಣವೆ, ಹುಲಿ, ಆನೆ, ಕರಡಿ ಮುಂತಾದ ಯಾವ ಪ್ರಾಣಿಗೂ ಹೆದರದ ನಾನು, ಇಂದು ನಿನ್ನ ಮುಂದೆ ಸೋಲುತ್ತಿದ್ದೇನೆ. ದಯವಿಟ್ಟು ನೀನು ನನ್ನ ಮೂಗಿನಿಂದ ಹೊರಕ್ಕೆ ಬಂದು ನನ್ನ ಕಷ್ಟವನ್ನು ಬಿಡಿಸು. ಭೀಮಬಲದ ನನಗೆ ಯಾರೂ ಸರಿಸಾಟಿಯಲ್ಲವೆಂದು ಜಂಭ ಕೊಚ್ಚಿಕೊಳ್ಳುತ್ತಿದ್ದೆ. ಆದರೆ ಇಂದು ನೀನೇ ನನಗಿಂತಲೂ ಬಲಶಾಲಿ ಎಂದು ಒಪ್ಪಿಕೊಳ್ಳುತ್ತೇನೆ. ದಯವಿಟ್ಟು ನನ್ನನ್ನು ಕಾಪಾಡು"
ಸಿಂಹ ಗೋಗೆರೆಯಲು ಪ್ರಾರಂಭಿಸಿದಾಗ, ನೊಣ ಮೂಗಿನಿಂದ ಹೊರಗೆ ಬಂದು,
"ಎಲೈ ಸಿಂಹರಾಜ, ಇನ್ನು ಮುಂದಾದರೂ ನಿನ್ನ ಗರ್ವವನ್ನು ಬಿಟ್ಟು ಎಲ್ಲರ ಜೊತೆ ಸ್ನೇಹದಿಂದಿರು. ಈ ಪ್ರಪಂಚದಲ್ಲಿ, ದೇವರು, ಸಣ್ಣ ಜಂತುವಿನಿಂದ ಹಿಡಿದು, ದೊಡ್ಡ ದೇಹದ ಪ್ರಾಣಿಗಳವರೆಗೂ ಅದಕ್ಕೆ ಸಾಕಾಗುವಷ್ಟು ಶಕ್ತಿ ಕೊಟ್ಟಿರುತ್ತಾನೆ." ಎಂದು ಹೇಳಿ, ಜಂಭದಿಂದ ಹಾರಿಹೋಯಿತು.
