STORYMIRROR

JAISHREE HALLUR

Action Thriller Others

4  

JAISHREE HALLUR

Action Thriller Others

ಸೆಂಟಿನವಾಂತರ--1

ಸೆಂಟಿನವಾಂತರ--1

2 mins
378


  ಮಧ್ಯ ರಾತ್ರಿ ಎರಡು ದಾಟಿತ್ತು. ಹೊರಗೆ ಆಗ ತಾನೆ ಮಳೆ ನಿಂತು ಗಾಳಿ ತಣ್ಣಗಿತ್ತು. ಬೆಡ್ರೂಂ ಕಿಟಕಿ ಬಾಗಿಲುಗಳು ಭದ್ರವಾಗಿ ಮುಚ್ಚಿದ್ದರಿಂದಲೋ ಏನೋ ನನಗೆ ಸೆಖೆ ಸೆಖೆ ಅನಿಸಿ ನಿದ್ದೆ ಹಾರಿತು. ಫ್ಯಾನು ಹಾಕಿದರೆ ಇವಳ ಕಾಟ ಬೇರೆ. ಆಫ್ ಮಾಡೋತನಕ ಕಿರ್ಚ್ಕೋತಾಳೆ. ಅವಳತ್ತ ತಿರುಗಿದೆ. ಸಣ್ಣಗೆ ಗೊರಕೆಯಲ್ಲಿ ಮುದ್ದಾಗಿ ಕಂಡಳು. ಪಕ್ಕದ ರೂಮಿನ ಲೈಟೂ ಆಫ್ ಆಗಿದ್ದಂತೆ ಕಂಡಿತು. ಮಗರಾಯನೂ ಮಲಗಿರಬೇಕು...ಪಾಪ , ಓದೀ ಓದಿ ಸುಸ್ತಾಗಿರುತ್ತೆ...ಹೂಂ..ನಿದ್ದೆ ಇಲ್ಲದೇ ಮಲಗೋದು ಹೇಗೆ? ಎದ್ದೆ. ಹಾಸಿಗೆಯಿಂದ ಕೆಳಗಿಳಿದು, ಬಾಗಿಲು ತೆರೆದು ಮೆಲ್ಲನೆ ಹೊರಗೆ ಬಂದೆ. ಹಿಂದೆಯೇ ಬಾಗಿಲನ್ನು ಮುಂದೆಳೆದುಕೊಂಡೆ. 

  ಹಜಾರದ ಜೀರೋ ಬಲ್ಬಿನ ಬೆಳಕು ಹಾಲ್ನವರೆಗೂ ಹರಡಿತ್ತು. ಹೋಗಿ ಸೋಫಾ ಮೇಲೆ ಕೂತೆ...ಯಾವುದೋ ಕಿಟಕಿ ಗಾಳಿಗೆ ತೆರೆದಿತ್ತೇನೋ..ಪರದೆ ಜೋರಾಗಿ ಹಾರಾಡ್ತಿತ್ತು. ಎದ್ದು ಮುಚ್ಚುವ ಮನಸಿಲ್ಲದೇ ಸುಮ್ಮನೇ ಕೂತೆ. ತಣ್ಣನೆಯ ಗಾಳಿ ಮೈಮನಕೆ ತಂಪಾಗಿ ಸೋಕಿತು. ಹಾಯೆನಿಸಿತು. ಆಹಾ!!! ಇಲ್ಲೇ ಮಲಗಿದ್ದರೆ ಒಳ್ಳೇ ನಿದ್ರೆ ಬರುತ್ತಿತ್ತೇನೋ ಅನಿಸಿತು...

   ಮೆಲ್ಲಗೆ ಕಣ್ಮುಚ್ಚಿ ಕುಳಿತೆ. ಅಮ್ಮನ ನೆನಪಾಯಿತು. ಪಾಪ, ಇದ್ದಿದ್ದರೆ, ಇಷ್ಟೊತ್ತಿಗೆ ಎದ್ದು ಬಂದೇಬಿಟ್ಟಿರೋರು..ಯಾಕೋ ಹಿಂಗ್ ಕೂತಿದೀಯಾ..ಏನಾಯ್ತು ಮಗಾಂತ...

ವಿಚಾರಿಸಿಕೊಂಡು ಕಾಫೀನೋ ಟೀನೋ ಮಾಡಿಕೊಡೋರು...

  ಕಾಫೀಯ ನೆನಪಾದ ತಕ್ಷಣ ..ಯಾಕೋ ಈಗ ಬೇಕು ಅನಿಸಿತು...

  ಆಹಾ!!! ಏನೋ ಸದ್ದು...ಎಂತದೋ ಪರಿಮಳ ಹಾದು ಬಂತು....ನಾನು ತಿರುಗಿ ನೋಡುವಷ್ಟರಲ್ಲಿ ಹಿಂಬದಿಯಿಂದ ಕೈಯೊಂದು ಮುಂದೆ ಚಾಚಿ ಬಂತು. ಹಬೆಯಾಡುವ ಕಾಫೀಯ ಕಪ್ಪು. ಎದೆ ಜಲ್ ಎಂದಿತು....ಯಾರಿದು ..ಸರೀ ರಾತ್ರೀಲಿ...ನೆನೆದ ತಕ್ಷಣ ಕಾಫೀ ತಂದವರು...ಎಂದು ಎಣಿಸಿದೆನಾದರೂ ಹಿಂದೆ ತಿರುಗಿ ನೋಡುವ ಧೈರ್ಯ ಬರಲಿಲ್ಲ. ಕಪ್ಪು ಕೈಗೆತ್ತಿಕೊಂಡೆ... ಅಷ್ಟೇ...

  ಆ ಕೈ ಹಿಂದಕ್ಕೆ ಹೋಯಿತು...ಅಲ್ಲ..ಅಲ್ಲ...ನನ್ನ ಕತ್ತಿನ ಹಿಂಬಾಗದಲ್ಲಿ ಊರಿತು. ನನಗೆ ಮೆಲ್ಲಗೆ ನಡುಕ ಶುರುವಾದ ಹಂಗಾಯ್ತು...ಕಾಫೀ ಕುಡಿದು ಸ್ವಲ್ಪ ಸುದಾರಿಸಿಕೊಳ್ಳಬೇಕು..ಎಂದು ತುಟಿಯ ಬಳಿ ತಂದೆ...

  ಕಿವಿಯ ಹತ್ತಿರ , ಮೆಲ್ಲನೆಯ ಪಿಸು ಮಾತು.....

  "ಹಾಲಲ್ಯಾಕೋ ಚೆನ್ನಾ...."....

  " ನಿದ್ದೆ ಬರಲಿಲ್ಲಾ ಚಿನ್ನಾ..."..... ಆಹ್ಹಾ!!...ನನಗರಿವಿಲ್ಲದೇ ಉತ್ತಿರಿಸಿದ್ದೆ....ಅದು ಹೆಣ್ಣಿನ ದನಿಯಾಗಿತ್ತು. .ಇದೇನು..ಭೂತ ಏನಾದರೂ ಇದ್ದೀತಾ...ನಾ ಹೀಗೆ ಹೆದರೋನಲ್ಲವಲ್ಲಾ...ಮತ್ಯಾಕೆ ಹೀಗಾಡ್ತಿದೀನಿ....ಅಂದುಕೊಂಡು ನೆಟ್ಟಗೆ ಕೂತೆ.....

   ಅವಳ ಕೈ ಇನ್ನೂ ಅಲ್ಲೇ ಕೂದಲಲ್ಲಿ ಮಿಸುಕಾಡುತಿತ್ತು. ನಾ ಬೆದರುಬೊಂಬೆಯಂತೆ ಕೂತೆ ಅಲ್ಲಾಡಲೂ ಆಗದೆ. 

    ಮೃದು ಸ್ಪರ್ಶ ನವಿರಾಗಿತ್ತು. ಕಿವಿಯ ಹಿಂಬಾಗದಿಂದ ಮುಂದಕ್ಕೆ ಚಾಚಿದ ಅನುಭವ..ಯಾಕೋ ಎದೆ ಜೋರಾಗಿ ಡವ ಡವ ಗುಟ್ಟಿತು. ಕಾಫೀ ಕುಡಿಯಲಾಗದೇ, ಬಾಯಿ ಗಂಟಲು ಒಣಗಿತು....ಮೂಗಿನ ಬಳಿ ಅದೇ ಸೆಂಟಿನ ಪರಿಮಳ....ಚಿರಪರಿಚಿತವಾದದ್ದು..ಇದು...ಇದು.. ರೀಟಾ..ಬಳಸುವ ಸೆಂಟು...

  ಹೂಂ ನೆನಪಾಯಿತು..ರೀಟಾ ಬಾಸ್ನ ಪೀ ಎ. ಅವಳು ಆಫೀಸಿನಲ್ಲಿ ಬಹಳ ಫೇಮಸ್ಸು. ಸ್ಕರ್ಟು ಟಾಪಿನಲ್ಲಿ ಹೈಹೀಲ್ಸ್ ಹಾಕೊಂಡು ಕಾರಿಡಾರ್ನಲ್ಲಿ ಹಾದು ಹೋದರೆ ಸಾಕು...ಅವಳು ಹೋದ ಎಷ್ಟೋ ಹೊತ್ತಿನವರೆಗೂ ಈ ಸೆಂಟಿನ ಪರಿಮಳ ಇರುತ್ತೆ. ಅವಳ ಜಾಡನ್ನು ಸುಲಭವಾಗಿ ಕಂಡುಹಿಡಿಯುವ ಸಾಧನ ಈ ಸೆಂಟೇ ಎಂದು ಸಹೋದ್ಯೋಗಿಗಳು ಕಿಂಡಲ್ ಮಾಡುತ್ತಿದ್ದರು....ಅದಿರಲಿ, ಈ ಸರೀರಾತ್ರೀಲಿ, ಅವಳ್ಯಾಕೆ ಇಲ್ಲಿಗೆ ಬಂದ್ಳೂಂತ...ತಲೆ ಬುಡಾ ಅರ್ಥ ಆಗಲಿಲ್ಲ...ಯಾವುದಕ್ಕೂ ಕೇಳೇಬಿಡ್ತೀನಿ...ಅಂತ ಹಿಂದೆ ತಿರುಗಿದೆ...

  ಯಾರೂ ಕಾಣಲಿಲ್ಲ. ಅರೆ, ಇಲ್ಲೇ ಇದ್ದಳಲ್ಲಾ...ಎಲ್ಲಿ ಮಾಯವಾದಳು...? ಅಡಿಗೇ ಮನೇಲಿ ಬಚ್ಚಿಟ್ಟುಕೊಂಡಳಾ....ನೋಡೇಬಿಡೋಣಾಂತ ಎದ್ದೆ. ಕೈಯಲ್ಲಿ ಕಾಫೀ ಕಪ್ಪು ಇತ್ತು. ಇದು ನಿಜ ಅಂದ ಮೇಲೆ ಅವಳು ಬಂದದ್ದೂ ನಿಜಾನೇ ಇರಬೇಕು. ಮೇಯಿನ್ ಡೋರ್ ಚಿಲಕ ನೋಡಿದರೆ ಹಾಕಿದಂತೆಯೇ ಇತ್ತು.. ಮತ್ತೆ ಹ್ಯಾಗೆ ಒಳಗೆ ಬಂದಳಪ್ಪಾ....ಎಂದು ತಲೆ ಬಿಸಿಯಾಯ್ತು.....

   ಥೋ! ನಿದ್ದೆ ಬರದೇ ಇದ್ದಿದ್ದಕ್ಕೇ ಏನೇನೋ ಯೋಚನೆಗಳಿರಬೇಕು....ನಾನೇ ಭ್ರಮೇಲಿದೀನೇನೋ ಅನ್ನುವ ಅನುಮಾನ ಬಂತು...

   ಮೆಲ್ಲಗೆ ಸದ್ದಾಗದಂತೆ ಕಪ್ಪನ್ನು ಅಲ್ಲೇ ಟೀಪಾಯಿ ಮೇಲಿಟ್ಟು ರೂಮಿಗೆ ಮರಳಿದೆ.

   ಅವಳಿನ್ನೂ ಅದೇ ಭಂಗಿಯಲ್ಲಿ ಗೊರಕೆ ಹೊಡೀತಿದ್ದಳು. ನಾ ಹಾಸಿಗೇಲಿ ಒರಗಿಕೊಂಡೆ....ತಲೆಕೊಡವಿ...ನಿದ್ದೆ ಮಾಡಲೆತ್ನಿಸಿದೆ.


* ಅದ್ಯಾವಾಗ ಬೆಳಗಾಯಿತೋ..ಗೊತ್ತಿಲ್ಲ. ಇವಳು ಪಕ್ಕದಲ್ಲಿರಲಿಲ್ಲ. ಅಂಗಳಕ್ಕೆ ನೀರು ಹಾಕುವ ಸದ್ದು. ಪಕ್ಕದ ಮನೆಯ ಸುಪ್ರಭಾತದ ಗಾಯನದ ಸದ್ದು.....

ಅದರೊಂದಿಗೆ ಇನ್ನೊಂದೂ ಕೇಳಿತು....

ಪಕ್ಕದ ರೂಮಿನಂದ, ಮಗ ಜೋರಾಗಿ ಓದಿಕೋತಿದ್ದ.

" ನೂಲಲ್ಯಾಕ ಚೆನ್ನೀ, ನೂಲಲ್ಯಾಕ ಚೆನ್ನೀ..?"

"ರಾಟಿಲ್ಲೋ ಜಾಣಾ...ರಾಟಿಲ್ಲೋ...ಜಾಣಾ..."ಅಂತ..

 ಚಟ್ಟನೆ ಎದ್ದು ಕೂತೆ....ಹ್ಹಾ! ಇದೇ ಹಾಡು...ಇದೇ...ಧಾಟಿ....ಅವಳು ಕೇಳಿದ್ದು....

" ಹಾಲಲ್ಯಾಕೋ ಚೆನ್ನಾ...." ಅಂತಾ...ನಾನದೆಷ್ಟು ಸಲೀಸಾಗಿ ಉತ್ತರ ಕೊಟ್ಟೆ...ನಿದ್ದೆಯಿಲ್ಲಾ ಚಿನ್ನಾ....ಅಂತಾ....ಅವಳ್ಯಾರೂಂತಾನೂ ತಿಳೀದೆ....

ಎಲ್ಲವೂ ಅಯೋಮಯ ಎನಿಸುವಾಗಲೇ....ಇವಳ ಕಂಠ...ಕೂಗಿತು.....

 " ರೀ.......ರಾತ್ರಿ ಕಾಫೀ ಮಾಡ್ಕೊಂಡು ಕುಡಿದ್ರಾ..? ಎಬ್ಬಿಸಿದ್ರೇ ನಾನೇ ಮಾಡಿಕೊಡ್ತಿದ್ದೆ ಅಲ್ವಾ...." ಅಂದಳು....ನಾನು ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ.....


(ಮುಂದುವರಿಯುವುದು)......




Rate this content
Log in

Similar kannada story from Action