ಸಾಹಸಿ ಮಾಧವ
ಸಾಹಸಿ ಮಾಧವ
ಮಾಧವನಿಗೆ ರಾತ್ರಿ ಎರಡು ಗಂಟೆಯಾದರೂ ನಿದ್ದೆ ಹತ್ತಿರ ಸುಳಿಯಲಿಲ್ಲ. ಗೆಳೆಯ ಅಸೀಫ್ ತನ್ನ ಕುಟುಂಬದೊಂದಿಗೆ ಸಂಬಂಧಿಕರ ಮದುವೆಗೆ ಪರ ಊರಿಗೆ ಹೋಗುವಾಗ ಮಾಧವನಿಗೆ ತನ್ನ ಮನೆಯ ಕೀ ಕೊಟ್ಟು ರಾತ್ರಿಯ ಹೊತ್ತು ಬಂದು ಮಲಗಲು ಹೇಳಿದ್ದ. ಈ ಹಿಂದೆಯೂ ಸಾಕಷ್ಟು ಬಾರಿ ಹೀಗೆ ಮಾಡಿದ್ದ. ಮಾಧವನಿಗೆ ಹೊಸ ಜಾಗವೆಂದೋ ಅಥವಾ ಇನ್ಯಾವ ಕಾರಣಕ್ಕೊ, ಎಷ್ಟೇ ಹೊರಳಾಡಿದರು ನಿದ್ದೆ ಮಾತ್ರ ಬಂದಿರಲಿಲ್ಲ. ಕೊನೆಗೊಮ್ಮೆ ಎದ್ದು ಬಚ್ಚಲಿಗೆ ಬಂದಾಗ, ಪಕ್ಕದ ಮನೆಯವರ ಮಾತು, ರಾತ್ರಿಯ ನಿಶ್ಯಬ್ದದಲ್ಲಿ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಮಾಧವ ಇಷ್ಟು ರಾತ್ರಿಯಲ್ಲಿ ಏನು ಮಾತನಾಡುತ್ತಿದ್ದಾರೆ ಎಂದು ಸಹಜ ಕುತೂಹಲದಲ್ಲಿ ಕೇಳಿದ. ಅಲ್ಲಿ.......
ಭಾಯ್ ಬಾಂಬ್ ಲಾಗನೆಸೆ ಹಮಾರಾಹೀ ಲೋಗ್ ಮರ್ತೆ ಹೈನಾ
ಹಾಂ, ವಹ ಛೋಟಾಸ ಬಾಂಬ್ ಲಾಗಯೆಂಗೆ, ಇಸ್ಸೇ ಕೋಯಿ ನಹಿ ಮರೆಗ, ಲೇಕಿನ್ ಕುಚ್ ಮಾರ್ ಲಾಗೆಗ.
ಔರ್ ಕಿಸಿಕೋ ಶಕ್ ನಹಿ ಹೋಗಾ ಕೀ ಏ ಬಾಂಬ್ ಹಮ್ ಲಾಗಯೆತೆ.
ಫೀರ್ ಕ್ಯಾ ಕರೆಂಗೆ......?
ಗಾಂವ್ ಮೆ ಜಹಾ ಮನ್ ಚಹತಾ ಹೈ ವಾಹ ಪವರ್ ಫುಲ್ ಬಾಂಬ್ ಲಾಗದೆಂಗೆ, ಇಸ್ಸೇ ಸಾರೇಕೊ ಸಾರೆ ಮರ್ ಜಾತೆ ಹೈಂ.
ಚಲೋ, ಅಭೀ ಸ್ಕೂಲ್ ಕೆ ಪಾಸ್ ಬಾಂಬ್ ರಕೆಂಗೆ..
ಈ ಮಾತುಗಳನ್ನು ಕೇಳುತ್ತಾ ಮಾಧವ ಬಂದ ಕೆಲಸವನ್ನು ಮರೆತು, ಮುಂದೇನು ಮಾಡಬೇಕೆಂದು ಯೋಚಿಸತೊಡಗಿದ. ಇದನ್ನು ಹೇಗಾದರೂ ಮಾಡಿ ತಡೆಯಬೇಕು ಎನ್ನುವುದು ಅವನ ಆಶಯವಾಗಿತ್ತು. ಆದರೆ ಅದಕ್ಕೆ ಹೆಚ್ಚು ಸಮಯವಿರಲಿಲ್ಲ. ಪಕ್ಕದ ಮನೆಯವರು ಬಾಂಬ್ ಇಡಲು ಈಗಲೇ ಹೊರಡುವುದರಿಂದ, ತಾನೂ ಅವರನ್ನು ಹಿಂಬಾಲಿಸಿ ಹೋಗುವುದೆಂದು ನಿರ್ಧರಿಸಿ, ಸದ್ದು ಮಾಡದೆ ಮನೆಯ ಬಾಗಿಲು ತೆರೆದು ಹೊರಬಂದ. ಪುಣ್ಯಕ್ಕೆ ತನ್ನ ಬೈಕನ್ನು ಗೇಟಿನ ಹೊರಗೆ ಬಿಟ್ಟಿದ್ದ. ಅದನ್ನು ಸ್ಟಾರ್ಟ್ ಮಾಡದೆ ತಳ್ಳಿಕೊಂಡು ಹೋಗಿ ರಸ್ತೆಯ ಅಂಚಲ್ಲಿ ಮರೆಯಾಗಿ ನಿಂತು, ಪಕ್ಕದ ಮನೆಯವರು ಹೊರಬರುವುದನ್ನೇ ಕಾಯತೊಡಗಿದ. ಅವರಿಗಾಗಿ ಇವನು ಹೆಚ್ಚು ಹೊತ್ತು ಕಾಯುವ ಅವಶ್ಯಕತೆ ಬರಲಿಲ್ಲ.
ಪಕ್ಕದ ಮನೆಯಿಂದ ಇಬ್ಬರು ಸಂಪೂರ್ಣ ಮುಸುಕು ಧರಿಸಿದವರು ಒಂದು ಬ್ಯಾಗನ್ನು ಹೊತ್ತು ಹೊರ ಬಂದರು. ಅವರೂ ಬೈಕ್ ತೆಗೆದುಕೊಂಡು ಇವನು ಮರೆಯಾಗಿ ನಿಂತಿದ್ದ ಜಾಗದಿಂದಲೇ ಮುಂದೆ ಸಾಗಿದರು. ಅವರು ಅಷ್ಟು ದೂರ ಹೋದ ಮೇಲೆ ಮಾಧವನು ತನ್ನ ಬೈಕ್ ಸ್ಟಾರ್ಟ್ ಮಾಡಿ, ಹೆಡ್ ಲೈಟ್ ಹಾಕದೆ ಅವರನ್ನು ಹಿಂಬಾಲಿಸತೊಡಗಿದ. ಅವರಿಬ್ಬರು ಹಳೆಯ ಬೈಕ್ ಮೇಲೆ ಹೋಗುತ್ತಿದ್ದರು. ಅದರ ಸದ್ದಿನಲ್ಲಿ ಹೊಸ ಶಬ್ದರಹಿತ ಬೈಕಲ್ಲಿ ಹಿಂಬಾಲಿಸುತ್ತಿದ್ದ ಮಾಧವ, ಅವರ ಗಮನಕ್ಕೆ ಬರಲಿಲ್ಲ. ಅವರಿಬ್ಬರು ಏನೇನೋ ಮಾತನಾಡಿಕೊಂಡು ಮುಂದೆ ಹೋಗುತ್ತಿದ್ದರೆ, ಮಾಧವನ ತಲೆಯಲ್ಲಿ ಬೈಕಿಗಿಂತ ವೇಗವಾಗಿ, ಏನು ಮಾಡಲಿ, ಏನಾದರೆ ಏನಾಗಬಹುದು ಎಂಬ ಯೋಚನೆ ಸುಳಿದಾಡುತ್ತಿತ್ತು.
ಊರ ಮಧ್ಯಭಾಗದಿಂದ ಸ್ವಲ್ಪ ಮುಂದೆ ಬರುವಷ್ಟರಲ್ಲಿ ಮಾಧವ ಒಂದು ಗಟ್ಟಿ ನಿರ್ಧಾರಕ್ಕೆ ಬಂದ. ಅದರಂತೆ ಬೇರೇನೂ ಯೋಚಿಸದೆ, ಮನದಲ್ಲೇ ಮನೆಯ ದೇವರು ಭವಾನಿಯನ್ನು ಸ್ಮರಿಸುತ್ತಾ, ಜೈ ಭಾರತಾಂಬೆ, ಜೈ ಭುವನೇಶ್ವರಿ ಎನ್ನುತ್ತಾ, ಅತ್ಯಂತ ವೇಗವಾಗಿ ಬೈಕನ್ನು ಓಡಿಸಿಕೊಂಡು ಬಂದು ಹಿಂದಿನಿಂದ ನಾಯಕರು ಬೈಕಿಗೆ ಗುದ್ದಿದ. ಮಾಧವ ಬೈಕ್ ಗುದ್ದಿದ ವೇಗಕ್ಕೆ ಅವರಿಬ್ಬರೂ ಮೇಲೆ ಹಾರಿ ಕೆಳಗೆ ಬಿದ್ದರು. ಹಿಂದೆ ಕೂತವನು ಪುಟ್ ಪಾತ್ ಮೇಲೆ ಬಿದ್ದರೆ ಮತ್ತೊಬ್ಬ ಮಧ್ಯ ರಸ್ತೆಯಲ್ಲಿ ಬಿದ್ದ. ಅವನ ಮೇಲೆಯೇ ಬೈಕ್ ಕೂಡಾ ಬಿದ್ದು ಮೂರ್ಛೆ ಹೋಗಿದ್ದ. ಪುಟ್ ಪಾತ್ ಮೇಲೆ ಬಿದ್ದವನ ಕಿವಿ, ಮೂಗಿನಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು. ಅವನು ಇದ್ದಾನೋ, ಹೋಗಿದ್ದಾನೋ ತಿಳಿಯದ ಪರಿಸ್ಥಿತಿ. ಮಾಧವನು ಬೈಕಿನಿಂದ ಕೆಳಗೆ ಬಿದ್ದು ಸರಿಯಾಗಿ ಗಾಯ ಮಾಡಿಕೊಂಡಿದ್ದ. ಬಹುಶಃ ಮಾಧವನ ಕೈ ಮೂಳೆ ಮುರಿದಿತ್ತು. ಆದರೆ ಅವನಿಗೆ ಆ ಕಡೆ ಲಕ್ಷ್ಯ ಹೋಗದೆ, ಅವರಿಬ್ಬರನ್ನು ಹಿಡಿದು ಪೋಲಿಸರಿಗೆ ಒಪ್ಪಿಸುವ ಉತ್ಸಾಹದಲ್ಲಿದ್ದ. ಅವರಿಬ್ಬರೂ ಏಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅರಿತ ಮೇಲೆ , ಅಲ್ಲೇ ಕುಳಿತು ಪೋಲಿಸರಿಗೆ ಪೋನ್ ಮಾಡಿ ವಿಷಯ ತಿಳಿಸಿದ.
ಮಾರನೇ ದಿನ ಪತ್ರಿಕೆಗಳಲ್ಲಿ ಮಾಧವನ ಪೋಟೋ ಸಮೇತ, ಯುವಕನ ಸಮಯಪ್ರಜ್ಞೆ ಹಾಗೂ ಸಾಹಸದಿಂದ ತಪ್ಪಿದ ಮಹಾ ದುರಂತ ಹಾಗೂ ಇಬ್ಬರು ಉಗ್ರರು ಮತ್ತು ಅವರ ಬಳಿ ಇದ್ದ ಬಾಂಬ್ ವಶ ಎಂದು ಪ್ರಕಟವಾಗಿದ್ದರೆ, ಟಿವಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವನ ಸಂದರ್ಶನಕ್ಕಾಗಿ ಹರ ಸಾಹಸ ಮಾಡುತ್ತಿದ್ದರು.
