ಪ್ರಕೃತಿ ವಿಕೃತಿ
ಪ್ರಕೃತಿ ವಿಕೃತಿ
ರವಿಯ ಕ್ಯಾಬ್ ಚಂಡಿಗರ್ ಬಿಟ್ಟು ಮನಾಲಿಯ ಕಡೆ ಹೊರಟಿತು. ಅರ್ಧ ಗಂಟೆಯ ಹೈ ವೇ ಮುಗಿದ ನಂತರ ದ ದಾರಿಯುದ್ದಕ್ಕೂ ಪ್ರಕೃತಿಯ ಸೌಂದರ್ಯ ಅವನ ಮನಸ್ಸಿಗೆ ಮುದ ಕೊಡುವಂತಿತ್ತು.
ಎತ್ತರವಾದ ಹಿಮಾಲಯದ ಶಿಖರಗಳು ,ಹಸಿರು ಉಡುಗೆಯನ್ನುಟ್ಟು ಕಣ್ಣಿಗೆ ತಂಪನ್ನು ನೀಡುತ್ತಿದ್ದವು, ಆ ಶಿಖರಗಳು ಒಂದಕ್ಕೊಂದು ಹಾರದಂತೆ ಹಬ್ಬಿಕೊಂಡು ಆಕಾಶವನ್ನು ಚುಂಬಿಸಲು ಸ್ಪರ್ಧೆ ನಡೆಸುತ್ತಿದ್ದವು. ಅದರ ನಡುನಡುವೆ ಇಳಿದಿಳಿದು ಬರುತ್ತಿದ್ದ ಜರಿಗಳು, ಭುವಿಯ ಮೇಲೆ ಇಳಿದಿಳಿದು ಹರಿಯುತ್ತಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ಹರಿಯುತ್ತಿದ್ದ ಸ್ಪಟಿಕದಷ್ಟು ಸ್ವಚ್ಚವಾಗಿರುವ ಶುದ್ಧ ಜಲ, ಅದರ ಆರ್ಭಟ ಧ್ವನಿ, ಪರ್ವತಗಳ ಸಂಧಿಯಿಂದ ಬೀಸುವ ತಣ್ಣನೆಯ ಗಾಳಿ,...... ಅಬ್ಬ, ಬಹುಶಃ ಸ್ವರ್ಗದ ದೇವತೆಗಳು ತಮಗೆ ಸ್ವರ್ಗ ಬೇಡವೆಂದು ಇಲ್ಲೇ ಇದ್ದು ಬಿಡುತ್ತಾರೇನೋ? ಅಂತಹ ಸ್ವರ್ಗಕ್ಕೆ ಮಿಗಿಲಾದ ಸುಂದರ ವಾತಾವರಣ. ಕಿಟಕಿಯಿಂದ ಸುಂದರ ಪ್ರಕೃತಿಯನ್ನು ಆಸ್ವಾದಿಸುತ್ತಾ, ಕಣ್ಣಿಗೆ ತಂಪು, ಮನಸ್ಸಿಗೆ ಸೊಂಪು, ಕಿವಿಗಳಿಗಿಂಪು ಗಳನ್ನು ಕೊಡುವ ಈ ಸುಂದರ ಪ್ರಕೃತಿಯನ್ನು ಮನಸ್ಸಿಗೆ ತುಂಬಿಕೊಳ್ಳುತ್ತಾ ಕಿಟಕಿಯಿಂದ ಹಾದು ಬರುತ್ತಿರುವ ಗಾಳಿಗೆ ಮುಖ ಒಡ್ಡಿ ಕುಳಿತಿದ್ದ ರವಿ. ಅವನ ಮನಸ್ಸು ನಿಧಾನವಾಗಿ ಸ್ಥಿಮಿತಕ್ಕೆ ಬರುತ್ತಿತ್ತು.
ತನ್ನ ಹೆಂಡತಿಯಿಂದ ವಿಚ್ಚೇದನ ಪಡೆದು, ಖಿನ್ನತೆಗೊಳಗಾಗಿದ್ದ ಅವನು, ತಾನು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಒಂದೆರಡು ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುರುಕಿಕೊಂಡು, ಉತ್ತರದ ಭಾರತದತ್ತ ಪ್ರವಾಸ ಹೊರಟಿದ್ದ. ತನ್ನ ಹೆಂಡತಿಯ ಕೆಟ್ಟ ಹಠ ಹಾಗೂ ಹಣದ ಲಾಲಸೆಯಿಂದ ಬೇಸತ್ತಿದ್ದ ಅವನು , ದಿನದಿನವೂ ಜಗಳ ವಾಡುತ್ತಾಎರಡು ವರ್ಷಗಳನ್ನು ಕಷ್ಟಪಟ್ಟು ಕಳೆದಿದ್ದ ಅವನಿಗೆ ವಿಚ್ಚೇದನ ವರವಾಯಿತು. ಸ್ಥಿತಿವಂತರ ಮನೆತನದವನಾಗಿದ್ದರಿಂದ ಅವನ ತಂದೆ, ಕೋರ್ಟ್ ನಿಗಧಿಪಡಿಸಿದ ಪರಿಹಾರ ಧನವನ್ನು ಕೊಟ್ಟು ಕೈ ತೊಳೆದು ಕೊಂಡಿದ್ದರು. ಯಾಕೋ ಮೂವತ್ತು ವರ್ಷದ ರವಿ ಗೆ ಜೀವನದಲ್ಲಿ ವೈರಾಗ್ಯವೋ? ಜುಗುಪ್ಸೆಯೋ? ದುಃಖವೋ ? ಏನೂ ಅಂತ ಗೊತ್ತಾಗದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾಗ, ಅವನು ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು , ಇದ್ದಕ್ಕಿದ್ದಂತೆ ಹಿಮಾಲಯದ ತಪ್ಪಲಿನ ಕಡೆ ಶಾಂತಿಯನ್ನು ಅರಸುತ್ತಾ ಹೊರಟಿದ್ದ. ಮನಾಲಿಯಲ್ಲಿ ಇಳಿದು ಮನಾಲಿಯಿಂದ ಹತ್ತು ಕಿ.ಮೀ. ದೂರವಿರುವ ತನ್ನ ಸ್ನೇಹಿತನ ಹೋಮ್ಸ್ಟೇ ಕಡೆ ಹೊರಟಿದ್ದ. ದಾರಿಯುದ್ದಕ್ಕೂ ಕೊರಕಲು ರಸ್ತೆ, ,ಇಕ್ಕೆಲಗಳಲ್ಲಿ ಜುಳು ಜುಳು ಶಬ್ದ ಮಾಡುತ್ತಾ ಭರಭರನೆ ಹರಿಯುತ್ತಿದ್ದ ಗಂಗಾ ಭಾಗೀರಥಿ ನದಿಗಳು, ನದಿಯಲ್ಲಿ ನಡೆಸುತ್ತಿದ್ದ ರಿವರ್ ರ್ಯಾಫ಼್ಟೀಂಗ್ ಗಳು, ........ರವಿಯ ಮನಸ್ಸನ್ನು ಉಲ್ಲಸಿತ ಗೊಳಿಸುತ್ತಿತ್ತು.
’ಫ಼ೆನ್ಟಾಸ್ಟಿಕ್’ ಅಂತ ಅಂದುಕೊಳ್ಳುತ್ತಾ ರವಿ, ತನ್ನ ಫ಼್ರೆಂಡ್ ಅಮನ್ ನ ಹೋಮ್ ಸ್ಟೇ ತಲುಪಿದ.
ಅಲ್ಲಿಗೆ ಹೋದ ನಂತರ, ಅವನಿಗೆ ಆ ಹೋಮ್ಸ್ಟೇ ಸುತ್ತಲಿನ ವಾತಾವರಣ ಮನಸ್ಸಿಗೆ ಇನ್ನಷ್ಟು ಮುದ ಕೊಟ್ಟಿತು. ಅವನು ತನ್ನ ಜೀವನದಲ್ಲಿ ನಡೆದ ಹಳೆಯ ಕಹಿಗಳನ್ನು ಮರೆತು, ನಿಧಾನವಾಗಿ ಸಣ್ಣಗೆ ಬೀಳುತ್ತಿದ್ದ ಹಿಮದ ಹನಿಗಳು, ಹಿಮಾಲಯದ ಗಿರಿಮಾಲೆಗಳು, ಸುತ್ತಲಿನ ಗುಲಾಬಿ ತೋಟ, ಆಪಲ್ ತೋಟಗಳನ್ನು ಕಣ್ಣು ತುಂಬಿಕೊಳ್ಳುತ್ತಾ ಶುದ್ಧವಾದ ಗಾಳಿಯನ್ನು ತನ್ನ ಉಸಿರಿನೊಳಗೆ ಎಳೆದುಕೊಳ್ಳುತ್ತಾ ಆ ಪ್ರಕೃತಿಯನ್ನು ಆಸ್ವಾದಿಸುತ್ತಾ ನಾಲ್ಕೈದು ದಿನಗಳನ್ನು ಕಳೆದನು. ಅಲ್ಲಿಂದಲೇ ಕಸೋಲಿ, ಗುರುದ್ವಾರ್, ಬಿಸಿನೀರಿನ ಬುಗ್ಗೆ, ಫ಼ಾಲ್ಲ್ಸ್ ಗಳು, ರೊಹ್ಸ್ತಾಂಗ್ , ಅಂಜನಿ ಮಹದೇವ್ ಬೆಟ್ಟ.......ಎಲ್ಲಾ ಕಡೆಗೂ ಒಂದೊಂದು ದಿನ ಹೋಗಿ ಬರುತ್ತಿದ್ದನು. ಅವನಿಗೆ ಬೆಂಗಳೂರಿನ ತನ್ನ ಮನೆಯನ್ನು ಮರೆತೇ ಬಿಟ್ಟ. ಕಡೆಗೆ ಅವನಿಗೆ ಇನ್ನು ತಾನು ಆದಷ್ಟು ಇಂತಹ ರಮ್ಯ ಪ್ರಕೃತಿಯ ,ಮಡಿಲಿನಲ್ಲೇ ಇದ್ದು ಬಿಡುವುದೆಂದು ನಿರ್ಧರಿಸಿಯೂ ಬಿಟ್ಟ. ಅವನ ಸ್ನೇಹಿತನ ಹೋಮ್ ಸ್ಟೇ ನಲ್ಲಿ ಅಸ್ಸಿಸ್ಟೆಂಟ್ ಆಗಿ ಅವನಿಗೆ ಸಹಾಯ ಮಾಡಿಕೊಂಡು ಇದ್ದು ಬಿಟ್ಟ. ಅವನಿಗೆ ಮನೆಯಿಂದ ಫೋನ್ ಬರುತ್ತಿತ್ತು. ಆದರೆ ಕೇರ್ ಮಾಡಲಿಲ್ಲ. ಸುಮಾರು ಒಂದು ತಿಂಗಳು ಕಳೆಯಿತು.ಅವನು ಮನಾಲಿಯಲ್ಲಿಯೇ ಉಳಿದುಕೊಂಡು, ಸುತ್ತಲಿನ ತೋಟಗಳನ್ನು ನೋಡುತ್ತಾ, ಪರ್ವತಗಳ ಚಾರಣ ಮಾಡುತ್ತ ಸಂತೋಷವಾಗಿ ಇದ್ದು ಬಿಟ್ಟ. ಒಂದು ದಿನ ಅವನು ಕೆಲವು ಸಾಮಾನುಗಳನ್ನು ತರಲು, ಮನಾಲಿ ಮಾರ್ಕೆಟ್ ಕಡೆ ನಡೆದುಕೊಂಡು ಹೋಗಿಬರುತ್ತಿದ್ದಾಗ, ಇನ್ನೂ ಮಧ್ಯಾಹ್ನ ಎರಡು ಗಂಟೆಯಾಗಿದ್ದಾಗ್ಗಲೇ ಇದ್ದಕ್ಕಿದ್ದಂತೆ ಭೀಕರ ಮೋಡಗಳು ಒಂದಕ್ಕೊಂದು ಢಿಕ್ಕಿ ಹೊಡೆದು, ಇದ್ದಕ್ಕಿದ್ದಂತೆ ಕುಂಭದ್ರೋಣ ಮಳೆ ಶುರುವಾಗಿ ಹೋದಾಗ, ರವಿಗೆ ತಾನು ಎಲ್ಲಿದ್ದೀನೆಂಬುದೇ ಗೊತ್ತಾಗಲಿಲ್ಲ. ಇಡೀ ಮನಾಲಿ ಕೊಚ್ಚಿ ಹೋಗುತ್ತಿತ್ತು. ರವಿಗೆ ರಸ್ತೆಯೇ ಕಾಣದೆ ನೀರಿನಲ್ಲಿ ಕೊಛ್ಛಿ ಹೋಗುತ್ತಿದ್ದ. ಅವನಿಗೆ ಈಜು ಬಂದಿದ್ದರಿಂದ ಸ್ವಲ್ಪ ದೂರದವರೆಗೂ ಈಜುವ ಪ್ರಯತ್ನ ಮಾಡಿದ. ಕಡೆಗೂ ಆ ಸುರಿಯುವ ವರ್ಷಧಾರೆಯಲ್ಲಿ, ಭೋರ್ಗರೆವ ನಡಿಯ ರಭಸಕ್ಕೆ ಅವನು ಸೋತು ಹೋದ. ಇಡೀ ಮನಾಲಿ ಕತ್ತಲೆಯಲ್ಲಿ ಮುಳುಗಿತು.
ಆ ಸಮಯದಲ್ಲಿ ಒಂದು ಹುಲ್ಲುಕಡ್ಡಿ ಸಿಕ್ಕಿದರೂ ಸಾಕೆಂದು ಪರದಾಡಿದ. ಆದರೆ ಹರಿಯುವ ನೀರಿನ ರಭಸದಲ್ಲಿ ಯಾವ ವ್ಯಾಲಿಯಲ್ಲಿ ಅವನು ಕೊಚ್ಚಿ ಹೋದನೋ? ಆ ದೇವರಿಗೆ ಮಾತ್ರ ಗೊತ್ತು.
ಇತ್ತ ಬೆಂಗಳೂರಿನಲ್ಲಿದ್ದ ಅವನ ತಂದೆ ತಾಯಿ ಇಬ್ಬರೂ ಮಗನ ಬಗ್ಗೆ ಆತಂಕಗೊಂಡು, ಅವನ ಹೋಮ್ಸ್ಟೇ ಗೆ ಫೋನ್ ಮಾಡುತ್ತಲೇ ಇದ್ದರು. ಫೋನ್ ಗಳು, ನೆಟ್ ವರ್ಕ್ ಯಾವುದೂ ವರ್ಕ್ ಆಗುತ್ತಿರಲಿಲ್ಲ. ಆ ಸಮಯದಲ್ಲಿ ಮನಾಲಿಗೆ ಖುಷಿಯಿಂದ ಕಾಲ ಕಳೆಯಲೆಂದು ಬಂದಿದ್ದ ಅದೆಷ್ಟೋ ಪ್ರವಾಸಿಗರು ಪ್ರಕೃತಿಯ ವಿಕೃತಿಯಲ್ಲಿ ಕೊಚ್ಚಿ ಹೋಗಿದ್ದರು .