ಮರೆಯಾದ ಪವನ್
ಮರೆಯಾದ ಪವನ್
ನಾನ್ ಸ್ಟಾಪ್ ನವೆಂಬರ್ 3 ಬೆಗಿನ್ನೆರ್
ದಿನ : 16
ವಿಷಯ: ಸೂಪರ್ ಹೀರೊ
ಅಂದು ಬೆಳೆಗ್ಗೆ ಕ್ರಿಕೇಟ್ ಮ್ಯಾಚ್ ನೋಡಲೆಂದು ಟಿ.ವಿ. ಆನ್ ಮಾಡಿದ ಸಂಜಯ್. ಸ್ಪೋರ್ಟ್ಸ್ ಚಾನೆಲ್ ತಿರುಗಿಸುವ ಮೊದಲು ಅವನ ಅಪ್ಪ ನೋಡುತ್ತಿದ್ದ ನ್ಯೂಸ್ ಚಾನೆಲ್ ಮೊದಲು ಕಂಡಿತು. ಅವನು ಚಾನೆಲ್ ನಂಬರ್ ಬದಲಾಯಿಸುವ ಮೊದಲು ಒಂದು ಬ್ರೇಕಿಂಗ್ ನ್ಯೂಸ್ ಬರುತ್ತಿರುವುದನ್ನು ನೋಡಿ ಅವನಿಗೆ ಶಾಕ್ ಆಯಿತು. ಅವನ ನೆಚ್ಚಿನ ಸೂಪೆರ್ ಹೀರೋ ಇದ್ದಕ್ಕಿದ್ದಂತೆ ಇಲ್ಲವಾದ ನ್ಯೂಸ್ ನೋಡಿದ ಸಂಜು, ತನ್ನ ಅಪ್ಪ ಅಮ್ಮ ಎಲ್ಲರನ್ನೂ ಕರೆದ.
"ಇದೀಗ ಬಂದ ಬ್ರೇಕಿಂಗ್ ನ್ಯೂಸ್, ನಲವತ್ತರ ಹರೆಯದ ಸೂಪರ್ ಸ್ಟಾರ್ ಪವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಅವರ ಅಗಲಿಕೆಯು ಕನ್ನಡ ಚಿತ್ರರಂಗಕ್ಕೆ ಶೂನ್ಯವನ್ನು ಉಂಟುಮಾಡಿದೆ.ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ"
ನ್ಯೂಸ್ ಚಾನೆಲ್ ನ ಸುದ್ದಿ ನೋಡಿದ ಸಂಜಯನ ಅಪ್ಪ ಅಮ್ಮ, ಅಜ್ಜ, ತಾತ, ಎಲ್ಲರೂ" ಹೋ ಹೀಗಾಗಬಾರದಾಗಿತ್ತು,ತುಂಬಾ ಅನ್ಯಾಯ, ಇಷ್ಟು ಚಿಕ್ಕವಯಸ್ಸಿನಲ್ಲಿ ಯಾಕೆ ಹೀಗಾಗಿ ಹೋಯ್ತು. "ಎಂದು ಪೇಚಾಡಿಕೊಳ್ಳಲು ಪ್ರಾರಂಭಿಸಿದರೆ,
ಸಂಜಯ್ ತನ್ನ ಸ್ನೇಹಿತರಿಗೆಲ್ಲ ಈ ವಿಷಯ ಶೇರ್ ಮಾಡುತ್ತಾ ಹೋದ.
ಸೂಪರ್ ಹೀರೋ ಆಗಿ ಅಬಾಲವೃದ್ಧರೆಲ್ಲರ ಮನಸ್ಸನ್ನು ಸೂರೆಗೊಂಡಿದ್ದ ಪವನ್ , ಬಹಳ ಚಿಕ್ಕವಯಸ್ಸಿನಿಂದಲೇ ಬಾಲನಟನಾಗಿ ಸಿನಿಮಾರಂಗಕ್ಕೆ ಬಂದು, ಅತ್ಯಂತ ಜನಪ್ರಿಯ ನಟನಾಗಿದ್ದರಿಂದ ಅವನ ಸಾವಿನ ಸುದ್ಧಿಯನ್ನು ಕೇಳಿದ ಎಲ್ಲಾ ವಯಸ್ಸಿನವರೂ ಶಾಕ್ ಆಗಿ ಹಾಗೆ ನಿಂತುಬಿಡುತ್ತಿದ್ದರು.
ಈಗತಾನೇ ಕಾಲೇಜ್ ಮೆಟ್ಟಲು ಹತ್ತಿದ್ದ ಸಂಜಯ್ಗಂತೂ ಅವನ ಆಕ್ಷನ್ ಮೂವಿಗಳು ಇಷ್ಟ. ಪವನ್ ಮಾಡಿದ ಯಾವ ಚಿತ್ರವನ್ನೂ ಅವನು ಬಿಡದೇ ನೋಡುತ್ತಿದ್ದ. ಅಂದೆಲ್ಲಾ ಅವನು ಕ್ರಿಕೆಟ್ ಮ್ಯಾಚ್ ನೋಡಲೇ ಇಲ್ಲ. ಒಂದಾದ ಮೇಲೊಂದರಂತೆ ಎಲ್ಲಾ ನ್ಯೂಸ್ ಚಾನಲ್ಗಳನ್ನು ತಿರುಗಿಸುತ್ತಾ ತನ್ನ ಸೂಪರ್ ಹೀರೋ ನ ಡೆತ್ ನ್ಯೂಸ್ ಅನ್ನೇ ನೋಡುತ್ತಾ ಕುಳಿತ. ಆ ಮನೆಯ ಹಿರಿಯ ಸದಸ್ಯರೆಲ್ಲರೂ ಅಗಲಿದ ನಟನಿಗೆ ಅನುಕಂಪ ತೋರಿಸುತ್ತಾ ಟಿ.ವಿ.ಯ ಮುಂದೆಯೇ ಕುಳಿತು, "ಅಯ್ಯೋ ಇದೆಂತಹ ಅನ್ಯಾಯ, ಹೀಗಾಗ ಬಾರದಾಗಿತ್ತು. ಪಾಪ ಅವನ ಹೆಂಡತಿ ಮಕ್ಕಳನ್ನು ನೋಡುವುದಕ್ಕಾಗಲ್ಲ. " ಅಂತ ಒಂದೇ ಸಮನೆ ಪಟ ಪಟ ಅಂತ ಮಾತನಾಡುತ್ತಲೇ ಇದ್ದರೆ, ಸಂಜಯ್ ಕಣ್ಣೀರು ತುಂಬಿಕೊಂಡು ತನ್ನ ಸೂಪರ್ ಹೀರೊನ ಪಾರ್ಥಿವ ಶರೀರವನ್ನೇ ನೋಡುತ್ತ ಕುಳಿತಿದ್ದ. ಆ ಸೂಪರ್ ಹೀರೋ ಪವನ್ ನಟಿಸಿದ ಒಂದೊಂದು ಚಿತ್ರಗಳ ದೃಶ್ಯಗಳು ಅವನ ಕಣ್ಮುಂದೆ ಹಾದು ಹೋಗುತ್ತಿತ್ತು.
ಸಹಸ್ರಾರು ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ಹೋದ ಆ ಸೂಪರ್ ಹೀರೋ ಪವನ್ ,ಅಭಿಮಾನಿಗಳ ದೇವರೇ ಆಗಿ ಹೋದ.
