ಕನ್ನಡಿ
ಕನ್ನಡಿ
ಕನ್ನಡಿ ತನ್ನ ಬಿಂಬವನ್ನು ಕಾಣಲು ಸಿಗದು.
ಹಾಗೇ ನಮ್ಮ ಬಾಹ್ಯರೂಪ ನಮಗೆ ಎಂದೂ ಕನ್ನಡಿಯ ಸಹಾಯವಿಲ್ಲದೇ ಕಾಣಲು ಸಿಗದು.
ಈ ಅದ್ಬುತ ಕನ್ನಡಿಯನ್ನು ಕಂಡು ಹಿಡಿದವರು ಯಾರೆಂದು ಗೊತ್ತಾ?
ಒಂದು ಕತೆ ನೆನಪಿಗೆ ಬಂತು ನೋಡಿ. ನೀವೂ ಅದನ್ನು ಕೇಳಿರಬಹುದು.
ಒಂದೂರಲ್ಲಿ ಗಂಡ ಹೆಂಡತಿಯಿದ್ದರಂತೆ. ಅವರು ಕಡುಬಡವರು. ಗುಡಿಸಲೇ ಸೂರು. ಊರಾಚೆಗೆ ಇರುವ ತಾಣ. ತಿನ್ನಲು ಕಾಡಲ್ಲಿ ಬೆಳೆದ ಗೆಡ್ಡೆ ಗೆಣಸು, ಹಣ್ಣುಗಳೆ ಆಗಿದ್ದವು. ಬೆಳಗಿನ ತಂಡಿಗೆ ಬಿಸಿ ಬಿಸಿಯಾದ ಎಲೆಗಳ ಚಹಾ ಸಿದ್ದವಾಗುತ್ತಿತ್ತು. ಅದನ್ನು ಕುಡಿದು ಗಂಡ ಕೆಲಸಕ್ಕೆ ಹೋಗುತ್ತಿದ್ದ. ಮರಳುವುದು ಸಂಜೆಗೆ.
ಹೀಗೆ ಒಂದಿನ, ಆತ ಊರಾಚೆಗಿನ ಬೆಟ್ಟದ ಮೇಲಿನ ಕಲ್ಲು ಮಂಟಪದಲ್ಲಿ ಕೂತು ದಣಿವಾರಿಸುವಾಗ, ಅಲ್ಲಿ ಕುಡಿಯಲು ಒಂದು ಮಡಿಕೆಯಿಟ್ಟರೆ ಬಂದು ಹೋಗುವವರ ಬಾಯಾರಿಕೆ ತೀರೀತೆಂಬ ಯೋಚನೆಯುಂಟಾಗುತ್ತದೆ. ಅಂತೆಯೇ ಬಾವಿಯ ನೀರು ಸೇದಿ, ಮಣ್ಣಿನ ಮಡಿಕೆಯೊಂದನ್ನು ತಂದು ತುಂಬಿಸಲು ಶುರುಮಾಡಿದನು. ಇದು ನಿತ್ಯ ಕರ್ಮವಾಗಿ ಹೋಯಿತು. ಹೆಂಡತಿಯೂ ಸಹಾಯ ಮಾಡುತ್ತಿದ್ದಳು.
ಒಂದಿನ ಒಬ್ಬ ಪಾದಚಾರಿ , ವಯಸ್ಸಾದ ವ್ಯಕ್ತಿ ಆ ದಾರಿಯಲ್ಲಿ ನಡೆದು ಬಂದಾಗ, ಅಲ್ಲಿ ಮಂಟಪದಲ್ಲಿ ಕಂಡ ನೀರಿನ ಮಡಿಕೆ ಕಂಡು ಬಹಳ ಸಂತೋಷವಾಗುತ್ತದೆ. ಬಹಳ ದೂರದಿಂದ ನಡೆದು ಬಂದುದ್ದರಿಂದ, ಆಯಾಸದೊಂದಿಗೆ ಬಾಯಾರಿಕೆಯೂ ಆಗಿತ್ತು. ಹೊಟ್ಟೆ ತುಂಬಾ ನೀರು ಕುಡಿದ ನಂತರ, ಯಾರೋ ಪುಣ್ಯಾತ್ಮರು ಇಲ್ಲಿ ನೀರು ಇಟ್ಟು ಒಳ್ಳೆಯ ಕೆಲಸ ಮಾಡಿದ್ದಾರೆ . ಅವರಿಗೆ ನಾನು ಹೇಗೆ ಕೃತಘ್ನತೆ ಹೇಳಲಿ ಎಂದು ಯೋಚಿಸುವಾಗಲೇ , ತನ್ನ ಕೈ ಚೀಲದಲ್ಲಿದ್ದ ಸಣಣದೊಂದು ಕನ್ನಡಿ ಕಂಡಿತು. ಉದ್ಯೋಗದಲ್ಲಿ ಆತ ಹಜಾಮನಾದುದರಿಂದ, ಕನ್ನಡಿ ಬಳಕೆಯಲ್ಲಿತ್ತು. ಅದನ್ನು ಚೀಲದಿಂದ ಹೊರತೆಗೆದು , ಚೆನ್ನಾಗಿ ಒರೆಸಿ, ಆ ಮಡಿಕೆಯ ಪಕ್ಕದಲ್ಲಿಟ್ಟುಬಿಟ್ಟ. ನಂತರ ತನ್ನ ಪಾಡಿಗೆ ಊರಿನ ಕಡೆ ನಡೆದು ಬಿಟ್ಟ.
ಇತ್ತ, ಮರುದಿನ ಮುಂಜಾನೆ ಮತ್ತೆ ನೀರು ತುಂಬಲು ಆ ಗಂಡನಾದವನು ಬಂದಾಗ, ಏನೋ ಹೊಳೆಯುವ ವಸ್ತುವನ್ನು ಕಂಡು ಆಶ್ಚರ್ಯಗೊಂಡ. ಏನಿದು ಎಂದು ತಿರುಗಿಸಿ ಮುರುಗಿಸಿ ನೋಡಿದಾಗ ಅದರೊಳಗೆ ಕಂಡ ತನ್ನದೇ ಬಿಂಬವನ್ನು ಕಂಡು ಬೆಚ್ಚಿಬೀಳುತ್ತಾನೆ. ಯಾಕೆಂದರೆ ಇದೂವರೆಗೂ ಆತ ತನ್ನ ಜೀವನದಲ್ಲಿ ಇಂತಹ ಒಂದು ವಸ್ತುವನ್ನು ಕಂಡೇ ಇರಲಿಲ್ಲ. ಕನ್ನಡಿಯೆಂದರೇನೆಂದೂ ತಿಳಿಯದೆ ಗಾಭರಿಯಾದ. ಅಲ್ಲಿ ಕಂಡ ತನ್ನದೇ ಬಿಂಬ ಅಪ್ಪನನ್ನು ಹೋಲುತ್ತಿದ್ದಾರಿಂದ, ಇದರಲ್ಲಿ ಅಪ್ಪನ ಮುಖವಿದೆ. ಅಂದರೆ ಅಪ್ಪನ ಫೋಟೋ ಹೇಗೆ ಇಲ್ಲಿಗೆ ಬಂತು? ಎಂದು ತರತರಹದ ಚಿಂತೆ ಕಾಡುತ್ತದೆ. ಹೆಂಡತಿಗೆ ಈಗಲೇ ವಿಷಯ ಹೇಳುವುದು ಬೇಡ. ಅವಳೂ ಗಾಬರಿಯಾಗುತ್ತಾಳೆಂದು ತಿಳಿದು ಅದನ್ನು ತನ್ನ ಪಂಚೆಯ ತುದಿಯಲ್ಲಿ ಸುತ್ತಿಕೊಂಡು ಮನೆಗೆ ಹೋಗುತ್ತಾನೆ. ಅಲ್ಲಿ ಹೋದೊಡನೆ ಪ್ರಶ್ನೆಗಳು ಏಳುವುದು ಸಹಜವಲ್ಲವೇ? ಆದ್ದರಿಂದ ಮೆಲ್ಲನೆ ಹಿತ್ತಲು ಬಾಗಿಲಿನಿಂದ ಒಳಹೋಗಿ, ಮೂಲೆಯಲ್ಲಿದ್ದ ಬಟ್ಟೆಯ ಗಂಟಿನೊಳಗೆ ಕನ್ನಡಿಯನ್ನು ಮುಚ್ಚಿಡುತ್ತಾನೆ. ನಂತರ ಏನೂ ಅರಿಯದಂತೆ ನಟಿಸುತ್ತಾನೆ. ಬಂದೊಡನೆಯೆ ಗಮನಿಸುತ್ತಿದ್ದ ಹೆಂಡತಿಗೆ ಅನುಮಾನ ಶುರುವಾಗುತ್ತದೆ. ಆದರೂ ಎಂದೂ ತನ್ನ ಗಂಡನನ್ನು ಪ್ರಶ್ನಿಸಿದವಳಲ್ಲ. ಬಡಪಾಯಿ ಹೆಂಗಸು, ಬರೀ ಅಡಿಗೆ ಮಾಡಿ ಉಣ್ಣಲಿಡುವುದಷ್ಟೇ ಗೊತ್ತಿತ್ತವಳಿಗೆ. ಬೇರೆ ಉಸಾಪರಿ ಬೇಕಿರಲಿಲ್ಲ. ಇರುವ ಎರಡೇ ಸೀರೆಯಲ್ಲಿ, ಬದುಕನ್ನು ಸವೆಸುವಂತಹ ನಾರೀಮಣಿ. ಇವಳ ಮುಗ್ಧತೆಗೆ ಮಾರುಹೋದ ಗಂಡ ಸಹ ಎಂದೂ ಅವಳನ್ನು ನೋಯಿಸಿದವನಲ್ಲ. ಊಟ ಹೇಗೆ ಇದ್ದರೂ, ಎಷ್ಟೇ ಕೆಟ್ಟದಾಗಿದ್ದರೂ ತಿನ್ನುತ್ತಿದ್ದ. ಯಾವತ್ತೂ ಊಟದ ಬಗ್ಗೆ ಚಕಾರವಿಲ್ಲ. ಅವಳೂ ಅಷ್ಟೇ, ಅವನ ಊಟದ ನಂತರ ಮಿಕ್ಕಿದ್ದು ಅವಳ ಪಾಲು. ಇಂತಹ ಪ್ರೀತಿ ಅವರಿಬ್ಬರನ್ನು ಬಂಧಿಸಿತ್ತು.
ಈಗ, ಹೊರಗಿನ ವಸ್ತುವೊಂದು ಮನೆಯೊಳಗೆ ಸೇರಿಕೊಂಡಿತ್ತು. ಗಂಡನ ನೋಟವೆಲ್ಲಾ ಅದರ ಮೇಲೆ. ಆಗಾಗ, ಹೊರತೆಗೆದು , ಅಪ್ಪನ ಮುಖ ನೋಡಿ ನೋಡಿ ಮುಚ್ಚಿಡುತ್ತಿದ್ದ. ಅಪ್ಪನ ನೆನಪಲ್ಲಿ ಕಂಗಳು ತುಂಬುತ್ತಿದ್ದವು.
ಒಂದಿನ ಅವನ ಹೆಂಡತಿಗೆ ಏನೋ ಸಂಶಯವಾಗಿ, ಅವನಿಲ್ಲದ ಸಮಯದಲ್ಲಿ ಬಟ್ಟೆಯ ಗಂಟನ್ನು ತೆರೆದು ನೋಡುತ್ತಾಳೆ. ಅಲ್ಲಿ ಮಿಂಚಿನಂತಹ ವಸ್ತು ಕಂಡು ಹೌಹಾರುತ್ತಾಳೆ. ಎಂತದೋ ತುಂಬಾ ಬೆಲೆಬಾಳುವಂತಹ ವಸ್ತುವಿರಬೇಕೆಂದು ಪರಿಶೀಲಿಸುವಾಗ, ಪಕ್ಕನೆ ಅವಳದೇ ಬಿಂಬ ಕಾಣುತ್ತದೆ. ತನ್ನ ರೂಪ ಲಾವಣ್ಯದ ಬಗ್ಗೆ ಎಂದೂ ಕಲ್ಪನೆಯಿರಲಿಲ್ಲ. ಕನ್ನಡಿಯನ್ನೇ ಕಂಡವಳಲ್ಲ. ಹಾಗಾಗಿ, ಅದು ಇನ್ಯಾರೋ ಹೆಂಗಸಿನ ಫೋಟೋ ಎಂದು ಅರಿಯುತ್ತಾಳೆ.
ತನ್ನ ಗಂಡ ಕದ್ದು ಮುಚ್ಚಿ ಇದನ್ನೇ ನೋಡುತ್ತಿದ್ದನೆ? ಎಂದು ಸಂಶಯ ಕಾಡುತ್ತದೆ. ಇವಳು ಯಾರಿರಬಹುದು? ಹೀಗೆಲ್ಲಾ ನನ್ನ ಗಂಡನ ತಲೆ ಕೆಡಿಸಿರಬಹುದೇ ?
ಹೇಗೆ ಕಂಡು ಹಿಡಿಯುವುದು? ಏನೆಲ್ಲಾ ನಡೀತಿದೆ ನನ್ನ ಬೆನ್ನ ಹಿಂದೆ? ಗೊತ್ತೆ ಆಗಲಿಲ್ಲಾ ಎಂದು ಚಿಂತೆಗೊಳಗಾದಳು.
ಹಲವು ದಿನ ಕಳೆದವು . ಅವಳು ಸೊರಗಿ ಸೊರಗಿ ಹಾಸಿಗೆ ಹಿಡಿದಳು. ಗಂಡನಿಗೆ ಮಾತ್ರ ಇದರ ಕಾರಣ ತಿಳಿಯದೇ ಪೇಚಾಡಿದ. ಏನಾಗಿದೆ ಇವಳಿಗೆ? ಹೀಗೆ ಮಲಗಿಬಿಟ್ಟಳಲ್ಲಾ ಎಂದು, ಒಂದಿನ ಕೆಲಸಕ್ಕೆ ಹೋಗದೇ ಮನೆಯಲ್ಲೇ ಉಳಿದನು. ಹೆಂಡತಿಗೆ ಸಹಾಯ ಮಾಡಲೆತ್ನಿಸಿದಾಗ, ಅವಳಿಗೆ ಇಷ್ಟವಾಗದೇ ಮುಖ ಸಿಂಡಿರಿಸುತ್ತಾಳೆ. ಏನಾಯಿತೆಂದು ಕೇಳುತ್ತಾನೆ.
ಅದಕ್ಕವಳು , ನನಗಿಂತ ಚಂದದ ಹುಡುಗಿಯ ಹಿಂದೆ ಬಿದ್ದುದ್ದನ್ನು ಪ್ರಶ್ನಿಸುತ್ತಾಳೆ. ಆಗ, ಅವನಿಗೆ ನಿಜಕ್ಕೂ ದಿಗಿಲಾಗುತ್ತದೆ. ಇವಳನ್ನು ಬಿಟ್ಟು ನಾನಿದೂವರೆವಿಗೂ ಯಾವ ಹೆಣ್ಣನ್ನೇ ಕಂಡದ್ದಿಲ್ಲವಲ್ಲಾ..ಏನೆಲ್ಲಾ ಯೋಚನೆ ಇವಳದೆಂದು ನೊಂದುಹೋಗುತ್ತಾನೆ.
ನೀನೆ ನನ್ನ ಬದುಕಿನಲ್ಲಿ ಇರುವಾಗ, ಬೇರೆಯವಳು ಹೇಗೆ ಬರಲು ಸಾಧ್ಯ? ಎನ್ನುತ್ತಾನೆ.ಆಗ, ಕೋಪದಿಂದ ಎದ್ದು ಹೋಗಿ, ಗಂಟಿನಲ್ಲಿಂದ ಕನ್ನಡಿಯನ್ನು ತಂದು ಅವನೆದುರಿಗೆ ಹಿಡಿಯುತ್ತಾಳೆ. ಇವಳು ಯಾರು ಹಾಗಾದರೆ? ದಿನಾ ಕದ್ದು ಮುಚ್ಚಿ ಇದನ್ನೇ ನೋಡುತ್ತಿದ್ದದ್ದು ನನಗೂ ಗೊತ್ತು ಎನ್ನುತ್ತಾಳೆ.
ಅಯ್ಯೋ ಹುಚ್ಚೀ! ಅದು ಯಾರ ಫೋಟೋ ಎಂದು ತಿಳಿದೆ? ನನ್ನ ಅಪ್ಪನದು. ಅವರು ತೀರಿಹೋದಾಗ ನನಗೆ ಮೂರು ವರ್ಷವಾಗಿತ್ತು. ನೆನಪೇ ಇರಲಿಲ್ಲ. ಇದನ್ನು ನೋಡಿದಾಗ ನೆನಪಿಗೆ ಬಂತು ನೋಡು..ಎಂದಾಗ , ಇವಳು ನಂಬಲಿಲ್ಲ. ಇದು ಹುಡುಗಿಯ ಫೋಟೋ ಎಂದಳು. ಅವನು ಅಪ್ಪನ ಫೋಟೋ ಎಂದನು. ಇಬ್ಬರೂ ಕೂಗಾಡಿದರು. ಜಗಳಾಡಿದರು, ಜೋರು ಜೋರು, ಕನ್ನಡಿಯನ್ನು ಹಿಡಿದೆಳೆದಾಡಿದರು.
ಎಂದು ನೆಮ್ಮದಿಯಿಂದಿದ್ದ ದಂಪತಿಗಳೀಗ ಕೋಪದಿಂದ ಕೊತಕೊತನೆ ಕುದಿಯುತ್ತಿದ್ದರು.
ಹೀಗೆ ಕೊಸರಾಡುವಾಗ, ಕನ್ನಡಿ ಕೈಯಿಂದ ಜಾರುತ್ತದೆ. ಕೆಳಗೆ ಬೀಳುವುದನ್ನು ಹಿಡಿಯಲಾರದೇ ಹೋಗುತ್ತಾರೆ. ಅದು ಕೈ ಜಾರಿ ಮುರಿದು ಹೋಗುತ್ತದೆ. ಚೂರು ಚೂರಾಗುತ್ತದೆ.
ಅಯ್ಯೋ , ಅಪ್ಪನ ಮುಖ ಛಿದ್ರ ಛಿದ್ರವಾಯಿತಲ್ಲಾ ಎಂದು ಕೋಪದಿಂದ ಹೆಂಡತಿಯ ಕೆನ್ನೆಗೆ ಬಾರಿಸುತ್ತಾನೆ.
ಈ ಅನಿರೀಕ್ಷಿತವಾದ ಏಟಿನಿಂದ ತತ್ತರಿಸುತ್ತಾಳೆ. ಎಂದೂ ಗಂಡನಿಂದ ಬೈಸಿಕೊಂಡವಳೇ ಅಲ್ಲ. ಪ್ರೀತಿಯನ್ನು ಬಿಟ್ಟು ಬೇರೆ ಭಾಷೆಯನ್ನೇ ಅರಿತವಳಲ್ಲ. ಇದು ಅತಿಯಾಗಿ ನೋವು ತಂತು.
ಅಳುತ್ತಾ ಮೂಲೆ ಸೇರಿದಳು. ಗಂಡನಿಗೂ ಕೋಪ ತಣ್ಣಗಾಯಿತು. ಅವಳನ್ನು ಮತ್ತೆ ಸಮಾಧಾನ ಪಡಿಸುತ್ತಾನೆ. ಕನ್ನಡಿಯಿಂದಾದ ಮನಸ್ಥಾಪಕ್ಕೆ ನಾಚಿಕೆಪಟ್ಟು ಸಮಾಧಾನ ಹೊಂದುತ್ತಾರೆ. ಮತ್ತೆ ಇಂತಹ ಯಾವುದೇ ವಸ್ತುವನ್ನು ಮನೆಗೆ ತರಬಾರದೆಂದು ಇಬ್ಬರೂ ನಿರ್ಬಂಧ ಹೇರಿಕೊಳ್ಳುತ್ತಾರೆ. ಮತ್ತೆ ಸುಂದರ ಬದುಕು ಅವರದಾಗುತ್ತದೆ.