ಒಲವ ಬೇಡಿಕೆ?
ಒಲವ ಬೇಡಿಕೆ?
ಕದಡದ ಕೇಶರಾಶಿ, ನಿದಿರೆಯಿಲ್ಲ.
ಕುಡಿನೋಟ, ಅಲಂಕೃತ ವಡವೆ ವಸ್ತ್ರಗಳೆಲ್ಲವೂ ತಣ್ಣಗೆ ಸ್ವಸ್ತವಾಗಿವೆ,
ನೀನಿಲ್ಲದ ಹೊತ್ತು ತೊಟ್ಟ ಹಾಗೆಯೇ.
ಹತ್ತಾರು ಕಾತುರಕೆ ಚಡಪಡಿಕೆ ಎಷ್ಟೋ,
ಜೋಪಾನವಾದ ನೆನಹುಗಳೆಲ್ಲ,
ಚೆಲ್ಲಾಪಿಲ್ಲಿ ಇಲ್ಲಿ
ಮುತ್ತುವ ಮಂಜು, ಕಟಕಟಿಸವ ಚಳಿ.
ಮರದ ಕೊಂಬೆಯ ಹಕ್ಕಿ ಜೋಡಿ
ಉಲಿತ, ಮಾಮರಕೂ ಚಿಗುರುವಾಟ,
ನನ್ನೊಳಗಿನ ಒಲವ ಮೊರೆತ ಕೊರೆಯುತಿದೆ
ನೂರುಭಾವ ಮೀಟಿ.
ಸಲ್ಲಿಸಿಬಿಡು ಒಂದು ಕಪ್ಪಕಾಣಿಕೆ ಎನಗೆ
ನಿಲ್ಲಿಸಲಾರೆ ಈ ಬಗೆಯ ಸುಪ್ತ ವಾಹಿನಿ
ಎಲ್ಲೆ ಮೀರಿದೊಡೆ ತಲ್ಲಣವದು ನಲ್ಲಾ..
ಇಲ್ಲಸಲ್ಲದ ನೆಪವೊಡ್ಡಿ ಬರಲಾರೆನಲ್ಲಾ.
ಮುಗುಳುನಗೆ ಚೆಲ್ಲಿದೊಡೆ ಸಾಕೆ ಹೇಳು
ಮುಂಗುರುಳ ಸವರಿ, ಮುತ್ತಿಡಬಾರದೆ
ಹೆಂಗರುಳ ಆಂತರ್ಯವನರಿತು ಬೆರೆತು
ಒಂದೆರಡು ಸವಿಮಾತಲಿ ಒಲವಕೇಳಿ.

