ನನಗೂ ಮನಸಿದೆ
ನನಗೂ ಮನಸಿದೆ
ಕಪಾಟಿನಲ್ಲಿರುವ ಒಂದು ಸೀರೆ ಉಟ್ಟು ತಯಾರಾಗು ,
ಅವನೆಂದಾಗ ಮರುಮಾತಿಲ್ಲದೆ ಕೋಣೆಗೆ ನಡೆದೆ,
ಹೊಸತಾಗಿ ಅವನು ಕೊಡಿಸುವ ನಿರೀಕ್ಷೆಗಳೇ ಇಲ್ಲವಾದಾಗ ಹೊಂದಾಣಿಕೆ ಅನಿವಾರ್ಯವೇ .
ಹತ್ತಾರು ಸಂಬಂಧಿಕರ ಮುಂದೆ "ಇದೆಂತಹಾ ಸೀರೆ"
ಘನತೆಗೆ ತಕ್ಕಂತೆ ವಸ್ತ್ರಗಳ ಧರಿಸಬಾರದೇ ಅವನೆಂದಾಗ,
ಅವಮಾನವಾದರೂ ಮೌನಿಯಾದೆ ,
ಅವನೇ ತೆಗೆಸಿಕೊಟ್ಟ ವಸ್ತ್ರಗಳಿಗೆ ಅವನೇ ನಿಂದಿಸಿದರು.
ಹೆತ್ತ ಮಗುವನ್ನು ಎತ್ತಿ ಮುದ್ದಾಡಿ,
ಬೇಸರಿಸದೆ ಸೇವೆಗೆ ಮಾಡಿಲ್ಲವೇ
ಪತಿಯ ಕಿಂಚಿತ್ತೂ ಸಹಾಯ ಪಡೆಯದೇ,
ಮಗುವನ್ನು ಶಾಲೆಗೆ ಕಳಿಸಲು ಅವನಿಗೆ ಸಮಯವೇ ಇರುವುದಿಲ್ಲ,
ಪುಟ್ಟ ಮಗುವ ನಾ ಹೇಗೆ ಮರೆಯಲಿ
ಜವಾಬ್ದಾರಿ ಹೊತ್ತು, ನಿದಿರೆಗೆಟ್ಟು ಓದಿಸಿದೆ , ಜೀವ ಸವೆಸಿ ಬೆಳೆಸಿದೆ,
ಏನೇ ಮಾಡಿದರೂ ಮಗಳಿಗೆ ಅಪ್ಪನೆಂದರೆ ಅತೀ ಮುದ್ದು,
ನನಗೆಂದೂ ಹೇಳುವುದಿಲ್ಲ ಶಾಲೆಯ ಸುದ್ದಿ,
ಮನೆಯೊಳಗಿನ ಅಮ್ಮನಿಗೇಕೆ ಒಪ್ಪಿಸಬೇಕು ವರದಿಯೆಂಬ ಉದಾಸಿನವೋ ಕಾಣೆ
ಮೂರು ಹೊತ್ತು ಗೋಡೆಯ ನಡುವೆ ಬಂಧಿಯಾದ ಗೃಹಿಣಿಯಲ್ಲವೇ,
ಪುಕ್ಕಟೆ ಕೆಲಸಕ್ಕೆ ಬೆಲೆಯೂ ಇಲ್ಲವೇ
ಬೆಳೆಸಲು ಬೇಕು, ಸಲಹಲೂ ಬೇಕು,
ಅವಮಾನಿಸುವ ಮುನ್ನಾ ಒಮ್ಮೆ ಯೋಚಿಸಿ ಹೆಣ್ಣಾದವಳಿಗೂ ಮನಸಿಲ್ಲವೇ,
ಅವಳಿಗೂ ಇರುವುದೊಂದೇ ಹೃದಯ
ಎಷ್ಟೆಂದು ಸಹಿಸುವಳು ನೋಯಿಸುತ್ತಲೇ ಹೋದರೆ...
