ನಗು
ನಗು
ನಗಲು ಕಾರಣ ತಿಳಿದರೆ ನಗುವಿಗೆ ಒಂದರ್ಥ.....!
ಇಲ್ಲವಾಗಿ ಸುಮ್ಮನೆ ನಕ್ಕರೆ ಅದುವೆ ಬಲು ವ್ಯರ್ಥ!
ಜಗದಲ್ಲಿ ನಗುವಿರೆ ನಿಜ ಸಂಭ್ರಮವೆ ಬಾಳಲ್ಲಿ!
ನಗು ಮರೆತು ಹೋದರೆ ಸೂತಕಕೆ ಕೊನೆಯೆಲ್ಲಿ??
ಪರ ನಗುವಿಗೆ ಕಾರಣವಾದರೆ ಸಾರ್ಥಕತೆಯ ಭಾವವು!
ಪರರ ನಗುವಿಗೆ ನಾವೀಡಾದರೆ ಅರ್ಥಹೀನ ಜೀವನವು!
ಮನಸಾರೆ ನೀ ನಕ್ಕುಬಿಟ್ಟರೆ ಅಂತ:ಕರಣ ಶುದ್ಧಿಯು!
ನಗುವ ಮುಖವಾಡ ತೊಟ್ಟರೆ ಅದುವೇ ಆತ್ಮವಂಚನೆಯು!
ನಗೆಯಲ್ಲಿ ಹಲವು ಬಗೆಯಿರೆ ಮೊಗದ ಮೇಲದು ಭಾವಸೂಚಕ!
ಸಂದರ್ಭಕನುಸಾರ ಬಳಸಿದರೆ ಮನಸಿನ ನೆಮ್ಮದಿಗೆ ಪೂರಕ!
ನಿನ ನಗುವೆ ಸಾಂತ್ವಾನವಾಗಿರೆ ಹರಿಸಿಬಿಡು ನಗೆಯ ಕಡಲನು!
ಮತ್ತೊಮ್ಮೆ ಸಂಧಾನವಾದರೆ ಮೊಗೆಮೊಗೆದು ಕೊಡುತಿರು ಅದನು!
ನಗುವ ಗುಂಪದು ಕಂಡರೆ ಪಕ್ಷಭೇದ ಮರೆತು ಗೆಲ್ಲಿಸು ಬಿಡದೆ!
ಅಧ್ಯಕ್ಷತೆಯ ಅಧಿಕಾರ ಬಂದರೆ ಸ್ವೀಕರಿಸು ಅನುಮಾನಿಸಿ ನೋಡದೆ!
ಬಾಂಧವ್ಯದೌಷದವು ನಗುವಾಗಿರೆ ಕುಡಿದುಬಿಡು ನೀ ಕಹಿಯಾದರೂ!
ದ್ವೇಷಾಸೂಯೆಗಳ ಭಾರೀ ಹೊರೆ ಇಳಿದು ಬಿಡಲಿ ಹಾಗಾದರೂ!
ನಗುವೆ ಮೃತ್ಯು ಅತಿಯಾದರೆ, ಅದಕ್ಕೆಂದೇ ನೀ ನಗುವ ಕಾರಣ ತಿಳಿಯುತ,
ಹಿತಮಿತದ ಒಳಿತು ಭಾವದ ಸಮ್ಮಿಳಿತದಂತೆ ನೀ ನಗುತ ಬಾಳುತಿರು ಅನವರತ!
