ಇದುವೇ ಜೀವನ...
ಇದುವೇ ಜೀವನ...


ಇದುವೇ ಜೀವನ...
ನನ್ನ ಕೈಯಲ್ಲಿರುವ
ಬಣ್ಣಬಣ್ಣದ ಬಲೂನುಗಳು
ಚಿಣ್ಣರ ಮೊಗದ ಮೇಲೆ
ನಗುವಿನ ದೀಪವನ್ನೇನೋ
ಬೆಳಗಿಸುತ್ತಿತ್ತು...
ಆದರೆ ಒಳಗೊಳಗೇ
ಮನಸೆಕೋ
ಮೌನವಾಗಿಯೇ
ಅಳುತ್ತಿತ್ತು..
ಬಾಲ್ಯದಿಂದಲೂ
ಕೈಯಲ್ಲಿ ಹಿಡಿದು
ಮಾರಿದ್ದು ಈ
ಗಾಳಿತುಂಬಿದ ಚೀಲ...
ಆದರೆ ಒಂದೂ ದಿನ
ಹಿಡಿದು ಆಡದೆ
ಕಳೆದೆ ಹೋಯಿತಲ್ಲ
ನನ್ನ ಬಾಲ್ಯ...
ಹೊತ್ತುಹೋತ್ತಿಗೆ
ಹಸಿದು ಡೊಂಬರಾಟವ
ಮಾಡುವ ತುತ್ತಿನಚೀಲವ
ತುಂಬಿಸುವದೇ ನನ್ನ
ಜೀವನವಾಗಿದೆ ಈಗ...
ಜ್ವರಬಂದು
>ಬಿದ್ದೇಬಿಡುವೇನೋ
ಎನ್ನುವ ಬವಳಿಕೆಯಲ್ಲೂ
ಹೊಟ್ಟೆಯಲ್ಲಿದ್ದ
ಉಸಿರನ್ನೆಲ್ಲ
ಎಳೆದೆಳೆದು ತುಂಬಿದ್ದೆ
ಈ ಬಲೂನುಗಳಲ್ಲಿಯೇ..
ಮನೆಗೆ ಹೋದಾಗ
ಅಣ್ಣಬಂದ ಅಂತ
ಓಡಿಬರುವ
ಹಸಿದು ಕಂಗಾಲಾಗಿರುವ
ತಂಗಿ ತಮ್ಮರ ಹೊಟ್ಟೆಗೆ
ಅನ್ನ ಕಾಣಿಸಲು
ಮಾರುತಲಿದ್ದೇ ಅಂದೂ
ಇದೇ ಬಲೂನುಗಳ..
ಇಲ್ಲಿ ಎಲ್ಲವೂ ಬದಲಾಗಿದೆ
ಬಲೂನಿಗೆ ಕೈ ಒಡ್ಡುವ
ಚಿಣ್ಣರ ಮುಖಗಳು
ಬದಲಾಗಿವೆ...
ಆದರೆ ಬದಲಾಗದೇ
ಇರುವದು ಈ
ಸಮುದ್ರತೀರದ ಮರಳು,
ನಾನು ಮತ್ತು ನನ್ನ
ಕೈಯಲ್ಲಿರುವ ಈ
ಬಣ್ಣಬಣ್ಣದ ಬಲೂನುಗಳು...