ಅಮರ ಶಿಲ್ಪಿ
ಅಮರ ಶಿಲ್ಪಿ
ಸಮತೆಗಾಗಿ ಸಮರಗೈದ ವಿಶ್ವಮಾನವ
ಸ್ವಾಭಿಮಾನ ದೇಶಭಕ್ತಿ ಸಾರಿದ ಜೀವ
ದೀನ ದಲಿತರ ಪ್ರಗತಿಯ ಕಿರಣ
ಹಗಲಿರುಳು ದುಡಿದ ನಾಡ ಚೇತನ
ಎದುರಿಸಿದೆ ಕಷ್ಟಗಳ ಸಾಧಿಸಿದೆ ಇಷ್ಟಗಳ
ಛಲದಿ ಈಜಿದೆ ಕುತಂತ್ರಕೆ ಎದುರಾಗಿ
ನಿನ್ನ ಧೈರ್ಯಕೆ ಬೆಚ್ಚಿದರು ಹಲವಾರು
ಮೆಚ್ಚಿದರು ಗುಣವಂತರು ಬಂದರು ಮುಂದಾಗಿ
ತುಳಿತಕ್ಕೆ ಸಿಲುಕಿದೆ ಚೆಂಡಿನಂತೆ ಮೇಲೆ ಪುಟಿದೆ
ತುಳಿದವರು ಬೆರಗಾದರು ಸುಮ್ಮನಾದರು
ನೊಂದು ಬೆಂದ ಜನರಿಗಾಗಿ ಹೋರಾಟವ ಮಾಡಿದೆ
ಅಸೀಮ ವಿದ್ಯೆ ಜ್ಞಾನವನ್ನು ಪಡೆದು ಜಯಿಸಿದೆ
ಸಾಧನೆಯ ಹಾದಿಯಲ್ಲಿ ಕಲ್ಲು ಮುಳ್ಳು ಚುಚ್ಚಿದರೂ
ನೋವ ನುಂಗಿ ನಡೆದೆ ಗುರಿಯ ಮುಟ್ಟಿದೆ
ಕೋಟಿ ಜನರ ನೇತಾರ ಮಹಾಕ್ರಾಂತಿಕಾರ
ಸಂವಿಧಾನ ಶಿಲ್ಪಿಯೇ ಜನವಂದಿತ
ನಾಡಚರಿತೆ ಪುಟಗಳಲ್ಲಿ ನಿನ್ನ ಹೆಸರು ಶಾಶ್ವತ
ನಡೆನುಡಿ ಗುಣದಿಂದ ಆದೆ ಲೋಕಪೂಜಿತ
ನಿನ್ನ ಹೆತ್ತ ತಾಯಿತಂದೆ ಎನಿತು ಮಾನ್ಯರೋ
ನಿನ್ನ ಪಡೆದ ಭಾರತಾಂಬೆ ಎನಿತು ಮಾನ್ಯಳೋ
