STORYMIRROR

Vani Bhat

Romance Tragedy Others

4.0  

Vani Bhat

Romance Tragedy Others

ಒಂದೇ ಬಾರಿ ನನ್ನ ನೋಡಿ....

ಒಂದೇ ಬಾರಿ ನನ್ನ ನೋಡಿ....

8 mins
1.5K




ಒಂದೇ ಬಾರಿ ನನ್ನ ನೋಡಿ…

ಮಂದ ನಗಿ ಹಾಂಗ ಬೀರಿ…/

ಮುಂದ ಮುಂದ ಮುಂದ ಹೋದ….

ಹಿಂದ ನೋಡದ ಗೆಳತಿ….. 

ಹಿಂದ ನೋಡದ…..//


ಹೌದು…. ಅವನು ತನ್ನನ್ನು ಹಾಗೆ ನೋಡಿದ್ದು ಒಂದೇ ಬಾರಿ, ಒಂದೇ ಬಾರಿ. ಆ ನೋಟದಲ್ಲಿ ಅದೇನೆಲ್ಲಾ ಮಾತುಗಳಿದ್ದವು. ಎಷ್ಟೆಲ್ಲಾ ಭಾವನೆಗಳಿದ್ದವು. ಹಾಗೆ ನೋಡಿದ್ದು ಒಂದೇ ಸಲವಾದರೂ ನೂರೆಂಟು ಮಾತುಗಳಿದ್ದವು. ಅಷ್ಟು ದಿವಸಗಳಿಂದ ಹೇಳದೇ ಉಳಿದಿದ್ದ ಮಾತುಗಳೆಲ್ಲವೂ ಒಂದೇ ಸಲಕ್ಕೆ ಆ ಒಂದೇ ನೋಟದಲ್ಲಿ ಅವನ ಕಂಗಳಿಂದ ತನ್ನ ಕಂಗಳಿಗೆ ಹರಿದು ಬಂದಿದ್ದವು. ಅರಿವಿಲ್ಲದೇ ಅವನ ತುಟಿಯಂಚಲ್ಲಿ ಅರಳಿದ ಆ ನಗು ಇಂದಿಗೂ ತನ್ನ‌ ಮೈಮರೆಸುವುದು, ಹೀಗಿರುವಾಗ ಅಂದು ಮೈಮರೆತು ತಾನೂ ಮುಗುಳ್ನಕ್ಕಿದ್ದರಲ್ಲಿ ಆಶ್ಚರ್ಯವೇನು?


ಮನೆಯ ಬಾಗಿಲ ಪಟ್ಟಿಗೊರಗಿ ಮೋಹಕವಾಗಿಯೇ ನಿಂತಿದ್ದ ನಾನು. ಅವನು ಕಣ್ಮರೆಯಾಗುವ ವರೆಗೂ ಅಲ್ಲಿಯೇ ನಿಂತಿದ್ದೆ, ಅವನು ತೆರಳಿದಮೇಲೂ ಅದೇ ಪರವಶತೆಯಲ್ಲಿ, ಆ ಕಣ್ಣಿನ ಸೆಳೆತದಲ್ಲಿ, ಆ ನಗುವಿನ ಮೋಹದಲ್ಲಿ, ಅದರಲ್ಲಿಯ ಪ್ರೀತಿಯಲ್ಲಿ ಇಹವನ್ನು ಮರೆತಿದ್ದೆ.


ಅಷ್ಟು ದಿನದ ಬಯಕೆಯನ್ನೂ ಎದೆಯೊಳಗಿನ ಆಸೆಯನ್ನೂ ಆ ಒಂದು ಕ್ಷಣದ ನೋಟಗಳ ಮಿಲನ ತೃಪ್ತಗೊಳಿಸಿತ್ತಾ? ಅಥವಾ ತನ್ನೊಳಗಿನ ಆಚ್ಛಾದಿತ ಆಸೆಗಳನ್ನು ಬಡಿದೆಬ್ಬಿಸಿತ್ತಾ? ಹೌದು, ಆ ನೋಟ ಮನದೊಳಗಿನ ಸುಪ್ತ ಬಯಕೆಗಳನ್ನು ಉಕ್ಕುವ ತೊರೆಯಾಗಿಸಿತ್ತು, ಇನ್ನೊಂದು ಅಂತಹ ನೋಟಕ್ಕಾಗಿ, ಅದೇ ನಗುವಿಗಾಗಿ ಮತ್ತೊಮ್ಮೆ ಕಣ್ಣಲ್ಲೇ ಪ್ರೀತಿಯ ಸಂಭಾಷಣೆ ಮಾಡುವುದಕ್ಕಾಗಿ ಹಾತೊರೆಯುವಂತೆ ಮಾಡಿತ್ತು.


ಇಷ್ಟುದಿನ ತನ್ನ ಕಣ್ಣೆದುರಿಗೇ ಇದ್ದ, ತನ್ನ ಸುತ್ತಮುತ್ತಲೂ ಓಡಾಡಿಕೊಂಡಿದ್ದ ಆ ತನ್ನ ಪ್ರಿಯಕರ ದೂರದೂರಿಗೆ ತೆರಳಿರುವ ವಿರಹ ಸುಡತೊಡಗಿತ್ತು. ಇಷ್ಟು ದಿನ ತನ್ನ ಕೈಯಳತೆಯ ದೂರದಲ್ಲಿದ್ದ ಹುಡುಗನೇ ತನ್ನ ಪ್ರಿಯಕರ ಎಂದು ಗೊತ್ತಾಗುವ ಹೊತ್ತಿಗೆ ಅವನು ತುಂಬಾ ದೂರ ಹೊರಟು ಹೋಗಿದ್ದ. ತಣಿಯದ ವಿರಹದ ಬೇಗೆಯನ್ನು ತನಗೆ ನೀಡಿದ್ದ. ಹೇಳಲೇಬೇಕಾದ ಅದೆಷ್ಟೋ ಮನದ ಮಾತುಗಳು ಕೇಳಬೇಕಾದವರು ಸನಿಹದಲ್ಲಿರದೇ ಹಾಗೆಯೇ ಉಳಿದು ಹೋಗಿತ್ತು. ಹಾಗೆ ಉಳಿದ ಮಾತು ಸಂಕಟವಾಗಿತ್ತು. ಆ ನೋವಲ್ಲೂ ಆ ಸಂಕಟದಲ್ಲೂ ಅದೇನೋ ಒಂದು ಮಾಧುರ್ಯ ಏನೋ ಸಂತೋಷ. ಹೇಳಲಾಗದ ಆನಂದ ಅನುಭವಿಸಬೇಕಾದ ಹಾತೊರೆತ. ಹಿತವಾದ ಭಾವನೆಗಳ ಕುಲುಕಾಟದಿಂದ ಮೈಮನ ಜಡವೆನಿಸಿದರೂ ಅದೇನೋ ಹುರುಪು, ಅದೊಂದು ಸುಖದ ನೋವು.


ಹೇಳಬೇಕಾದ ಮಾತುಗಳು ಮನದಲ್ಲುಳಿದು ಭಾವನೆಗಳ ಒತ್ತಡದಿಂದ ಭಾರವಾದ ಹೃದಯ, ಗೆಳೆಯನ ಬರುವಿಕೆಗಾಗಿ ಕಾತರಿಸಿದ‌ ಕಂಗಳು. ಬೆಂಬಿಡದ ಕನಸುಗಳ ಹಾವಳಿಯಿಂದ ನಿದ್ದೆ ಬಾರದೆ ಹೊರಳಾಡಿದ ರಾತ್ರಿಗಳು. ಗೆಳೆಯನ ಸಾನ್ನಿಧ್ಯಕ್ಕಾಗಿ, ಪುನರ್ಮಿಲನಕ್ಕಾಗಿ ಕ್ಷಣ ಕ್ಷಣಗಳನ್ನು ದಿನವಾಗಿಸಿ, ದಿನಗಳು ವಾರವಾಗಿ, ತಿಂಗಳಾಗಿ, ವರುಷಗಳೇ ಕಳೆದರೂ ಆತ ಬರಲಿಲ್ಲ. ಮನಸು ಬಯಕೆಯ ಭಾರಕ್ಕೆ, ದೇಹ ಪ್ರಾಯದ ಭಾರಕ್ಕೆ ತೊನೆಯುತ್ತಿರುವಾಗ ಉಲ್ಲಾಸವೆಲ್ಲ ಸೋರಿ ಹೋಗಿ, ಉದಾಸೀನತೆ ಮನೆ ಮಾಡಿತ್ತು. ಆ ಉದಾಸೀನತೆಯಲ್ಲೂ ಮನದ ಯಾವುದೋ ಮೂಲೆಯಲ್ಲಿ ಮತ್ತದೇ ಹಳೆಯ ಆಸೆ, ಅದೇ ಕಾತರತೆಯ ಕಾಯುವಿಕೆ…..


ಒಮ್ಮೊಮ್ಮೆ ಅವಳಿಗನಿಸುವುದಿದೆ, ಮನದ ಬೇಗೆಗೆ ತಾನೇ ಕಾರಣವೆಂದು. ಅಷ್ಟು ದಿನ ಅವನು ಜೊತೆಗೆ ಓಡಾಡಿಕೊಂಡಿದ್ದಾಗ ಯಾಕೆ ಅವನಂತರಾಳದ ಭಾವನೆ ತನಗೆ ಅರ್ಥವಾಗಲಿಲ್ಲವೋ? ಅದ್ಯಾವ ಮಾಯೆ ತನ್ನನ್ನಾವರಿಸಿತ್ತು? ಆಗಲೇ ತಿಳಿದು ಬಿಟ್ಟಿದ್ದರೆ ಇಂದು ಈ ಪರಿತಾಪ ಇರುತ್ತಿರಲಿಲ್ಲ. ಈ ಪರಿ ಭಾವನೆಗಳ ಮಳೆಯಲ್ಲಿ ನೆನೆದು ಒದ್ದೆಯಾಗಬೇಕಿರಲಿಲ್ಲ… ವಿರಹದ ಬೇಗೆಯಲಿ ಜರ್ಜರಿತಳಾಗಬೇಕಿರಲಿಲ್ಲ. ಹೋಗಲಿ, ಅಷ್ಟು ದಿನದ ಮುಗ್ದತೆ ಅವನು ಹೊರಟು ನಿಂತಾಗ ಕಳೆದದ್ದಾದರೂ ಏಕೆ? ಅಷ್ಟು ದಿನ ಅರಿವಾಗದ ಆ ಪ್ರೇಮದ ಭಾವನೆ, ಮನೆಯಂಗಳದಲ್ಲಿ ಹೊರಡಲನುವಾಗಿ ನಿಂತಿದ್ದ ಅವನನ್ನು ತಾನೇ ಕರೆದಾಗ, ಹಿಂದಿರುಗಿ ಅವನು ಎವೆಯಕ್ಕದೇ ತನ್ನನ್ನು ನೋಡಿದಾಗಲೇ ಅರ್ಥವಾಗಬೇಕೆ? ಅಷ್ಟು ದಿನ ಅರಿವಾಗದ್ದು ಆ ದಿನವೂ ಅರ್ಥವಾಗದೇ ಉಳಿದುಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ? ತಾನು ಯಾಕಾದರೂ ಆ ಕೊನೆಯ ಪ್ರಶ್ನೆ ಕೇಳಿದೆನೋ?? ಯಾಕಾದರೂ ಉತ್ತರಿಸುವ ಗೋಜಿಗೆ ಹೋಗದ ಅವನು ಹಾಗೆ ತಿರುಗಿ ನೋಡಿದನೋ? ತಿರುಗಿ ನೋಡಿದನೇನೋ ಸರಿ, ಯಾಕಾದರೂ ಹಾಗೆ ನಸುನಕ್ಕನೋ? ಯಾಕಾದರೂ ಆ ನಗುವಿನಿಂದಲೇ ತನ್ನ ಸತಾಯಿಸುವನೋ ತಿಳಿಯದಾಗಿತ್ತು.


"ಯಾವಾಗ ವಾಪಸ್ ಬರ್ತೀರಿ?" ಮನೆಗೆ ಬೆನ್ನು ಹಾಕಿ ಹೊರಡುತ್ತಿದ್ದವನಿಗೆ ಬಾಗಿಲಪಟ್ಟಿಗೊರಗಿ ನಿಂತ ತಾನು ಕೇಳಿದ ಪ್ರಶ್ನೆಯದು. ತನ್ನ ಪ್ರಶ್ನೆಗೆ ಅವನು ಥಟ್ಟನೆ ಹಿಂದಿರುಗಿ ನೋಡಿದ್ದ…. ಇವಳು ತನ್ನನ್ನೇ ನಿಟ್ಟಿಸುತ್ತಿದ್ದಾಳೆಂಬ ಸಂತಸವೋ…. ಹೋಗುವ ಮುಂಚೆ ಕೊನೆಯದಾಗಿ ತನ್ನ ಪ್ರೇಯಸಿಯ ಮುಖ ನೋಡುವ ಆಸೆಯೋ…. ಅದೆರಡರಲ್ಲೊಂದು ಅವನ ಕಣ್ಣಲ್ಲಿತ್ತು. ತನ್ನ ಪ್ರಶ್ನೆ ಸಹಜವಾದದ್ದೇ ಆದರೂ ಹೆಣ್ಣೊಬ್ಬಳು ತನ್ನಿನಿಯ ಮನೆಯಿಂದ ಹೊರಡುವಾಗ ಕೇಳುವ ಪ್ರಶ್ನೆಯಾದ್ದರಿಂದಲೋ ಏನೋ ಅವನು ನಸುನಕ್ಕಿದ್ದ…. ತನ್ನನ್ನು ಇಂಚಿಂಚಾಗಿ ಕೊಲ್ಲುವಂತೆ.


ಆದರೆ ತಾನೇಕೆ ಆಕ್ಷಣ ಅವನ ನೋಟ ತಪ್ಪಿಸದೇ ಮೈಮರೆತು ಅವನನ್ನೇ ನೋಡುತ್ತಿದ್ದೆ? ಅವನು ತಿರುಗಿ ನೋಡುವ ಮುಂಚೆಯೂ ಅವನ ಬೆನ್ನನ್ನು ತಾನು ಎವೆಯಿಕ್ಕದೇ ನೋಡುತ್ತಿದ್ದದ್ದು ನಿಜವಲ್ಲವೇ?? ಪ್ರಶ್ನೆ ಕೇಳಿದ್ದೇನೋ ನಿಜ ಆದರೆ ಉತ್ತರ ತನಗೆ ಬೇಕಿರಲಿಲ್ಲ. ಹೊರಡುತ್ತಿರುವವನು ಒಮ್ಮೆ ತನ್ನನ್ನು ನೋಡಲಿ ಎಂಬ ಒಳ ಆಸೆ ಆ ಪ್ರಶ್ನೆಯ ಹಿಂದಿತ್ತು. 


ಅವನು ಒಂದೇ ಕ್ಷಣ ತನ್ನನ್ನು ನೋಡಿ ಮತ್ತೆ ಮುಂದಡಿಯಿರಿಸಿದ್ದ. ತನ್ನ ಮನಸೂ ಕೂಡ ಅದೇ ಕ್ಷಣ ತನ್ನನ್ನು ಬಿಟ್ಟು ಅವನೊಂದಿಗೆ ಹೆಜ್ಜೆ ಹಾಕಿತ್ತು. ನಿಜವಾಗಿಯೂ ಅವನಿಗೆ ತನ್ನ ಬಗೆಗೆ ಪ್ರೀತಿಯಿತ್ತೇ? ಆಸೆಯಿತ್ತೇ? ತಾನು ಕೇಳಿದ ಪ್ರಶ್ನಗೆ ಒಳಾರ್ಥ ಸ್ಪುರಿಸಿ ಸಂತಸ ಪಟ್ಟನೇ? ಅಥವಾ ಅಥವಾ…. ಸುಮ್ಮನೇ ನಕ್ಕ ಅವನ ನಗುವಿಗೆ ತಾನೇ ಅರ್ಥ ಕಲ್ಪಿಸುತ್ತಿರುವೆನೇ? ಇದೆಲ್ಲಾ ತನ್ನ ಒಳ ಆಸೆಗಳ, ಭಾವನೆಗಳ ಪ್ರಭಾವದಿಂದ ಉಂಟಾದ ಭ್ರಮೆಯೇ? ಒಂದೂ ಗೊತ್ತಾಗುವುದಿಲ್ಲ ಅವಳಿಗೆ. ಆದರೆ ತಾನು ಅವನ ಕಣ್ಸೆಳೆತಕ್ಕೆ ಬಲಿ ಬಿದ್ದಿರುವುದಂತೂ ದಿಟ. ತನ್ನ ಮನಸೂ ಕೂಡ ಹಿಂತಿರುಗಿ ನೋಡದೇ ಅವನೊಂದಿಗೆ ಹೊರಟು ಹೋಗಿರುವುದೂ ನಿಜ. ಅವನ ಬರುವಿಕೆಗಾಗಿ ತನ್ನ ತನುಮನ ಕಾತರಿಸುತ್ತಿರುವುದೂ ಕೂಡ ಅಷ್ಟೇ ನಿಜ. ಅದದೇ ಘಟನೆಯನ್ನು ತಾನು ಬಾರಿಬಾರಿಗೆ ನೆನಸಿಕೊಂಡು ಮೈಮರೆಯುವುದೂ ಸತ್ಯ.


ಗಾಳಿಹೆಜ್ಜಿ ಒಡದ ಸುಗಂಧ…

ಅತ್ತ ಅತ್ತ ಹೋಗುವಂದ…

ಹೋತ ಮನಸು ಅವನ ಹಿಂದ……

ಹಿಂದ ನೋಡದ… ಗೆಳತೀ… 

ಹಿಂದ ನೋಡದ…..

ಒಂದೇ ಬಾರಿ ನನ್ನ ನೋಡಿ…


"ಏ ಕುಮುದಾ…. ಅದೆಲ್ ಹೋಗಿದೀಯೇ…. ಮನೆಗೆ ಯಾರೋ ನೆಂಟ್ರು ಬಂದಿದಾರೆ, ನೋಡ್ಹೋಗು, ನಾನು ಹಾಲು ಹಿಂಡಿ ಬರ್ತೀನಿ" ಹಾಡು ಹೇಳುತ್ತಾ ಗಿಡಗಳಿಗೆ ನೀರುಣಿಸುತ್ತಾ ಮೈಮರೆತಿದ್ದ ಕುಮುದೆಯನ್ನು ಅವಳಮ್ಮನ ಕರೆ ಎಚ್ಚರಿಸಿತು. 


ಮನೆಗೆ ಬಂದವರಿಗೆ ಕುಡಿಯಲು ಉಪ್ಪು ಶುಂಠಿ ಹಾಕಿದ ತಣ್ಣಗಿನ ಮಜ್ಜಿಗೆ ಕೊಟ್ಟಳು ಕುಮುದಾ. ಬಂದವರು ಮದುವೆಯ ಕರೆಯೋಲೆ ಕೊಡಲು‌ ಬಂದಿದ್ದರು. ಅವರ ಬಳಿ ಮದುವೆಯ ತಯಾರಿಗಳ ಬಗ್ಗೆ ಕೇಳುತ್ತಿರುವಂತೆಯೇ ಅಮ್ಮನೂ ಬಂದಳು. ಬಂದ ನೆಂಟರು ಮೊದಲು ಹೇಳಿದ ವಿಷಯವನ್ನೇ ಮತ್ತೆ ಅಮ್ಮನ ಬಳಿ ಹೇಳುತ್ತಿದ್ದಾಗ, ಅಕ್ಷತೆಯ ಜೊತೆ ಹೆಬ್ಬಾಗಿಲಲ್ಲಿರಿಸಿದ್ದ ಮದುವೆಯ ಮಮತೆಯ ಕರೆಯೋಲೆಯನ್ನು ತೆರೆದು ಓದಿದಳು. ಏನಾಶ್ಚರ್ಯ, ಅಲ್ಲಿರುವ ಹೆಸರಾಗಲೀ ದಿನಾಂಕವಾಗಲೀ ಕಣ್ಣಿಗೆ ಕಾಣದೇ ಅವನ ಮುಖ ಕಾಣಬೇಕೆ? 


ಒಂದಲ್ಲಾ ಒಂದು ದಿನ ತನಗೂ ಅವನಿಗೂ ಮದುವೆ ನಿಶ್ವಯವಾಗಿ ಇದೇ‌ ರೀತಿ ಕರೆಯೋಲೆಗಳನ್ನು ಊರೂರಿಗೆ ಹಂಚುತ್ತಾರಲ್ಲವೇ?!! ಹಾಗಂದುಕೊಂಡ ತಕ್ಷಣ ಅವಳಿಗೆ ಮೈ ನವಿರೆದ್ದಿತು.


ಮತ್ತೊಮ್ಮೆ ಕರೆಯೋಲೆಯೆಲ್ಲಾ ಕಣ್ಣಾಡಿಸಿ ವಧುವಿನ ಹೆಸರಿರುವಲ್ಲಿ 

ಚಿ. ಸೌ.‌ ಕುಮುದಾ ಎಂದೂ ವರನ ಹೆಸರಿರುವಲ್ಲಿ ಚಿ. ಶಿವಪ್ರಸಾದ್ ಎಂದೂ ಕಲ್ಪಿಸಿಕೊಂಡು ನಸುನಾಚಿ, ಇವರೀರ್ವರ ವಿವಾಹ ಮಹೋತ್ಸವ ಎಂದೋದುವಾಗ ಅದೇನೋ ಅವ್ಯಕ್ತ ಆನಂದವಾಯ್ತು ಅವಳಿಗೆ. ಮತ್ತೊಮ್ಮೆ ನಸುನಕ್ಕು ಮಂಗಲಪತ್ರವನ್ನು ಅದು ಮೊದಲಿದ್ದಲ್ಲೇ ಇಟ್ಟು, ಅಡುಗೆ ಮನೆಗೆ ಹೋದಳು. ಒಮ್ಮೆ ಅಪ್ಪ ಅಮ್ಮ ಕರೆಯೋಲೆ ಓದಿ ಮುಗಿಸಲಿ, ಕರೆಯೋಲೆಯನ್ನು ಕದ್ದೊಯ್ದು ತಾನು ಕಲ್ಪಿಸಿಕೊಂಡಂತೆಯೇ ಅದನ್ನು ತಿದ್ದಿ ಮನಸಾರೆ ಓದಿ ಸಂತಸ ಪಡಬೇಕೆಂದು ಮನಸಲ್ಲೇ ಮಂಡಿಗೆ ತಿಂದಳು. ತನ್ನೊಳಗಿನ ಆಸೆ ಆಕಾಂಕ್ಷೆಯನ್ನು ಹೊರಹಾಕಲು ತವಕ ಪಡುತ್ತಿದ್ದ ತನ್ನ ಬಗ್ಗೆ ತನಗೇ ನಾಚಿಕೆಯಾಯ್ತು ಕುಮುದೆಗೆ, ಆದರೆ ಅದು ತಪ್ಪೆಂದೇನೂ ಅನಿಸಲಿಲ್ಲ.


ಈ ಶಿವಪ್ರಸಾದ ಈ ವರ್ಷವಾದರೂ ರಜೆಯೆಂದು ತಮ್ಮ ಮನೆಗೆ ಬರಬಹುದು. ಆಗ ತನ್ನ ಮನದ ಮಾತು ಹೇಳಿಯೇ ತೀರುವುದು ತಾನು, ಅಷ್ಟು ಸಲುಗೆ ಉಂಟೇ ಉಂಟು. ಆದರೆ ಇಷ್ಟು ದಿನದ ಹಾಗಲ್ಲದೇ ಬೇರೆ ರೀತಿಯ ಸಂಬಂಧವನ್ನು ಬಯಸಿ ತಾನು ಮಾತಾಡುವಾಗ, ಹೇಗೆಲ್ಲಾ ವರ್ತಿಸಬೇಕು, ಹೇಗೆಲ್ಲಾ ನಸುನಗಬೇಕು, ಮಾತು ಎಷ್ಟು ಮೃದುವಾಗಿರಬೇಕು, ನಾಚಿಕೊಂಡರೂ ಎಷ್ಟು ಕತ್ತೆತ್ತಿ ನೋಡಬೇಕು, ನೋಡಿಯೂ ನೋಡದಂತೆ ಹೇಗೆ ನಟಿಸಬೇಕು….. ಹೀಗೆ ಹೋದಲ್ಲಿ, ಬಂದಲ್ಲಿ, ಕುಂತಲ್ಲಿ, ನಿಂತಲ್ಲಿ ಪದೇ ಪದೇ ಅಭ್ಯಸಿಸುತ್ತಿದ್ದಳು ಅವಳಿಗರಿವಿಲ್ಲದೆಯೇ. ಕನ್ನಡಿಯೆದುರು ನಿಂತು ಹೇಗೆ‌ ನಕ್ಕರೆ ತಾನು ಚಂದ ಕಾಣಿಸುತ್ತೇನೆ, ಕೂದಲನ್ನು ಹೇಗೆ ಬಾಚಿಕೊಂಡರೆ ತನ್ನ ಮುಖಕ್ಕೆ ಹೊಂದುತ್ತದೆ, ಯಾವ ಬಣ್ಣದ ಬಟ್ಟೆ ತನ್ನ ಮುಖದ ಬಣ್ಣ ಹೊಳೆವಂತೆ ಮಾಡುತ್ತದೆ ಎಂದು ನೋಡಿಕೊಳ್ಳುವುದೇ ಅವಳ ಹವ್ಯಾಸವಾಗಿತ್ತು.


ಹೀಗಿರಲು ಒಂದು ದಿನ ಮುಸ್ಸಂಜೆ ಹೂವಿನ ಗಿಡಗಳಿಗೆ ನೀರುಣಿಸುತ್ತಿದ್ದಾಗ ಪೇಟೆಯಿಂದ ಹಿಂದಿರುಗಿದ ಅಪ್ಪ ಅಮ್ಮನ ಬಳಿ ಹೇಳುತ್ತಿದ್ದರು "ಶಿವು ಸಿಕ್ಕಿದ ಕಣೆ ಪೇಟೆಯಲಿ…. ಡಾಕ್ಟರ್ ಆಗಿದಾನಂತೆ. ಚಿಕ್ಕಂದಿನಲಿ ಅನ್ನ ಹಾಕಿದ ದೇವರು ನೀವು ಅಂತ ತುಂಬಾ ಗೌರವ ಮತ್ತು ವಿಶ್ವಾಸದಿಂದ ಮಾತಾಡಿದ, ಖುಷಿಯಾಯ್ತು ಅವನ ನೋಡಿ" ಅಪ್ಪ ಹೆಮ್ಮೆಯಿಂದ ಹೇಳಿಕೊಂಡರು.


"ಹೌದಾ….. ಯಾವಾಗ ಬರ್ತಾನಂತೆ" ಅಮ್ಮನೂ  ಉತ್ಸಾಹದಿಂದ ಕೇಳಿದಳು.


"ಮುಂದಿನ ವಾರ ಬರ್ತೀನಿ ಅಂದಿದಾನೆ, ಏನಾದರೂ ವಿಶೇಷದ ಅಡುಗೆ ಮಾಡಿಕೋ, ತುಂಬಾ ವರ್ಷ ಆದಮೇಲೆ ಬರ್ತಿರೋದು ಅವ್ನು" ಅಪ್ಪನಿಗೆ ಉತ್ಸಾಹ ಅವನು ಮನೆಗೆ ಬರ್ತಿರೋದು. ತಾನು ಬೆಳೆಸಿದ ಹುಡುಗ, ಒಳ್ಳೇ ಸಾಧನೆ ಮಾಡಿದ್ದಾನೆ, ಜೀವನದಲ್ಲಿ ಮುಂದೆ‌ ಬಂದಿದಾನೆ ಅಂತ.


ಅಪ್ಪ ಅಮ್ಮ ಮತ್ತೆನೇನೋ ಮಾತಾಡಿಕೊಳ್ಳುತ್ತಿದ್ದರು. ಕುಮುದೆಯ ಕಿವಿಗೆ ಅವೆಲ್ಲಾ ಬಿದ್ದರೆ ತಾನೆ….. ಅವಳು ತನ್ನ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಳು.


***


ಅಂದುಕೊಂಡಂತೆ ಮುಂದಿನವಾರ ಅವನು ಅವರ ಮನೆಗೆ ಬಂದೇ‌ ಬಂದ. 


ಅವನ ಹೆಸರು ಹೇಳಲೂ ಯಾಕೋ ನಾಚಿಕೆ, ಸಂಕೋಚ. ಮನದಲ್ಲಿ ಇಡೀ ದಿನ ಅವನದೇ ಜಪ, ಎಲ್ಲಿ ಅವನ ಹೆಸರು ಕಂಡರೂ ಅವನನ್ನೇ ಕಂಡಷ್ಟು ಸಂತಸವಾಗಿ ಒಳಬಾಯಲ್ಲೇ ಅವನ ಹೆಸರನ್ನು ಉಲಿಯುವಾಗ ಅದೇನೋ ಅರ್ಥವಾಗದ ಆನಂದವಾಗಿ ಒಳನಾಡಿಯೊಂದು ಮಿಡಿದರೂ ಗಟ್ಟಿಯಾಗಿ ಅವನ ಹೆಸರು ಹೇಳಲು ಏನೋ ಮುಜುಗರ. ಗಂಡನಾಗುವವನ ಹೆಸರನ್ನು ಹುಡುಗಿ ಹೇಳಬಾರದೆಂಬ ಅರಿವು.


ಯಾವಾಗಲೂ 'ಶಿವೂ' ಎಂದು ಸಂಬೋಧಿಸುತ್ತಿದ್ದ ತಾನು ಈ ಬಾರಿ ಅವನನ್ನು ಏನೆಂದು ಕರೆಯಲಿ? ಹೇಗೆ ಮಾತಾಡಿಸಲಿ ಎಂದು ಒಳಗೊಳಗೇ ಚಡಪಡಿಕೆ.


ಅವನು ಬರುತ್ತಾನೆಂದು ಗೊತ್ತಾದ ದಿನದಿಂದ ಮನೆಯನ್ನೆಲ್ಲಾ ಇನ್ನಷ್ಟು ಓರಣವಾಗಿಸಿ, ಹೂಗಿಡಗಳನ್ನು ಇನ್ನಷ್ಟು ನೀರೆರೆದು ಹಸಿರಾಗಿಸಿ, ಏನೇನೋ ತಿಂಡಿ ಮಾಡಿಟ್ಟು ಹೀಗೆ ಏನೆಲ್ಲಾ ತಯಾರಿ ನಡೆಸಿದ್ದಳು.


ಅವನು ಬರುವ ಹಿಂದಿನ ದಿನ ಇನ್ನಿಲ್ಲದ ಚಡಪಡಿಕೆಯಾಗಿ ನಿದ್ರೆಯೇ ಬಂದಿರಲಿಲ್ಲ ಕುಮುದೆಗೆ. ಅವನನ್ನು ನೋಡಿ ಆರೇಳು ವರ್ಷಗಳಾಯ್ತು. ಅವನು ಈಗ‌ ಹೇಗೆಲ್ಲಾ ಕಾಣಿಸಬಹುದು? ಅವನು ಬದಲಾಗಿ ಬಿಟ್ಟಿದ್ದರೆ? ಅಂದಿನಂತೆ ಸಲುಗೆಯಿಂದ ಮಾತಾಡುತ್ತಾನಾ? ಹೀಗೆ ಒಂದರ ಮೇಲೊಂದು ಯೋಚನೆಗಳು ಮುತ್ತಿ ಮುಂಜಾವದ ವರೆಗೂ ನಿದ್ದೆಯಿರದೇ, ಮುಖ ತೊಳೆದು ಕನ್ನಡಿ ನೋಡಿದರೆ ಮುಖ ಎಂದಿಗಿಂತ ಬಾಡಿ ಹೋದಂತೆ ಕಾಣಿಸಿತು. ಆದರೆ ಮನದಲ್ಲಿರುವ ಉಲ್ಲಾಸ ಕಡಿಮೆಯಾಗಲಿಲ್ಲ. ಹೀಗಾಗಿ ಒಂದು ಉಲ್ಲಾಸದ ಆಹ್ಲಾದಕರ ನಗು ಅವಳ ಮುಖದ ಕೊರತೆಯನ್ನು ಮುಚ್ಚಿ ಹಾಕುತ್ತಿತ್ತು. ಅಂಗಳದಲ್ಲಿ ಎಂದಿಗಿಂತ ಸುಂದರವಾದ ರಂಗೋಲಿಯ ಗೆರೆ ನಗುತ್ತಿತ್ತು. ಮನೆ ಓರಣಗೊಂಡು ಹೊಳೆಯುತ್ತಿತ್ತು. ಅಂಗಳದ ಗುಲಾಬಿ ಗಿಡಗಳು ಹೊಸ ಮೊಗ್ಗುಗಳನ್ನರಳಿಸಿ ನಗುತ್ತಿದ್ದರೂ ತನ್ನಿಷ್ಟದ ಕೆಂಗುಲಾಬಿ ಗಿಡದ ಮೊಗ್ಗನ್ನು ಹುಳ ತಿಂದುಬಿಟ್ಟಿದ್ದು ನೋಡಿ ಮನ ಮುದುಡಿತು.


ಕೆಂಗುಲಾಬಿ ಇಲ್ಲವಾದ್ದರಿಂದ ಅರಸಿನ ಕುಂಕುಮ ಗುಲಾಬಿಯನ್ನೇ ಮುಡಿಗೇರಿಸಿಕೊಳ್ಳಲು ತೆಗೆದಿರಿಸಿದಳು. ಸ್ನಾನ ಮಾಡಿ ಸೀರೆ ಹೊರ ತೆಗೆದಾಗ 'ಎಂದೂ ಇಲ್ಲದ ತಾನು ಸೀರೆಯಟ್ಟರೆ, ಎಂದೂ ಇಲ್ಲದ ಈ ವಿಶೇಷ ಅಲಂಕಾರ ಹೆತ್ತವರ ಅನುಮಾನಕ್ಕೆ ಕಾರಣ' ಎಂದು ತಿಳಿದು ಎಂದಿನಂತೇ ಚುಡಿದಾರದ ಮೊರೆ‌ಹೋದಳು. 


ಅಡುಗೆ ಮನೆಯಲ್ಲಿ ಅವನಿಗಿಷ್ಟವಾದ ತಿಂಡಿ ತಯಾರಿಸುತ್ತಿರುವಾಗಲೇ ಮನೆಯಂಗಳದಲ್ಲಿ ಮೋಟಾರ್ ಸೈಕಲ್ ನಿಂತ ಶಬ್ಧವಾಯ್ತು. ಓಡಿಹೋಗಿ ಬಾಗಿಲಲ್ಲೇ ನಿಂತು ಅವನನ್ನು ಸ್ವಾಗತಿಸಬೇಕೆಂಬ ತುಡಿತವನ್ನು ಕಷ್ಟ ಪಟ್ಟು ನಿಯಂತ್ರಿಸಿಕೊಂಡಳು. ಅಮ್ಮ ಮನೆ ಬಾಗಿಲಿಗೆ ಓಡಿದಳು.


'ಬಂದ್ಯಾ ಶಿವೂ' ಎಂದು ಅಪ್ಪ ಅಮ್ಮ ಅವನನ್ನು ವಿಚಾರಿಸಿಕೊಂಡರು. 'ಮಾಮ ಮಾಮಿ ಚೆನ್ನಾಗಿದೀರಾ' ಅಂತ ಕೇಳಿದ ಅವನು 'ಎಲ್ಲಿ ಕುಮುದ ಕಾಣ್ತಾ ಇಲ್ಲ' ಅಂದಾಗ ಇವಳಿಗೆ ಸ್ವರ್ಗ ಮೂರೇ ಗೇಣು. ಇನ್ನು ತಡೆಯಲಾರದೆ ಮಾವಿನ ಹಣ್ಣಿನ ರಸಾಯನ ತೆಗೆದುಕೊಂಡು ಮನೆ ಬಾಗಿಲಿಗೆ ನಡೆದಳು.


ತಾನೀಗ ಅವನನ್ನು ನೋಡಲಿದ್ದೇನೆ ಏಳು ವರ್ಷಗಳ ನಂತರ ಎಂಬ ಎಣಿಕೆಗೇ ಅವಳ ಎದೆ ಹೊಡೆದುಕೊಂಡಿತು. ಹೋಗಿ ರಸಾಯನ ಕೊಟ್ಟಳೇನೋ ಸರಿ. ಆದರೆ ಎಷ್ಟೇ ಪ್ರಯತ್ನಿಸಿದರೂ ಮೊದಲಿನಂತೆ 'ಶಿವೂ' ಎಂದು ಸಂಬೋಧಿಸಲಾರದೇ ಧ್ವನಿ ಉಡುಗಿ, ಅವನ ಮುಖ ನೋಡಿ ನಸುನಗಲೊಂದೇ ಸಾಧ್ಯವಾಯ್ತವಳಿಗೆ.

ಇಲ್ಲ ಅವನು ಸ್ವಲ್ಪವೂ ಬದಲಾಗಿಲ್ಲ, ಪಟ್ಟಣದಲ್ಲಿದ್ದರೂ ತುಂಬಾ ಸ್ಟೈಲ್ ಏನೂ‌ ಹೊಡೆಯುತ್ತಿಲ್ಲ ಅಂತ ಸಮಾಧಾನವಾಯ್ತು ಅವಳಿಗೆ. 


'ಬಾ ಶಿವೂ ತಿಂಡಿ ತಿನ್ನುವೆಯಂತೆ…." ಅಮ್ಮ ಪ್ರೀತಿಯಿಂದ ಒಳ ಕರೆದರು. 'ಅಯ್ಯೋ ಮಾಮಿ, ಮಾವಿನ ಹಣ್ಣಿನ ಜ್ಯೂಸ್ ಕುಡಿದೆನಲ್ಲ…. ಇನ್ನೇನೂ ಬೇಡ, ಮೊದಲು ಬಂದ ಕೆಲಸ ಮುಗಿಸಿ ಬಿಡ್ತೀನಿ' ಎನ್ನುತ್ತಾ ತನ್ನ ಬ್ಯಾಗಿನಿಂದ ಒಂದಿಷ್ಟು ಕವರ್ ತೆಗೆದ.


'ಮಾಮ ಮಾಮಿ, ಇಲ್ ಕೂತ್ಕೊಳಿ…. ನನ್ ಕಡೆಯಿಂದ ಸ್ಮಾಲ್ ಗಿಫ಼್ಟ್ ಇಲ್ಲ ಅನ್ಬೇಡಿ' ಎನ್ನುತ್ತಾ ಅಪ್ಪನಿಗೆ ಪಂಚೆ ಶಲ್ಯ…. ಅಮ್ಮನಿಗೆ ಸೀರೆ‌ಕೊಟ್ಟ. 'ನಂಗೆ ನಾಲ್ಕೈದು ವರ್ಷ ಅನ್ನ ಹಾಕಿದವರು, ವಿದ್ಯೆ ಕಲಿಸಿದವರು ನೀವು ಅದಕ್ಕೇ ನನ್ ಮದ್ವೆಗೆ ನಿಮನ್ನೇ ಮೊದಲು ಕರೀತಾ ಇದೀನಿ, ಈ ತಿಂಗಳ ಕೊನೆಯಲ್ಲಿ ಮದುವೆ, ಎಲ್ರೂ ಖಂಡಿತಾ ಬರ್ಬೇಕು' ಎನ್ನುತ್ತಾ ಅಪ್ಪ ಅಮ್ಮನ ಕಾಲಿಗೆ ಬಿದ್ದ. 'ಕುಮುದಾ…. ನಿಂಗಿದೋ ಈ ವಾಚು' ಎನ್ನುತ್ತಾ ಅವಳ ಮುಂದಿಟ್ಟ. ಅವಳಿಗೆ ಅವನೇನು ಹೇಳಿದನೋ ಅರ್ಥವಾಗಲು ಸ್ವಲ್ಪ ಸಮಯವೇ ಬೇಕಾಯ್ತು. ಅವನು ಇನ್ನೇನೋ ಹೇಳುತ್ತಿದ್ದ, ಪಾಪ ಅದಾವುದೂ ಕುಮುದೆಯ ಕಿವಿಗೆ ಬೀಳಲಿಲ್ಲ.


ತಾನೀಗ ಬರ್ತೀನಿ ಅಂತ ಆತ ಹೊರಡಲನುವಾದರೆ, ಅಪ್ಪ ಊಟ ಮಾಡಿಕೊಂಡೇ ಹೋಗಬೇಕೆಂದು ಒತ್ತಾಯಿಸುತ್ತಿದ್ದರು. ತಾನು ತುಂಬಾ ಮನೆಗೆ ಕರೆಯೋಲೆ ಕೊಡುವುದಿದೆ, ತಡವಾಗುತ್ತದೆ ಎನ್ನುತ್ತಾ ಶಿವು ಹೊರಟೇ ಬಿಟ್ಟ.


ಅವನು ಹೋದ ಕೂಡಲೆ ಕರೆಯೋಲೆ ತೆಗೆದುಕೊಂಡ ಕುಮುದೆಯ ಕಣ್ಣಿಗೆ ಯಾವ‌‌ ಅಕ್ಷರವೂ ಕಾಣಲಿಲ್ಲ. ಕಣ್ಣೆಲ್ಲ ಮಂಜಾಗಿತ್ತು. ಆದರೆ ಅಪ್ಪ ಅಮ್ಮ ಮಾತಾಡಿಕೊಂಡದ್ದು ಸರಿಯಾಗಿ ಕೇಳಿಸಿತು…."ಶಿವು ಕುಮುದಾನ ಮದುವೆಯಾಗೋಕೆ ಆಸೆ‌ ಪಟ್ಟಿದ್ದ, ನೀನು ಮನಸು ಮಾಡಿದ್ರೆ ಇಂದು 'ವರದಾ' ಅನ್ನೋ ಜಾಗದಲ್ಲಿ 'ಕುಮುದಾ' ಅಂತ ಬರೆದಿರ್ತಿತ್ತು" ನೊಂದು ನುಡಿದರು ಅಪ್ಪ.


"ಶಿವು ಒಳ್ಳೆಯ ಹುಡುಗ ನಿಜ, ಆದರೆ ಎಷ್ಟೆಂದರೂ ಅವನಮ್ಮ ಇಟ್ಟುಕೊಂಡವಳೇ‌ ಹೊರತೂ ಕಟ್ಟಿಕೊಂಡವಳಲ್ಲ. ಅಂತ ಮನೆಗೆ ನಮ್ಮ ಕುಮುದಾ ಸೊಸೆಯಾಗೋದು ನಂಗೆ‌ ಇಷ್ಟ ಇಲ್ಲ" ಅಮ್ಮ ದೃಢವಾಗಿಯೇ ಹೇಳಿದಳು. 


ಕುಮುದೆಯ ಕಣ್ಣಿಂದ ಜಲಪಾತ ಉಕ್ಕಿತು…. ಅವರಾರಿಗೂ ಕಾಣದಂತೆ ಒರೆಸಿಕೊಂಡು ಓಡೋಡಿ ಮನೆಯಂಗಳಕ್ಕೆ ಬಂದಳು.  ಊಹೂಂ ಅವನು ಹೊರಟು ಹೋಗಿದ್ದ, ಅವಳ ಜೀವನದಿಂದಲೂ ಹೊರಟು ಹೋಗಿದ್ದ. ಹಾಗೆ ಕಾಲ ಮಿಂಚಿದ ಮೇಲೂ ನಾಯಕ ನಾಯಕಿಗಾಗಿ ಕಾಯುವುದು ಸಿನೆಮಾದಲ್ಲೇ ಹೊರತೂ ನಿಜ ಜೀವನದಲ್ಲಲ್ಲ. ಅವಳೀಗ ವಾಸ್ತವ ಒಪ್ಪಿಕೊಳ್ಳಲೇಬೇಕಿತ್ತು.


ಅವನು ದೂರದಲ್ಲೆಲ್ಲಾದರೂ ಕಾಣುವನೋ ಎಂದು ಅಷ್ಟು ದೂರ ಕಣ್ಣಾಡಿಸಿದಳು, ಮಣ್ಣು ರಸ್ತೆಯಲಿ  ಅವನ ಗಾಡಿ ಹೋದ ಗುರುತೆಂಬಂತೆ ಧೂಳೆದ್ದಿತ್ತು.


ಹಿಂದೆ ತಿರುಗಿ ನೋಡದೆ ಹೋಗಿ ಬಿಟ್ಟೆಯಾ ಗೆಳೆಯಾ…. ಒಂದೇ ಒಂದು ಬಾರಿ ತಿರುಗಿ ನೋಡಿದ್ದರೆ, ನಿನಗಾಗಿ ಕಾತರಿಸಿ ಕನವರಿಸಿ ಚಾತಕದಂತೆ ಕಾಯುತ್ತಿದ್ದ ಈ ನಿನ್ನ ಪ್ರೇಯಸಿ ನಿನಗೆ ಕಾಣಿಸುತ್ತಿದ್ದಳು. ಆದರೆ ನೀನು ತಿರುಗಿ ನೋಡಲೇ ಇಲ್ಲ, ನನ್ನ ಜೀವನದಲ್ಲಿ ನೀನೆಂತ ಧೂಳೆಬ್ಬಿಸಿರುವೆ ಎಂಬ ಅರಿವು ನಿನಗಿಲ್ಲ.


ಹೋಗಲಿ, ಕೊನೆಯದಾಗಿ ಒಮ್ಮೆ ನಿನ್ನ ನಗುವನ್ನು ನಿನ್ನ ನೋಟವನ್ನು ನೋಡ ಬಯಸಿದೆ, ಅದೂ ನನಗೆ ಉಳಿದಿಲ್ಲ. ಹಿಂದಿರುಗಿ ಬಾ ಗೆಳೆಯಾ…. ಒಂದೇ ಒಂದು ಬಾರಿ ನನ್ನ ನೋಡು. ನನ್ನ ನೋಡಿ ಆ ಮಧುರವಾದ ಮೋಹಕವಾದ ನಸುನಗುವನ್ನು ಬೀರು. ಈ ಜೀವನಕ್ಕೆ ಅಷ್ಟು ಸಾಕು, ಅಷ್ಟಾದರೂ ಮಾಡಬಾರದೇ ಗೆಳೆಯಾ…… ಕುಮುದೆಯ ಮನ ಇನ್ನಿಲ್ಲದಂತೆ ರೋಧಿಸುತ್ತಿತ್ತು.


       



Rate this content
Log in