Vani Bhat

Others

4.5  

Vani Bhat

Others

ಹೇಳುವುದು ಏನೋ ಉಳಿದು ಹೋಗಿದೆ

ಹೇಳುವುದು ಏನೋ ಉಳಿದು ಹೋಗಿದೆ

3 mins
188



ಪ್ರೀತಿಯೇ...


ಹೀಗೆ ಕರೆಯುವ ಧೈರ್ಯ ಸ್ವಲ್ಪ ಮೊದಲು ಮಾಡಿದ್ದರೆ ಚೆನ್ನಿತ್ತು ಅಂದುಕೊಳ್ಳುತ್ತಲೇ ಬರೆದೆ ಹುಡುಗಿ.... ಆದರೆ ಈಗಲಾದರೂ ನನ್ನ ಭಾವನೆ ಹೇಳದಿದ್ದರೆ ಮನಸು ತಾಳದು.... ಅದಕ್ಕೆ ಹೇಳುತ್ತಿದ್ದೇನೆ.


ನಿನ್ನನ್ನು ತುಂಬಾ ಪ್ರೀತಿಸಿದೆ ಅಂತ ಸುಳ್ಳು ಹೇಳಲಾರೆ. ಏಕೆಂದರೆ, ತುಂಬಾ ಆಸೆ ಪಟ್ಟ ಎಲ್ಲವನೂ ನಾ ಜೀವನದಲಿ ಪಡೆದಿದ್ದೇನೆ. ನಿನ್ನನೂ ಪಡೆವ ಪ್ರಯತ್ನ ನಾ ಮಾಡಿದೆನಾ? ಇಲ್ಲವಾ? ನನ್ನ ಬಳಿಯೇ ಉತ್ತರವಿಲ್ಲ. ಆದರೆ ನಿನ್ನ ಬಗ್ಗೆ ಒಂದು ಆಸಕ್ತಿ ಖಂಡಿತಾ ನನಗಿತ್ತು. ನಿನ್ನೆಡೆಗೆ ಒಂದು ಪುಟ್ಟ ಕನ್ಸರ್ನ್ ಹಾಗೂ ಸೆಳೆತ ಇತ್ತು. ಕಾರಣ ಗೊತ್ತಿಲ್ಲ.... ನಿನ್ನ ಮುಗ್ಧತೆಯಾ? ನೀ ನನ್ನ ಗೌರವಿಸುವ ಪರಿಯಾ? ಅನುಕಂಪವಾ? ಗೊತ್ತಿಲ್ಲ. ಇಷ್ಟ ಪಡುವ ಮನಸಿಗೇಕೆ ಕಾರಣದ ಹಂಗು? ಅಲ್ಲವೇ?


ಎಷ್ಟೊಂದು ಜನ ನನ್ನ ಪಡೆಯಲು ಹಂಬಲಿಸುತ್ತಿದ್ದರು, ನನಗದು ಗೊತ್ತು. ಒಂದು ಮುಗಳ್ನಗುವಿಂದ ದೂರ ಸರಿಸಿದ್ದೇನೆ. ನೀನು ಹತ್ತಿರ ಬರಲಿ ಅಂತ ಮನಸಾರೆ ಆಸೆ ಪಟ್ಟೆ. ಅದ್ಯಾಕೋ.... ನೀ ಬರಲಿಲ್ಲ. ನಿಲುಕದ ನಕ್ಷತ್ರ ನಾನೆಂದು ಭಾವಿಸಿದೆಯಾ? ಹಾಗ್ಯಾಕೆ ಭಾವಿಸಿದೆ? ದೂರದಿಂದ ಹೊಳೆವಂತೆ ಕಾಣುವ ಈ 'ನಕ್ಷತ್ರ' ದೂರದಲೆಲ್ಲೋ ಒಬ್ಬೊಂಟಿಯಾಗಿಯೇ ಇತ್ತು... ನೀ ಬಳಿ ಬರುವ ಚಿಕ್ಕ ಪ್ರಯತ್ನ ಮಾಡಿದರೂ ಸಾಕಿತ್ತು, ನಿನ್ನ ಸೆಳೆದು ತನ್ನದಾಗಿಸಿಕೊಳ್ಳುತ್ತಿತ್ತು. ಅದ್ಯಾಕೋ ನೀ ಹಾಗೆ ಮಾಡಲೇ ಇಲ್ಲ.


ಹೌದು.... ನನ್ನ ಪ್ರಯತ್ನವನ್ನೂ ನಾ ಮಾಡಿದೆ‌. ನೀ ನನ್ನ ಹತ್ತಿರ ಬರುವಂತೆ ಮಾಡುವ ಸುಳ್ಳೆ ಸುಳ್ಳು ನೆವಗಳ ಸೃಷ್ಟಿಸಿದೆ. ಪಾಪದ ಹುಡುಗೀ.... ನಿನಗೆ ಅದೆಲ್ಲಾ ನೆವಗಳು ಅಂತ‌ ಗೊತ್ತಾಗಲೇ ಇಲ್ಲವೇ? ಅಥವಾ ನಟಿಸಿದೆಯಾ? 


ನೀ ಬರಲಿ ಅಂತ‌ ಬಯಸಿದ್ದು ನಿಜ. ಹಾಗೊಂದು ಪೋನ್ ಅಥವಾ ಮೆಸೇಜ್ ಕೂಡ ಮಾಡದೇ ನಾ ಬ್ಯುಸಿ ಇರುವ ದಿನ ನನ್ನ ಇಕ್ಕಟ್ಟಿಗೆ ಸಿಲುಕಿಸುವಂತೆ ಬಂದೆಯಲ್ಲೇ ಹುಡುಗೀ.... ನನ್ನ ನೆವಗಳ ಅರಿಯದೇ ಬಂದ ನಿನ್ನ ಮುಗ್ಧತೆ ಮನಸಿಗೆ ಮುದ ನೀಡಿತು. ಹೌದು, ಖುಷಿಯೂ ಆಯ್ತು ನನಗೆ ನಿನ್ನ ನೋಡಿ. ಆದರೆ ನನ್ನ ಮನಸನ್ನು ನಿನ್ನೆದುರು ಹೇಳುವ ಅವಕಾಶ ನನಗೆ ಸಿಗಲೇ ಇಲ್ಲವಲ್ಲ. ನೀ ಬರುವಂತೆ ಮಾಡಿದ ನನ್ನ ಉದ್ದೇಶವೇ ಈಡೇರಲಿಲ್ಲ.... ನಾನೇನು ಮಾಡಲಿ? ಇದಕ್ಕಿಂತ ಹೆಚ್ಚಿನ ಪ್ರಯತ್ನ ಮಾಡಲು ನನ್ನ ಸ್ವಾಭಿಮಾನವೂ ಅಡ್ಡ ಬಂತು. ಹೌದು ಕಣೇ.... ಏನೂ ಇಲ್ಲದೇ ಈ ಊರಿಗೆ ಬಂದು ನನ್ನದೆಂಬ ಹೆಸರು ಮಾಡಿದ್ದೇನಲ್ಲ, ಅದು ಹಾಳಾಗಬಾರದೆಂಬ  ಕಾಳಜಿ ನನಗೆ ಖಂಡಿತಾ ಇತ್ತು. ಹೆಣ್ಣಿಗೆ ಸಂಬಂಧಿಸಿದಂತೆ ಹೆಸರು ಹಾಳಾದರೆ ಎಷ್ಟು ಕಷ್ಟ ಅಂತ ಗೊತ್ತಲ್ಲ ನಿನಗೆ. ಅಷ್ಟು ಸುಲಭವಲ್ಲ ಪ್ರೀತಿ ಹೇಳಿಕೊಳ್ಳೋದು ಹುಡುಗಿ. ಈ 'ಹೆಸರು' ಅನ್ನೋದು ಚಿನ್ನದ ಚೂರಿ ಈ ವಿಷಯದಲ್ಲಿ. ಹೋದರೆ ಹೋಗುತ್ತಾಳೆ, ನನ್ನವಳೇ ಆದರೆ ಖಂಡಿತಾ ಸಿಗುತ್ತಾಳೆ ಎಂದುಕೊಂಡುಬಿಟ್ಟೆ. ಅದೇ ತಪ್ಪಾಯ್ತೇನೋ..... ತುಂಬಾ ದಿನ ನೀ ಸಂಪರ್ಕದಲ್ಲಿರಲಿಲ್ಲವಲ್ಲ, ಮರೆತೇ ಬಿಟ್ಟೆ ನಾ ನಿನ್ನ, ನನ್ನ ಕೆಲಸದೊತ್ತಡದಲ್ಲಿ.


ಮನೆಯಲ್ಲೂ ಮದುವೆಗೆ ಒತ್ತಾಯಿಸುತ್ತಿದ್ದರು. ಹೆಣ್ಣಿನವರೂ ಆಗಾಗ ಕೆರೆ‌ ಮಾಡ್ತಿದ್ದರಿಂದ ಅಮ್ಮ ನನ್ನೆಡೆ ಪ್ರಶ್ನಾರ್ಥಕವಾಗಿ ನೋಡ್ತಿದ್ದಳು. ಪ್ರೀತಿ ಗೀತಿ ಎಲ್ಲಾ ಕಥೆ ಕಾದಂಬರಿಗಳಲ್ಲಿ ಮಾತ್ರ ಸತ್ಯ... ಜೀವನದ ವಾಸ್ತವ ಬೇರೆಯೇ ಅಂದುಕೊಂಡ   ನಾನು ಮದುವೆಗೆ ಒಪ್ಪಿಕೊಂಡು ಬಿಟ್ಟೆ. ಈಗ ಮದುವೆಯೆಂಬ ಈ ವಾಸ್ತವವನ್ನು ಒಪ್ಪಿಕೊಳುವಲ್ಲಿ ಸೋಲುತ್ತಿರುವೆ. ನನ್ನ ಹೆಂಡತಿಯಾದ ಹುಡುಗಿಗೆ ನ್ಯಾಯ ನೀಡಲಾಗುತ್ತಿಲ್ಲ ನನಗೆ.


ಏನು ಮಾಡಲಿ ಹೇಳು.... ಅದೊಂದು ಮಾತು ನೀನಾಡಿರದಿದ್ದರೆ, ಬಹುಶಃ ಈ ಪರಿ ಪಶ್ಚಾತ್ತಾಪ ನನಗಾಗುತ್ತಿರಲಿಲ್ಲ‌ ಅನಿಸುತ್ತದೆ. "ಮೊದಲನೇ ಪ್ರಯತ್ನದಲ್ಲೇ ಪಾಸಾಗಿ ಗೆದ್ದು ಬಿಡಲು, ನನ್ನ ಮನಸೇನು ನೀವು ಬರೆವ ಪರೀಕ್ಷೆಗಳಲ್ಲ" ಎಂದಿದ್ದೆ ನೀನು. "ಹೌದಲ್ಲ.... ಮತ್ತೊಮ್ಮೆ ಪ್ರಯತ್ನಿಸಲೇ ಇಲ್ವಲ್ಲ ನಾನು" ಅನ್ನಿಸಿಬಿಟ್ಟಿತು. ನಿನಗೂ ನನ್ನ ಬಗ್ಗೆ ಆಸಕ್ತಿ ಇತ್ತೇನೋ... ಅನ್ನಿಸಿಯೇ ಮನಸು ಹಠ ಮಾಡ್ತಿರೋದು. ಅದೇ ತಾಪ ನನ್ನ ಕೊರೆಯುತ್ತಿರೋದು. ಅದಕ್ಕೆಂದೇ ಈ ಪತ್ರ ಬರೆದಿರೋದು. ನನ್ನ ಮನಸು ಹಗುರಾಗಿಸಲು. 


ನೀ ಪುನಃ ಬರಲೆಂಬ ನಿರೀಕ್ಷೆಯೇನೂ ಇಲ್ಲ. ಆದರೂ ಹೀಗೊಂದು ನಿವೇದನೆ ಮಾಡಿಕೊಂಡರೆ ಮನಸಿಗೊಂದು ಸಮಾಧಾನ, ನೆಮ್ಮದಿ. ಹೇಳು... ಏನು ಮಾಡೋದು ಈ ಮನಸಿಗೆ? ಅದಕ್ಕೆ ವಾಸ್ತವಗಳು... ಸಂಸ್ಕಾರಗಳು ಏನೂ ಅರಿವಾಗದು. ನಾವು ಬುದ್ಧಿ ಹೇಳಿದಷ್ಟು ಅದು ಹಠಕ್ಕೆ ಬೀಳುತ್ತದೆ. ಅದಕ್ಕೇ ಮತ್ತೊಮ್ಮೆ ಕೇಳ್ತಾ ಇದ್ದೇನೆ.... ನನ್ನ ಇಷ್ಟ ಪಡ್ತೀಯಾ ನೀನು? ನನ್ನ ಬಾಳಿಗೆ ಬರಲು ಮನಸಿದೆಯಾ ನಿನಗೆ? ಹೀಗೆ ನಾ ಕೇಳುವುದು ತಪ್ಪೇ ಇರಬಹುದು. ಆದರಿದು ಮನಸು, ಕೆಟ್ಟ ಹಠಮಾರಿ. ಒಮ್ಮೆ ಒಪ್ಪಿಕೊಂಡುಬಿಡು ಹುಡುಗಿ....ಹೊಳಪಿನ ಈ ನಕ್ಷತ್ರದ ಒಂಟಿತನ ನೀಗಿಸು. ಜಗತ್ತಿನ ಕಟ್ಟಳೆಗಳ ಕಿತ್ತೊಗೆದು ನಿನ್ನವನಾಗುವೆ.  ಉತ್ತರಿಸುವೆಯಾ?? ಉತ್ತರಿಸದಿರೆ ಏನೆಂದು ಭಾವಿಸಲಿ??ನೀನೆ ಹೇಳಿಬಿಡು....


ಇಂತಿ

ನಿನ್ನ ಅಂಗೈಯ ತಾರೆ ಆಗ ಬಯಸುವ

ಹುಡುಗ


ಸರಿಯಾಗಿ, ವ್ಯಾಲೆಂಟೈನ್ಸ್ ಡೇ ಎಂದು ಕರೆಯಲ್ಪಡುವ ಫೆಬ್ರವರಿ ಹದಿನಾಲ್ಕರ ದಿನ ತಲುಪಿದ ಆ ಸಂದೇಶ ಓದಿ ಮುಗಿಸಿದಳವಳು. ಏನೆಂದರೆ ಏನೂ ಅನಿಸಲಿಲ್ಲ ಅವಳಿಗೆ. ಈಗ ಆ ಪತ್ರ ಓದಿ ಏನೂ ಆಗಬೇಕಿರಲಿಲ್ಲ ಅವಳಿಗೆ. ಬಹಳ ಹಿಂದೆಯೇ ಬಿಟ್ಟು ಬಂದು, ಮರೆತೇ ಹೋದ ದಾರಿಯದು. 

ಎಲ್ಲ ಇಂದ್ರಿಯಗಳ ನಿಗ್ರಹಕ್ಕಿಂತ ಬಹುಕಷ್ಟ ಮನೋನಿಗ್ರಹ. ಅದನ್ನವನು ಕಲಿಯಲಿ ಅನಿಸಿತವಳಿಗೆ. ಉತ್ತರಿಸಿದರೆ ಹಲವು ಪ್ರಶ್ನೆಗಳೇಳಬಹುದು, ಉತ್ತರಿಸದಿದ್ದರೆ ಅದೇ ಜೀವನದ ವಾಸ್ತವ ಎಂದುಕೊಂಡಾನು. ಹಾಗಾದರೂ ಅಂದುಕೊಂಡು ತನ್ನ ಹೆಂಡತಿಯಾದ ಹೆಣ್ಣಿಗೆ ನಿಯತ್ತಾಗಿರಲಿ ಅನಿಸಿತು. ಒಂದಿನಿತೂ ವಿಚಲಿತಳಾಗದೇ, ಮತ್ತೊಮ್ಮೆ ಆ ಪತ್ರವನ್ನೂ‌ ಓದದೇ ಹರಿದು ಕಸದ ಬುಟ್ಟಿಗೆ ಎಸೆದಳು.




Rate this content
Log in