Shiqran Sharfuddin

Classics Crime Thriller

4.0  

Shiqran Sharfuddin

Classics Crime Thriller

ಲಾಂದ್ರಿಯಡಿಯ ಕಗ್ಗತ್ತಲಿನಲ್ಲಿ...

ಲಾಂದ್ರಿಯಡಿಯ ಕಗ್ಗತ್ತಲಿನಲ್ಲಿ...

8 mins
2.3K


ರಿನ ಗುಡಿ ಹಾಗು ಹಾಜಿ ಸೈಯ್ಯದ್ ಅಬ್ದುಲ್ ಬಾರಿ ಮದನಿಯವರ ಪಾವನ ದರ್ಗಾಯಿರುವ, ಅರಬ್ಬೀ ಕಡಲ್ತಡಿಯ ನಮ್ಮ ಈ ಊರಿಗೆ ಅಶ್ವಗುಡ್ಡದಿಂದ ಸುಲಲಿತವಾಗಿ ಚಿಮುಕಿಸುತ್ತ ಹರಿದು ಬಂದು ವಾರಿಧಿ ಸೇರುವ ಝರಿಯು, ಸತತ ಮೂರು-ನಾಲ್ಕು ದಿವಿಸಗಳಿಂದ ಹಿಡಿದ ನಿರಂತರ ವರುಣದ ಆರ್ಭಟದಿಂದ ಉಕ್ಕಿ ಹರಿಯಲಾರಂಭಿಸಿತು. 'ಧೋ...!' ಎಂದು ನಿಲ್ಲದ ಮೇಘರಾಜನ ಕ್ರೋಧದ ನಡುವೆ, ಇಂದಿನ ಮಾಘ ತಿಂಗಳಿನ ಮೌನಿ ಅಮಾವಾಸ್ಯೆಯ ಕಗ್ಗತ್ತಲಿನ ರಾತ್ರಿಯನ್ನು ಹಗಲಾಗಿಸುವಂತಹ ಮಿಂಚು ಹಾಗು ಇಡೀ ಬ್ರಹ್ಮಾಂಡವನ್ನೇ ನಡುಗಿಸುವಂಥ ಧ್ವನಿಯುಳ್ಳ ಗುಡುಗುಗಳಿಂದ ಹಳ್ಳಿಗರು ಭಯಭೀತರಾಗಿ ತಮ್ಮ ತಮ್ಮ ಮನೆಗಳಲ್ಲಿ ಕಂಪಿಸುತ್ತ, ಗುಡಿದೇವನನ್ನು ಆರಾಧಿಸುತ್ತ, ಶೃದ್ಧೆಯುಳ್ಳವರಾಗಿ ಕುಳಿತಿರುವಾಗ, ಕಿರ್ರೆರ್ರೆಂದು ಕಿರುಚಾಡಿದ ಹೆಂಗಸೊಬ್ಬಳಿನ ಗಂಟಲನ್ನು ಹರಿಯುವಂತ ಚೀತ್ಕಾರವನ್ನು ಕೇಳಿ ಹಳ್ಳಿಗರು ಬೆಚ್ಚಿಬಿದ್ದರು.

ಕೆಡುಕಿನ ಅಮಾವಾಸ್ಯೆಯ ಕಗ್ಗತ್ತಲಿನ ಕೃಷ್ಣ ಪಕ್ಷ ರಾತ್ರಿಗಳಲ್ಲಿ ಅಷ್ವಗುಡ್ಡದ ಎಡಕ್ಕಿರುವ ದಟ್ಟ ಅರಣ್ಯದಿಂದ ಯಕ್ಷಿಣಿಯೊಬ್ಬಳು ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೈಯಲ್ಲಿ ಹಿಡಿದು, ಬಿಳಿ ಸೀರೆಯಲ್ಲಿ ಹಳ್ಳಿಗೆ ಬರುತ್ತಿದ್ದಳು. ಕೆಲವರು ಆ ಯಕ್ಷಿಣಿಯನ್ನು ಕಂಡು ವಾರಗಟ್ಟಲೆ ಜ್ವರದಿಂದ ನರಳಿದ್ದುಂಟು. ಸುಟ್ಟು ಬೂದಿಯಾದ ಕರಿದ ಮೀನಿನಂತೆ ಅವಳ ಮುಖವೂ ಕರಿದಂತಾಗಿತ್ತೆಂದು ಕಂಡವರು ಆಗಾಗ ಹೇಳುತ್ತಿದ್ದರು. ಕೆಲವರು ಅವಳ ಕಣ್ಣುಗಳಲ್ಲಿ ಬೆಂಕಿ ಧಗಧಗಿಸುತ್ತಿದ್ದನ್ನೂ ಕಂಡಿದ್ದರು. ಆದರೆ, ಆ ಯಕ್ಷಿಣಿ ಕಿರುಚಾಡುತ್ತಿರಲಿಲ್ಲ. ಇಂದಿನ ಭಯಗ್ರಸ್ತ ವಾತಾವರಣದಲ್ಲಿ ಹಳ್ಳಿಗರು ದಿಗಿಲುಗೊಂಡು ಯಕ್ಷಿಣಿಯ ಕಾಟದಿಂದ ಮುಕ್ತಿ ಪಡೆಯಲು ಗುಡಿದೇವನ ವಿಗ್ರಹವನ್ನು ಪೂಜಿಸಲಾರಂಭಿಸಿದರು.

ಗುಡಿ ದೇವನ ವಿಗ್ರಹವನ್ನು ಪೂಜಿಸುತ್ತಿರುವಾಗ ಎಲ್ಲರ ಮನೆ-ಗುಡಿಯ ಗಂಟೆಗಳು ತಾವಾಗಿ ತೂಗಾಡಿ ಝಣಝಣಿಸ ತೊಡಗಿದವು. ಇದರಿಂದ ಇನ್ನೂ ಭಯತ್ರಸ್ತರಾದ ಹಳ್ಳಿಗರು ಅಸಹಾಯಕರಾಗಿ ತಮ್ಮ ತಮ್ಮ ಮನೆಗಳಲ್ಲಿ ನಡೆಯುತ್ತಿರುವ ಪವಾಡಗಳ ಹಿಂದಿರುವ ನಿಗೂಢ ರಹಸ್ಯವನ್ನು ತಿಳಿಯಲು ಹಾಗು ಅದಕ್ಕೆ ಪರಿಹಾರ ಪಡೆಯಲು ಊರಿನ ಗುಡಿಗೆ ಹೋಗಲು ನಿರ್ಧರಿಸಿದರು. ಹಾಗಾಗಿ, ಗಂಡಸರೆಲ್ಲರು ಒಂದೆಡೆ ಸೇರಿ, ದೀವಟಿಗೆಯ ಮಂದ ಬೆಳಕಿನಡಿಯಲ್ಲಿ, ಅಡ್ಡ ದಾರಿ ಹಿಡಿದು ಅಶ್ವಗುಡ್ಡಯೇರಿ ಗುಡಿ ತಲುಪಿದರು. ಹಳ್ಳಿಗರಿಗೆ ಪರಿಹಾರ ಒದಗಿಸಬೇಕಾಗಿದ್ದ ಪೂಜಾರಿಯವರು, ಕಳೆದ ಇಪ್ಪತ್ತು ನಿಮಿಷಗಳಿಂದ ಎಡೆಬಿಡದೆ ಬಿಕ್ಕಳಿಸಿ ಆಯಾಸಗೊಂಡಿದ್ದರು. ಬಿಕ್ಕಳಿಕೆಯಿಂದ ಬೇಸ್ತು ಹೋಗಿದ್ದ ಪೂಜಾರಿಯವರು, ಹಳ್ಳಿಗರನ್ನು ಕಂಡು ಅರಚಾಟಿಸಲಾರಂಭಿಸಿದರು.

"ಊರಿನಲ್ಲೆಲ್ಲೋ ಘೋರ ಪಾಪ ನಡೆಯುತ್ತಿದೆ… ಅಥವಾ ನಡೆದಿದೆ! ಹಾಗಾಗಿ, ಒಂದೆಡೆ ಮೇಘರಾಜನ ಕ್ರೋಧಕ್ಕೆ ನಮ್ಮ ಹಳ್ಳಿ ಜಲಸಮಾಧಿಯಾಗುವ ಹಂತಕ್ಕೆ ಬಂದಿದೆ. ಇನ್ನೊಂದೆಡೆ, ಮುಗ್ಧ ಗುಡಿ ದೇವನೂ ರೋಷದಿಂದ ಗುಡಿಗಳ ಗಂಟೆಯನ್ನು ಬಾರಿಸಿ ಮುಂಬರುವ ಅನಾಹುತದ ಮುನ್ಸೂಚನೆಯನ್ನು ನೀಡುತ್ತಿದ್ದಾನೆ. ದೇವನ ನಮ್ರ ಅರ್ಚಕನಾದ ನಾನೂ ಸಹ, ಅವನ ಕ್ರೋಧಕ್ಕೆ ತುತ್ತಾಗಿ ಇಲ್ಲಿ ಬಿಕ್ಕಳಿಸಿ… ಬಿಕ್ಕಳಿಸಿ ಸುಸ್ತಾಗಿದ್ದೀನಿ. ನನ್ನ ಪಾವನ ತಪಸ್ಸಿಗೂ ಭಗ್ನವಾಗುತ್ತಿದೆ. ಹೋಗಿ! ಆ ಪಾಪಿಯನ್ನು ಪತ್ತೆ ಹಚ್ಚಿರಿ… ಅವನನ್ನು ಗಡಿಪಾರು ಮಾಡಿ… ನಮ್ಮ ಊರನ್ನು ರಕ್ಷಿಸಿರಿ…" ಎಂದು ಬಿಕ್ಕಳಿಸುತ್ತ, ಪೂಜಾರಿಯವರು ಆದೇಶಿಸಿದರು. ಪೂಜಾರಿಯವರಿಂದ ಹೊರಬಂದ ಪ್ರಾಜ್ಞ ವಾಕ್ಯಗಳನ್ನು ತಿರಸ್ಕರಿಸದೇ, ಧರ್ಮೋಪದೇಶಗಳಂತೆ ಮನಃಪೂರ್ವಕವಾಗಿ ಸ್ವೀಕರಿಸಿ, ಗುಡಿಗೆ ಹೋದವರು ಹಳ್ಳಿಗೆ ಮರಳಿದರು.

 * * * * *


ನೈಜ ಹರ್ಷಭರಿತ ಬದುಕು ಹೊಣೆಯರಿತ ದಾಂಪತ್ಯದಲ್ಲಿದೆಂದು ಗಿರಿಜಮ್ಮನ ಮಗಳೊಬ್ಬಳಾದ ರಮ್ಯಾಳಿಗೆ ಅರಿವಿಗೆ ಬಂದದ್ದೇ ಲಗ್ನವಾಗಿ ಒಂದು ಚಂದ್ರಮಾಸ ಕಳೆದ ಬಳಿಕೆ. ತುಂಬಿದ ಯೌವ್ವನಕ್ಕೆ ಕಾಲಿಟ್ಟರೂ ಸಹ ಮಕ್ಕಳ ತುಂಟಾಟಿಕೆ, ರಮ್ಯಾ ಮತ್ತು ಅವಳ ಗೆಳತಿಯರು ಬಿಟ್ಟಿರಲಿಲ್ಲ. ರಾಮಣ್ಣನ ಮಾವಿನ ಮರಕ್ಕೆ ಕಲ್ಲೆಸೆಯುವುದು, ಬೆಂಗಳೂರಿನಿಂದ ಬಂದ ಶ್ರೀಧರಣ್ಣನ ಬೂಟುಗಳನ್ನು ಅಡಗಿಸಿಟ್ಟು ಸಿಹಿ ತಿಂಡಿ ಕೇಳುವುದು, ನೆರೆಮನೆಯ ಅಜ್ಜಿ ಬೆಳೆಸಿದ ಗಿಡಗಳಿಂದ ಹೂವುಗಳನ್ನು ಕದಿಯುವುದು, ಅಪ್ಪಣ್ಣನ ತೋಟದಲ್ಲಿ ಪಟಾಕಿಗಳನ್ನು ಸಿಡಿಸಿ ಅವನನ್ನು ಹೆದರಿಸುವುದು ಇತ್ಯಾದಿ ಚೇಷ್ಟೆಗಳಿಂದ ಈ ಸ್ವಪ್ನಸುಂದರಿಯರು ಇಡೀ ಹಳ್ಳಿಯಲ್ಲಿ ಹೆಸರುವಾಸಿಯಾಗಿದ್ದರು. ನೆರವಿನ ಅಗತ್ಯವಿದ್ದರೆ ಸಹಾಯದ ಕೈ ಚಾಚಲು ಹಿಂದೆ ಸರಿಯುತ್ತಿರಲಿಲ್ಲ. ಗೋಪಾಲಣ್ಣನ ಎಮ್ಮೆ ಓಡಿ ಹೋಗಿದ್ದಾಗ, ಅದನ್ನು ಹಿಡಿದು ವಾಪಸ್ಸು ತಂದು ಕೊಟ್ಟಿದ್ದರು. ಜ್ಯೋತಿಯಕ್ಕ ಮೊದಲ ಬಾರಿಗೆ ಮಗುವನ್ನು ಹೇರಿದ್ದಾಗ, ಕೂಸಿನ ಮತ್ತು ಬಾಣಂತಿಯ ಬಟ್ಟೆ ಬರೆಗಳನ್ನು ತೊಳೆದು, ಅವಳಿಗೆ ನಿಸ್ವಾರ್ಥ ಭಾವದಿಂದ ಮರೆಯಲಾಗದ ನೆರವನ್ನು ಒದಗಿಸಿ ಹಳ್ಳಿಗರ ಕಣ್ಮಿನಿ ಎನಿಸಿಕೊಂಡಿದ್ದರು!

ಒಂದು ಮಧ್ಯಾಹ್ನ, ಮಟಮಟ ಸುಡುವ ಬಿಸಿಲಿನಿಂದ ಊರು ಧಗಧಗಿಸುತ್ತಿರುವಾಗ, ಹಿತ್ತಲಿನ ತೆಂಗಿನ ಮರದ ನೆರಳಿನಲ್ಲಿ ಗಿರಿಜಮ್ಮ ಜಾನಪದ ಹಾಡೊಂದನ್ನು ಗುಂಯ್ ಗುಟ್ಟುತ್ತ, ಊಟದ ಪಾತ್ರೆಗಳನ್ನು ತೊಳೆಯುತ್ತಿದ್ದಳು.

"ಗಿರಿಜಾ… ಗಿರಿಜಾ…" ಎಂದು ಯಾರೋ ಕೂಗುತ್ತ ಇತ್ತ ಬರುವುದನ್ನು ಗಮನಿಸಿದ ಗಿರಿಜಮ್ಮ, "ಯಾರಮ್ಮ ಅದು? ಈ ಹೊತ್ತಿಗೆ… ಬನ್ನಿ" ಎಂದಳು

"ನಾನಮ್ಮ… ಗಿರಿಜಾ!" ಎನ್ನುತ್ತ ಗಿರಿಜಮ್ಮನ ಸಹೋದರಿ ಶಾರದಮ್ಮ ಬಂದಳು.

"ಏನ್ ಶಾರದಾ… ಈ ಹೊತ್ತಿಗೆ ಬಂದೆ?"

"ಏನಿಲ್ಲಪ್ಪ! ಹೀಗೆ ಆಯ್ತು!"

"ಹೂಂ! ಪಾತ್ರೆ ತೋಳ್ದಾಯ್ತು. ಒಳಗೆ ಹೋಗೋಣ. ಬಾ" ಎಂದು ಸೀರೆಯ ತುದಿಯಿಂದ ಮುಖ ಮೇಲಿನ ಬೆವರನ್ನು ಒರೆಸಿ, ತೊಳೆದ ಪಾತ್ರೆಗಳನ್ನೆತ್ತಿ ಗಿರಿಜಮ್ಮ ಒಳಗೆ ನಡೆದಳು. ಶಾರದಮ್ಮ ಅವಳನ್ನು ಹಿಂಬಾಲಿಸಿದಳು.

ಗಿರಿಜಮ್ಮ ಪಾತ್ರೆ ವಗೈರೆಗಳನ್ನು ಬದಿಗಿಟ್ಟು, ಒಂದು ಲೋಟದಲ್ಲಿ ಮಣ್ಣಿನ ಮಡಕೆಯಿಂದ ತಾಜಾ ತಣ್ಣಗೆಯ ಮಸಾಲಾ ಮಜ್ಜಿಗೆಯನ್ನು ತಂದು ಶಾರದಮ್ಮಳಿಗೆ ನೀಡಿ, ಗೌರವಾರ್ಹ ಆತಿಥ್ಯ ವಹಿಸಿ, "ಶೇಷಾದ್ರಿ ಇನ್ನೇನು ನಿರ್ಧರಿಸಿದ?" ಎಂದು ಚಿಂತನ ಶೀಲಳಾಗಿ ಕೇಳಿದಳು.

"ಇನ್ನೇನು…? ಆ ರಂಡೆಗೆ ವಿಚ್ಛೇದಿಸುತ್ತಾನಂತೆ!" ತಲೆಯನ್ನು ತರಚಿಕೊಳ್ಳುತ್ತ ಶಾರದಮ್ಮ ಉತ್ತರಿಸಿದಳು.

"ಅಯ್ಯೋ…! ಮುಂದೇನು ಮಾಡ್ತಾನಂತೆ?"

"ಇನ್ನೊಂದು ಮದುವೆ ಮಾಡುವುದಿಲ್ಲ ಎಂದು ಹೇಳಿದಪ್ಪ. ಈಗ ಬೆಂಗಳೂರಿನಲ್ಲಿ ಸಂಘದಲ್ಲೊಂದು ಅಧ್ಯಕ್ಷನಾಗಿದ್ದಾನೆ"

"ಮತ್ತು ರಾಜೇಶ?"

"ಅವನಿಗೆ ಬೆಂಗಳೂರಿನಲ್ಲಿ ನೌಕರಿ ಸಿಗಲಿಲ್ಲ. ಹಾಗಾಗಿ, ಇಲ್ಲೇ ಹೊಲದಲ್ಲಿ ಕೆಲಸ ಮಾಡ್ತಾನಂತೆ!" ಎಂದು ಸ್ವಲ್ಪ ತಡೆದು, "...ಹಾಂ! ಪುಟ್ಟಿ ರಮ್ಯಾ ಈಗ ಹೇಗಿದ್ದಾಳೆ? ಇನ್ನಾದರೂ ತನ್ನ ಚಾಳಿಯನ್ನು ಬಿಟ್ಟಿದ್ದಾಳಾ?" ಶಾರದಮ್ಮ ವಿಚಾರಿಸಿದಳು.

"ಇಲ್ಲಮ್ಮ. ಕಾಶಿ ಕಳುಹಿಸಿದರೂ ಆ ಹುಡುಗಿ ಬದಲಾಗುವುದಿಲ್ಲ. ನನಗಂತೂ ಸಾಕಾಗಿ ಹೋಯ್ತು"

"ಎಲ್ಲಾದರೂ ಒಳ್ಳೆಯ ವರ ಹುಡುಕಿ ಲಗ್ನ ಮಾಡಿಸಿಕೊಡು, ಗಿರಿಜಾ. ಗಂಡನ ಸಹವಾಸದಲ್ಲಾದರೂ ತನ್ನ ಚೇಷ್ಟೆಗಳನ್ನು ಬಿಡಬಹುದು"

"ಇಲ್ಲಮ್ಮ. ಇಷ್ಟು ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಿಸಿ ಕಳುಹಿಸುವುದಾ? ಇಷ್ಟು ಬೇಗ ಬೇಡಮ್ಮ" ಶಾರದಮ್ಮಳ ವಿಚಾರವನ್ನು ಗಿರಿಜಮ್ಮ ವಿನಮ್ರವಾಗಿ ವಿರೋಧಿಸಿದಳು.

"ಇಷ್ಟು ಬೇಗ…? ಇನ್ನು ಪುಟ್ಟಿ ಯಾವ ವಯಸ್ಸಿಗೆ ಬರಬೇಕು? ನೋಡು! ಆ ಪುಟ್ಟಿ ರಮ್ಯಾ ಈಗ ಬೆಳೆದ ರಮಣೀಯಾಗಿದ್ದಾಳೆ!"

"ಅದೂ ಹೌದು. ಆದರೆ ರಮ್ಯಾಳಿಗೆ ಒಳ್ಳೆಯ ವರವನ್ನು ಹುಡುಕಬೇಕಲ್ವ…"

"ಹುಡುಕುವುದೇಕೆ? ನಮ್ಮ ರಾಜೇಶ ಸರಿಯಾಗುವುದಿಲ್ಲವೇ? ಹೇಗೆ?"

"ಅರೇ ಹೌದಲ್ವಾ… ಇದು ಒಳ್ಳೆದಾಯ್ತು!" ಎಂದು ಗಿರಿಜಮ್ಮ ಹೃತ್ಪೂರ್ವಕವಾಗಿ ಸಹೋದರಿ ಮಗನನ್ನು ತನ್ನ ಅಳಿಯನ್ನಾಗಿ ಒಪ್ಪಿಕೊಂಡಳು.

ಇನ್ನೇನು? ಹಣೆಯ ಮೇಲಿನ ಕೆಂಪು ಕುಂಕುಮದಿಂದ ರಮ್ಯಳ ಉಜ್ವಲವರ್ಣದ ಲಾಲಿತ್ಯಮುಖ ಮಂದೀರದಲ್ಲಿ ದ್ಯುತಿತ್ತುತ್ತಿರುವ ದೀಪದಂತೆ ಬೆಳಗಿತು. ತನ್ನ ಮನಸ್ಸಿನಂಗಳದಲ್ಲಿ ಸ್ವಪ್ನ ದೀವಿಗೆಯನ್ನು ಬೆಳಗಿಸುವ ತೀವ್ರಾಭಿಲಾಷೆಯಲ್ಲಿ ರಮ್ಯಾ ತನ್ನ ತುಂಟಾಟಿಕೆಗಳನ್ನು ಮರೆತಳು.

 * * * * *


ಭಾರಿ ಮಳೆಯ ನಡುವೆಯೂ ಅಷ್ವಗುಡ್ಡ ಏರಿದ್ದ ಗಂಡಸರೂ, ಅಂಕುಡೊಂಕು ದಾರಿಯಿಂದ ಗುಡ್ಡಯಿಳಿದು ಬಂದು ಊರು ಸೇರಿದರು. ಕೆಲವರ ಕೈ ದೀವಿಗೆಗಳು ಮಳೆಯಿಂದ ಆರಿದು ಹೋಗಿತ್ತು. ತಮ್ಮ ತಮ್ಮ ಮನೆಗಳಲ್ಲಿ ಹೆಂಗಸರು ಸುಮ್ಮನೆ ಮಬ್ಬಾದ ಬೆಳಕಿನಲ್ಲಿ ಆಕಳಿಸುತ್ತ, ಗಂಡಸರ ಆಗಮನವನ್ನು ಕಾಯುತ್ತ ಸಮಯ ಕಳೆದರು. ಮಕ್ಕಳು ಮತ್ತು ವೃದ್ಧರು ತಮ್ಮ ತಮ್ಮ ಕೋಣೆಯೊಳಗೆ ತಲೆಯವರೆಗೆ ಕಂಬಳಿಯೆಳೆದು ಗಾಢನಿದ್ದೆ ಮಲಗಿದರು. ಗಂಡಸರೆಲ್ಲರು ಅವಸರದಿಂದ ಒಂದೆಡೆ ಸೇರಿ ಸಂಕ್ಷೀಪ್ತವಾಗಿ ಮಾತುಕತೆ ನಡೆಸಿ, ಊರಿಗೆ ಗಸ್ತು ತಿರುಗಲು ತೀರ್ಮಾನಿಸಿದರು. ಯಾರಾದರೂ ಮದ್ಯ ಸೇವಿಸುವುದನ್ನು, ಜೂಜಾಟ ಆಡುವುದನ್ನು ಇತ್ಯಾದಿ ಪಾಪಗಳು ಮಾಡುವುದನ್ನು ಕಂಡರೆ ಅವನನ್ನು ಶಿಕ್ಷಿಸುವುದೆಂದು ನಿರ್ಧರಿಸಿದರು. ಆ ಪಾಪಿಷ್ಟನ ಪಾತಿತ್ಯದಿಂದ ಸೃಷ್ಟಿಕರ್ತನಿಂದ ಕೃಪೆಯಾಗಿ ವರ್ಷಿಸುವ ವೃಷ್ಟಿಯೂ ಶಾಪವಾಗಿ ಇಡೀ ಹಳ್ಳಿಯನ್ನೇ ಜಲಸಮಾಧಿ ಮಾಡುತ್ತಿತ್ತು.

* * * * *


"...ಈ ಕಿರುಕುಳಗಳಿಗೆ ಕೊನೆ ಎಲ್ಲಿ? ಪ್ರತಿದಿನ ನನ್ನ ಸಹೋದರಿಯರು ತಮ್ಮ ಮೇಲೆ ನಡೆಯುತ್ತಿರುವ ಅಮಾನುಷ್ಯ ದೌರ್ಜನ್ಯಗಳನ್ನು ಅಸಹಾಯಕರಾಗಿ ಕಣ್ಣೀರಿಡುತ್ತ ಸಹಿಸಿಕೊಳ್ಳುತ್ತಿರುವುದನ್ನು ನಾನು ಕಟುವಾಗಿ ಖಂಡಿಸುತ್ತೇನೆ.

ಎದ್ದೇಳಿ ಸಹೋದರಿಯರೇ…! ಇದು ಇಪ್ಪತ್ತೊಂದನೆಯ ಶತಮಾನ! ಹೆಣ್ಣು ಜಗದ ಕಣ್ಣೆಂದು ಅರಿಯುವ ಕಾಲ… ಯಾವ ಸಮಾಜದಲ್ಲಿ ಮಹಿಳೆಯರಿಗೆ ಸುರಕ್ಷತೆ ಇರುವುದಿಲ್ಲ, ಆ ಸಮಾಜ ಭಯಾನಕ ದುರ್ದೆಶೆಗಳ ಸಾಕ್ಷಿಯಾಗುತ್ತೆ. ಸಫಲತೆಯನ್ನು ಅರಸುವವನು ಮಹಿಳೆಯರನ್ನು ಸರ್ವದಾ ಗೌರವಿಸಲೇ ಬೇಕು ಎಂದು ಮನುಸ್ಮ್ರಿತಿಯ ಮೂರನೇ ಅಧ್ಯಾಯನದ ಐವತ್ತೊಂಬತ್ತನೆಯ ಶ್ಲೋಕದಲ್ಲಿ ಉಪದೇಶಿಸಲಾಗಿದೆ. ಹಾಗಾಗಿ, ಇಂದು ನಾನು ನಿಮ್ಮೆಲ್ಲರ ಬೆಂಬಲದೊಂದಿಗೆ ಮಹಿಳಾ ಸುರಕ್ಷತೆಗಾಗಿ-ಅಭಿವೃದ್ಧಿಗಾಗಿ ಒಂದು ಕ್ರಾಂತಿಕಾರಿ ಸಂಘಟನೆಗೆ ನಾಂದಿ ಹಾಡುತ್ತೇನೆ. ಈ ದೇಶದ ತಾಯಿಯರ ಆಶೀರ್ವಾದಗಳೊಂದಿಗೆ National Women's Brigadier ಅನ್ನು ಮುಂದುವರಿಸುತ್ತೇನೆ" ಎಂದು, ವೇದಿಕೆಯ ಉನ್ನತಪೀಠದ ಮೇಲೆ ನಿಂತು ಸಂಘಟನೆಯ ಪತಾಕೆಯನ್ನು ಬೀಸಿ, ಶೇಷಾದ್ರಿ ಸಂಘವನ್ನು ಸ್ಥಾಪಿಸಿದನು. ಸಮಾವೇಶಕ್ಕಾಗಿ ನೆರೆದಿದ್ದ ಜನಸ್ತೋಮ, ಒಮ್ಮೆಗೆ, "ಅಧ್ಯಕ್ಷ ಶೇಷಾದ್ರಿಗೆ ಜಯವಾಗಲಿ!" ಎಂದು, ಪರ್ವತಗಳೆರಡು ರಭಸದಿಂದ ಅಪ್ಪಳಿಸಿದಂತೆ ಗಟ್ಟಿ ಸ್ವರದಲ್ಲಿ ಜೈಕಾರ ಕೂಗಿದರು.

ನಂತರ ಕೆಲವು ಸ್ತ್ರೀವಾದ ಸಿದ್ಧಾಂತವನ್ನು ಪ್ರತಿಪಾದಿಸುವವರು ಸಾಲಾಗಿ ಒಬ್ಬರ ನಂತರ ಇನ್ನೊಬರು ಬಂದು ಸಭೆಯನ್ನುದ್ದೇಶಿಸಿ ಕ್ರಾಂತಿಕಾರಕ ಭಾಷಣಗಳನ್ನು ಆಡಿ ಸಮಾವೇಶಕ್ಕಾಗಿ ನೆರೆದಿದ್ದ ಜನಸಾಗರದ ರಕ್ತವನ್ನು ಕುದಿಸಿದರು. ದೂರದ ಊರಿನಿಂದ ಬಂದ ಕವಿಯೊಬ್ಬರು, ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುವ ವಿಚಾರ ಸಾಲುಗಳನ್ನು ಕಾವ್ಯಾತ್ಮಕವಾಗಿ ಹಾಡಿ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿದರು.

ಒಟ್ಟಾರೆ, ಪ್ರತಿ ಭಾಷಣದಲ್ಲಿ ಕೇಳಲು ಸಿಕ್ಕಿದ ಒಂದೇ ಅಂಶ; ದೌರ್ಜನ್ಯವೆಸಗುವವರ ನಿಂದನೆ, ಸಂತ್ರಸ್ತರ ಸ್ಪಂದನೆ ಹಾಗು ಶೇಷಾದ್ರಿ ಪುಣ್ಯಾತ್ಮನ ಶ್ಲಾಘನೆ!

ಸಮಾವೇಶದ ಸಮಾರೋಪಕ್ಕೆ ನೆರೆದ ಜನಸಾಗರ ಸ್ಥಾಪಕಾಧ್ಯಕ್ಷನ ಅಜ್ಞೆಯಂತೆ, ಎದೆಯ ಮೇಲೆ ಕೈಯಿಟ್ಟು ದೇವರ ಸಾಕ್ಷಿಗೆ ಮಣಿದು, ಅಧ್ಯಕ್ಷ ಉದ್ಗರಿಸಿದ ಮಾತುಗಳನ್ನು ಪುನರುಚ್ಚರಿಸಿ, ತಾವು ದೌರ್ಜನ್ಯಗಳ ವಿರುದ್ಧ ನಿಸ್ವಾರ್ಥ ಭಾವದಿಂದ ಸಂವಿಧಾನ್ಮಕ ಹೋರಾಟ ನಡೆಸುವೆವು ಹಾಗು ಮಹಿಳೆಯರನ್ನು ತಾಯಿ-ಸಹೋದರಿಯರಂತೆ ಗೌರವಿಸುವೆವು ಎಂದು ಪ್ರತಿಜ್ಞೆಗೈದರು.

ಅಂದಿನಿಂದ ಒಂದು ಕ್ರಾಂತಿಕಾರಿ ಸಂಘಟನೆಯಾದ ನ್ಯಾಷನಲ್ ವಿಮೆನ್ಸ್ ಬ್ರಿಗೇಡಿಯರ್ ಹೊಸ ಚೈತನ್ಯದೊಂದಿಗೆ ಕಾರ್ಯಶೀಲವಾಯಿತು. ಮಹಿಳಾ ಸಬಲೀಕರಣದ ಆಶಾಕಿರಣವಾಗಿ ರೂಪುಗೊಂಡಿದ್ದ ಸಂಘದ ಸ್ಥಾಪಕಾಧ್ಯಕ್ಷರಾದ ಶೇಷಾದ್ರಿ ಸಂಘವನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವ ಕುರಿತು ಚಿಂತಿಸುತ್ತಿದ್ದರು. ವಿಧವೆಯರಲ್ಲಿ ಹೊಲಿಗೆ ಯಂತ್ರ ವಿಸ್ತರಿಸುವುದು, ಪ್ರಾಯಕ್ಕೆ ಬಂದ ಯುವತಿಯರಿಗೆ ಕಂಕಣ ಭಾಗ್ಯ ಒದಗಿಸುವುದು, ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುವುದು, ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವುದು, ಅಪರಾಧಿಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸುವುದು, ಸಂಘದ ಸ್ವಯಂಸೇವಕಿಯರಿಗೆ ಆತ್ಮರಕ್ಷಣಾ ಕಲೆಯನ್ನು ಕಲಿಸುವುದು ಇತ್ಯಾದಿ ಸ್ತುತ್ಯ ಕಾರ್ಯಗಳಿಂದ ಸಂಘ ಜನಮೆಚ್ಚುಗೆಗೆ ಪಾತ್ರವಾಯಿತು. ಬೆಂಗಳೂರನ್ನು ಕೇಂದ್ರೀಕರಿಸಿ ರಾಜ್ಯಾದ್ಯಂತ ಕಾರ್ಯಯೋಜನೆಯನ್ನು ರೂಪಿಸಿ ತೊಡಗಿತು. ವರ್ಷದೊಳಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಂಘದ ಘಟಕವನ್ನು ಉದ್ಘಾಟಿಸಲು ಪ್ರಾರಂಭಿಸಿದರು.

* * * * *


ಗಂಡಸರು ಹಳ್ಳಿಯಲ್ಲಿ ಗಸ್ತು ತಿರುಗುತ್ತಿರುವಾಗ ಮಧ್ಯ ವಯಸ್ಸಿನ ಬೃಹದ್ದೇಹಿ ಭೀಮಣ್ಣ, ಅಬು ಬ್ಯಾರಿಯವರ ಹೋಟೆಲಿನ ಜಗುಲಿಯ ಮೇಲೆ ತರುಣಿಯೊಬ್ಬಳು, ಮೈ ಮೇಲೆ ಕಂಬಳಿ ಎಳೆದು ಬಿಕ್ಕಿ ಬಿಕ್ಕಿ ಅಳುತ್ತ ಕುಳಿತಿರುವುದನ್ನು ಕಂಡು ಹೌಹಾರಿದನು. ಅಮವಾಸ್ಯೆಯ ರಾತ್ರಿಗಳಲ್ಲಿ ಯಕ್ಷಿಣಿಯೊಬ್ಬಳು ಅರಣ್ಯದಿಂದ ಹೊರ ಬಂದು ಊರಿನ ಸುತ್ತ ಅಳುತ್ತ ತಿರುಗುವುದರಲ್ಲಿ ಅಸಹಜವೇನಿರಲಿಲ್ಲ. ಹಿಂದೆ ಕೆಲವರು ಆ ಯಕ್ಷಿಣಿಯನ್ನು ಕಂಡು ವರ್ಷಗಟ್ಟಲೆ ಅದರ ದೋಷದಿಂದ ನರಳಿದ ಘಟನೆಗಳನ್ನು ನೆನಪಿಸಿ, ಭೀಮಣ್ಣ ಬೇಗ ಬೇಗ ತನ್ನ ಮನೆಯತ್ತ ಹೆಜ್ಜೆಯಿಟ್ಟನು. ದಾರಿಯಲ್ಲಿ ರಾಜೇಶನನ್ನು ಕಂಡು,

"ಎಲ್ಲಿಗೆ ಪಯಣ ಬೆಳೆಸಿದೆ ನಾವುಕ? ಮುಂದಿರುವುದು ದಡವಲ್ಲ, ಮೃತ್ಯುಗುಂಡಿ!" ಎಂದು ಭೀಮಣ್ಣ ರಾಜೇಶನಿಗೆ ಎಚ್ಚರಿಸಿದನು.

"ಶೇಷಾದ್ರಿಯಣ್ಣನಿಗೆ ಸಹಿಸಲಾಗದ ತಲೆನೋವು ಶುರು ಆಯ್ತಂತ ಔಷಧಿ ತರಲು ನಾಟಿ ವೈದ್ಯ ಆಚಾರ್ಯರಲ್ಲಿ ಹೋಗಿದ್ದೆ"

"ಶೇಷಾದ್ರಿಯಣ್ಣ ಊರಿಗೆ ಬಂದಿದ್ದಾನೆಯೇ?"

"ಹೌದು. ನಾಳೆಯ ಕಾರ್ಯಕ್ರಮಕ್ಕಾಗಿ ನಿನ್ನೆ ಬಂದು ನಮ್ಮ ಮನೆಯಲ್ಲಿ ತಂಗಿದ್ದನು. ಗಾಢ ನಿದ್ರಾವಶನಾದವನು ತೀಕ್ಷ್ಣ ತಲೆನೋವಿನಿಂದ ಥಟ್ಟನೆ ನಿದ್ರೆಯಿಂದ ಎದ್ದು ನರಳಾರಂಭಿಸಿದನು. ಅಣ್ಣನ ನರಳು ನೋಡಲಾಗದೆ, ಆಚಾರ್ಯರ ಮನೆಗೆ ಹೋಗಿದ್ದೆ"

"ಆಯ್ತು. ಬೇಗ ಮನೆಗೆ ಹೋಗು. ಆಗ ಕಿರ‍್ರೆರ‍್ರೆಂದು ಕಿರುಚಾಡಿದ ಹೆಣ್ಣಿನ ಕೂಗನ್ನು ಕೇಳಿದ್ದೀಯಾ?"

"ಹೌದು. ಏನದು?"

"ಅದು ಯಕ್ಷಿಣಿಯ ಕೂಗು! ಇಂದು ಕೆಡುಕಿನ ಮೌನಿ ಅಮಾವಾಸ್ಯೆ ಅಲ್ವ? ಕಾಡಿನಿಂದ ಯಕ್ಷಿಣಿ ಬಂದಿದ್ದಾಳೆ. ಅವಳನ್ನು ಈಗಷ್ಟೇ ನಾನು ಅಬು ಬ್ಯಾರಿಯವರ ಹೋಟೆಲಿನ ಜಗುಲಿಯ ಮೇಲೆ ನೋಡಿದ್ದೆ. ನಂತರ, ಅವಳು ಅಲ್ಲಿಂದ ಎದ್ದು ಹೋಗಿ ಸಮುದ್ರದಲ್ಲಿ ಹಾರಿದಳು" ಎನ್ನುತ್ತಿರುವಾಗ ಭೀಮಣ್ಣನ ದಷ್ಟಪುಷ್ಟ ಮೈ ದಿಗಿಲುಗೊಂಡಿದ್ದರಿಂದ ಕಂಪಿಸಲಾರಂಭಿಸಿತು.

"ಹೌದಾ??"

"ದೇವರಾಣೆ! ಬೇಗ ಮನೆಗೆ ಹೋಗು. ಇಲ್ಲದಿದ್ದರೆ ಫಜೀತಿಯಾಗಬಹುದು" ಎಂದು, ಭೀಮಣ್ಣ ಉಳಿದವರಲ್ಲಿ ಹೇಳಲು ಹೋದನು. ರಾಜೇಶ ತನ್ನ ಮನೆಯತ್ತ ಓಡಿದನು.

ಊರಿಗೆ ಯಕ್ಷಿಣಿಯ ಆಗಮನದ ಕುರಿತು ಭೀಮಣ್ಣನಿಂದ ಕೇಳಿ ಗಂಡಸರೆಲ್ಲರು ತಲ್ಲಣಗೊಂಡು ಲಗುಬಗೆಯಿಂದ ತಮ್ಮ ಮನೆಗಳತ್ತ ಓಡಿದರು. ಕೆಲವೇ ಕ್ಷಣದಲ್ಲಿ ಊರಿನಲ್ಲಿ ಶ್ಮಶಾನ ಮೌನ ಆವರಿಸಿತು. ಮಳೆಗಾಲದ ಕ್ರಿಮಿ-ಕೀಟಗಳು ನೀರವತೆಯನ್ನು ತನ್ನದಾಗಿಸಿದರು. ಕಡಲಿನ ಅಲೆಗಳೂ ಶಾಂತಿ ವಹಿಸಿ, ನಿಶ್ಶಬ್ಧತೆಯನ್ನು ಕಾಪಾಡಿತು.

* * * * *

ಮರುದಿನ ಉಷಃಕಾಲಕ್ಕೆ ಸರಿಯಾಗಿ ಇಮಾಂ ಸಾಹೇಬರು ಅಜಾ಼ನ್ ಹೇಳಿ, ಮುಂಬೆಳಗಿನ ಆಗಮನವನ್ನು ಸ್ವಾಗತಿಸಿದರು. ಸಾಮೂಹಿಕ ಮುಂಜಾನೆಯ ನಮಾಝನ್ನು ಅನುಸರಿಸಿ ಅರುಣೋದಯವಾಯಿತು.

ಮನೆಯಿಡೀ ಅರಸಿದರೂ ರಮ್ಯಾ ಕಾಣಸಿಗದಿರುವುದರಿಂದ ಗಾಬರಿಗೊಂಡಿದ್ದ ರಾಜೇಶ, ಶೇಷಾದ್ರಿಯಣ್ಣ ಮಲಗಿದ್ದ ಕೋಣೆಗೆ ಬಂದು,

"ನಿನ್ನ ತಲೆನೋವು ಹೇಗಿದೆ?" ಎಂದು ಅವಸರದಲ್ಲಿ ವಿಚಾರಿಸಿದನು.

"ಈಗ ಸರಿಯಾಗಿದ್ದೇನೆ"

"ನೀನು ರಮ್ಯಳನ್ನು ನೋಡಿದ್ದೀಯಾ? ಅವಳೆಲ್ಲಿದ್ದಾಳೆಂದು ಗೊತ್ತಿದ್ದೆಯೇ?"

"ಪರಸ್ತ್ರೀಯರತ್ತ ತಲೆಯೆತ್ತಿಯೂ ಕಾಣದವನಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದೆಂದರೆ ದೇವದೂತರಲ್ಲಿ ಜೂಜಾಟದ ನಿಯಮಗಳನ್ನು ಕೇಳಿದನಂತಿದೆ!" ಎಂದು ಶ್ರೀಪಾದಂಗಳವರನಂತೆ ಭಾವೋದ್ರಿಕ್ತನಾಗಿ ಶೇಷಾದ್ರಿ ನಟಿಸಿದನು.

"ಅದೆಲ್ಲ ಇರಲಿ. ನಾನೀಗ ಪೊಲೀಸ್ ಠಾಣೆಗೆ ರಮ್ಯಳ ನಾಪತ್ತೆಯ ದೂರನ್ನು ದಾಖಲಿಸಲು ಹೋಗುತ್ತಿದ್ದೇನೆ..." ಎನ್ನುತ್ತಿರುವಾಗ, ಮಾತಿಗೆ ಅಡ್ಡ ಬಂದು, "ನಾಪತ್ತೆ!" ಶೇಷಾದ್ರಿ ಒಮ್ಮೆಗೆ ಚೀರಿ, ಗಾಬರಿಯಿಂದ ಥಟ‍್ಟೆಂದು ಎದ್ದು ಅಸ್ತವ್ಯಸ್ತಗೊಂಡು, "ಎಂಥ ಬೇಕೂಫನಂತೆ ಮಾತನಾಡುತ್ತಿದ್ದೀಯಾ?" ಎಂದು ಅಚ್ಚರಿ ಪಟ್ಟು ಕೇಳಿದನು.

"ಹೌದಣ್ಣ. ರಾತ್ರಿ ಆಚಾರ್ಯರ ಮನೆಗೆ ಹೋಗುವಾಗ ತನ್ನ ಕೊನೆಯಲ್ಲಿದ್ದಳು. ವಾಪಸ್ಸು ಬಂದಾಗ ಅವಳಲ್ಲಿರಲಿಲ್ಲ! ಇಡೀ ರಾತ್ರಿ ಹುಡುಕಿದೆ. ಎಲ್ಲೂ ಕಾಣಸಿಗುತ್ತಿಲ್ಲ!" ಎಂದು ತುಂಬಿದ ಕಣ್ಣನ್ನು ಒರೆಸುತ್ತ ರಾಜೇಶ ಹೇಳಿ, ಹೊರಗೆ ಹೋಗಲು ಕಾಲಿಟ್ಟನು.

"ನಿಲ್ಲು ರಾಜೇಶ. ಪೊಲೀಸರಲ್ಲಿ ದೂರನ್ನು ದಾಖಲಿಸಬೇಡ. ಸುಮ್ಮನೆ ತಮಾಷೆಯಾಗಬಹುದು" ಎನ್ನುವಾಗ ಮುಖದ ಮೇಲಿರುವ ನಾಟಕೀಯ ಭಾವನೆಗಳು ಮಾಯವಾಗಿ ಆತಂಕ ಮನೆ ಮಾಡಿತು. ಮುಖಭಾವಗಳನ್ನು ಗಾಂಭೀರ್ಯತೆಯಿಂದ ಅಡಗಿಸುತ್ತ, ಶೇಷಾದ್ರಿ ಮಂಚದ ಮೇಲಿನಿಂದಲೇ ಇಣುಕಿ ಕಿಟಕಿಯಿಂದ ಹೊರಗಡೆ ನೋಡಿದನು.

* * * * *


ಸಂಘದ ಸ್ವಯಂ ಸೇವಕರ ಬಿಡುವಿಲ್ಲದ ಶ್ರಮದಿಂದ ಇಡೀ ಹಳ್ಳಿಯಲ್ಲಿ ನ್ಯಾಷನಲ್ ವಿಮೆನ್ಸ್ ಬ್ರಿಗೇಡಿಯರ್ಸ್ನ ಪತಾಕೆಗಳು ರಾರಾಜಿಸುತ್ತಿದ್ದವು. ಸರಿಯಾಗಿ ಏಳು ಗಂಟೆಗೆ ಸ್ಥಾಪಕಾಧ್ಯಕ್ಷ ಬೃಹತ್ ಮೆರವಣಿಗೆಯನ್ನು ವಿಧಿವತ್ತಾಗಿ ಉದ್ಘಾಟಿಸಿ, ಈ ಊರಿನ ಘಟಕಕ್ಕೆ ನಾಂದಿ ಹಾಡಿದನು. ಮೆರವಣಿಗೆ ಛಾನಸವಾಗಿ ವೇದಿಕೆಯತ್ತ ಸಾಗುತಿತ್ತು. ಆದರೆ, ಸೂರ್ಯೋದಯದ ಹೊಂಕಿರಣಗಳು ಹಳ್ಳಿಗರಲ್ಲಿ ಏನೋ ನಿಗೂಢತೆಯನ್ನು ಬಹಿರಂಗ ಪಡಿಸಿದಂತೆ ಶೇಷಾದ್ರಿಗೆ ಸ್ಫುರಿಸದಂತಾಗುತಿತ್ತು. ಎದೆ ಡಬಡಬ ಬಡಿಯುತ್ತಿತ್ತು.

ಅಷ್ಟರಲ್ಲಿ, ಕೆಲವು ಮೀನುಗಾರರು "ಅಯ್ಯಯ್ಯೋ…! ಶವ!!!" ಎಂದು ಕಿರುಚುತ್ತ ಓಡಿ ಹಳ್ಳಿಯತ್ತ ಬಂದರು. ಕೆಲವರು ಮೆರವಣಿಗೆಯನ್ನು ತೊರೆದು ಕಿನಾರೆಗೆ ಹೋದರು. ದಂಡದ ಮೇಲೆ ಒಂದು ಹೆಣ್ಣಿನ ಶವ ಅರೇ-ನಗ್ನ ಅನಾಥ ಸ್ಥಿತಿಯಲ್ಲಿ ಬಿದ್ದಿತ್ತು. ಮಾನವನ ಬೆಲೆ ಉಸಿರಿರುವರೆಗೆ; ಅದಿಲ್ಲದಿದ್ದರೆ ಅಡವಿ ಪಾಲಿಗೆ. ಜನರು ಶವವನ್ನು ಸುತ್ತಿ ನಿಂತರು.

ಶವವನ್ನು ನೋಡಿ, "ಆತ್ಮಹತ್ಯೆ ಮಹಾಪಾಪ. ಈ ಹುಚ್ಚು ಬೀರಿನ ದುಷ್ಕರ್ಮದ ಶಿಕ್ಷೆಯನ್ನು ಇಡೀ ಹಳ್ಳಿಯೇ ಅನುಭವಿಸಬೇಕಾಯಿತು" ಎಂದು ಕುಪಿತಗೊಂಡವನೊಬ್ಬ ಹೇಳಬಾರದನ್ನೆಲ್ಲ ಹೇಳಿ ತೃಪ್ತಿಗೊಂಡನು. ಅವನನ್ನು ವಿರೋಧಿಸದೆ ಹಲವರು ಅವನ ಮಾತುಗಳನ್ನು ತಲೆಗಳ ತೂಗಿನಲ್ಲೇ ಒಪ್ಪಿಕೊಂಡರು.

ಸತತ ಮೂರು ದಿನಗಳಿಂದ ಹಿಡಿದ ನಿರಂತರ ಮಳೆಯಿಂದ ಪ್ರವಾಹವೂ ಏರಿತ್ತು. ಹಾಗಾಗಿ ಶವ ನೀರಿನಿಂದ ಉಬ್ಬಿಕೊಂಡಿತ್ತು. ಅಲ್ಲದೆ, ಸಮುದ್ರದಲ್ಲಿರುವ ಕಲ್ಲು ಬಂಡೆಗಳನ್ನು ಬಡಿದುದರಿಂದ ಮುಖವನ್ನು ಗುರುತಿಸುವಂತಿರಲಿಲ್ಲ. ಆದರೆ, ಶವ ವಿವರ್ಣವಾಗಿ ಗಗನತ್ತ ಮುಖ ಮಾಡಿ ಜಗದ ಜಟಿಲತೆಯನ್ನು ತೊರೆದು ಶಾಂತವಾಗಿ ಮಲಗಿತ್ತು. ಕಾಗೆಗಳು ದಿಕ್ಕು ದೆಸೆಯಿಲ್ಲದೆ ಹಾರುತ್ತಿದ್ದವು. ಕಡಲಿನ ಅಲೆಗಳು ತಾವಾಗಿ ಏನನ್ನೂ ಲೆಕ್ಕಿಸದೆ ಒಂದರ ಮೇಲೆ ಇನ್ನೊಂದು ಉರುಳುತ್ತಿದ್ದವು.

* * * * *


"...ಪ್ರಿಯ ಸಹೋದರ ಸಹೋದರಿಯರೇ, ಬೀದಿ ಕಾಮಣ್ಣರು-ಸಮಾಜದ ನಕ್ಷತ್ರಿಕರು" ಎಂದು ಶೇಷಾದ್ರಿ ವೇದಿಕೆಯ ಉನ್ನತ ಪೀಠದ ಮೇಲೆ ನಿಂತು ಧ್ವನಿವರ್ಧಕದಲ್ಲಿ ಭಾಷಣ ಮಾಡುತ್ತ ಉಚ್ಛಸ್ವರದಿಂದ ಈ ಘೋಷಣೆಯನ್ನು ಕೂಗಿದಾಗ, ಜನಸಮೂಹ ಒಮ್ಮೆಗೆ 'ಹೋ…' ಎಂದು ಘರ್ಜಿಸಿದರು. "ಹೌದು. ಅತೀಯಾಗಿ ನಂಬನಿಷ್ಠೆಯುಳ್ಳವರೇ, ಬೆನ್ನಲ್ಲಿ ಇರಿಯುವರು. ಹಾಗಾಗಿ, ಎಂದೆಂದೂ ತಮ್ಮ ನೆರಳನ್ನೂ ನಂಬದಿರಿ. ಇದು ನನ್ನನುಭವ. ಇನ್ನು ಮುಂದೆ ನೀವು ನಿರ್ವಂಚನೆಯಿಂದ ಈ ಸಂಘವನ್ನು ಮುಂದುವರಿಸಿರಿ. ಊರಿನ ಸಮೀಕ್ಷೆ ನಡೆಸಿರಿ. ವಿಧವೆಯರಿಗೆ ನೆರವು ಒದಗಿಸಿರಿ… ಸಹೋದರರೇ, ನಮ್ಮ ಸಹೋದರಿಯರ ಮಾನ ಮರ್ಯಾದಕ್ಕಾಗಿ ತಮ್ಮ ಉಸಿರುಗಳನ್ನೂ ಕಳೆಯಲು ಅಂಜದಿರಿ"

ಅತ್ತ ಸಮಾವೇಶ ನಡೆಯುತ್ತಿರುವಾಗ ಕೆಲವರು ಶವವನ್ನು ಗುರುತಿಸಲು ಶತಪ್ರಯತ್ನ ನಡೆಸಿದರು. ರಮ್ಯಾ ಸಿಗದಿರುವುದರಿಂದ ಚಿಂತಾಗ್ರಸ್ತನಾಗಿದ್ದ ರಾಜೇಶ, ದಿಕ್ಕು ದೆಸೆಯಿಲ್ಲದೆ ಗಲ್ಲಿ-ಗಲ್ಲಿ ತಿರುಗುತ್ತ ಕಿನಾರೆ ತಲುಪಿದನು ಯಾರೋ ಶವದ ಕುರಿತು ಮಾತನಾಡುತ್ತಿರುವುದನ್ನು ಕೇಳಿ ಶವದ ಬಳಿ ಹೋದನು. ಶವದ ಗೆಜ್ಜೆಗಳನ್ನು ಕಂಡು, "ಇದು ರಮ್ಯಳ ಗೆಜ್ಜೆಗಳು. ಲಗ್ನವಾಗಿ ನಮ್ಮ ಮನೆಗೆ ಬಂದಿದ್ದಾಗ, ಇವುಗಳನ್ನು ನಾನು ಅವಳ ಕಾಲಿಗೆ ಕಟ್ಟಿದ್ದೆ" ಎಂದು ಕಣ್ಣೀರಿಡುತ್ತ ರಾಜೇಶ ಅನಾಥ ಶವವನ್ನು ಗುರುತಿಸಿದನು.

ಮಡದಿಯನ್ನು ಕಳೆದುಕೊಂಡವನ ಕಣ್ಣೀರನ್ನು ಕಂಡು ನೆರೆದಿದ್ದ ಜನರು ಎದೆಯೊಡೆದು ಬಿಕ್ಕಿ ಬಿಕ್ಕಿ ಅತ್ತರು. ಗಂಡನ ಅಶ್ರುಪೂರಿತ ಧಾರೆಯಲ್ಲೇ ರಮ್ಯಳ ಶವಸ್ನಾನವಾಯಿತು. ಜಗತ್ತಿನಾದ್ಯಂತ ರಂಗಭೂಮಿಯ ಮೇಲೆ ನಟಿಸುತ್ತಿರುವ ಕಾಲ ನಟ-ನಟಿಯರನ್ನು ನಿರ್ದೇಶಿಸುವ ನಿರ್ದೇಶಕನ ಬಳಿ ರಮ್ಯಳನ್ನು ಕಳುಹಿಸಿ ಕೊಡಲು ಹಳ್ಳಿಗರು ಶವ ಸಂಪುಟವನ್ನು ಸಿಂಗರಿಸಲಾರಂಭಿಸಿದರು.

ಒಟ್ಟಾರೆ, ಗಾಢವಾಗಿ ಸಮಚಿತ್ತ ದೃಷ್ಟಿಯಿಂದ ಈ ಬದುಕಿನ ಯಾತ್ರೆಯನ್ನು ವಿಮರ್ಶಿಸಿದರೆ ಒಡೆದೆದ್ದು ಕಾಣ ಸಿಗುವುದು ಒಂದೇ ಒಂದು ಅಂಶ. ಅದೇ, ಇಲ್ಲಿ ಆಗಮಿಸಿ ಕಳುಹಿಸಿದವನಲ್ಲಿಗೆ ಮರಳುವುದು. ಆದರೆ, ಆಗಮನದ ನೈಜ ಉದ್ದೇಶ ಮಾತ್ರ ಚಿದಂಬರ ರಹಸ್ಯವಾಗಿ ಉಳಿದಿದೆ!

* * * * * 


ರಾತ್ರಿ ರಾಜೇಶ, ನಾಟಿ ವೈದ್ಯ ಆಚಾರ್ಯರಲ್ಲಿ ಔಷಧಿ ತರಲು ಹೋಗಿದ್ದಾಗ, ರಮ್ಯಾ ಸುಮ್ಮನೆ ಮಂಚದ ಮೇಲೆ ಅಡ್ಡ ಬಿದ್ದು ಒಂದೇ ಸವನೆ ಬಿಟ್ಟಗಣ್ಣಿನಿಂದ ಕಿಟಕಿಯ ಹೊರಗೆ ಬಾನಲ್ಲಿ ಹಾರುವ ದೆವ್ವ ಬಾವಲಿಗಳನ್ನು ನೋಡುತ್ತ, ರಾಜೇಶನನ್ನು ನೆನಪಿಸಿ ಅವನನ್ನು ಬಯಸುತ್ತಿರುವಾಗ, ನಿಧಾನವಾಗಿ ಕೋಣೆಯ ಬಾಗಿಲು ತೆರೆಯುವ ಭಾವನೆ ಅವಳಲ್ಲಿ ಮೂಡಿತು. ಭಾರಿ ಮಳೆಯಿಂದ ವಿದ್ಯುತ್ ಸಂಪರ್ಕವನ್ನು ಕಡಿದುದರಿಂದ ದಟ್ಟ ಕಗ್ಗತ್ತಲು ಆವರಿಸಿತ್ತು. ಆದರೆ, ಹೊರಗಿರುವ ಎಣ್ಣೆ ದೀಪದ ಮಂದ ಬೆಳಕು ತೆರೆದ ಬಾಗಿಲಿನಿಂದ ಕೋಣೆಯೊಳಗೆ ಬಿತ್ತು. ಹಿಂತಿರುಗಿ ನೋಡಿದಾಗ ಶೇಷಾದ್ರಿಯ ಗಡವ ನೆರಳು ಹೊಸ್ತಿಲಿನ ಮೇಲೆ ನಿಂತಿದ್ದನ್ನು ನೋಡಿ ರಮ್ಯಾ ಭಯಗ್ರಸ್ತಳಾಗಿ ಮಂಚದ ಮೇಲೆ ಒಂದು ಮೂಲೆಯಲ್ಲಿ ನಡುಗುತ್ತ ಕುಳಿತುಕೊಂಡಿದ್ದಾಗ, ಎದೆ ಗುಡುಗುಗಳಿಂದಲೂ ಗಟ್ಟಿಯಾಗಿ ಡಬಡಬ ಬಡಿಯಲಾರಂಭಿಸಿತು. ನುಂಗಲು ಅಪಾಯ ಕಾಯುತ್ತಿರುವಾಗ ಕರಿ ಬೆಕ್ಕು ಅಡ್ಡ ಬರಬೇಕಾ?

* * * * *

"ಕೊನೆಯದಾಗಿ, ಈ ಮೂರನ್ನು ಎಂದಿಗೂ ಬಯಸದಿರಿ- ಪರಧನ, ಪರಸ್ವತ್ತು ಮತ್ತು ಮುಖ್ಯವಾಗಿ ಪರಸ್ತ್ರೀಯರನ್ನು. ಪರಸ್ತ್ರೀಯರ ಸಂಗ- ಮಾನ ಮರ್ಯಾದಕ್ಕೆ ಭಂಗ! ಒಂದು ಹೂವಿನಿಂದ ಹಾರವಾಗುವುದಿಲ್ಲ. ಹಾಗೆಯೇ, ಒಬ್ಬನಿಂದ ಚಳುವಳಿಯೊಂದು ಮುಂದುವರಿಯುವುದಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಮತ್ತು ಕಾರ್ಯಕರ್ತರ ಅಸ್ತಿಮಿತ ಶ್ರಮದಿಂದ ನನಗೆ ಹುಟ್ಟೂರಿನಲ್ಲಿ ಅದ್ಧೂರಿ ಯಶಸ್ಸು ಸಿಕ್ಕಿದೆ. ನನಗೆ ಸ್ವಯಂಸೇವಕರಲ್ಲಿ ದೃಢವಾದ ವಿಶ್ವಾಸವಿತ್ತು. ಅವರ ಬಿರುಸಿನ ಪ್ರಚಾರಕ್ಕೆ ಮತ್ತು ಅತ್ಯುತ್ಕೃಷ್ಟ ನಿಯೋಜನೆಗೆ ನಾನು ಚಿರ ಋಣಿಯಾಗಿದ್ದೇನೆ. ಧನ್ಯವಾದಗಳು" ಎಂದು ಕೊನೆಯದಾಗಿ,

"यत्र नार्यस्तु पूज्यन्ते रमन्ते तत्रा देवताः ।

यत्रै तास्तु न पूज्यन्ते सर्वास्तात्राफल क्रियाः ॥"  ಎಂಬ ಶ್ಲೋಕವೊಂದನ್ನು ಪಠಿಸಿ, ತನ್ನ ಭಾಷಣವನ್ನು ಮುಗಿಸಿ, ವೇದಿಕೆಯ ಉನ್ನತ ಪೀಠದಿಂದ ಇಳಿದನು. ನೆರೆದಿದ್ದ ಜನಸಾಮಾನ್ಯರು ಅಧ್ಯಕ್ಷರ ಭಾಷಣದಿಂದ ಪ್ರಭಾವಿತರಾಗಿ, ನ್ಯಾಷನಲ್ ವಿಮೆನ್ಸ್ ಬ್ರಿಗೇಡಿರ್ಸ್ ನ ಅಭ್ಯುದಯಕ್ಕಾಗಿ ಹಾಗು ಮಹಿಳೆಯರ ಸುರಕ್ಷತೆಗಾಗಿ ಶೃಮಿಸಲು ದೃಢ ನಿರ್ಧಾರ ಮಾಡಿದರು…



Rate this content
Log in

Similar kannada story from Classics